ಹಾವೇರಿ ಗೋಲಿಬಾರ್..ನೈಜ ಘಟನೆಗಳ ಚಿತ್ರಣ..ಪುಸ್ತಕ ಹಾಗು ಸಿ.ಡಿ.ಬಿಡುಗಡೆ ಸಮಾರಂಭ.

ಹಾವೇರಿ ಗೋಲಿಬಾರ್..ನೈಜ ಘಟನೆಗಳ ಚಿತ್ರಣ..ಪುಸ್ತಕ ಹಾಗು ಸಿ.ಡಿ.ಬಿಡುಗಡೆ ಸಮಾರಂಭ.

ರಸಗೊಬ್ಬರಕ್ಕಾಗಿ ಪರಿತಪಿಸಿ ಹೋರಾಟಕ್ಕಿಳಿದಿದ್ದ ಹಾವೇರಿ ರೈತರ ಮೇಲಿನ ಗೋಲಿಬಾರ್ ಅನಿರೀಕ್ಷಿತ ಹಾಗು ಆಕಸ್ಮಿಕ. ಆದರೆ ಪೊಲೀಸರ ಬಂದೂಕಿನಿಂದ ಗುಂಡು ಸಿಡಿದ ಕ್ಷಣದಿಂದ ಪ್ರಜ್ನಾವಂತರಾದಿಯಾಗಿ ರಾಜ್ಯದಾದ್ಯಂತ ಸಾರ್ವಜನಿಕರಲ್ಲಿ ಮೂಡಿದ ಪ್ರಶ್ನೆಗಳು ಸಾವಿರಾರು. ಗೋಲಿಬಾರ್ ಆಗಿದ್ದೇಕೆ? ಗುಂಡು ಸಿಡಿದಿದ್ದೆಲ್ಲಿಂದ? ಆ ಕ್ಷಣದಲ್ಲಿ ಅಲ್ಲಿ ನಡೆದಿದ್ದಾರೂ ಏನು? ಬಂದೋಬಸ್ತಿಗೆ ಎಂದು ಬಂದು ನಿಂತಿದ್ದ ಶಸ್ತ್ರಸಜ್ಜಿತ ಮೀಸಲು ಪೊಲೀಸ್ ಪಡೆಯ ಒಂದೇ ವ್ಯಾನ್ ಗೆ ಎಲ್ಲ ದಿಕ್ಕಿನಿಂದ ಕಲ್ಲುಗಳು ರಭಸದಿಂದ ಬರುತ್ತಿರುವಾಗ ಬಂದೂಕಿನಿಂದ ಹಾರಿದ ಆ ಕ್ಷಣದ ಗುಂಡುಗಳು.. ಗುಂಡು ಬಡಿದದ್ದು ಎಷ್ಟು ಜನರಿಗೆ? ಗಾಯಗೊಂಡವರೆಷ್ಟು? ನಂತರ ಪೊಲೀಸರ ಕೈಗೆ ಸಿಕ್ಕ ಆರೋಪಿಗಳೆಷ್ಟು ಜನ? ಈ ಪ್ರಕರಣದ ಇಂದಿನ ತನಿಖಾ ಹಂತವೇನು?

ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ, ಪ್ರಜಾವಾಣಿಯಲ್ಲಿ ಉಪಸಂಪಾದಕರಾಗಿ ಹಾಗು ಕನ್ನಡಪ್ರಭದ ಹಾವೇರಿ ಜಿಲ್ಲಾ ವರದಿಗಾರರಾಗಿ ಸಹ ಸೇವೆ ಸಲ್ಲಿಸಿರುವ ವಿಜಯಕುಮಾರ ಬಳಿಗಾರ್ ಅವರ ಕೃತಿ ‘ಹಾವೇರಿ ಗೋಲಿಬಾರ್’ ಎಲ್ಲ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡುತ್ತದೆ. ತನಿಖಾ ವರದಿಗಳನ್ನು ಸಹ ಒಳಗೊಂಡ ಈ ಕೃತಿ ವ್ಯವಸ್ಥೆಯ ಹಾಗು ಆಡಳಿತದ ವೈಫಲ್ಯಗಳ ಮೇಲೆ ಬೆಳಕು ಚೆಲ್ಲುತ್ತದೆ. ವಿಜಯಕುಮಾರ್ ಬಳಿಗಾರ್ ಅವರು ಕಲೆ ಹಾಕಿದ ಮಾಹಿತಿ, ಅಪಾರ ಶ್ರಮವಹಿಸಿ ಕ್ರೊಧೀಕರಿಸಿದ ರೀತಿ ಬೆರಗು ಮೂಡಿಸುತ್ತದೆ. ಪುಸ್ತಕದೊಂದಿಗೆ ಉಚಿತವಾಗಿ ಲಭ್ಯವಿರುವ ವಿಡಿಯೋ ಸಿ.ಡಿ. ಖಂಡಿತವಾಗಿ ಪ್ರತಿಯೊಬ್ಬ ರೈತ, ಸಾಮಾನ್ಯ ನಾಗರಿಕ, ಪತ್ರಿಕೋದ್ಯಮದ ವಿದ್ಯಾರ್ಥಿಗಳು ಸೇರಿದಂತೆ ಎಲ್ಲರೂ ಸಂಗ್ರಹಿಸಿ ಇಟ್ಟುಕೊಳ್ಳಬೇಕಾದ ಕೃತಿ.

ಅಂದು ಹಾವೇರಿಯ ಶ್ರೀ ಶಿವಬಸವ ಕಲ್ಯಾಣ ಮಂಟಪದಲ್ಲಿ ಬೆಳಿಗ್ಗೆ ೧೧ ಗಂಟೆಗೆ ಜರುಗುವ ಸಮಾರಂಭದಲ್ಲಿ ಹಾಯ್ ಬೆಂಗಳೂರು ಹಾಗು ಓ ಮನಸೆ ಪತ್ರಿಕೆಯ ಸಂಪಾದಕ, ಖ್ಯಾತ ಪತ್ರಕರ್ತ ಶ್ರೀ ರವಿ ಬೆಳಗೆರೆ ‘ಹಾವೇರಿ ಗೋಲಿಬಾರ್- ನೈಜ ಘಟನಾವಳಿಗಳ ಚಿತ್ರಣ’ ಪುಸ್ತಕವನ್ನು ಲೋಕಾರ್ಪಣೆ ಮಾಡಲಿದ್ದಾರೆ. ಪ್ರಜಾವಾಣಿಯ ಸುದ್ದಿ ಸಂಪಾದಕರು ಹಾಗು ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷರೂ ಆದ ಶ್ರೀ ಗಂಗಾಧರ್ ಮೊದಲಿಯಾರ್ ಪುಸ್ತಕವನ್ನು ಪರಿಚಯಿಸಲಿದ್ದಾರೆ.

ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಧಾರವಾಡದ ಸಾಹಿತಿ ಸು.ಶ್ರೀ.ಸುಕನ್ಯಾ ಮಾರುತಿ, ಹಾವೇರಿಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶ್ರೀ ಮಾರುತಿ ಶಿಡ್ಲಾಪುರ ಹಾಗು ಕೃತಿಯ ಲೇಖಕ ವಿಜಯಕುಮಾರ್ ಬಳಿಗಾರ ಪಾಲ್ಗೊಳ್ಳಲಿದ್ದಾರೆ. ಇಂಡಿಯನ್ ಎಕ್ಸ್ ಪ್ರೆಸ್ ದಿನಪತ್ರಿಕೆಯ ಜಿಲಾವರದಿಗಾರ ಹಾಗು ಜೀವನಾಡಿ ಜನಕಲ್ಯಾಣ ಸಮಿತಿಯ ಅಧ್ಯಕ್ಷ ಗಂಗಾಧರ ಹೂಗಾರ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.