ಕಾಮಧೇನುವಿನ ಹೆಜ್ಜೆಗಳು...

ಕಾಮಧೇನುವಿನ ಹೆಜ್ಜೆಗಳು...

ಬಹುಶಃ ಹಳ್ಳಿ ಜನರಿಗೆ ಇದೆಲ್ಲಾ ಸಾಮಾನ್ಯವೇ.. ಇಲ್ಲ ಅಗತ್ಯ ಕೂಡ... ರೈತ ಜೀವನಕ್ಕೆ ಪಶುಪಾಲನೆ ಅವನ ಕೃಷಿಯಷ್ಟೇ ಮುಖ್ಯವಾದುದು. ಇಂದಿಗೂ ಮುಂಜಾನೆ 4 ಕ್ಕೆ ಎದ್ದು ಕಾಮಧೇನು ಮುಖ ನೋಡಿದ್ರೆ ಅಂದ ದಿನಕ್ಕೆ ಉತ್ತಮ ಆರಂಭವೆಂದು ಹಲವರು ನಂಬಿದ್ದಾರೆ. ನಡೆಯುತ್ತಲೂ ಇದೆ. ಅದ್ರೆ ಬೆಂಗಳೂರಿನ ಸುತ್ತಮುತ್ತ ಇಂದಿನ ಹೈನುಗಾರಿಕೆ ಇನ್ನು ಉಳಿದಿದೆಯೇ ಎಂಬ ಪ್ರಶ್ನೆ ಕಾಡ ತೊಡಗಿದೆ.

ಅದು ದಾಸರಹಳ್ಳಿ. ಬೆಂಗಳೂರಿನ ಪೂರ್ವ ತಾಲೂಕಿನ ಗ್ರಾಮ ಈ ಊರಿನಲ್ಲಿ ಸೀಮೆ ಹಸುಗಳ ಸಾಕಾಣಿಕೆಯಲ್ಲಿ ಕೃಷ್ಣಪ್ಪ ಎತ್ತಿದ ಕೈ. ಬರೋಬ್ಬರಿ 8 ಸೀಮೆ ಹಸುಗಳ ಸಾಕುದಾರ, ದಿನವೊಂದಕ್ಕೆ 35 ರಿಂದ 40 ಲೀಟರ್‍ ಹಾಲು ಉತ್ಪತಿಯಾಗುತ್ತಿತ್ತು. ಇವರ ಮನೆಯಲ್ಲಿ ಹೆಚ್‌ಎಫ್, ಜೆರ್ಸಿ, ನಾಟಿ ಹಸು ಹಾಗೂ ಜರ್ಮನ್ ಬ್ರೀಡ್ನ ಹಸುಗಳು ಇವರ ಮನೆಯ ಕೊಠಡಿಯಲ್ಲಿ ಜೀವಿಸಿದ್ದವು. ಈ ಯಶಸ್ಸಿನ ಹಿಂದೆ ಪತ್ನಿ ಸಮೇತ ಇಡೀ ಕುಟುಂಬವೇ ನಿಂತಿತ್ತು. ಅಲ್ಲದೆ, ವೆಟರ್ನಿರಿ ಕಾಲೇಜಿನ ನಿವೃತ್ತ ಪಶು ವೈದ್ಯ ಹನುಮಂತಪ್ಪ ಇವರ ಹೆಗಲಿಗೆ ಹೆಗಲು ನೀಡಿದ್ದರು. ಸುತ್ತಮುತ್ತಲ ಗ್ರಾಮಗಳಲ್ಲೇ ಈ ಕುಟುಂಬ ಸೀಮೆ ಹಸುಗಳ ಸಾಕುವಿಕೆಯಲ್ಲಿ ಹೆಸರಾಗಿತ್ತು. ಇವರ ಒಂದು ಹಸು ಸತತವಾಗಿ 7 ವರ್ಷಗಳ ಕಾಲ ಲಯನ್ಸ್ ಕ್ಲಬ್‌ ನೀಡುವ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತ್ತು.

ಸುಮಾರು 400 ಕ್ಕೂ ಹೆಚ್ಚು ಕೃಷಿ ಕುಟುಂಬಗಳಿರುವ ಗ್ರಾಮ ಜಕ್ಕೂರು. ಈ ಊರಿರುವುದು ಜಕ್ಕೂರು ಏರೋಡ್ರಂ ಹಿಂದೆ. ಜಿಕೆವಿಕೆ ಸಮೀಪದಲ್ಲಿ. ಕಳೆದ ಮೂರು ವರ್ಷಗಳ ಹಿಂದೆ ಈ ಗ್ರಾಮದಲ್ಲಿ ಸರಿ ಸುಮಾರು ಒಂದೊಂದು ಮನೆಯಲ್ಲಿ ಕನಿಷ್ಟ 3-4 ಹಸುಗಳು ಸಾಮಾನ್ಯವಾಗಿ ಕಂಡು ಬರುತ್ತಿತ್ತು. ಆದ್ರೆ ಇದೀಗ ಜಕ್ಕೂರಿನಲ್ಲೆಲ್ಲಾ ತಡಕಾಡಿದ್ರೂ ನಮಗೆ 50 ಹಸುಗಳು ಕಂಡರೆ ನಮ್ಮ ಪುಣ್ಯಾ ಅನ್ಬೋದು. ಈ ಊರಿನಲ್ಲೂ ಹೈನುಗಾರಿಕೆ ಕುಸಿಯಲು ಕಾರಣಕ್ಕೂ ದಾಸರಹಳ್ಳಿಯ ಕತೆಗೂ ಸಾಮೀಪ್ಯತೆಯಿದೆ.

ಇದಕ್ಕೆಲ್ಲಾ ಸ್ಪಷ್ಟವಾಗಿ ನಾವೆಲ್ಲಾ ಹೇಳಯವ ಹಾಗೆಯೇ ನಗರೀಕರಣ ಎನ್ನಬಹುದು. ಇಲ್ಲಿ ಅದುದು ಹೀಗೆ. ಆದ್ರೆ ಇಲ್ಲಿ ಆದ ನಗರೀಕರಣದ ಸ್ವರೂಪ ಮಾತ್ರ ಕೆಲವು ಪ್ರಲೋಭನೆಗಳಿಂದ ಎನ್ನಬಹುದು. ಇದೇನು ಇಲ್ಲ. ಅದು 2005 ನೇ ಇಸವಿಯ ಕಡೆಯ ತಿಂಗಳೂಗಳು. ಎಸ್ಸೆಂ ಕೃಷ್ಣ ಆಡೀತಾವಧಿಯ ಕಡೆಯ ದಿನಗಳು. ಸಿಎಂ ಕೃಷ್ಣ ಅರ್ಕಾವತಿ ಬಡಾವಣೆಗೆಂದು ಈ ಭಾಗದ 16 ಗ್ರಾಮಗಳಿಂದ 3200 ಎಕರೆ ಜಮೀನು ವಶಪಡಿಸಿಕೊಳ್ಳಲು ಅಧಿ ಸೂಚೆನೆ ಹೊರಡಿಸಿದ್ದರು. ಇದರಿಂದಾಗಿ ಈ ಭಾಗದಲ್ಲಿ ವ್ಯವಸಾಯ, ರೈತ ಜೀವನ, ಪಶುಪಾಲನೆಯ ಮೇಲೆ ಭಾರಿ ಆಘಾತ ನೀಡಿತು.

ಸ್ವಾಭಾವಿಕವಾಗಿ ಇದ್ದ ಬದ್ದ ಜಮೀನು ಕಳೆದುಕೊಂಡರು. ಯಾಕೆಂದ್ರೆ, ಬಿಡಿಎ ಬುಲ್ಡೋಜರ್‍ ತಂದು ತೋಟ, ಗದ್ದೆ, ಹೊಲವನ್ನೆಲ್ಲಾ ನೆಲಸಮ ಮಾಡಿದರು. ಹೀಗಾಗಿ ಅಕ್ಷರಶಃ ರೈತರ ಜೀವನ ಮೂರಾಬಟ್ಟೆಯಾಯಿತು. ಕ್ರಮೇಣ ದನಗಳಿಗೆ ಮೇವು ಸಿಗೋದು ಕಷ್ಟವಾಯಿತು. ಹಾಗೆಯೇ ದನಗಳ ಸಂಖ್ಯೆ ಕೂಡ ಕರಗಲಾರಂಭಿಸಿತು. ಹಸುಗಳ ಮೈ ತೊಳೆದು, ಹುಲ್ಲು ಕುಯ್ದು ಅಲ್ಲದೇ ಲೀಟರುಗಟ್ಟಲೇ ಹಾಲು ಕರೆದು ಬಕೆಟ್ ತುಂಬಿಸಿಕೊಂಡ ಕೈಗಳೇ ಇಂದು ಪಾತ್ರೆ ಹಿಡಿದು ಹಾಲನ್ನು ಕೊಳ್ಳುವ ಸ್ಥತಿಗೆ ಬಂದಿದೆ. ಚೆಡ್ಡಿ ಹಾಕೊಂಡು ಸ್ವತಃ ಸ್ವಾವಲಂಬಿ ಜೀವನ ನಡೆಸುತ್ತಿದ್ದ ಜನರೆಲ್ಲಾ ಇಂದು ಮೇಲ್ನೋಟಕ್ಕೆ ಉತ್ತಮವೆನಿಸುವ ಬಟ್ಟೆ ತೊಟ್ಟು ಪರಾವಲಂಬಿ ಜೀವನ ನಡೆಸುತ್ತಿದ್ದಾರೆ. ಅಥಾತ್ ಕೂಲಿ ಜೀವನ.

ಈ ಪರಿಸ್ಥಿತಿ ಕೇವಲ ಅರ್ಕಾವತಿ ಬಡಾವಣೆ ಗುರ್ತಿಸಿಕೊಂಡಿರುವ ಗ್ರಾಮಗಳ ಸ್ತಿತಿ ಮಾತ್ರ ಅಲ್ಲ. ಸುಮ್ಮನೇ ದೇವನಹಳ್ಳಿ, ಚಿಕ್ಕಬಳ್ಳಾಪುರ ಸಮೀಪದವರೆಗೂ ಈ ಕಡೆ ವಿಜಯಪುರ ಅಲ್ಲದೆ, ಬಾಗಲೂರು, ರಾಜಾನುಕುಂಟೆವರೆಗೂ ಸುತ್ತು ಹಾಕಿ ಬಂದ್ರೆ ಹೈನುಗಾರಿಕೆ ಅವನತಿಯ ಹಾದಿಯಲ್ಲಿರುವುದು ಕಾಣಬಹುದು. ಇದಕ್ಕೆಲ್ಲಾ ಕಾರಣ ಜಮೀನೆಲ್ಲಾ ಬಡಾವಣೆಗಳಾಗಿ ರೂಪಾಂತರವಾಗಿರುವುದೇ ಕಾರಣ. ರಿಯಲ್ ಎಸ್ಟೇಟ್‌ನ ಬಿಸಿನೆಸ್‌ಗೆ ಬಡಾವಣೆಗಳಾದವು... ಯಥೇಚ್ಚವಾಗಿ ಹಾಲು ಕುಡಿದು, ಬೆಣ್ಣೆ ತುಪ್ಪ ಸವಿಯುತ್ತಿದ್ದ ಕಂದಮ್ಮಗಳು ಇನ್ನು ಅವುಗಳ ಕೃತಕ ಉತ್ಪನ್ನಗಳನ್ನಾಗಲೀ ಅಥವಾ ಪಾಕೆಟ್ ಹೈನು ಉತ್ಪನ್ನಗಳನ್ನು ಸವಿಯಬೇಕಾಗಿದೆ ಈ ಭಾಗದಲ್ಲಿ.

ಇದೆಲ್ಲಾ ಯಾಕೆ ಬರಿತ್ತಿದ್ದೀನಿ ಅಂದ್ರೆ ಇಂದು ಬೆಳಿಗ್ಗೆ ಅದೇ ಪಶು ವೈದ್ಯ ಹನುಮಂತಪ್ಪ ಸಿಕ್ಕಿದ್ರು. ಹೀಗೆ ಯೋಗಕ್ಷೇಮ ವಿಚಾರಿಸುವಾಗ ಇದೆಲ್ಲಾ ಅವರ ಬಾಯಿಂದ ನೋವಿನಿಂದ ಹೊರಬಂತು. ಆಧುನೀಕರಣ ಹಾಗೂ ನಗರೀಕರಣ ಬಗ್ಗೆ ಅವರು ವ್ಯಕ್ತಪಡಿಸಿದ ಅಭಿಪ್ರಾಯಗಳು ಭಾರವಾಗಿದ್ದವು... ನೋವಿನ ನುಡಿ. ರೈತರ ಕಾಳಜಿ ಅವರ ಮನದಿಂದ ಹೊರಬಂದವು.

ಕಾಮಧೇನು.. ಗೋಮತಿ... ಎಂದೆಲ್ಲಾ ಕೃಷಿಕರ ಪಾಲಿಗೆ ವರವಾಗಿದ್ದ ಹೈನುಗಾರಿಕೆ ಮತ್ತೆ ನಗರದಲ್ಲಿ ಕಾಣಸಿಗುತ್ತಾ ಅನ್ನೋದು ಲೇಖನದ ಹಿಂದಿನ ಬೇಸರ..

- ಬಾಲರಾಜ್ ಡಿ.ಕೆ

Rating
No votes yet