ಆಯ್ದ ಒಳ್ಳೆಯ ಸಂಸ್ಕೃತ ಸುಭಾಷಿತಗಳು - ಕಡೆಯ ಕಂತು

ಆಯ್ದ ಒಳ್ಳೆಯ ಸಂಸ್ಕೃತ ಸುಭಾಷಿತಗಳು - ಕಡೆಯ ಕಂತು

ಬರಹ

೪೭. ಅಹಾರವನ್ನು ಪಚನವಾದ ಮೇಲೆ, ಹೆಂಡತಿಯನ್ನು ಯೌವನ ಕಳೆದ ಮೇಲೆ , ಶೂರನನ್ನು ರಣರಂಗದಿಂದ ಮರಳಿ ಬಂದ ಮೇಲೆ , ಬೆಳೆಯನ್ನು ಕೈಗೆ ಬಂದ ಮೇಲೆ ಹೊಗಳಬೇಕು.

ಜೀರ್ಣಮನ್ನಂ ಪ್ರಶಂಸೀಯಾತ್ ಭಾರ್ಯಾಂ ಚ ಗತಯೌವನಾಂ |
ರಣಾತ್ ಪ್ರತ್ಯಾಗತಂ ಶೂರಂ ಸಸ್ಯಂ ಚ ಗೃಹಮಾಗತಂ ||

೪೮. ಪುಸ್ತಕದಲ್ಲಿನ ವಿದ್ಯೆ , ಇನ್ನೊಬ್ಬರ ಕೈಗೆ ಹೋದ ಹಣ ಇವೆರಡೂ ಅಗತ್ಯ ಬಿದ್ದಾಗ ಲಭ್ಯವಾಗದಿದ್ದರೆ ಅವುಗಳಿಂದ ಏನು ಪ್ರಯೋಜನ?

ಪುಸ್ತಕಸ್ಥಾತು ಯಾ ವಿದ್ಯಾ ಪರಹಸ್ತಗತಂ ಧನಂ |
ಕಾರ್ಯಕಾಲೇ ಸಮುತ್ಪನ್ನೇ ನ ಸಾ ವಿದ್ಯಾ ನ ತದ್ಧನಂ ||

೪೯. ಶಾಸ್ತ್ರವನ್ನು ಎಷ್ಟೇ ತಿಳಿದಿದ್ದರೂ ಅದರ ಕುರಿತು ಚಿಂತಿಸುತ್ತಿರಬೇಕು.
ರಾಜನನ್ನು ಎಷ್ಟೇ ಮೆಚ್ಚಿಸಿದ್ದರೂ ಓಲೈಸುತ್ತಲೇ ಇರಬೇಕು .
ಹೆಂಗಸನ್ನು ವಶಪಡಿಸಿಕೊಂಡಿದ್ದರೂ ರಕ್ಷಿಸುತ್ತಲೇ ಇರಬೇಕು .
ಶಾಸ್ತ್ರಜ್ಞಾನ , ರಾಜ , ಯುವತಿಯರ ವಿಷಯದಲ್ಲಿ ವಶವಾಗಿ ಹೋಗಿದ್ದಾರೆ ಎಂಬ ಮಾತೆಲ್ಲಿ?

ಶಾಸ್ತ್ರಂ ಸುಚಂತಮಥೋ ಪರಿಚಿಂತನೀಯಾ |
ಆರಾಧಿತೋಪಿ ನೃಪತಿ: ಪರಿಸೇವನೀಯ: ||
ಅಂಕೇ ಧೃತಾಪಿ ತರುಣೀ ಪರಿರಕ್ಷಣೀಯಾ |
ಶಾಸ್ತ್ರೇ ನೃಪೇ ಚ ಯುವತೌ ಚ ಕುತೋ ವಶಿತ್ವಂ? ||

೫೦. ಭೋಗಾ ನ ಭುಕ್ತಾ: ವಯಮೇವ ಭುಕ್ತಾಃ
ಕಾಲೋ ನ ಯಾತ: ವಯಮೆವ ಯಾತ:
ಅನ್ನಾ: ನ ಜೀರ್ಣಾ: ವಯಮೇವ ಜೀರ್ಣಾ:
( ನೆನಪಿನಿಂದ ಬರೆದಿದ್ದೇನೆ - ಕಡೆಯ ಸಾಲು ಗೊತ್ತಿಲ್ಲ - ಗೊತ್ತಾದಾಗ ತಿಳಿಸುವೆ.)

ನಾವು ಭೋಗಗಳನ್ನು ಅನುಭವಿಸಲಿಲ್ಲ ; ಅವು ನಮ್ಮನ್ನು ಅನುಭವಿಸಿದವು .
ನಾವು ಸಮಯವನ್ನು ಕಳೆಯಲಿಲ್ಲ ; ನಾವೇ ಕಳೆದುಕೊಂಡಿದ್ದೇವೆ.
ನಾವು ಭೋಜ್ಯಭಕ್ಷ್ಯಗಳನ್ನು ಜೀರ್ಣಿಸಲಿಲ್ಲ ; ನಾವೇ ಜೀರ್ಣವಾದೆವು .

'ಒಂದು, ಎರಡು , ಮೂರು, ನಾಲ್ಕು , ಆಮೇಲೆ ಏನು ? ನಂಗೇನ್ಗೊತ್ತು ? ನಮ್ಮಪ್ಪ ಕಲ್ಸಿರೋದು ಇಷ್ಟೇಯ!' ಅಂತ 'ಒಂದು ಮುತ್ತಿನ ಕಥೆ' ಚಿತ್ರದಲ್ಲಿನ ಹಾಡಿನ ಹಾಗೆ ... ಅಥವಾ ರಾ. ಕು. ಅವರ 'ಗಾಳಿಪಟ' ಲಲಿತ ಪ್ರಬಂಧಗಳ ಪುಸ್ತಕದಲ್ಲಿರೋ ಹಾಗೆ
ಮಗ್ಳೀಗ್ ಅಂತಾರ್ ಪುತ್ರಿ !
ಕೊಡೇಗ್ ಅಂತಾರ್ ಛತ್ರಿ !!
ಕತ್ರೀಗ್ ಅಂತಾರ್ ಕತ್ರಿ !!!
ಮುಂದೇನು ? ನನಗ ಇಷ್ಟS ಗೊತ್ರಿ !!!

೫೧. ಭಾಷೆಗಳಲ್ಲಿ ಮುಖ್ಯವಾದದ್ದು , ಮಧುರವಾದದ್ದು , ದಿವ್ಯವಾದದ್ದು , ಸಂಸ್ಕೃತ. ಅದರಲ್ಲಿ ಕಾವ್ಯವು ಹೆಚ್ಚು ಮಧುರವಾದದ್ದು ; ಅದರಲ್ಲಿಯೂ ಸುಭಾಷಿತವು ಬಲು ಮಧುರ. (ಗೀರ್ವಾಣ ಅಂದರೆ ಏನು ? ಯಾರಾದರೂ ಗೊತ್ತಿದ್ದರೆ ತಿಳಿಸಿ)

ಭಾಷಾಸು ಮುಖ್ಯಾ ಮಧುರಾ ದಿವ್ಯಾ ಗೀರ್ವಾಣ ಭಾರತೀ |
ತಸ್ಮಾದ್ಭಿ: ಕಾವ್ಯಂ ಮಧುರಂ ತಸ್ಮಾದಪಿ ಸುಭಾಷಿತಂ |

೫೨. ಮತ್ತು ಕಡೆಯದಾಗಿ ಮೊದಲನೇ ಸುಭಾಷಿತವನ್ನು ನಿಮ್ಮ ನೆನಪಿಗೆ ತಂದು ಕೊಡುತ್ತಿದ್ದೇನೆ .

ದ್ರಾಕ್ಷಾ ಮ್ಲಾನಮುಖೀ ಜಾತಾ ಶರ್ಕರಾ ಚಾಶ್ಮತಾಂ ಗತಾ |
ಸುಭಾಷಿತ ರಸಸ್ಯಾಗ್ರೇ ಸುಧಾ ಭೀತಾ ದಿವಂಗತಾ ||

ಸುಭಾಷಿತದ ಸ್ವಾರಸ್ಯವನ್ನು ನೋಡಿ ದ್ರಾಕ್ಷಿಯ ಮುಖ ಸಪ್ಪಗಾಯಿತು , ಸಕ್ಕರೆ ಕಲ್ಲಾಯಿತು , ಅಮೃತವು ಹೆದರಿ ಸ್ವರ್ಗಕ್ಕೆ ಓಡಿತು.