ಜಗರ್ನಾಟ್

ಜಗರ್ನಾಟ್

ಜಗರ್ನಾಟ್
ಕೆಲವು ದಿನಗಳ ಕೆಳಗೆ ರೈಲ್ವೇ ನಿಲ್ದಾಣದಲ್ಲಿ ಕಾಯುತ್ತಾ ಕುಳಿತಿದ್ದಾಗ ಇಬ್ಬರು ಯುವಕರು ಸ್ವಲ್ಪ ದೂರದಲ್ಲಿ ಮಾತನಾಡುತ್ತಿದ್ದುದು ನನ್ನ ಕಿವಿಗೆ ಬಿತ್ತು.
ಒಬ್ಬ, “ನಾನು ಇವತ್ತು ಒಂದು ಹಳೇ ಇಂಗ್ಲಿಷ್ ಮೂವಿ ನೋಡ್ದೆಕಣೊ ತುಂಬಾ ಚೆನ್ನಾಗಿತ್ತು.”
ಇನ್ನೊಬ್ಬ, “ಹೌದಾ? ಯಾವುದೋ ಅದು ?” ಎಂದು ಕೇಳಿದ.
“ಅದರ ಹೆಸರು ಜಗರ್ನಾಟ್ ಅಂತಕಣೊ”
“ಜಗರ್ನಾಟ್? ಹಾಗಂದ್ರೆ ಏನೋ?”
“ಈ ಮೂವಿಯ ಕಥಾನಾಯಕ ಹಡಗಿನಲ್ಲಿ ಇಟ್ಟಿದ್ದ ಟೈಂ ಬಾಂಬನ್ನು ಅದು ಸಿಡಿಯುವ ಮೊದಲೇ ಶಕ್ತಿ ಕಳೆದುಕೊಳ್ಳುವ ಹಾಗೆ ಮಾಡುವುದರಲ್ಲಿ ನಿಪುಣನಾಗಿ ಇದರಲ್ಲಿ ಬರುತ್ತಾನೆ ಅವನ ಸಾಹಸ ಕಥೆ ಇದು. ತುಂಬಾ ಚೆನ್ನಾಗಿದೆ”
ಹೀಗೆ ಮಾತನಾಡಿಕೊಳ್ಳುತ್ತಾ ಅವರು ಹೊರಟು ಹೋದರು.
ನನಗೆ ಈ ಜಗರ್ನಾಟ್ ಎಂಬ ಪದ ತಲೆ ಕೊರೆಯಲು ಪ್ರಾರಂಭಿಸಿತು. ನನ್ನ ಮನಸ್ಸಿನ ಯಾವುದೋ ಮೂಲೆಯಲ್ಲಿ ಕುಳಿತು ಈ ಪದ ಎಲ್ಲೋ ಕೇಳಿದ ಹಾಗಿದೆಯಲ್ಲ ಎಲ್ಲಿ ಎಂಬ ಚಿಂತೆ ನನ್ನನ್ನು ಕಾಡ ತೊಡಗಿತು. ಈಗ ಎರಡು ದಿನಗಳ ಕೆಳಗೆ ಯಾವುದೋ ಹಳೇ ತಮಿಳು ಪುಸ್ತಕವೊಂದನ್ನು ತಿರುವಿ ಹಾಕುತ್ತಿದ್ದಾಗ ಅದರಲ್ಲಿ ಈ ಜಗರ್ನಾಟ್ ಎಂಬ ಪದದ ಬಗ್ಗೆ ಅರ್ಥ ಕಂಡಿತು. ಅದನ್ನು ನೋಡಿದಕೂಡಲೇ ಆ ಹುಡುಗರು ಮಾತನಾಡುತ್ತಿದ್ದಾಗ ನನ್ನ ಕೊರೆಯುತ್ತಿದ್ದ ಆ ಪದದ ನೆನಪಾಯಿತು. ಇದನ್ನು ಓದಿದ್ದರಿಂದಲೇ ಆ ಹುಡುಗರು ಮಾತನಾಡುತ್ತಿದ್ದಾಗ ಆ ಪದ ನನ್ನನ್ನು ಸೆಳೆಯಿತು ಎಂಬುದು ಅರ್ಥವಾಯಿತು.
ಜಗರ್ನಾಟ್ ಎಂಬುದು ಒಂದು ಕಾಲದಲ್ಲಿ ನಡೆಯುತ್ತಿದ್ದ ಒಂದು ಘಟನೆಯಿಂದ ಹುಟ್ಟಿಕೊಂಡ ಹೆಸರು. ಪುರಿ ಜಗನ್ನಾಥ ದೇವಾಲಯದ ರಥ ಎಳೆಯುವ ಸಂದರ್ಭದಲ್ಲಿ ಆ ರಥದ ಚಕ್ಕರದ ಕೆಳಗೆ ಮಲಗಿ ಪ್ರಾಣತ್ಯಾಗ ಮಾಡಿದರೆ ಮಾಡಿದ ಪಾಪವೆಲ್ಲವೂ ಹೋಗಿ ಮುಂದಿನ ಜನ್ಮದಲ್ಲಿ ತೊಂದರೆ ಇರುವುದಿಲ್ಲ ಎಂದೋ ಅಥವಾ ಮುಂದಿನ ಜನ್ಮವೇ ಇರುವುದಿಲ್ಲ ಎಂದೋ, ಒಟ್ಟಿನಲ್ಲಿ ಒಂದು ರೀತಿಯ ಮೂಢ ನಂಬಿಕೆಯಿಂದ ಕೆಲವರು ಚಕ್ರದ ಕೆಳಗೆ ಮಲಗಿ ಪ್ರಾಣ ತ್ಯಾಗ ಮಾಡುತ್ತಿದ್ದರಂತೆ. (ಅಥವಾ ಅವರು ಜೀವನದ ಕಷ್ಟಗಳನ್ನು ಎದುರಿಸಲಾಗದೇ ಹೀಗೆ ಹೇಳಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೋ ಏನೋ ಗೊತ್ತಿಲ್ಲ) ಈ ರೀತಿಯ ಜೀವತ್ಯಾಗ ಮಾಡುವವರನ್ನು ನೋಡಿದ ಫ್ರಿಯರ್ ಓಡೋರಿಚ್ ಎಂಬ ಬ್ರಿಟಿಷನೊಬ್ಬ “ಕುರುಡುಭಕ್ತಿಯನ್ನು ಅಥವಾ ಕರುಣೆಯಿಲ್ಲದೆ ತ್ಯಾಗವನ್ನು ಬಯಸುವ ಇಂತಹುದನ್ನು ಭಾರತದ ಜನ ಜಗರ್ನಾಟ್ ಎನ್ನುತ್ತಾರೆ.” ಎಂದು ಉದ್ಗರಿಸಿದನು. ಇದು ಜಗನ್ನಾಥ ಎಂಬುದರ ಅಪಭ್ರಂಶ. ಎರಡನೇ ಮಹಾ ಯುದ್ದದಲ್ಲಿ ಸಿಡಿಯದೇ ಇದ್ದ ಬಾಂಬುಗಳ ಹತ್ತಿರ ಹೋಗಿ ಅವುಗಳನ್ನು ಶಕ್ತಿ ಕಳೆದುಕೊಳ್ಳುವಂತೆ ಮಾಡಲೆಂದೇ ಕೆಲವರು ನೇಮಕಗೊಂಡಿದ್ದರಂತೆ. ತುಂಬಾ ಅಪಾಯದ ಕೆಲಸ. ಅವರು ಯಶಸ್ಸು ಗಳಿಸುವ ಮೊದಲೇ ಬಾಂಬ್ ಸಿಡಿದರೆ ಆ ವ್ಯಕ್ತಿಯ ಕಥೆ ಅಲ್ಲೇ ಮುಗಿದಂತೆ.
ರೈಲ್ವೇ ನಿಲ್ದಾಣದಲ್ಲಿ ಆ ಹುಡುಗರು ಮಾತನಾಡಿದ ಆ ಚಲನಚಿತ್ರ 1974ರ ಸೆಪ್ಟೆಂಬರ್ ನಲ್ಲಿ ಬಿಡುಗಡೆಯಾಯಿತು. ನಾಯಕನು ಅಪಾಯಗಳನ್ನು ಎದುರಿಸುವ ರೋಮಾಂಚಕಾರಿ ಸಿನಿಮಾ. ಇದರಲ್ಲಿ ತನ್ನನ್ನು ತಾನು ಜಗರ್ನಾಟ್ ಎಂದು ಕರೆದುಕೊಳ್ಳುವ ಟೆರರಿಸ್ಟ್ ಒಬ್ಬ ಒಂದು ಹಡಗಿನ ಬೋರ್ಡ್ನಲ್ಲಿ ೭ ಕಡೆ ತಾನು ಬಾಂಬ್ ಇಟ್ಟಿರುವುದಾಗಿಯೂ ಇನ್ನು 22 ಗಂಟೆಗಳೊಳಗೆ ತನಗೆ ಅರ್ಧ ಮಿಲಿಯನ್ ಪೌಂಡ್ಸ್ ಕೊಡದಿದ್ದರೆ ಹಡಗು ಸಿಡಿಯುತ್ತದೆ ಎಂದು ಸುದ್ದಿ ಕಳಿಸುತ್ತಾನೆ. ಅವನನ್ನು ಪತ್ತೆ ಹಚ್ಚಲು ಸಿಡಿಯುವ ಮುನ್ನ ಬಾಂಬ್ ಶಕ್ತಿಯನ್ನು ನಿರ್ಮೂಲ ಮಾಡುವ ಮಿಲಿಟರಿಯ ಗುಂಪೊಂದನ್ನು ಸರ್ಕಾರ ಕಳಿಸುತ್ತದೆ. ಆ ಗುಂಪಿನ ನಾಯಕನ ಸಾಹಸ ಕಥೆಯೇ ಈ ಜಗರ್ನಾಟ್ ಸಿನಿಮಾ. ಈ ಚಲನಚಿತ್ರಕ್ಕೆ ಸ್ಪೂರ್ತಿ ಎಂದರೆ 1972ರಲ್ಲಿ ನಡೆದ ಒಂದು ಘಟನೆ. ಒಬ್ಬ ವ್ಯಕ್ತಿ 1972ರಲ್ಲಿ QE 2 ಎಂಬ ಹಡಗಿನಲ್ಲಿ ಬಾಂಬ್ ಇಟ್ಟಿರುವುದಾಗಿ ಸುದ್ದಿ ಕಳಿಸಿ ಪ್ರತಿಫಲವಾಗಿ ಒಂದು ಖೈದಿಯ ಬಿಡುಗಡೆ ಕೇಳಿದ್ದನಂತೆ. Cunard ( ಪ್ರಸಿದ್ಧವಾದ ಒಂದು ಹಡಗಿನ ಮಾಲಿಕರು) ಅವರು ransom ಕೊಡಲು ತಯಾರಿದ್ದರು. ಆದರೆ ಬ್ರಿಟಿಷ್ ಸರ್ಕಾರ ವಿಶೇಷ ಹಡಗು ಸೇವಾದಳದವರನ್ನು ಕಳಿಸಿತು. ಆ ಪಡೆಯು ಯು.ಕೆ.ಯಿಂದ 1000 ಮೈಲ್ ದೂರದಲ್ಲಿ ಉತ್ತರ ಅಟ್ಲಾಂಟಿಕ್ ಭಾಗದಲ್ಲಿ ಹಡಗಿನಲ್ಲಿ ಇಳಿದು ಹುಡುಕಲು ಪ್ರಾರಂಭಿಸಿದರು. ಆನಂತರ ಅಲ್ಲಿ ಯಾವ ಬಾಂಬ್‍ಗಳೂ ಇಲ್ಲ, ಅವನು ಸುಮ್ಮನೆ ಹಣ ಕೀಳಲು ಮಾಡಿದ ಉಪಾಯ ಎಂಬುದು ತಿಳಿದು ಬಂತು. ಆ ಘಟನೆಯ ಸ್ಪೂರ್ತಿಯಲ್ಲಿ ಈ ಚಲನಚಿತ್ರವನ್ನು ತೆಗೆಯಲಾಯಿತು ಎಂದು ಹೇಳುತ್ತಾರೆ.

Rating
No votes yet

Comments