ಝೆನ್ ಕತೆ: ೫: ಒಂದು ಕೈ ಚಪ್ಪಾಳೆ

ಝೆನ್ ಕತೆ: ೫: ಒಂದು ಕೈ ಚಪ್ಪಾಳೆ

ಬರಹ
ಕೆನಿನ್ ದೇವಾಲಯದಲ್ಲಿದ್ದ ಝೆನ್ ಗುರುವಿನ ಹೆಸರು ಮೊಕೌರಿ. ಮೊಕೌರಿ ಎಂದರೆ ಸದ್ದಿಲ್ಲದ ಗುಡುಗು ಎಂದರ್ಥ. ಹನ್ನೆರಡು ವಯಸ್ಸಿನ ಪ್ರತಿಭಾವಂತ ಹುಡುಗ ಟೊಯೊ ಎಂಬಾತ ಅವನ ಬಳಿ ಶಿಷ್ಯನಾಗಿದ್ದ. ಸ್ವಲ್ಪ ವಯಸ್ಸಾದ ಶಿಷ್ಯರು ದಿನವೂ ಬೆಳಗ್ಗೆ ಸಂಜೆ ಗುರುವಿನ ಬಳಿ ಬಂದು ಸಾನ್‌ಝೆನ್ ಪಡೆದುಕೊಳ್ಳುವುದನ್ನು ನೋಡುತ್ತಿದ್ದ. ಸಾನ್‌ಝೆನ್ ಎಂದರೆ ವೈಯಕ್ತಿಕ ಮಾರ್ಗದರ್ಶನ. ಗುರು ಒಬ್ಬರಿಗೂ ಅವರಿಗೆ ತಕ್ಕ ಮುಂಡಿಗೆಯನ್ನು ನೀಡುತ್ತಿದ್ದ. ಈ ಬೆಡಗಿನಂಥ ಮಾತುಗಳ ಮುಂಡಿಗೆಯನ್ನು ಕೋನ್ ಎನ್ನುತ್ತಾರೆ. ಟೊಯೊ ತನಗೂ ಇಂಥ ಒಂದು ಕೋನ್ ಹೇಳಿ ಎಂದು ಗುರುವನ್ನು ಕೇಳಿದ. "ಸ್ವಲ್ಪ ಕಾಲ ತಾಳು, ನೀನಿನ್ನೂ ಚಿಕ್ಕವನು" ಎಂದ ಗುರು. ಆದರೆ ಟೊಯೊನ ಒತ್ತಾಯ ಜಾಸ್ತಿಯಾಯಿತು. ಗುರು ಒಪ್ಪಿದ. ಅವತ್ತು ಸಂಜೆ ಗುರುವಿನ ಕೋಣೆಯ ಹೊಸ್ತಿಲಲ್ಲಿ ನಿಂತು, ತಾನು ಬಂದಿರುವುದರ ಸೂಚನೆಯಾಗಿ ಗಂಟೆಯನ್ನು ಬಾರಿಸಿ, ಹೊಸ್ತಿಲಲ್ಲೇ ಮೂರು ಬಾರಿ ನಮಸ್ಕರಿಸಿ, ಒಳಗೆ ಬಂದು ಕುಳಿತ ಟಾಯೊ. "ಎರಡು ಕೈ ತಟ್ಟಿದರೆ ಚಪ್ಪಾಳೆಯ ಸದ್ದು ಕೇಳುತ್ತದೆ. ನನಗೆ ಒಂದೇ ಕೈಯ ಚಪ್ಪಾಳೆ ಸದ್ದನ್ನು ತೋರಿಸು" ಎಂದ ಗುರು. ಟೊಯೊ ಗುರುವಿಗೆ ನಮಸ್ಕಾರ ಮಾಡಿ ತನ್ನ ಕೋಣೆಗೆ ಹಿಂದಿರುಗಿದ. ಧ್ಯಾನಕ್ಕೆ ಕುಳಿತ. ಅವನ ಕೋಣೆಗೆ ಸಮೀಪದಲ್ಲಿದ್ದ ಗೇಶಾ ಗಣಿಕೆಯರ ಮನೆಯಿಂದ ಸಂಗೀತ ಕೇಳಿಸುತ್ತಿತ್ತು. "ಆಹಾ, ಒಂದು ಕೈ ಚಪ್ಪಾಳೆಯ ಸದ್ದು ಸಿಕ್ಕಿತು" ಎಂದುಕೊಂಡ ಟೊಯೊ. ಮಾರನೆಯ ಒಂದು ಕೈಯ ಚಪ್ಪಾಳೆ ಸದ್ದು ಹೇಗಿರುತ್ತದೆ ಎಂದ ಗುರು. ಟೊಯೊ ಗೇಶಾ ಸಂಗೀತದ ಅನುಕರಣೆ ಮಾಡಿ ತೋರಿಸಿದ. "ಅಲ್ಲ, ಅದು ಒಂದು ಕೈ ಚಪ್ಪಾಳೆ ಸದ್ದಲ್ಲ. ನಿನಗೆ ಏನೂ ಗೊತ್ತಿಲ್ಲ" ಎಂದ ಗುರು. ಈ ಸಂಗೀತ ಧ್ಯಾನಕ್ಕೆ ತೊಂದರೆ ಮಾಡುತ್ತದೆಂದು ಟೊಯೊ ನಿಶ್ಶಬ್ದವಾದ ಜಾಗ ಹುಡುಕಿಕೊಂಡು ಹೊರಟ. "ಒಂದೇ ಕೈಯ ಚಪ್ಪಾಳೆ ಸದ್ದು ಹೇಗಿರಬಹುದು" ಎಂದು ಚಿಂತಿಸಿದ. ಎಲ್ಲೋ ನೀರು ತೊಟ್ಟಿಕ್ಕುವ ಸದ್ದು ಕೇಳಿಸಿತು. "ಉತ್ತರ ಸಿಕ್ಕಿತು" ಎಂದುಕೊಂಡ ಟೊಯೊ. ಅಂದು ಗುರುವಿನ ಬಳಿ ಹೋದಾಗ ತೊಟ್ಟಿಕ್ಕುವ ನೀರಿನ ಸದ್ದನ್ನು ಅನುಕರಿಸಿ ತೋರಿಸಿದ. "ಇದು ನೀರಿನ ಹನಿಗಳ ಸದ್ದು, ಒಂದು ಕೈ ಚಪ್ಪಾಳೆಯ ಸದ್ದಲ್ಲ. ಪ್ರಯತ್ನಪಡಬೇಕು ಇನ್ನೂ" ಎಂದ ಗುರು. ಒಂದು ಕೈ ಚಪ್ಪಾಳೆಯ ಸದ್ದನ್ನು ಸಾಕ್ಷಾತ್ಕರಿಸಿಕೊಳ್ಳಲು ಧ್ಯಾನಕ್ಕೆ ಕೂತ ಟೊಯೊ. ಬೀಸುವ ಗಾಳಿಯ ಸದ್ದು ಕೇಳಿಸಿತು. ಗುರು ಅಲ್ಲ ಎಂದ. ಗೂಗೆಯ ಕೂಗಿನಂತೆ ಇದ್ದೀತೆ? ಅಲ್ಲ ಎಂದ ಗುರು. ಮಿಡತೆಗಳ ಜಿಟಿ ಜಿಟಿ? ಅಲ್ಲ. ಹತ್ತಿಪ್ಪತ್ತು ಬಾರಿ ಬೇರೆ ಬೇರೆ ಸದ್ದುಗಳನ್ನು ಕೇಳಿಸಿಕೊಂಡು, ಅದನ್ನೆಲ್ಲ ಮಾಡಿ ತೋರಿಸಿ ಅಲ್ಲ ಅನ್ನಿಸಿಕೊಂಡ. ಒಂದು ಕೈಯ ಚಪ್ಪಾಳೆ ಸದ್ದನ್ನು ಆಲಿಸಲು ಧ್ಯಾನ ಮಾಡುತ್ತಾ ಒಂದು ವರ್ಷವೇ ಕಳೆಯಿತು. ಧ್ಯಾನಿಸುತ್ತಾ ಧ್ಯಾನಿಸುತ್ತಾ ಆಳಕ್ಕೆ ಇಳಿದು ಸದ್ದಿಲ್ಲದ ಸ್ಥಿತಿಗೆ ತಲುಪಿದ ಟೊಯೊ. "ನಿಮಗೆ ತೋರಿಸುವುದಕ್ಕೆ ಯಾವ ಸದ್ದುಗಳೂ ಇಲ್ಲ. ಸದ್ದಿಲ್ಲದ ಸದ್ದಿನ ಸ್ಥಿತಿಗೆ ಹೋಗಿಬಿಟ್ಟಿದ್ದೇನೆ" ಎಂದ ಟೊಯೊ. ಟೊಯೊಗೆ ಒಂದು ಕೈ ಚಪ್ಪಾಳೆಯ ಸಾಕ್ಷಾತ್ಕಾರವಾಗಿತ್ತು.