ದಾಸ ಶ್ರೇಷ್ಠ ಕನಕದಾಸ..

ದಾಸ ಶ್ರೇಷ್ಠ ಕನಕದಾಸ..

ಬರಹ

ಕರ್ನಾಟಕದಲ್ಲಿ ಹರಿದಾಸ ಪರಂಪರೆ ಸುಮಾರು ೫೦೦ ವರ್ಷಗಳ ಬಹುದೊಡ್ಡ ಇತಿಹಾಸ ಹೊಂದಿದೆ. ಹಿಂದೂಸ್ಥಾನಿ ಸಂಗೀತ ಪಿತಾಮಹ ಪುರಂದರದಾಸರ ನಂತರ ಆ ಸ್ಥಾನದಲ್ಲಿ ನಿಲ್ಲುವುವರೆಂದರೆ ಕನಕದಾಸರು. ದಾಸ ಪರಂಪರೆ ಸಮಾಜದ ವರ್ಗ ಸಂಘರ್ಷ, ಜಾತಿ ಸಂಘರ್ಷವನ್ನು ಕರ್ಮುಠ ಸಿದ್ಧಾಂತಗಳನ್ನು ಹೆಕ್ಕಿ ಅದರ ನಿರುಪದ್ರವಿ ಗುಣಗಳನ್ನು ತಿಳಿಸಿದರು. ಭಕ್ತಿ ಪರಂಪರೆಯ ಕಾಲದಲ್ಲಿ ಬಂದ ಕನಕದಾಸರು ತಮ್ಮ ವೈಚಾರಿಕ ಮತ್ತು ಪ್ರತಿಭಟನಾ ಮನೋಭಾವದಿಂದ ದಾಸ ಸಾಹಿತ್ಯಕ್ಕೆ ವೈಚಾರಿಕ, ಸಮಾಜಮುಖಿ ನೆಲಗಟ್ಟನ್ನು ಭದ್ರಗೊಳಿಸಿದವರು..

ಸಂಸ್ಕೃತ- ಕನ್ನಡ ಪದಗಳಿಂದ ಜನಸಾಮಾನ್ಯರಿಗೆ ಕಬ್ಬಿಣದ ಕಡಲೆಯಾಗಿದ್ದ, ಕಾವ್ಯ ಸ್ವರೂಪದಲ್ಲಿದ್ದ ಒಂದು ಸಮಾಜಕ್ಕೆ ಮಾತ್ರ ಸೀಮಿತವಾಗಿದ್ದ ಸಾಹಿತ್ಯ, ಸಾಮಾನ್ಯರ ಬಳಿ ಸುಳಿದುದೇ ಈ ಶರಣ ಸಾಹಿತ್ಯದಿಂದ. 12 ನೇ ಶತಮಾನದಲ್ಲಿ ಮೊದಲ್ಗೊಂಡು ರಗಳೆ, ವಚನ ಸಾಹಿತ್ಯ ಪ್ರಕಾರದ ಮೂಲಕ ಶಿವಶರಣರ, ವಚನಕಾರರ ಮೂಲಕ ಜನಮನಸ್ಸನ್ನು ಹೊಕ್ಕಿತ್ತು. 13 ನೇ ಶತಮಾನದಿಂದ ದಾಸ ಸಾಹಿತ್ಯ ಮೇರು ಪರ್ವತದಲ್ಲಿದ್ದು ಜನಸಾಮಾನ್ಯರ ಮನೆ-ಮನ ಮುಟ್ಟಿತ್ತು. ಅದರಲ್ಲೂ ಪುರಂದರದಾಸ-ಕನಕದಾಸರ ಕಾಲವನ್ನು "ಸುವರ್ಣ ಯುಗ" ಎಂದೇ ಕರೆಯಬಹುದು..

ಸಾಹಿತ್ಯವನ್ನು ದಾಸಸಾಹಿತ್ಯದ ಮೂಲಕ ಕನಕದಾಸರು ಇನ್ನಷ್ಟು ಸರಳಗೊಳಿಸಿದರು. ಹೀಗಾಗಿಯೇ ಹೊಸಗನ್ನಡ ಸಾಹಿತ್ಯ ಕೋಗಿಲೆ , ’ದಾಸ ಸಾಹಿತ್ಯದ ಬನದ ಕೋಗಿಲೆ ’ ಎಂಬ ಬಿರುದಾಂಕಿತರಾಗಿದ್ದರು.

ಕನಕದಾಸರು (1508 - 1606) ಸಾಮಾನ್ಯ ಕುರುಬ ಜನಾಂಗದಲ್ಲಿ ಹುಟ್ಟಿದರೂ ತಮ್ಮ ಸ್ವಸಾಮರ್ಥ್ಯ ಮತ್ತು ಪ್ರತಿಭೆಯಿಂದಲೇ ಹಿರಿಮೆಗಳಿಸಿದರು. ಕನಕರು ಕೆಳಸ್ತರದಿಂದ ಬಂದಾಗಲಿಂದ ಕೆಳಜಾತಿಯ ನೋವು, ನಲಿವು ಅವರ ಅರಿವು ಕನಕರ ಸಾಹಿತ್ಯದಲ್ಲಿ ಮಾರ್ದನಿಸಲು ಶುರು ಮಾಡಿತು. ಅಲ್ಲದೆ, ಡಣ್ಣಾಯಕ ಎಂಬ ಅಧಿಕಾರ ಅಪ್ಪನಿಂದ ತಿಮ್ಮಪ್ಪ ನಾಯಕನಿಗೆ ಬಳುವಳಿಯಾಗಿ ಬಂದುದರಿಂದ ಮೇಲ್ವರ್ಗದ ಸ್ಥಿತಿಗತಿಯೂ ಕನಕರಿಗೆ ತಿಳಿದಿತ್ತು. ಈ ಎರಡೂ ಭಿನ್ನತೆಗಳನ್ನು ಸಾಹಿತ್ಯದಲ್ಲಿ ಲೀಲಾಜಾಲವಾಗಿ ಹರಿಸಿದರು.

ತಮ್ಮ ಸಮಕಾಲೀನ ದಾಸರಂತೆ ಹರಿಯನ್ನು ಹೊಗಳದೆ " ಆರು ಬದುಕಿದರಯ್ಯಾ ಹರಿ ನಿನ್ನ ನಂಬಿ " ಎಂಬ ವೈಚಾರಿಕ ನೆಲೆಯಲ್ಲಿ ಹರಿಯನ್ನು ಪ್ರಶ್ನಿಸಿ, ತಮ್ಮ ವಿಶಿಷ್ಠ ವೈಚಾರಿಕ ದೃಷ್ಟಿಯಿಂದ ಬದುಕಿನ ನೈಜ್ಯ ಚಿತ್ರಣವನ್ನು ನಂತರದ ಪೀಳಿಗೆಗೆ ಬದಲಾಯಿಸಿ ಸಾಹಿತ್ಯ ಹರಿಸಿದರು. ಈ ಕಾರಣವೇ ಕನಕನಿಗೆ ದಾಸರ ದಾಸ ಎಂದೆನಿಸಿಕೊಳ್ಳಲು ಸಾಧ್ಯವಾಗಿಸಿತು.

ಕನಕದಾಸರು ತಮ್ಮ ಜೀವಿತಾವಧಿಯಲ್ಲಿ ಬಹು ಮುಖ್ಯವಾಗಿ ಎರಡು ಕಾವ್ಯಗಳನ್ನು ರಸವತ್ತಾಗಿ ಚಿತ್ರಿಸುವ ಮೂಲಕ ಜೀವ ತುಂಬಿದ್ದಾರೆ. ಮೋಹನ ತರಂಗಣಿ ( ಶೃಂಗಾರ ರಸ ಕಾವ್ಯ) ಹಾಗೂ ನಳ ಚರಿತ್ರೆ (ನಳ-ದಮಂತಿಯರ ಪ್ರೇಮ ಕಾವ್ಯ) ಪ್ರಮುಖವಾದುವು. ಉಳಿದಂತೆ ಹರಿಭಕ್ತ ಸಾರ, ರಾಮಧಾನ್ಯ ಚರಿತ್ರೆ ಕನಕದಾಸರ ವೈವಿಧ್ಯಮಯ ಸಾಹಿತ್ಯಕ್ಕೆ ಹಿಡಿದ ಕೈಗನ್ನಡಿ..

ಇಂತಹ ದಾಸ ಶ್ರೇಷ್ಠನ ಹುಟ್ಟು ದಿನ ಆಚರಣೆಗೆ ಇದೇ ೧೫ರಂದು ಸರ್ಕಾರ ಸಾರ್ವತ್ರಿಕ ರಜೆ ಘೋಷಿಸಿದೆ. ಅಲ್ಲದೆ, ಹುಟ್ಟೂರಾದ ಹಾವೇರಿ ಜಿಲ್ಲಾ ಶಿಗ್ಗಾಂವ್‌ ಸಮೀಪದ ಬಾಡ ಗ್ರಾಮ ಹಾಗೂ ಕಾಗಿನೆಲೆಗೆ ಕಾಯಕಲ್ಪ ನೀಡಲು ಮುಂದಾಗಿದೆ. ಬಸವ ಕಲ್ಯಾಣ ರೀತಿಯಲ್ಲೇ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರವನ್ನು ಉನ್ನತಿಯತ್ತ ಕೊಂಡೊಯ್ಯುವ ಗುರುತರ ಜವಾಬ್ದಾರಿ ಸರ್ಕಾರದ ಮೇಲಿದೆ.

ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ...
ಕುಲದ ನೆಲೆಯೇನಾದರೂ ಬಲ್ಲೆರಾ...

ಕುಲದ ಕುಲವೆನ್ನುತಿಹರು
ಕುಲವನ್ಯಾವುದು ಸತ್ಯ ಸಖ್ಯವುಳ್ಳ ಜನರಿಗೆ...

ಆತ್ಮ ಯಾವ ಕುಲ ಜೀವ ಯಾವ ಕುಲ
ತತ್ವೇಂದ್ರೀಯ ಕುಲ ಪೇಳಿರಯ್ಯಾ....

-ಬಾಲರಾಜ್ ಡಿ.ಕೆ