ಶಾಸ್ತ್ರೀಯ ಭಾಷೆಯಿಂದ ಏನ್ ಮಣ್ಣು ಪ್ರಯೋಜನಾನೂ ಆಗಲ್ವಾ?

ಶಾಸ್ತ್ರೀಯ ಭಾಷೆಯಿಂದ ಏನ್ ಮಣ್ಣು ಪ್ರಯೋಜನಾನೂ ಆಗಲ್ವಾ?

ಗೆಳೆಯರೇ,

ಶಾಸ್ತ್ರೀಯ ಭಾಷೆ ಸ್ಥಾನ ಮಾನ ಸಿಕ್ತು ಅಂತ ನಾವೆಲ್ಲ ಖುಷಿ ಏನೋ ಆಗಿದಿವಿ, ಆದ್ರೆ ಅದರಿಂದ ಆಗೋ ಪ್ರಯೋಜನ ಏನು ಅನ್ನೋದನ್ನ ತಿಳಕೋಬೇಕು ಅಂತಾ ನಾನೊಬ್ಬ ಭಾಷಾ ತಜ್ಞರನ್ನ ಮಾತಾಡಿಸಿದಾಗ ತಿಳಿದದ್ದು ಇಷ್ಟು:

ತಮಿಳಿಗೆ ಶಾಸ್ತ್ರೀಯ ಭಾಷೆ ಸ್ಥಾನಮಾನ ಸಿಕ್ಕಾಗ, ಮೊದಲಿಗೆ ಆಗಿದ್ದು ಯಾವ ಅವಧಿಯ ತಮಿಳು "ಶಾಸ್ತ್ರೀಯ" ಅನ್ನೋದನ್ನ ಗುರುತಿಸೋ ಕೆಲಸ ಅಂತೆ, ಅದರಂತೆ ಕ್ರಿ.ಶ ೧೬೫೦ರ ಹಿಂದಿನ ತಮಿಳಷ್ಟೇ ಶಾಸ್ತ್ರೀಯವಂತೆ ಹಾಗೂ ಅದರ ಮುಂದಿನ ತಮಿಳಿನ ಅಧ್ಯಯನಕ್ಕಾಗಲಿ, ರಿಸರ್ಚಗಾಗಲಿ ಶಾಸ್ತ್ರೀಯ ಸ್ಥಾನಮಾನದಿಂದ ಸಿಗೋ ಹಣವನ್ನು ಬಳಸುವ ಹಾಗಿಲ್ಲವಂತೆ. ಅದರಂತೆ ಮೈಸೂರಿನ CIIL ನಲ್ಲಿ ಸುಮಾರು ೩೦-೪೦ ತಮಿಳು ಪಂಡೀತರು ೧೬೫೦ರ ಹಿಂದಿನ ತಮಿಳಿನ ಬಗ್ಗೆ ಅಧ್ಯಯನ ಶುರು ಹಚ್ಚಿಕೊಂಡಿದ್ದಾರಂತೆ. ಅದಾಗ್ಯೂ ತಮಿಳರಿಗೆ ತಮ್ಮ ಭಾಷೆಯ ಹಳಮೆಯ ಬಗ್ಗೆ ಇರುವ ಕುರುಡು ಅಭಿಮಾನ ಆ ಗಡಿಯನ್ನು ಕ್ರಿ.ಶ ೧೬೫೦ರಿಂದ ಕ್ರಿ.ಶ ೬೦೦ಕ್ಕೆ ಕೊಂಡೊಯ್ದು, ಈಗ ಅವರೆಲ್ಲ ಆ ಸಮಯದ ತಮಿಳಿನ ಬಗ್ಗೆ ಅಧ್ಯಯನ ಮಾಡ್ತಾ ಇದ್ದಾರಂತೆ. ಈ ಜಾಗತೀಕರಣದ ದಿನಗಳಲ್ಲಿ ತಮಿಳರ ಮುಂದಿರುವ ಸವಾಲಾಗಲಿ, ತಮಿಳಿನಲ್ಲಿ ತಂತ್ರಜ್ಞಾನ ತರುವ ವಿಷಯದಲ್ಲಿರುವ ತೊಂದರೆಗಳಿಗಾಗಲಿ ಈ ಶಾಸ್ತ್ರೀಯ ಸ್ಥಾನ ಮಾನದಿಂದ ಯಾವ ಪರಿಹಾರವೂ ಸಿಕ್ಕಿಲ್ಲವಂತೆ. ೪ ವರ್ಷದಲ್ಲಿ ಕೇಂದ್ರ ಕೊಟ್ಟಿರುವ ೨೩ ಕೋಟಿ ಹಣದಲ್ಲಿ ಖರ್ಚಾಗಿರೋದು ಬರೀ ೬ ಕೋಟಿ ಅಂತೆ. ಇದು ತಮಿಳಿನ ಸ್ಥಿತಿ.

ಇನ್ನೂ ನಮ್ಮ ಭಾಷೆಯ ವಿಷಯಕ್ಕೆ ಬಂದ್ರೆ, ನಮ್ಮ ಭಾಷೆಯಲ್ಲೂ ಯಾವ ಅವಧಿಯ ಕನ್ನಡವನ್ನು ಶಾಸ್ತ್ರೀಯ ಅಂತ ಘೋಷಿಸಬೇಕು ಅನ್ನೊ ಬಗ್ಗೆ ಚರ್ಚೆ ಶುರು ಆಗಿದೆ. ಕೆಲವು ಹಿರಿಯ ಅರಳು-ಮರಳು ಸಾಹಿತಿಗಳು ೧೫ನೇ ಶತಮಾನಕ್ಕಿಂತ ಹಿಂದಿನ ಕನ್ನಡವನ್ನು  ಶಾಸ್ತ್ರೀಯ ಅಂತ ಘೋಷಿಸಿ, ಅದರ ಅಧ್ಯಯನ ಆಗಬೇಕು ಅಂತ ಮಾತಾಡ್ತಾ ಇದ್ದದ್ದು ಮಾಧ್ಯಮದಲ್ಲಿ ನೋಡಿದೆ. ಹಳೆಗನ್ನಡದ ಬಗ್ಗೆ, ೧೫ನೇ ಶತಮಾನಕ್ಕಿಂತ ಹಿಂದಿನ ಕನ್ನಡದ ಬಗ್ಗೆ ಅಧ್ಯಯನ ಆಗಬೇಕಾದದ್ದೇ, ಎಷ್ಟೋ ಗೊತ್ತಿಲ್ಲದ ಹೊಸ ಹೊಸ ವಿಷಯಗಳನ್ನು ಕನ್ನಡ ಜನಾಂಗಕ್ಕೆ ತಿಳಿಸಬೇಕಾದದ್ದೇ,  ಆದರೆ ಇಷ್ಟೆಲ್ಲ ಕಷ್ಟ ಪಟ್ಟು ಗಳಿಸಿರೋ ಈ ಸ್ಥಾನಮಾನದಿಂದ ಆಗಬೇಕಾಗಿರೋದು ಬರೀ ಇಷ್ಟೇನಾ? ಇವತ್ತಿನ ದಿನ ಕನ್ನಡದ ಮುಂದಿರೋ ಸವಾಲುಗಳು ಹಿಂದೆಂದಿಗಿಂತಲೂ ಗಂಭೀರವಾದದ್ದು. ಕನ್ನಡದ ಮಕ್ಕಳಿಗೆ ಕನ್ನಡ ಮಾಧ್ಯಮದ ಶಾಲೆಗಳಲ್ಲಿನ ಪಠ್ಯ ಪುಸ್ತಕದಲ್ಲೇ ತಲೆ ಕೆಟ್ಟು ಹೋಗುವಷ್ಟು ಸಂಸ್ಕ್ರತದ overdose ಆಗ್ತಿದೆ. ತಂತ್ರಜ್ಞಾನವನ್ನು ಕನ್ನಡದಲ್ಲಿ ತರೋದು ಇವತ್ತಿನ ದಿನದ top priority ಆಗಿದೆ. ಕನ್ನಡ ಜನಾಂಗ ಉದ್ಧಾರ ಆಗಲು ನಮ್ಮ ಭಾಷೆಯಲ್ಲೇ ತರಬೇಕಾದ reforms ತುಂಬಾ ಇದೆ. ಕನ್ನಡವನ್ನು ಒಂದು ಅನ್ನ ಕೊಡೊ ಭಾಷೆಯಾಗಿಸುವತ್ತ ಇವತ್ತಿನ ಕನ್ನಡದ ಪ್ರತಿಭಾವಂತ ಯುವ ಪೀಳಿಗೆ ಕೆಲಸ ಮಾಡಬೇಕಾಗಿದೆ. ಹೀಗಿರುವಾಗ,ಈ ಶಾಸ್ತ್ರೀಯ ಸ್ಥಾನಮಾನದ ವ್ಯಾಪ್ತಿಯಲ್ಲಿ ಇವತ್ತಿನ ದಿನದ ಕನ್ನಡದ ಸಮಸ್ಯೆಗಳ ಬಗ್ಗೆಯೂ, ಅದಕ್ಕೆ ಬೇಕಾದ ಪರಿಹಾರದ ಬಗ್ಗೆ ಅಧ್ಯಯನ ಮಾಡೋ ವ್ಯವಸ್ಥೆ ಆಗಬೇಕು,ಆ ಮೂಲಕ ನಿಜವಾಗಿಯೂ ಇವತ್ತಿನ ದಿನದ Living Classical Language ಆದ ಕನ್ನಡದ ಉಳಿವಿನ, ಬೆಳೆವಿನ ಕೆಲಸಕ್ಕೆ ಹೆಚ್ಚೆಚ್ಚು ಬಲ ಸಿಗಬೇಕು. ಇದನ್ನೆಲ್ಲ ನಮ್ಮ ರಾಜ್ಯ ಸರ್ಕಾರ ಕೇಂದ್ರದ ಗಮನಕ್ಕೆ ತಂದು ನಮಗೆ ಸಿಕ್ಕಿರೋ ಸ್ಥಾನಮಾನ ಮತ್ತು ಅದರಡಿ ದೊರಕೋ ಹಣವನ್ನು ಈ ರೀತಿ ಬಳಸೋಕೆ ಬೇಕಾದ ಎಲ್ಲ ವ್ಯವಸ್ಥೆ ಮಾಡಬೇಕು.

ಇದೆಲ್ಲ ಈಗ ಆಗಲಿಲ್ಲ ಅಂದರೆ ನಮ್ಮ ಭಾಷೆ ಬಗೆಗಿನ ನಮ್ಮ ಯಾವ ಆತಂಕವೂ ಕಮ್ಮಿ ಆಗಲ್ಲ. ಆಮೇಲೆ ಯಾವ ಶಾಸ್ತ್ರೀಯ ಸಿಕ್ರೆ ಏನ್ ಮಣ್ಣು ಪ್ರಯೋಜನ ಅನ್ನೊ ಹಾಗಾಗುತ್ತೆ. ನೀವೆನ್ ಅಂತೀರಾ?

Rating
No votes yet

Comments