ಮನಸಿನ ಹೆಜ್ಜೆ ಹಿಡಿದು

ಮನಸಿನ ಹೆಜ್ಜೆ ಹಿಡಿದು

ಬರಹ

ಮಂಜು ಮುಸುಕಿದ ಮುಂಜಾವಿನಲಿ ಪಟ ಪಟನೇ ಪುಟಿಯುತ್ತಿದ್ದ ಮಂಜಹನಿ.ಪಶ್ಚಿಮಘಟ್ಟಗಳ ಸೌಂದರ್ಯ ಆಗಸದಲ್ಲಿ ಮರೆಮಾಚಿದಂತಿತ್ತು. ಅದು ಸೌಂದರ್ಯದ ಮರೆಮಾಚುವಿಕೆಯಲ್ಲ ಅಸ್ಪಷ್ಟತೆಯಲ್ಲ ವಿಭಿನ್ನತೆ,ಸೌಂದರ್ಯದ ಸೊಬಗಿನ ಜೀವಲತೆ.

ಸೌಂದರ್ಯವೆಂದರೇನು? ಓ ಪ್ರಕೃತಿಯೆ ನೀನೇನಾ? ಜಂಭಪಡಬೇಡ,ಅದು ನೀನಾಗಿರಲಿಕ್ಕಿಲ್ಲ.ನನ್ನ ಕಂಗಳ ನಿರ್ಮಲ ನೋಟವಿರಬೇಕು.ಮನದಾಳದ ಆರಾಧನೆ ಇರಬೇಕು.ಕಾಲದ ಕವನಕ್ಕೆ ಭಾವ ತುಂಬುವವರು ನಾವು ,ಹುಟ್ಟಿದ ಮಾತುಗಳಲಿ ಅರ್ಥ ಹುಡುಕುವವರು ನಾವು.ಮತ್ತೆ ಪ್ರಶ್ನೆ, ಹಾಗದರೆ ಅಷ್ಟಕ್ಕೂ ಪ್ರಕೃತಿ ಎಂದರೇನು? ಹೆಣ್ಣೇ ಅಲ್ಲವೆ? ಹೆಣ್ತನ ವಲ್ಲವೆ? ಅದರೊಳಗಿನ ಮನಸಿದೆಯಲ್ಲ ಅದು ಪ್ರಕೃತಿ. ಸ್ವಭಾವ ನಿಸರ್ಗ ಈ ಎಲ್ಲದರೊಳಗೂ ಮೂಲ ಜೀವವೇ ಪ್ರಕೃತಿ.ಆಕೃತಿ ವಿಕೃತಿಗಳ ಒಳಗೆ ಜೀವಂತ ವಾಗಿರುವುದೂ ಇದೇ ಎಂದೆನಿಸುತ್ತದೆ.

ಆ ಆಗಸಕ್ಕೆ ಒರಗಿರುವ ಪರ್ವತಗಳ ಸಾಲು,ಒಂದರ ಬುಜಕ್ಕೊರಗಿದಂತೆ ಇನ್ನೊಂದು, ಅದಾವ ಬಾವ ಬೆರೆತಿರುವುದೋ!
ಒಂದರ ಎದೆಗೆ ಇನ್ನೊಂದು ಒರಗಿ ಹಸಿರ ಹಾಸಿನ ಚೆಲುವಲಿ ಸಾಂತ್ವನದ ಉಸಿರು ಹೊರಹೊಮ್ಮುವಂತೆನಿಸುತ್ತದೆ. ಏನೆನ್ನಲಿ ನಮ್ಮೊಳಗೆ ಮಾತುಗಳು ಸೇರಿಹೋಗಿದೆಯೆ, ಆ ರಾಶಿಯ ಚೆಲುವೆಲ್ಲ ಸೂರೆಯಾಗಿದೆಯೇ? ಒಮ್ಮೆ ಮನದಂಗಳದಲಿ ಇಣುಕಿನೋಡಿ, ಗುಡ್ಡ ಬೆಟ್ಟಗಳ ಮೋಹಕ ದೃಶ್ಯಗಳ.ಅದರ ತಪ್ಪಲಲಿ ನಿಂತು ತಬ್ಬಿಕೊಂಡರೂ ಸಾಕು ಸವಿಲತೆಯ ಚಿಗುರು ತನ್ನುಸಿರ ಸೋಕುತ್ತದೆ.ಹಸಿರ ಹಾದಿಯಲಿ ಹೆಜ್ಜೆ ಮೂಡುತ್ತದೆ.

ಒಂದೇ ಒಂದು ನೋಟಕ್ಕೆ ಆ ಬೆಟ್ಟಗುಡ್ಡಗಳಾಚೆ ಮನಸು ಓಡುತ್ತದೆ ಅಲ್ಲವೆ? ಹೋಗಲಿಬಿಡಿ ಅದು ಮನಬಂದಂತೆ ಸಾಗಲಿ.
ಯೋಚನೆ ಎಂಬುದು ಹರಿದಷ್ಟೂ ಕಂಗಳ ದೃಷ್ಟಿ ತೀಕ್ಷ್ಣ ವಾಗುತ್ತದೆ.ಮನಸು ತೆರೆದುಕೊಂಡಷ್ಟೂ ಮೆದುಳು ಕೆಲಸ ಮಾಡುತ್ತದೆ.ಬಾವನೆಗಳು ಬಲಿತಷ್ಟೂ ಹೊಸತನ ಹೊರಹೊಮ್ಮುತ್ತದೆ. ಕಂಗಳಿಗೆ ಸ್ಪರ್ಶಿಸಿದ ಒಂದು ಮಂಜಹನಿ ಕೂಡ ಮೊದಲ ಮಳೆಗೆ ಮೈಒಡ್ದಿದ ಅನುಭವ ನೀಡಬಹುದು.ಆ ತಂಗಾಳಿಯಲ್ಲಿ ಮಣ್ಣ ವಾಸನೆ ಘಮಘಮಿಸಬಹುದು.

ಮನಸೇ ನೀನು ಮನಬಂದಂತೇ ಹೋಗು,ಬೆಟ್ಟದ ತಪ್ಪಲಿಂದ ಹಿಡಿದು ಅಟ್ಟದ ಮೂಲೆಯವರೆಗೂ ಸಾಗು.ಮನೆಯಂಗಳದಿಂದ ಹಿಡಿದು ಹೊಂಗಿರಣದ ಆಳದವರೆಗೂ ನೋಡು.ನಿನ್ನ ಗೂಟಕ್ಕ್ಕೆ ಕಟ್ಟಿ ನಿಲ್ಲಿಸಿ ನನ್ನ ನಾ ಬಂಧಿಸಿಕೊಳ್ಳುವುದಿಲ್ಲ.ನಿನಗೆ ತಿಳಿದಿರಲಿ ನೀ ಬೇರೆಯಲ್ಲ ನಾ ಬೇರೆಯಲ್ಲ.

ಬದುಕ ಹಾದಿಯಲಿ ಮನದ ತೀರ್ಮಾನಕ್ಕೇ ಪೂರ್ತಿ ಬೆಲೆಕೊಟ್ಟು ನೋಡಿ,ಆಗ ಬುದ್ದಿ ಮನದೊಂದಿಗೆ ಮನವಾಗಿ ಕೆಲಸ ಮಾಡುತ್ತದೆ.ಆಗ ವಿಷಾದದ ಛಾಯೆಯಿಲ್ಲದ ಹೊಸ ಬಾವ ಮೂಡುತ್ತದೆ,ಸಂತಸದ ಹೊಸ ಲೋಕ ಕಾಣುತ್ತದೆ.