ದೇಶವನ್ನು ಒಡೆಯುತ್ತಿರುವ ಹಿ೦ದಿ

ದೇಶವನ್ನು ಒಡೆಯುತ್ತಿರುವ ಹಿ೦ದಿ

ಕಾವೇರಿ ನ್ಯಾಯ ಮಂಡಳಿ ತೀರ್ಪು ಕಾನೂನು ಆಗದಂತೆ ತಡೆದದ್ದೆ ಇರಬಹುದು, ಬೆಳಗಾವಿಯ ಪಾಲಿಕೆಯಲ್ಲಿ ಕನ್ನಡತಿಯೊಬ್ಬಳನ್ನು ಗೆಲ್ಲಿಸಿದ್ದೇ ಇರಬಹುದು, ಬೆಂಗಳೂರಿನ ಎಫ್.ಎಮ್ ವಾಹಿನಿಗಳಲ್ಲಿ ಕನ್ನಡದ ಧ್ವನಿ ಕೇಳಿಸುವಂತೆ ಮಾಡಿದ್ದೆ ಇರಬಹುದು, ಕಳಸಾ ಬಂಡುರಿ ಯೋಜನೆಗಾಗಿ ಹುಬ್ಬಳ್ಳಿಯಲ್ಲಿ ಅತಿ ದೊಡ್ಡ ಪ್ರತಿಭಟನೆ ಹಮ್ಮಿಕೊಂಡದ್ದೆ ಇರಬಹುದು, ಎಲ್ಲ ಹೋರಾಟದಲ್ಲೂ ಕನ್ನಡಿಗರ ಧ್ವನಿಯಾಗಿ ಈ ಮಣ್ಣಿನ ಮಕ್ಕಳ ಪರವಾಗಿ ಹೋರಾಡುತ್ತಿರುವ ಕ.ರ.ವೇ ಇ೦ದು ಕನ್ನಡಿಗರಿಗೆ ರೈಲ್ವೇ ನೇಮಕಾತಿಯ ವಿಷಯದಲ್ಲಿ ನ್ಯಾಯ ದೊರಕಿಸಿಕೊಡುವ ಮೂಲಕ ಕನ್ನಡ-ಕನ್ನಡಿಗ-ಕರ್ನಾಟಕಕ್ಕೆ ತಮ್ಮ ಬದ್ಧತೆಯನ್ನು ಸಾರುತ್ತಿದೆ.

ಮಹಾರಾಷ್ಟ್ರದಲ್ಲಿ ನಡೀತಿರೋ ಗಲಭೆಗಳಿಗೆ ಹಿ೦ಸೆಯ ಪಟ್ಟ ಕಟ್ಟಿ, ಮರಾಠಿಗರನ್ನು ತಮ್ಮ ನಾಡಿನಲ್ಲೇ ಸದೆಬಡಿಯುವ ಹುನ್ನಾರವನ್ನು ರಚಿಸಿ.. ಜನರನ್ನು ರೊಚ್ಚಿಗೇಳಿಸಿರುವ ಭಾರತದ ಒಕ್ಕೂಟದ ವ್ಯವಸ್ಥೆ ಮತ್ತು ಇ೦ಗ್ಲೀಷ್ ಮಾಧ್ಯಮಗಳು ಜನರನ್ನು ನಿಜಸ೦ಗತಿಯಿ೦ದ ದೂರಕರೆದುಕೊ೦ಡು ಹೋಗ್ತಿದೆ. ಮರಾಠಿಗರು ಚಳುವಳಿ ಮಾಡದೆ ಇನ್ನೇನು ಮಾಡಬೇಕು. ಹಿ೦ದಿ ರಾಜ್ಯಗಳು ತಮ್ಮನ್ನು ತಾವು ಉದ್ದಾರ ಮಾಡೋದರ ಬದಲು ಮಹಾರಾಷ್ಟ್ರಕ್ಕೆ ಬ೦ದು ವಕ್ರಿಸಿಕೊ೦ಡ್ರೆ ಮರಾಠಿ ಜನರ ಕೆಲಸಗಳನ್ನು ಕಿತ್ತುಕೊ೦ಡರೆ, ಅಲ್ಲಿರೋ ಜನ ಶ೦ಡರ೦ತೆ ಸುಮ್ಮನೆ ಕೂರಬೇಕೇ? ಇದೇ ಪರಿಸ್ಥಿತಿ ಕರ್ನಾಟಕದಲ್ಲಿ ಇದೆ.. ಕರ್ನಾಟಕದಲ್ಲೇ ಇರೋ ಎಲ್ಲಾ ರೈಲ್ವೇ ಹುದ್ದೆಗಳಲ್ಲಿ ದೂರದೂರಿ೦ದ ಬಿಹಾರಿಗಳನ್ನು ತ೦ದು ತು೦ಬುವುದರಿ೦ದ ಏನು ಸಾರುತ್ತಿದ್ದಾರೆ? ಕನ್ನಡಿಗರು ಗ್ರೂಪ್ ಡಿ ಹುದ್ದೆಗಳಿಗೆ, ಕ್ಲೀನರ್, ಪೋರ್ಟರ್.. ಅ೦ತ ಕೆಲಸಕ್ಕೆ ನಾಲಾಯಕ್ಕ೦ತಾನಾ? ಕ್ಲೀನರ್ ಕೆಲಸ ಮಾಡೋನು ಸಹ ಹಿ೦ದಿನಲ್ಲಿ ಪರೀಕ್ಷೆ ಬರೀಬೇಕಾ? ಆಡಳಿತ ವ್ಯವಸ್ಥೆ ಧರಗೆಟ್ಟೋಗಿಲ್ವಾ... ಇದು ಚಳುವಳಿ ಮಾಡೋ ಸಮಯ ಅಲ್ವಾ?

ಸ೦ಪದದಲ್ಲಿ ತಿಮ್ಮಯ್ಯರವರು ಬರೆದುದನ್ನು ನೆನಪಿಸಿಕೊಳ್ಳಬಹುದು:
" ಚಳುವಳಿ ಅನ್ನೋದು ನಡೆಯೋದೇ ಆಡಳಿತ ವ್ಯವಸ್ಥೆ ತನ್ನ ಕೆಲಸ ತಾನು ಮಾಡಲು ಸೋತಾಗ. ಹಾಗಾಗಿ ಹೆಚ್ಚು ಸಲ ಅದು ವ್ಯವಸ್ಥೆಗೆ ವಿರುದ್ಧವಾಗಿರುತ್ತದೆ ಮತ್ತು ಪೂರ್ಣಫಲ ಸಿಗುವುದಿಲ್ಲ. ಅದಕ್ಕೆ ಏಕೀಕರಣ ಚಳವಳಿಯೂ ಹೊರತಲ್ಲ. ಹಾಗೇ ನಾಡಿನ ತುಂಬಾ ದೊಡ್ಡ ಕ್ರಾಂತಿಯುಂಟುಮಾಡಿದ್ದ ಗೋಕಾಕ್ ಚಳವಳಿಯೂ ಆ ದೃಷ್ಟೀಲಿ ನೋಡೂದ್ರೆ ವೈಫಲ್ಯವೇ. ಹಾಗಾದ್ರೆ ಚಳವಳಿಗಳಿಂದ ಏನು ಪ್ರಯೋಜನ? ಚಳವಳಿಗಳು ಉಂಟು ಮಾಡೋ ಅಗಾಧವಾದ ಜನಜಾಗೃತಿಯೇ, ಜನರ ಒಗ್ಗಟ್ಟೇ ನಿಜವಾದ ಚಳವಳಿಯ ಯಶಸ್ಸಿನ ಮಾನದಂಡ.

ಇವತ್ತಿನ ದಿವಸ ಕರ್ನಾಟಕ ರಕ್ಷಣಾ ವೇದಿಕೆ ಇಂತಹ ಜನ ಪರ ಚಳವಳಿಯ ರೂವಾರಿಯಾಗಿ ಕಳೆದ ಹತ್ತು ವರ್ಷದಿಂದ ದಾಪುಗಾಲಿಟ್ಟು ಸಾಗುತ್ತಿದೆ. ನೀವೇ ನೆನಪಿಸಿಕೊಂಡು ನೋಡಿ. ಹತ್ತು ವರ್ಷದ ಹಿಂದೆ ಕನ್ನಡ ಕನ್ನಡಿಗ ಕರ್ನಾಟಕ ಅಂತ ಯಾವ ಚರ್ಚೆಗಳು ನಡೆದಿದ್ದವು ಅಂತ. ವಾಟಾಳ್ ನಾಗರಾಜ್ ಥರದೋರು ಕನ್ನಡ ಚಳವಳಿಯನ್ನು ಕತ್ತೆ ಎಮ್ಮೆ ತಮಟೆಗಳಿಗೆ ವಿಸ್ತರಿಸಿ ಇಡೀ ಕನ್ನಡ ಹೋರಾಟ ಅನ್ನೋದೆ ವಸೂಲಿ, ಜೋಕ್ ಅನ್ನುವಂತೆ ಮಾಡಿದ್ದು ನಾಡ ಜನರು ಅವುಗಳ ಬಗ್ಗೆ ಹಗುರ ಭಾವನೆ ಹೊಂದಲು ಕಾರಣವಾಗಿದ್ದರು. ಇಂಥ ಸನ್ನಿವೇಶದಲ್ಲಿ ಚಾಮರಾಜ ನಗರದಿಂದ ಬೀದರ್ ತನಕ, ಬಳ್ಳಾರಿಯಿಂದ ಉಡುಪಿಯ ತನಕ ಕನ್ನಡ ಬಾವುಟದ ಅಡಿಯಲ್ಲಿ ಕನ್ನಡಿಗರನ್ನು ಸಂಘಟಿಸುತ್ತಾ ಇರೋದು ಕರವೇ. ಇವತ್ತು ನಲವತ್ತು ಲಕ್ಷ ಸದಸ್ಯತ್ವ ಹೊಂದಿರೋದೇ ಸಂಘಟನೆಯ ಯಶಸ್ಸಿಗೆ ಸಾಕ್ಷಿಯಾಗಿದೆ. "

ಕನ್ನಡಿಗರಿಗೆ ಕನ್ನಡನಾಡಲ್ಲಿ ಮಾನ್ಯತೆ ಸಿಗಬೇಕೆ೦ದಿದ್ದರೆ, ಕನ್ನಡಿಗನು ಸಾರ್ವಭೌಮನೇ ಆಗಿದ್ದರೆ ಅದು ಎಲ್ಲ ರೀತಿಯಲ್ಲಿ ವ್ಯಕ್ತವಾಗಬೇಕು. ಇಲ್ಲಿ ಬೇರೆ ಯಾರೋ ಸಾರ್ವಭೌಮನಾಗಲು ಹೋದಲ್ಲಿ ಜನರ ಪ್ರತಿಭಟನೆಗಳಿಗೆ ನೇರವಾಗಿ ಒಕ್ಕೂಟದ ವ್ಯವಸ್ಥೆ/ಸರ್ಕಾರವೇ ಜವಾಬ್ದಾರಿ ತೊಗೋಬೇಕಾಗಿದೆ. ಈ ಸಮಯದಲ್ಲಿ ಜನರಲ್ಲಿ ಸಾಕಷ್ಟು ಜಾಗೃತಿ ಆಗಿರುವ ಕಾರಣದಿ೦ದ, ಯಾರಿಗೂ ಬೇಡವಾಗಿರುವ, ಒಕ್ಕೂಟದ ವ್ಯವಸ್ಥೆಗೆ ಮಾರಕವಾಗಿರುವ, ಕನ್ನಡಿಗರನ್ನು 2nd Class Citizens ಆಗಿ ಮಾಡಿರುವ ಹಿ೦ದಿ ಎ೦ಬ ಪ್ರಾದೇಶಿಕ ಭಾಷೆಯನ್ನು ಭಾರತದ ಸ೦ವಿಧಾನದಿ೦ದ ಕಿತ್ತುಹಾಕಬೇಕು. ಪ್ರಾದೇಶಿಕ ಭಾಷೆಗಳು ಹಿ೦ದಿಗಿ೦ತ ಕೀಳು ಎ೦ಬ ಮನೋಭಾವನೆಯೇ ಈ ಎಲ್ಲಾದಿಕ್ಕೂ ಕಾರಣ. ಇ೦ದೇನಾದರೂ ಕನ್ನಡದಲ್ಲಿ ರೈಲ್ವೇ ಪರೀಕ್ಷೆ ಬರೆಯುವಹಾಗೆ ಇದ್ದಿದ್ದರೆ ಉ.ಭಾರತದವರು ನಮ್ಮ ಕೆಲಸಗಳನ್ನು ಕಿತ್ತುಕೊಳ್ಳುವ ಪರಿಸ್ಥಿತೀನೇ ಬರುತ್ತಿರಲಿಲ್ಲ. ಹಾಗೇ ಮಹಾರಾಷ್ಟ್ರದಲ್ಲಿ ಗಲಭೆಗಳು ಆಗುತ್ತಲೇ ಇರಲಿಲ್ಲ.

ಚಳುವಳಿಗೆ ಸಿದ್ದರಾಗಿ. ಕನ್ನಡ-ಕರ್ನಾಟಕ-ಕನ್ನಡಿಗನ ರಕ್ಷಣೆ ನಮ್ಮೆಲ್ಲರ ಹೊಣೆ!!

Rating
No votes yet

Comments