ಒಬಾಮ ಯುವಕರಿಗೆ ಆದರ್ಶವಾಗಬಾರದು!

ಒಬಾಮ ಯುವಕರಿಗೆ ಆದರ್ಶವಾಗಬಾರದು!

ಬರಹ

(ನಗೆ ನಗಾರಿ ರಾಜಕೀಯ ವೃತ್ತಾಂತ ಬ್ಯೂರೋ)

ಜಗತ್ತಿನ ತ್ಯಂತ ಹಳೆಯ ಪ್ರಜಾಪ್ರಭುತ್ವಗಳಲ್ಲು ಒಂದಾದ ಅಮೇರಿಕಾದ ನಲವತ್ತನಾಲ್ಕನೆಯ
ಅಧ್ಯಕ್ಷರಾಗಿ ಆಯ್ಕೆಯಾಗಿರುವ ಒಬಾಮ ಜಗತ್ತಿನಾದ್ಯಂತ ಹೊಸ ಅಲೆಯನ್ನು ಎಬ್ಬಿಸಿರುವುದು
ಸುಳ್ಳಲ್ಲ. ಭಾರತದಲ್ಲಿ ನೆಲೆಸಿರುವ ಅನೇಕ ಜಾಗತಿಕ ರಾಜಕೀಯ ಪಂಡಿತರು ಭಾರತವನ್ನು
ಅಪ್ಪಳಿಸಿದ ಎರಡನೆಯ ಸುನಾಮಿ ಇದು ಎಂದು ವ್ಯಾಖ್ಯಾನಿಸುವ ಪ್ರಯತ್ನ ಮಾಡಿದರು. ಆದರೆ
ಅದು ಯಾವ ಪತ್ರಿಕೆಯಲ್ಲೂ ಬೆಳಕು ಕಾಳದೆ ಡಾರ್ಕ್ ರೂಮ್ ಪಾಲಾಯಿತು. ಎಪ್ಪತ್ತು ಚಿಲ್ಲರೆ
ವರ್ಷ ವಯಸ್ಸಿನ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಜಾನ್ ಮೆಕೇನ್‌ರನ್ನು ಸುಲಭವಾಗಿ
ಮಣಿಸಿದ ನಲವತ್ತೇಳು ವರ್ಷದ ‘ಯುವಕ’ ಒಬಾಮ `we can change' ಎಂಬ ಘೋಷವಾಕ್ಯದೊಂದಿಗೆ
ಅಧಿಕಾರ ಪಡೆದುಕೊಂಡಿದ್ದಾರೆ. ಗುಲಾಮರಾಗಿ ನರಳಿದ ಜನಾಂಗಕ್ಕೆ ಸೇರಿದ ವ್ಯಕ್ತಿಯೊಬ್ಬ
ದೇಶದ ಸರ್ವೋಚ್ಛ ಹುದ್ದೆಯನ್ನು ಅಲಂಕರಿಸಲು ಸಾಧ್ಯವಾದದ್ದು ಅಮೇರಿಕಾದ
ಪ್ರಜಾಪ್ರಭುತ್ವದ ಗಟ್ಟಿತನಕ್ಕೆ ಸಾಕ್ಷಿ ಎಂಬ ಹೊಗಳಿಕೆಯ ನಡುವೆಯೇ ಇದು ಸಾಧ್ಯವಾಗಲು
ಇನ್ನೂರ ಇಪ್ಪತ್ತೊಂದು ವರ್ಶ ಬೇಕಾಯ್ತೆ ಎಂಬುದು ಸಾಮ್ರಾಟರ ಕೊಂಕು! ಭಾರತ
ಅಮೇರಿಕಾದಿಂದ ಕಲಿಯಬೇಕಾದ್ದು ತುಂಬಾ ಇದೆ ಎಂದು ಚಡಪಡಿಸುವವರನ್ನು ಸಮಾಧಾನ
ಪಡಿಸುವುದಕ್ಕಾಗಿ ಸಾಮ್ರಾಟರು ಶ್ರೀಮಾನ್ ಘಾರವರನ್ನು ನೆನೆಸಿಕೊಂಡು ಲೈಟ್ ಪದ್ಯ
ಹೊಸೆದಿದ್ದಾರೆ.

ಒಬಾಮನಿಗೆ ಬಹುಪರಾಕ್
ನಮಗೊಬ್ಬ ಸಿಗುವುದು ಎಂದು?
ಚಿಂತೆ ಬೇಡ
ಅವರಿಗಾತ ಸಿಕ್ಕಲು ಬೇಕಾಯ್ತು
ವರ್ಷಗಳು ೨೨೧
ನಮ್ಮದಿನ್ನೂ ಅರವತ್ತೊಂದು!

ಈ ಮಧ್ಯೆ ಒಬಾಮರಿಂದ ಸ್ಪೂರ್ತಿ ಪಡೆದ ಜಗತ್ತಿನ ತರುಣ ತರುಣಿಯರು ದೇಶದ
ಅಭಿವೃದ್ಧಿಗಾಗಿ ತಾವೂ ರಾಜಕೀಯದಲ್ಲಿ ಪಾಲ್ಗೊಳ್ಳಬೇಕು ಎಂಬ ಆಸಕ್ತಿಯನ್ನು
ತಳೆದಿರುವುದು ಅಲ್ಲಲ್ಲಿ ಬೆಳಕಿಗೆ ಬಂದಿದೆ. ಯುವಕರು ರಾಜಕೀಯದಲ್ಲಿ ಆಸಕ್ತಿ
ತಳೆಯುವುದರಿಂದಾಗುವ ಬದಲಾವಣೆಯ ಬಗ್ಗೆ ಹಾಗೂ ಯುವಕರು ರಾಜಕೀಯಕ್ಕೆ ಬರಬೇಕೆ ಎಂಬ ಬಗ್ಗೆ
ನಗೆ ನಗಾರಿ ಸಾಕಷ್ಟು ಮಂದಿಯನ್ನು ಸಂದರ್ಶಿಸಿ ಅಭಿಪ್ರಾಯ ಕ್ರೂಢಿಕರಿಸಿದೆ.

ಟಿಮ್ ಜೋನ್ ಪಾಪಣ್ಣ, ಯುವಕ: ಒಬಾಮ ನಮಗೆಲ್ಲಾ ಸ್ಪೂರ್ತಿ. ನಲವತ್ತೇಳು ವರ್ಷದ
ವ್ಯಕ್ತಿ ಅಮೇರಿಕಾದಂತಹ ದೇಶದ ಅಧ್ಯಕ್ಷನಾಗಬಹುದಾದರೆ ಇಪ್ಪತ್ನಾಲ್ಕು ವರ್ಷದ ನಾನು
ಕನಿಷ್ಟ ಪಕ್ಷ ಕಾರ್ಪೋರೇಷನ್ ಮೇಯರ್ ಆಗುವುದಕ್ಕೆ ಸಾಧ್ಯವಿಲ್ಲವೇ? ನಮ್ಮ ದೇಶದಲ್ಲಿ
ರಾಜಕೀಯ ವ್ಯವಸ್ಥ ಸಂಪೂರ್ಣ ಸರಿಯಾಗಬೇಕು. ಯುವಕರು ದೊಡ್ಡ ದೊಡ್ಡ ರಾಜಕೀಯ
ಹುದ್ದೆಗಳನ್ನು ಅಲಂಕರಿಸುವಂತಾಗಬೇಕು. ಇಲ್ಲವಾದರೆ ನನ್ನಂತಹ ಎಷ್ಟೋ ಮಂದಿ ಶಕ್ತಿವಂತ,
ಕ್ರಾಂತಿಕಾರಿ ಚಿಂತನೆಗಳ, ಬಿಸಿ ರಕ್ತದ, ಅಪ್ರತಿಮ ಬುದ್ಧಿಮತ್ತೆಯ ಯುವಕರು ಕಾಲೇಜು
ಯೂನಿಯನ್ನಿನ ಕಾರ್ಯದರ್ಶಿ, ಕ್ರಿಕೆಟ್ ಟೀಮ್ ಮ್ಯಾನೇಜರು ಸ್ಥಾನದ ಚುನಾವಣೆ
ಮುಂತಾದವುಗಳಲ್ಲೇ ನಮ್ಮ ಪ್ರತಿಭೆಯನ್ನು ಪೋಲು ಮಾಡಿಕೊಂದುಬಿಡುತ್ತೇವೆ.

indian-flag

ಶ್ರೀ ಚಿಂತಾಕ್ರಾಂತ ಮೂರ್ತಿ, ಬುದ್ಧಿಜೀವಿ: ಪ್ರಸ್ತುತ ಜಾಗತಿಕ ಸನ್ನಿವೇಶದಲ್ಲಿ
ಒಬಾಮನ ಗೆಲುವನ್ನು ಯಾವ ನೆಲಯಲ್ಲಿ ವಿಶ್ಲೇಷಿಸಲಾಗುತ್ತಿದೆ ಎಂಬುದನ್ನು ನಾನು ಹಲವು
ದಿನಗಳಿಂದ ನಿರ್ಲಿಪ್ತನಾಗಿ ಗಮನಿಸುತ್ತಿದ್ದೇನೆ. ಯುವಕರು ರಾಜಕೀಯದಲ್ಲಿ ಆಸಕ್ತಿ
ತಳೆಯಬೇಕೆ ಬೇಡವೇ ಎಂಬುದು ಜಾಗತೀಕರಣದ ಈ ಕಾಲಘಟ್ಟದಲ್ಲಿ ಅತ್ಯಂತ ಕ್ಷಿಷ್ಟಕರವಾದ ಹಾಗೂ
ಸಮಗ್ರ ಅಧ್ಯಯನವನ್ನು ಬೇಡುವಂತಹ ಪ್ರಶ್ನೆ. ನಾವು ಏನೇ ಮಾತನಾಡಿದರೂ ಅದರೂ ಅತಿ
ಸೂಕ್ಷ್ಮ ಸಂಗತಿಯೊಂದರ ಸುಲಭದ ಸರಳೀಕರಣವಾಗಿಬಿಡುವ ಅಪಾಯವಿರುವುದರಿಂದ ನೇರವಾದ
ನಿಲುವುಗಳಿಗೆ ಬಂದು ನಿಲ್ಲುವುದು ಸೂಕ್ತವಾಗದು. ಪ್ರಗತಿಪರರು, ಚಿಂತಕರು, ಯುವಕರ
ನಾಡಿಮಿಡಿತ ಅರಿಯಬಲ್ಲತಜ್ಞರು ಕೂಡಿ ವಿಚಾರ ಸಂಕೀರ್ಣವೊಂದನ್ನು ಏರ್ಪಡಿಸಿ ಈ ಬಗ್ಗೆ
ಕೂಲಂಕುಶವಾದ ಚರ್ಚೆಯನ್ನು ನಡೆಸಿ ವರದಿಯನ್ನು ತಯಾರಿಸಬೇಕು. ಅನಂತರವಷ್ಟೇ ಯುವಕರು
ರಾಜಕೀಯಕ್ಕೆ ಧುಮುಕಬಹುದೇ ಇಲ್ಲವೇ ಎಂಬುದನ್ನು ಇದಮಿತ್ಥಂ ಎಂದು ಹೇಳಬಹುದು.

ಶ್ರೀಯುತ ಮಲ್ಲರೆಡ್ಡಿ, ಹಿರಿಯ ಮುತ್ಸದ್ಧಿ, ರಾಜಕಾರಣಿ: ಒಬಾಮನ ಉದಾಹರಣೆಯನ್ನು
ನಮ್ಮ ಯುವಕರು ಸ್ಪೂರ್ತಿಯಾಗಿ ಭಾವಿಸಬಾರದು. ಇದರಲ್ಲಿ ಅನೇಕ ಸೂಕ್ಷ್ಮಗಳಿರುವುದು
ಅವರಿಗೆ ತಿಳಿಯುವುದಿಲ್ಲ. ಮೊದಲನೆಯದಾಗಿ ನಮ್ಮ ಸಂವಿಧಾನದ ಪ್ರಕಾರ ಒಬ್ಬ ಸಂಸತ್
ಸದಸ್ಯನಾಗುವುದಕ್ಕೆ ಈ ಅರ್ಹತೆಗಳು ಬೇಕು
೧. ೨೫ ಅಥವಾ ೨೫ ವರ್ಷಕ್ಕೆ ಮೇಲ್ಪಟ್ಟವನಾಗಿರಬೇಕು.
೨. ಬುದ್ಧಿ ಸ್ಥಿಮಿತದಲ್ಲಿರಬೇಕು
೩. ದಿವಾಳಿಯಾಗಿರಬಾರದು
೪. ಆತನ ಮೇಲೆ ಯಾವ ಕ್ರಿಮಿನಲ್ ಮೊಕದ್ದಮೆಗಳಿರಬಾರದು
ಆದರೆ ನಮ್ಮ ದೇಶದಲ್ಲಿ ಈ ಅರ್ಹತೆಗಳಿಗೆ ಯಾವ ಬೆಲೆಯನ್ನೂ ಕೊಡಲಾಗುತ್ತಿಲ್ಲ ಎಂಬುದು
ತೀರಾ ದುಃಖದ ಸಂಗತಿ. ಕಡೆಯ ಮೂರು ಅರ್ಹತೆಗಳಿಲ್ಲದವರೂ ಸಹ ಈಗ ಎಂಪಿಗಳಾಗಿದ್ದಾರೆ.
ನೂರಾರು ಕ್ರಿಮಿನಲ್ ಮೊಕದ್ದಮೆಗಳಿದ್ದರೂ ಚುನಾವಣೆ ಹತ್ತಿರ ಬಂದಾಕ್ಷಣ ಗಂಗೆಯಲ್ಲಿ
ಮಿಂದೆದ್ದಾಗ ನಾಶವಾಗಿಬಿಡುವ ಪಾಪಗಳ ಹಾಗೆ ಅವೆಲ್ಲಾ ಕ್ಷಣ ಮಾತ್ರದಲ್ಲಿ ಅಳಿಸಿ
ಹೋಗಿಬಿಡುತ್ತವೆ. ಸ್ವತಃ ಆ ಚಿತ್ರಗುಪ್ತನೇ ಬಂದರೂ ಅಭ್ಯರ್ಥಿಯ ಕ್ರಿಮಿನಲ್ ಹಿನ್ನೆಲೆ
ಸಾಬೀತು ಮಾಡಲು ನಯಾ ಪೈಸೆ ಸಾಕ್ಷಿಯೂ ಸಿಕ್ಕುವುದಿಲ್ಲ. ಮೂರನೆಯ ಅರ್ಹತೆಯನ್ನು ನಮ್ಮ
ದೇಶದ ರಾಜಕಾರಣಿಗಳು ಉಲ್ಟಾ ಅರ್ಥ ಮಾಡಿಕೊಂಡಿದ್ದಾರೆ. ಆರ್ಥಿಕವಾಗಿ
ದಿವಾಳಿಯಾಗಿರುವವನಿಗೆ ಎಂಪಿಯಾಗುವ ಅರ್ಹತೆಯಿಲ್ಲ ಎನ್ನುವುದನ್ನು ತಪ್ಪಾಗಿ
ಅರ್ಥೈಸಿಕೊಂಡು ಅಧಿಕಾರಕ್ಕೆ ಬಂದೊಡನೆ ತಮ್ಮ ದಾರಿದ್ರ್ಯ, ಹಣಕಾಸಿನ
ಮುಗ್ಗಟ್ಟನ್ನೆಲ್ಲಾ ನಿವಾರಿಸಿಕೊಂಡು ದೇಶವನ್ನು ದಿವಾಳಿ ಮಾಡಬೇಕು ಎಂದು ಅವರು
ಭಾವಿಸಿದ್ದಾರೆ. ಎರಡನೆಯ ಅರ್ಹತೆಯಂತೂ ಬಹುಪಾಲು ಮಂದಿಗೆ ಇರುವುದೇ ಇಲ್ಲ. ದಿನ ನಿತ್ಯ
ಪತ್ರಿಕೆಗಳಲ್ಲಿ ಮುಖ್ಯ ಮಂತ್ರಿ ವಿರೋಶ ಪಕ್ಷದವರಿಗೆ ತಲೆ ಕೆಟ್ಟಿದೆ ಎನ್ನುತ್ತಾರೆ.
ಮರುದಿನ ವಿರೋಧ ಪಕ್ಷದವರು ಆಡಳಿತ ಪಕ್ಷದವರಿಗೇ ತಲೆಯೇ ಇಲ್ಲ ಇನ್ನು ಕೆಡುವುದೆಂತು
(head less chicken ಪ್ರಕರಣವನ್ನು ನೆನೆಸಿಕೊಳ್ಳಬಹುದು) ಎನ್ನುತ್ತಾರೆ.
ಹೀಗೆ ಮೂರು ಅರ್ಹತೆಗಳಿಗೆ ಯಾವ ಬೆಲೆಯೂ ಇರದಿರುವಾಗ ಕನಿಷ್ಠ ಪಕ್ಷ ನಾವು ಒಂದು
ಅರ್ಹತೆಗಾದರೂ ಬೆಲೆ ಕೊಡಬೇಕು. ಈ ಮೂರು ಅರ್ಹತೆಗಳಲ್ಲಿ ಲ್ಯಾಪ್ಸ್ ಆದ ಬೆಲೆಯನ್ನೂ
ಸೇರಿಸಿ ಮೊದಲನೆಯ ಅರ್ಹತೆಯನ್ನು ರೂಪಿಸಬೇಕು. ಅಂದರೆ ೨೫ ವರ್ಷದ ಅರ್ಹತೆಯ ಮಿತಿಯನ್ನು
ತಿರುವುಮುರುವು ಮಾಡಿ ೫೨ ಎಂದು ಮಾಡಿಕೊಂಡು ಪಾಲಿಸಬೇಕು.

ಅಲ್ಲದೇ‘ರಾಜಕೀಯ ಅಯೋಗ್ಯನ ಕಡೆಯ ಆಶ್ರಯ ತಾಣ’ ಎಂಬ ಮಾತಿದೆ. ಹೀಗಾಗಿ ಯುವಕರು
ರಾಜಕೀಯಕ್ಕೆ ಬರುವ ಮೊದಲು ತಾವು ಬೇರಾವುದೇ ಕ್ಷೇತ್ರದಲ್ಲಿ ನ್ಯಾಯ, ನೀತಿಗೆ
ಅನುಗುಣವಾಗಿ ಕೆಲಸ ಮಾಡಿ ಬದುಕಲು ಸಾಧ್ಯವಿಲ್ಲ ಎಂಬುದನ್ನು ಸಾಬೀತು ಪಡಿಸಬೇಕು. ಇದು
ಸರಳವಾದ ಕೆಲಸವಲ್ಲ. ಇದಕ್ಕೆ ಜೀವನದ ಬಹುಪಾಲು ಸಮಯವನ್ನು ಮೀಸಲಿಡಬೇಕು. ಹೀಗೆ ಒಮ್ಮೆ
ಅಯೋಗ್ಯನೆಂಬ ಪದವಿಯನ್ನು ಪಡೆದುಕೊಂಡರೆ ಅನಂತರ ದೇಶ ಸೇವೆ ಮಾಡುವ ಅರ್ಹತೆ
ದೊರೆಯುತ್ತದೆ.

ಇವನ್ನೆಲ್ಲಾ ನಮ್ಮ ಯುವಕರು ಅರ್ಥ ಮಾಡಿಕೊಳ್ಳಬೇಕು. ಅಲ್ಲದೆ ಕಣ್ಣು ಸರಿಯಾಗಿ
ಕಾಣುವ, ಕಿವಿ ಚೆನ್ನಾಗಿ ಕೇಳುವ, ಬುದ್ಧಿ ಚುರುಕಾಗಿರುವ, ಮೈ ಕೈ ಗಟ್ಟಿ ಮುಟ್ಟಾಗಿರುವ
ಸಮಯದಲ್ಲಿ ರಾಜಕೀಯದ ಉಸಾಬರಿ ಅವರಿಗೇಕೆ? ಇದರಿಂದ ಅವರಿಗೂ ಲಾಭವಿಲ್ಲ ರಾಜಕೀಯಕ್ಕೂ
ಲಾಭವಿಲ್ಲ. ಏಕೆಂದರೆ ಈ ಯುವಕರಿಗೆ ಮೈತುಂಬ ಆದರ್ಶಗಳು. ಬೆಂಗಳೂರಿನ ಯಾವೊಬ್ಬ
ಯುವಕನನ್ನು ಕರೆದು ಶರ್ಟು ಬಿಚ್ಚಿ ನೋಡಿದರೆ ಕಾಣುವುದು ಎರಡೇ ಸಂಗತಿಗಳು. ಒಂದು ಚಿತ್ರ
ವಿಚಿತ್ರವಾದ ಹಚ್ಚೆ ಇಲ್ಲವೇ ಅವಕ್ಕಿಂತಲೂ ವಿಚಿತ್ರವಾದ ಆದರ್ಶಗಳು. ಆದರ್ಶವಂತರು ಕೆಲಸ
ಮಾಡುತ್ತಾರೆಯೇ ಹೊರತು ರಾಜಕೀಯ ಮಾಡುವುದಿಲ್ಲ. ಒಮ್ಮೆ ಇಂಥ ಆದರ್ಶವಾದಿಗಳು
ಅಧಿಕಾರಕ್ಕೆ ಬಂದು ಐದು ವರ್ಷಗಳನ್ನು ರಾಜಕೀಯ ಮಾಡುವುದರಲ್ಲಿ ಕಳೆಯದೆ ಎಲ್ಲಾ
ಕೆಲಸಗಳನ್ನು ಮಾಡಿ ಮುಗಿಸಿಬಿಟ್ಟರೆ, ಗರೀಬಿ ಹಠಾಯಿಸಿಬಿಟ್ಟರೆ, ಎಲ್ಲರಿಗೂ ಮೂಲಭೂತ
ಆವಶ್ಯಕತೆ ಕೊಟ್ಟು ಬಿಟ್ಟರೆ, ದುಡಿಮೆಗೆ ತಕ್ಕಂತಹ ಪ್ರತಿಫಲ ಬರುವಂತಹ ವ್ಯವಸ್ಥೆಯನ್ನು
ರೂಪಿಸಿಬಿಟ್ಟರೆ, ಭ್ರಷ್ಠಾಚಾರವನ್ನು ಕಿತ್ತೊಗೆದುಬಿಟ್ಟರೆ ಅನಂತರ ಅಧಿಕಾರಕ್ಕೆ ಬರುವ
ಸರ್ಕಾರಗಳಿಗೆ ಮಾಡಲು ಕೆಲಸವೇ ಇರುವುದಿಲ್ಲ. ಇದರಿಂದ ಪ್ರಜಾಪ್ರಭುತ್ವವೇ
ಅಂತ್ಯವಾಗಿಬಿಡುತ್ತದೆ. ಹೀಗಾಗಿ ಯುವಕರು ಎಂದೆಂದಿಗೂ ರಾಜಕೀಯದ ಕಡೆಗೆ ತಲೆ ಹಾಕಿಯೂ
ಮಲಗಬಾರದು.