ಜಾಲದಿಂದ ದೂರವಿರುವುದೇ ಕ್ಷೇಮ

ಜಾಲದಿಂದ ದೂರವಿರುವುದೇ ಕ್ಷೇಮ

ಬರಹ

ಕಂಪ್ಯೂಟರ್ ಜಾಲದಿಂದ ದೂರವಿದ್ದರೆ ಗುಟ್ಟು-ರಟ್ಟಾಗದು!ಬ್ಲೊಗ್
ಇತ್ತೀಚೆಗೆ ನಡೆದ ಅಮೆರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಒಬಾಮ ಮತ್ತು ಮೆಕೈನ್ ಅವರೀರ್ವರೂ ಅಂತರ್ಜಾಲದ ಮೂಲಕ ತಮ್ಮ ಪ್ರಚಾರವನ್ನು ಕೈಗೊಂಡದ್ದು ಈಗ ಹಳೆಕತೆ. ಈ ಪ್ರಚಾರದ ವೇಳೆ ಅವರ ಅಂತರ್ಜಾಲ ತಾಣಗಳನ್ನು ಹ್ಯಾಕ್ ಮಾಡಿದ ಬಗ್ಗೆ ಆಗಾಗ ಬೆದರಿಕೆಗಳು ಬರುತ್ತಿದ್ದುವು.ಅವರ ಕಂಪ್ಯೂಟರ್ ವ್ಯವಸ್ಥೆಗಳಿಂದ ಮಾಹಿತಿಯನ್ನು ಕದಿಯಲಾಗಿದೆಯೆಂಬ ಗುಮಾನಿ ಈಗಲೂ ಇದೆ. ಅತ್ತ ಇಂಟೆಲ್ ಕಂಪೆನಿಯ ಉದ್ಯೋಗಿಯೋರ್ವ, ರಜೆ ಪಡೆದು ಹೋಗಿ ಪ್ರತಿಸ್ಪರ್ಧಿ ಏಎಂಡಿ ಕಂಪೆನಿಯನ್ನು ಸೇರಿಕೊಂಡು,ಇಂಟೆಲ್ ಕಂಪೆನಿಯ ಲ್ಯಾಪ್‌ಟಾಪ್ ಮೂಲಕ ಕಂಪೆನಿಯ ಕಂಪ್ಯೂಟರ್ ಜಾಲದಿಂದ ಒಂದು ಬಿಲಿಯನ್ ಡಾಲರ್ ಮೌಲ್ಯದ ಸಂಶೋಧನೆಯನ್ನು ದುರುಪಯೋಗ ಪಡಿಸಿಕೊಂಡನೆಂದು ವರದಿಯಾಗಿದೆ. ಇವೆರಡೂ ಸುದ್ದಿಗಳು ಅಮೂಲ್ಯ ಮಾಹಿತಿಗಳನ್ನು ಕಂಪ್ಯೂಟರ್ ಜಾಲದಲ್ಲಿಡುವುದು ಸುರಕ್ಷಿತವಲ್ಲ ಎನ್ನುವುದನ್ನು ಸ್ಪಷ್ಟ ಪಡಿಸುತ್ತವೆ. ಯಾರೇ ಆದರೂ ಅಮೂಲ್ಯ ಮಾಹಿತಿಗಳನ್ನು ಶೇಖರಿಸುವುದಿದ್ದರೆ, ಅಗತ್ಯವಾಗಿ ಮಾಡಬೇಕಾದ ಕಾರ್ಯವೆಂದರೆ,ಅಂತಹ ಕಂಪ್ಯೂಟರುಗಳನ್ನು ಜಾಲಕ್ಕೆ ಸಂಪರ್ಕಿಸದಿರುವುದು.ಹಾಗೆಯೇ ನಿಸ್ತಂತು ವ್ಯವಸ್ಥೆಯನ್ನೂ ನಿಷ್ಕ್ರಿಯಗೊಳಿಸುವುದು ಅತ್ಯಗತ್ಯ. ಕಂಪ್ಯೂಟರ್ ಅಥವ ಲ್ಯಾಪ್‌ಟಾಪ್ ಜಾಲದಲ್ಲಿ ಇಲ್ಲವಾದರೆ, ವೈರಸ್ ಭಯವಾಗಲಿ,ಕಂಪ್ಯೂಟರ್ ಕಾರ್ಯನಿರ್ವಹಣಾ ವ್ಯವಸ್ಥೆಯನ್ನು ನವೀಕರಿಸುವ ಅಗತ್ಯವಾಗಲೀ ಇಲ್ಲ ಎನ್ನುವುದನ್ನು ಗಮನಿಸಿ.
--------------------------------------
ವಾರೆ-ಕೋರೆಗೆ ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಮೋಘ ಪ್ರತಿಕ್ರಿಯೆಬ್ಲೊಗ್
ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ಸೊಸೈಟಿ ಆಫ್ ಇಂಡಿಯಾದ ಇಪ್ಪತೆರಡನೇ ವಿದ್ಯಾರ್ಥಿ ಸಮಾವೇಶದ ಆಯೋಜನೆಯಾಗಿತ್ತು.ಸಮಾವೇಶದ ಭಾಗವಾಗಿ, ಖ್ಯಾತ ವ್ಯಂಗ್ಯಚಿತ್ರಕಾರ-ವ್ಯಂಗ್ಯಭಾವ ಚಿತ್ರಕಾರ ಪ್ರಕಾಶ್ ಶೆಟ್ಟಿ ಅವರ ಮುಂಬರುವ ಹಾಸ್ಯ ಮಾಸಪತ್ರಿಕೆ "ವಾರೆ-ಕೋರೆ"ಗೆ ಚಂದಾದಾರರನ್ನು ಕೂಡಿಸುವ ಪ್ರಯತ್ನ.ವೀಕ್ ವಾರಪತ್ರಿಕೆಯ ವ್ಯಂಗ್ಯಚಿತ್ರಕಾರರಾಗಿದ್ದ ಪ್ರಕಾಶ್ ಕಳೆದ ಸುಮಾರು ಒಂಭತ್ತು ವರ್ಷಗಳಿಂದ ಫ್ರೀಲಾನ್ಸರ್ ಆಗಿದ್ದಾರೆ. ವ್ಯಂಗ್ಯಭಾವಚಿತ್ರಣದಲ್ಲಿ ಅವರಿಗೆ ಅದೆಷ್ಟು ಪರಿಣತಿಯೆಂದರೆ, ವ್ಯಕ್ತಿಯನ್ನು ಮುಂದೆ ನಿಲ್ಲಿಸಿಕೊಂಡು ಎರಡು-ಮೂರು ನಿಮಿಷದಲ್ಲಿ ಆತನ ವ್ಯಂಗ್ಯ ಭಾವಚಿತ್ರವನ್ನು ಕಾಗದದಲ್ಲಿ ಮೂಡಿಸುತ್ತಾ, ತಮ್ಮ ವಿಶಿಷ್ಟ ಶೈಲಿಯಿಂದ ಸುತ್ತ ನೆರೆದ ಜನರನ್ನು ರಂಜಿಸಬಲ್ಲರು. ನಿಟ್ಟೆಯ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಪ್ರಕಾಶ್ ಶೆಟ್ಟಿಯವರ ಕಲೆಗಾರಿಕೆಗೆ ಮನಸೋತು,ಚಂದಾದಾರರಾಗಲು ಮುಗಿಬಿದ್ದರು.ಚಂದಾದಾರರಾದ ಮೊದಲ ಒಂದು ಸಾವಿರ ಜನರಿಗೆ ವ್ಯಂಗ್ಯಭಾವ ಚಿತ್ರ ಉಚಿತ ಎನ್ನುವ ಕೊಡುಗೆ ವಿದ್ಯಾರ್ಥಿಗಳು ,ಸಮಾವೇಶದ ಪ್ರತಿನಿಧಿ ಮತ್ತು ಕಾಲೇಜಿನ ಶಿಕ್ಷಕರಿಂದ ಅತ್ಯುತ್ಸಾಹದ ಪ್ರತಿಕ್ರಿಯೆಗೆ ನೆರವಾಯಿತು.ಎರಡು ದಿನಗಳ ಅವಧಿಯಲ್ಲಿ ಮುಂಜಾನೆ ಹತ್ತರಿಂದ ಸಂಜೆ ಐದರ ತನಕ ಪ್ರಕಾಶ್ ಶೆಟ್ಟಿ ಬಿಡುವಿಲ್ಲದೆ ಚಿತ್ರಿಸಿದರು.ಪ್ರಕಾಶ್
-----------------------------
ಅಂಗಾರಾಮ್ಲವನ್ನು ಹೀರಿಕೊಳ್ಳುವ ಶಿಲೆ
ಅಂಗಾರಾಮ್ಲವು ವಾತಾವರಣದ ಶಾಖವನ್ನು ಹಿಡಿದಿಟ್ಟು, ಜಾಗತಿಕ ಬಿಸಿ ಏರಿಸುವ ಅನಿಲ ಎಂದು ಕುಪ್ರಸಿದ್ಧಿ ಪಡೆದಿದೆ. ಇಂತಹ ಅಂಗಾರಾಮ್ಲವನ್ನು ಹೀರಿಕೊಳ್ಳುವ ಶಿಲೆಯು ಒಮನ್ ದೇಶದಲ್ಲಿ ಇದೆಯಂತೆ. ಅಂಗಾರಾಮ್ಲವು ಪೆರಿಡೊಟೈಟ್ ಎನ್ನುವ ಈ ಶಿಲೆಯ ಸಂಪರ್ಕಕ್ಕೆ ಬಂದಾಗ,ಅನಿಲವು ಕ್ಯಾಲ್ಸೈಟ್ ಎನ್ನುವ ಘನವಸ್ತುವಾಗಿ ಬದಲಾಗುತ್ತದೆ.ಶಿಲಾತಜ್ಞರಾದ ಪೀಟರ್ ಮತ್ತು ಜ್ಯುರ್ಗ್ ಮ್ಯಾಟರ್ ಅವರು ಸಂಸ್ಕರಣೆಯ ಮೂಲಕ ಶಿಲೆಯು ಹಿಡಿದಿಡುವ ಅನಿಲದ ಪ್ರಮಾಣವನ್ನು ಮಿಲಿಯಗಟ್ಟಲೆ ಹೆಚ್ಚಿಸುವ ವಿಧಾನವನ್ನು ಕಂಡುಕೊಂಡಿದ್ದಾರೆ.ಮಾನವನ ಚಟುವಟಿಕೆಗಳಿಂದ ಮೂವತ್ತು ಬಿಲಿಯನ್ ಟನ್ ಅನಿಲ ಬಿಡುಗಡೆಯಾದರೆ,ಅದರ ಪೈಕಿ ಎರಡು ಬಿಲಿಯನ್ ಟನ್  ಅನಿಲವನ್ನು ಈ ಶಿಲೆಯ ಮೂಲಕ ಹಿಡಿದಿಡಬಹುದು ಎಂಬುದು ಅವರ ಅಂದಾಜು.ಭೂಮಿಯ ಒಳಗಿನ ಶಿಲಾಪದರಗಳಲ್ಲಿ ಈ ಶಿಲೆ ಕಾಣಿಸುವುದು ಸಾಮಾನ್ಯ. ಅದರೆ ಒಮನ್ ದೇಶದಲ್ಲಿ ಈ ಶಿಲೆಯು ಭೂಮಿಯ ಮೇಲ್ಪದರಗಳಲ್ಲಿ ಕಾಣಿಸಿಕೊಳ್ಳುತ್ತದೆ.ಭೂಮಿಯ ಒಳಪದರಗಳಲ್ಲಿ ಈ ಶಿಲೆಯಿದ್ದರೆ,ಅವನ್ನು ಹೊರತೆಗೆದು,ಅಂಗಾರಾಮ್ಲವನ್ನು ಹೀರಿಕೊಳ್ಳಲು ಬಳಸುವುದು ಆರ್ಥಿಕವಾಗಿ ಲಾಭ ತರದು. ಅದರೆ ಒಮನ್ ದೇಶದಲ್ಲಿ ಕಂಡು ಬರುವಂತೆ ಇದು ಮೇಲ್ಪದರದಲ್ಲಿ ಇದ್ದಾಗ ನಾಲ್ಕರಿಂದ ಐದು ಬಿಲಿಯನ್ ಟನ್ ಅನಿಲವನ್ನು ಹಿಡಿದಿಡಬಹುದಂತೆ.ಅಮೆರಿಕಾ, ಚೀನಾ ಮತ್ತು ಭಾರತದಂತಹ ದೇಶಗಳು ಭೂಮಿಯ ವಾತಾವರಣ ಬಿಸಿಯೇರಿಸಲು ಕಾರಣವಾಗುವ ಅಂಗಾರಾಮ್ಲದಂತಹ ಅನಿಲವನ್ನು ಬಿಡುಗಡೆ ಮಾಡುವುದರಲ್ಲಿ ಅಗ್ರಗಣ್ಯ ದೇಶಗಳಾದರೂ, ಇಲ್ಲ್ಲಿ ಈ ಶಿಲೆ ಕಂಡುಬರುವುದು ಅಪರೂಪ. ಹಾಗೆಂದು ಶಾಂತಸಾಗರ,ಪಾಪಾ ನ್ಯೂ ಗಿನಿಯ,ಕ್ಯಾಲಿಫೋರ್ನಿಯ,ಕ್ಯಾಲೆಡೋನಿಯ ಮುಂತಾದ ದೇಶಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ಕಂಡುಬರುತ್ತದೆ.
---------------------------------------------
ಕಲಿಕೆಗೆ ನೆರವಾಗುವ "ಕ್ಲಾಸ್‌ಮೇಟ್" ಪಿಸಿಗಳುಪ್ಚ್
ವಿದ್ಯಾರ್ಥಿಗಳಿಗೆ ಕಲಿಕೆಯಲಿ ನೆರವಾಗುವ ತಂತ್ರಾಂಶಗಳನ್ನು ಹೊಂದಿರುವ,ಇಂಟೆಲ್ ಕಂಪೆನಿಯ ಸಂಸ್ಕಾರಕ ಅಳವಡಿಸಿದ ಕ್ಲಾಸ್‌ಮೇಟ್ ಪಿಸಿಗಳು ಬಿಡುಗಡೆಯಾಗಿವೆ. ಎಜುಕಾಂಪ್ ಕಂಪೆನಿಯ O3 ಎನ್ನುವ ಯೋಜನೆಯಡಿ ಕ್ಲಾಸ್‌ಮೇಟ್ ಪಿಸಿಗಳನ್ನು ತರಗತಿಯ ಪ್ರತಿ ಮಗುವಿಗೂ ನೀಡಿ,ಮಗುವಿನ ಕಲಿಕೆಯಲ್ಲಿ ನೆರವಾಗುವ ಯೋಜನೆಯಿದೆ. ಈಗಾಗಲೇ ಆಯ್ದ ಕೆಲಶಾಲೆಗಳಲ್ಲಿ ಯೋಜನೆಯನ್ನು ಅನುಷ್ಠಾನಗೊಳಿಸಿ, ಅದು ಪರಿಣಾಮಕಾರಿ ಎಂದು ಕಂಡುಕೊಳ್ಳಲಾಗಿದೆ.ಈ ವರ್ಷವೇ ಸುಮಾರು ಐವತ್ತರಿಂದ ಎಪ್ಪತ್ತೈದು ಶಾಲೆಗಳಲ್ಲಿ ಯೋಜನೆಯನ್ನು ಅಳವಡಿಸಲಾಗುವುದು.ಖಾಸಗಿ ಮತ್ತು ಸರಕಾರಿ ಶಾಲೆಗಳೆರಡರಲ್ಲೂ ಯೋಜನೆಯನ್ನು ಜಾರಿಗೆ ತರಲಾಗುವುದು.
---------------------------------------
*ಅಶೋಕ್‌ಕುಮಾರ್ ಎ