ದುರಸ್ತಿ

ದುರಸ್ತಿ

ಬರಹ

ಘಟ್ಟ ಹತ್ತುತ್ತಿದ್ದ ಬಸ್ಸು ಘಕ್ಕನೇ ಕೆಟ್ಟು ನಿಂತು
ಊರು ಸೇರಲೇಬೇಕಾದವರಿಗೆಲ್ಲ ಪೀಕಲಾಟ
ಕಟ್ಟಕಡೆಯ ಬಸ್ಸೆಂದು ತಪ್ಪದೇ ಹಿಡಿದವರಿಗೆಲ್ಲ
ಒಳಗೊಳಗೇ ಆಸೆ, ದುರಸ್ತಿ ಬೇಗ ಮುಗಿದು ಬಿಡಲಿ.

ಬಸ್ಸಿನ ಜೊತೆಗೇ ಹಣೆಯ ಬರಹವನ್ನೂ ಬಯ್ಯುತ್ತ
ಎಲೆಯಡಿಕೆ, ಬೀಡಿ, ಸಿಗರೇಟು,ತಂಬಾಕು
ಎಲ್ಲದರ ನಶೆ ಮುಗಿಯುತ್ತ ಬಂದ ಮೇಲೆ ಮುಗುಳ್ನಗೆ
ಇಂಥದೆಲ್ಲ ಮಾಮೂಲು ಬಿಡಿ ಎಂಬ ಉಢಾಫೆ....

ಪುಸ್ತಕದಿಂದ ಮುಖವನ್ನೆತ್ತಿ ಕಿಟಕಿಯಲ್ಲಿ ದಿಟ್ಟಿಸಿದವಳಿಗೆ
ಹೊಗೆಯುಗುಳುತ್ತ ನಿಂತ ಒಬ್ಬಂಟಿ ಮನುಷ್ಯ
ಕೂಡಿದ ಕಣ್ಣನೋಟಗಳಲ್ಲಿ ಹರಿದ ನೆನಪ ಕರೆಂಟು
ಜನಜಂಗುಳಿಯಲ್ಲಿ ಕಳೆದೇ ಹೋಗಿದ್ದವರ ಹೆಜ್ಜೆ ಗುರುತು.

ಗಂಡ ಮಕ್ಕಳ ಬಗ್ಗೆ ಅವನು, ಹೆಂಡತಿ ಮಗುವಿನ ಬಗ್ಗೆ ಇವಳು
ಹೀಗೇ ವಿನಿಮಯವಾದ ಹತ್ತಾರು ಮಾತು
ಕಮ್ಯುನಿಸಂ, ಕಾವ್ಯ, ಕಾಮೂ, ರಾಜಕೀಯ
ಬಿಟ್ಟುಕೊಡದೇ ಎಲ್ಲೂ ಆಳದಲ್ಲಿನ ವಿಷಾದ....

ಬೆಳಕು ಕರಗಿ ಸುತ್ತ ಮಬ್ಬು ಆವರಿಸಿದರೂ
ದುರಸ್ತಿಯಾಗದೇ ಕಿರುಗುಟ್ಟುತ್ತಲೇ ಇದೆ ಬಸ್ಸು,
ಎಂಥ ಸಂಭಾವಿತರಿಗೂ ಹೊತ್ತು ಕಳೆದಂತೆ ಸಿಟ್ಟು
ಆಗಲೇ ಬಿಟ್ಟುಕೊಡುವ ಎದೆಯೊಳಗೇ ಬಚ್ಚಿಟ್ಟ ಗುಟ್ಟು...

ಹೆಂಡತಿಯ ಸಣ್ಣತನ, ಗಂಡನ ನಯವಂಚನೆ
ಪರಸ್ಪರ ಬದಲಾದವು ಮಾತು ಅವರಿಬ್ಬರಲ್ಲಿ
ಅಂಥ ಕತ್ತಲಲ್ಲೂ ಕೈ ಅವಳನ್ನು ಸರಿಯಾಗಿ ತಬ್ಬುತ್ತಲೇ
ಅಂದು ಕೊಂಡರೂ ಇಬ್ಬರೂ- ದುರಸ್ತಿ ಬೇಗ ಮುಗಿಯದಿರಲಿ!

ಅಂತೂ ಬಸ್ಸು ಕಡೆಗೂ ಹೊರಟು ಊರು ಮುಟ್ಟುವ ಹೊತ್ತು
ಅವಿತ ಕತ್ತಲೆಯಲ್ಲೂ ಬೆರಗ ಬೆಳಕ ಮೂಡಿಸಿಬಿಟ್ಟಿತ್ತು
ಅದುವರೆಗೂ ಆ ಜೀವಗಳ ಜಗತ್ತು ಬೇರೆಯೇ ಆಗಿತ್ತು
ಪರಸ್ಪರರ ಸಂತೈಸುವಿಕೆಗೆ ಜನ್ಮಾಂತರಗಳ ಸಲುಗೆ ಸಾಲದಾಗಿತ್ತು.