ಡ್ರೈವಿಂಗ್- ಮಜ,ತಲೆಬಿಸಿ ಇತ್ಯಾದಿ

ಡ್ರೈವಿಂಗ್- ಮಜ,ತಲೆಬಿಸಿ ಇತ್ಯಾದಿ

ಐದನೇ ವಯಸ್ಸಿನಲ್ಲೇ ನನಗೆ ಡ್ರೈವಿಂಗ್ ಬರುತಿತ್ತು. ಬಸ್ ಬಿಡುತ್ತಿದ್ದೆ!! ಗಾಬರಿಯಾಗಬೇಡಿ. ಮನೆಯಲ್ಲಿದ್ದ ಹೊಲಿಗೆ ಮೆಷಿನ್‌ಏ ನನ್ನ ‘ಭಾರತ ಬಸ್’. ಈ ಡ್ರೈವಿಂಗ್ ಹುಚ್ಚು ಈಗಲೂ ಬಿಟ್ಟಿಲ್ಲ. ಪೆಟ್ರೋಲ್ ರೇಟ್ ಮತ್ತು ಟ್ರಾಫಿಕ್‌ನಿಂದಾಗಿ ಸ್ವಲ್ಪ ಕಮ್ಮಿಯಾಗಿದೆ.


ಬೆಂಗಳೂರು-ಮೈಸೂರು ರಸ್ತೆಯಲ್ಲಿ ಕೆಂಗೇರಿ ದಾಟಿದ ಮೇಲೆ ಎಕ್ಸಿಲರೇಟರ್ ಮೇಲೆ ಕಾಲಿಟ್ಟು ಹಾಯಾಗಿ ಮಲಗಿದರೂ ಮೈಸೂರು ತಲುಪಿರುತ್ತೀರಿ. ಅದೇ ಘಾಟ್ ರಸ್ತೆಯಲ್ಲಿ ವಾಹನ ಓಡಿಸುವ ಮಜವೇ ಬೇರೆ.


ಇನ್ನು ಬೆಂಗಳೂರಿನ ಯಾವುದೇ ರಸ್ತೆಯಲ್ಲಿ ವಾಹನ ಓಡಿಸಿದ ಎಂದರೆ ಅವನ ಡ್ರೈವಿಂಗ್ ಲೈಸೆನ್ಸ್ ಪರೀಕ್ಷಿಸುವ ಅಗತ್ಯವೇ ಇಲ್ಲ.ಅವನು ಡ್ರೈವಿಂಗ್‌ನಲ್ಲಿ ಎಕ್ಸ್‌ಪರ್ಟ್ ಎಂದೇ ಲೆಕ್ಕ. ಹೊಸದಾಗಿ ಬೆಂಗಳೂರಿಗೆ ಬಂದ ಗೆಳೆಯನನ್ನು, ಬೆಂಗ್ಳೂರು ಸುತ್ತಾಡಿಸಿದ ಮೇಲೆ ಹೇಳಿದ-‘ಸಾಕು ಮಾರಾಯ, ಈ ಬೆಂಗಳೂರು ಸಹವಾಸ. ಇಲ್ಲಿ ಸಾವಿಗೂ ಬದುಕಿಗೂ ಅರ್ಧ ಇಂಚೇ ವ್ಯತ್ಯಾಸ!’. ಆ ಸಮಯದಲ್ಲಿ ತಲೆಬಿಸಿಯಾಗಿದ್ದ, ಈಗ ಯೋಚಿಸುವಾಗ ತಮಾಷೆಯೆನಿಸುವ ಒಂದೆರಡು ಸಂಗತಿಗಳನ್ನು ಹೇಳುವೆ: ಹಳ್ಳಿಯಲ್ಲಿ ಮೈಲುಗಟ್ಟಲೆ ನಡೆದು ರೂಢಿ ಇದ್ದ ಪರಿಚಿತರೊಬ್ಬರನ್ನು, ರಿಂಗ್‌ರೋಡ್‌ನಲ್ಲಿ ಅವರು ಹೇಳಿದ ವಿಳಾಸಕ್ಕೆ ಕರಕೊಂಡು ಹೋಗುತ್ತಿದ್ದೆ. ಟ್ರಾಫಿಕ್‌ಜಾಮ್‌ನಿಂದಾಗಿ ೧೦ ನಿಮಿಷಕ್ಕೆ ಒಂದು ಫೀಟ್ ಮುಂದೆ ಹೋಗುತ್ತಿತ್ತು.ರೋಸಿ ಹೋದ ಅವರು ತಲುಪಬೇಕಾದ ವಿಳಾಸ ನನ್ನಿಂದ ಕಸಿದುಕೊಂಡು, ಕಾರಿಂದ ಇಳಿದು ನಡಕೊಂಡೇ ಹೋದರು...!


ಇನ್ನೊಮ್ಮೆ ದನಗಳ ಹಿಂಡೊಂದು ರಸ್ತೆಯಲ್ಲಿತ್ತು. ಅದನ್ನು ತಪ್ಪಿಸಲು ಕಾರನ್ನು ಬಲಕ್ಕೆ ತೆಗೆದುಕೊಂಡು ಹೋಗಿದ್ದೆ. ಅಷ್ಟರಲ್ಲಿ ಒಂದು ದನ ತಲೆಯನ್ನು ಸೀದಾ ನನ್ನ ಕಾರಿನ ಕಿಟಕಿಯೊಳಗೆ ಹಾಕಿ ಬಿಡುವುದೇ! ಏನು ಮಾಡಿದರೂ ತಲೆಹೊರಗೆ ತೆಗೆಯುವುದಿಲ್ಲ. ಹಿಂದೆ ಮುಂದೆ ಟ್ರಾಫಿಕ್ ಜಾಮ್..


ಮದುವೆಯಾದ ಹೊಸತು. ಸ್ಕೂಟರ್‌ನಲ್ಲಿ(ಈಗಿನವರಿಗೆ ಸ್ಕೂಟರ್ ಬಗ್ಗೆ ಗೊತ್ತಿರಲಿಕ್ಕಿಲ್ಲ. ಹಿಂದೆ ಬೆಂಗಳೂರು ತುಂಬಾ ಚೇತಕ್‌ಗಳೇ ಓಡಾಡುತ್ತಿದ್ದವು) ಹೇಗೆ ಸೊಂಟ ಬಳಸಿ ಹಿಡಕೊಳ್ಳಬೇಕು ಎಂದು ಹೆಂಡತಿಗೆ ಹೇಳಿಕೊಟ್ಟು, ಸವಾರಿ ಹೊರಟೆ. ಸ್ವಲ್ಪ ದೂರ ಹೋದಕೂಡಲೇ ಕುತ್ತಿಗೆ ನೋವಾಗಲು ಶುರುವಾಯ್ತು. ನೋಡಿದರೆ, ನನ್ನಿಂದ ಮೈಲು ದೂರದಲ್ಲಿ ಕುಳಿತು, ಕಾಲರ್ ಪಟ್ಟಿ ಗಟ್ಟಿಯಾಗಿ ಹಿಡಕೊಂಡಿದ್ದಾಳೆ! ಪೋಲೀಸರು ರೌಡಿಗಳನ್ನೂ ಹಾಗೆ ಹಿಡಕೊಳ್ಳುವುದಿಲ್ಲ..


ಒಂದು ಸಲ ಗೆಳೆಯರೆಲ್ಲಾ ಸೇರಿ ಪಿಕ್ನಿಕ್ ಹೋಗಿದ್ದೆವು. ಬರುತ್ತಾ ದಾರಿಯಲ್ಲಿ ನಮ್ಮ ವಾಹನ ಸ್ಟ್ರೈಕ್ ಮಾಡಿತು. ರಾತ್ರಿಯಾದುದರಿಂದ ಎಲ್ಲಾ ಅಂಗಡಿಗಳೂ ಬಂದ್. ಮೆಕ್ಯಾನಿಕ್ ಹುಡುಕಿ, ಕರತಂದು ರಿಪೇರಿ ಮಾಡಿಸಲು ಇಬ್ಬರನ್ನು ಕಳುಹಿಸಿದೆವು. ಪಕ್ಕದಲ್ಲಿದ್ದ ಥಿಯೇಟರ್‌ನಲ್ಲಿ ಸೆಕೆಂಡ್ ಷೋ ಸಿನೆಮಾ ಅರ್ಧ ಆಗಿತ್ತು. ಟೈಮ್ ಪಾಸ್‌ಗೆಂದು ನಾವು ನುಗ್ಗಿದೆವು. ಒಳ್ಳೆ ನಿದ್ರೆ. ಸಿನೆಮಾ ಮುಗಿದು ಹೊರಬಂದರೆ, ಅಂಗಡಿಗಳ ಎದುರಿನ ಕಟ್ಟೆಯಲ್ಲಿ ಭಿಕ್ಷುಕರು ಮಲಗಿದ್ದು ಬಿಟ್ಟರೆ, ನಮ್ಮ ವಾಹನದ ಬಳಿ ಯಾರೂ ಇಲ್ಲ. ನಮಗೆ ಟೆನ್ಷನ್. ಈ ರಾತ್ರಿಯಲ್ಲಿ ಇವರನ್ನು ಹುಡುಕುವುದು ಹೇಗೆ? ಅಷ್ಟರಲ್ಲಿ ಮಲಗಿದ್ದ ಭಿಕ್ಷುಕನೊಬ್ಬ ‘ಬನ್ರೋ, ಒರಿಜಿನಲ್ ಭಿಕ್ಷುಕರು ಬಂದರೆ ನಿಮಗೆ ಈ ಸ್ಥಳನೂ ಸಿಗುವುದಿಲ್ಲ.’ ಅನ್ನೋದೆ. ಮೆಕ್ಯಾನಿಕ್‌ನನ್ನು ಹುಡುಕೋದು ಬಿಟ್ಟು ಅವರಿಬ್ಬರು ಹಾಯಾಗಿ ಅಲ್ಲಿ ಮಲಗಿದ್ದರು! -ಗಣೇಶ.

Rating
No votes yet

Comments