ನನ್ನ ಬ್ಯಾಂಕ್ ಬ್ಯಾಲೆನ್ಸ್

ನನ್ನ ಬ್ಯಾಂಕ್ ಬ್ಯಾಲೆನ್ಸ್

ಬರಹ

ನನ್ನ ಸ್ನೇಹಿತರೊಬ್ಬರು 'ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಬಗ್ಗೆ ಯಾಕೆ ಕವನದಲ್ಲಿ ಬರೆದೇ ಇಲ್ಲ' ಅಂತ ಕೇಳಿದ್ರು - ಅದಕ್ಕೆ ಸ್ವಲ್ಪ ಯೋಚನೆ ಮಾಡಬೇಕಾಯ್ತು. ಇಷ್ಟು ದಿನಗಳು ಇದರ ಬಗ್ಗೆ ಯೊಚಿಸಿರಲೇ ಇಲ್ಲ. ಕೆಲಸಕ್ಕೆ ಸೇರಿ ೨೪ ವರುಷಗಳಾದ್ರೂ ಒಂದು ಪೈಸೆ ಕೂಡಿಸಿಟ್ಟಿಲ್ವಲ್ಲ ಅಂತ. ಯಾಕೆ ಹೀಗಾಯ್ತು? ನನ್ನ ಚಿಂತನೆಯ ಫಲವನ್ನು ಕವನವಾಗಿ ನಿಮ್ಮ ಮುಂದಿರಿಸುತ್ತಿರುವೆ. ಹೇಗಿದೆ ನೋಡಿ.

ನಾನೊಬ್ಬ ಏದುಸಿರು ಬಿಡುತಿಹ ಕಲ್ಲಿದ್ದಲು ಉಗಿಬಂಡಿ
ನನ್ನ ಬಳಿ ಎಂದಿಗೂ ಸುಳಿಯಲಿಲ್ಲ ಬಂಗಾರದ ಗಿಂಡಿ
ಟ್ಯಾಕ್ಸು ಪಾಕ್ಸು ಮುರಿದು ಮಾಹೆಯಾನ ಬರುತಿಹುದು ೮೦೦೦ ರೂಪಾಯಿ
ಚಾತಕದಂತೆ ತಾರೀಖು ಒಂದಕೆ ಕಾದು ಬಿಡುತಿಹೆ ನಾ ಬಾಯಿ ಬಾಯಿ

ಬರುವುದರಲಿ ಒಂದು ಪಾಲು ಕೈ ತುತ್ತನಿಟ್ಟ ಆ ತಾಯಿಗೆ
ಇನ್ನೊಂದು ದೊಡ್ಡ ತುತ್ತು ನನ್ನ ನಂಬಿದ ನನ್ನ ಮಕ್ಕಳ ತಾಯಿಗೆ
ಹೆಚ್ಚಿನ ಖರ್ಚಿಗೆ ಗಟ್ಟಿಯಾಗಿರುವುದು ಸಾಲ ಕೊಡುವ ಸೊಸೈಟಿ
ಉಳಿಸುವ ಮಾತೇ ಇಲ್ಲ ಈ ನನ್ನ ಸರಕಾರದ ಖಜಾನೆಯಲ್ಲಿ

ಮುಚ್ಚಿದಷ್ಟೂ ಮತ್ತೆ ಮತ್ತೆ ತೆರೆದುಕೊಳ್ಳುವ ಖರ್ಚಿನ ಬಾಬ್ತುಗಳು
ಭೂತ ತೃಪ್ತಿಗಾಗಿ ಹೊಸ ಹೊಸ ಯೋಜನೆಯ ಸಾಲಗಳು ( ಭೂತ ಅಂದ್ರೆ ಹೊಟ್ಟೆ )
ಇದೆಲ್ಲದರ ನಡುವೆ ಅನುಭವ ಆಗುತಿಹುದುದ ಅಭಾವ ವೈರಾಗ್ಯ
ಅದೇಕೋ ಸುತ್ತ ಮುತ್ತಲಿನವರೆಲ್ಲ ಹೇಳುತಿಹರು ನಾ ಅಯೋಗ್ಯ

ನಾ ಚಿರಂಜೀವಿ ಆಗಲು ಸಾಲ ಕೊಟ್ಟ ಮಂದಿ ಪ್ರಾರ್ಥಿಸುತಿಹರು
ಎಮ್ ವಿ ಎಸ್ ಎಂದು ಸೊಸೈಟಿಯವರು ಎನಗೆ ಬಿರುದಿತ್ತಹರು
( ಮೋಸ್ಟ್ ವ್ಯಾಲ್ಯೂಡ್ ಕಸ್ಟಮರ್ )
ಸಾವಿರಾರು ಮಂದಿಗಳ ನಂಬಿಸಿ ಮೋಸ ಮಾಡಲಾದೀತೇ
ಅದಕಾಗಿ ಹೊಸ ಹೊಸ ಯೋಜನೆಗಳ ರೂಪಿಸುತಿಹೆ

ಮತ್ತೆ ಕಾಯುವೆ ಮುಂದಿನ ತಿಂಗಳ ಒಂದನೇ ತಾರೀಖಿಗೆ
ಆನಂದ ತುಂದಿಲನಾಗಿ ಬೀಗುವೆ ಅಂದೊಂದು ದಿನವೇ
ನನ್ನ ಹತ್ತಿರವೂ ಇದೆ ಬ್ಯಾಂಕ್ ಬ್ಯಾಲೆನ್ಸು
ಆದರದು ಎಲ್ಲರಂತಹದಲ್ಲದ ಡೆಬಿಟ್ ಬ್ಯಾಲೆನ್ಸು

ನನಗಿಷ್ಟವಾದ ಹಾಡು
ಒಂದರಿಂದ ಇಪ್ಪತ್ತರವರೆಗೆ ಉಂಡಾಟ ಉಂಡಾಟ
ಇಪ್ಪತ್ತೊಂದರಿಂದ ಮೂವತ್ತರವರೆಗೂ ಭಂಡಾಟ
ಸಂಬಲ ತೇದಿ ಒಂದರಿಂದ ಇಪ್ಪತ್ತರವರೆಗೆ ಉಂಡಾಟ ಉಂಡಾಟ