ನಾನು ಮಾಡಿದ ಪುಸ್ತಕಗಳ ವಿಲೇವಾರಿ .
ಅಂತೂ ಭಾರೀ ವಿವಾದಾಸ್ಪದವಾಗಿದ್ದ ನನ್ನ ಪುಸ್ತಕಗಳ ವಿಲೇವಾರಿ ಅಂತೂ ಮೊನ್ನೆ ಶನಿವಾರ ಇಲ್ಲಿ (ಮುಂಬೈ) ಯ ವಿಲೇಪಾರ್ಲೆಯ ಅಂಗಡಿಯೊಂದರಲ್ಲಿ ಮಾಡಿದೆ. ಸುಮ್ಮನೆ ಕೊಟ್ಟು ಬಿಟ್ಟೆ. ದಾನವೆಂದು ಕರೆಯಲಾಗದು. ನನಗೆ 'ಬೇಡವಾದ' , ಅಂಗಡಿಯವರಿಗೂ 'ಬೇಡವಾದ' ( 'ಬೇಡವಾದ' - pun not intended - ಚರ್ಚೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಧನ್ಯವಾದಗಳು. ) ಪುಸ್ತಕಗಳನ್ನು ಕೊಟ್ಟರೆ , ದಾನ ಹೇಗೆ ಆದೀತು ? . ಏನೇ ಇರಲಿ . ನನ್ನ ಪುಸ್ತಕದ ಹೊರೆ ಸ್ವಲ್ಪ ಕಡಿಮೆಯಾಯಿತು. ಸಲಹೆ ಕೊಟ್ಟ ಪವನಜರಿಗೆ ಧನ್ಯವಾದಗಳು.
ಆಶ್ಚರ್ಯವೆಂದರೆ ಈ ಪುಟವನ್ನು ೬೦೦ ಕ್ಕೂ ಬಾರಿ ಸಂದರ್ಶಿಸಲಾಗಿದ್ದರೂ ಯಾರೊಬ್ಬರಿಗೂ ನನಗೆ ಬೇಡವಾದ ಪುಸ್ತಕಗಳು ಯಾವುವು ಇರಬಹುದೆಂಬ ಕುತೂಹಲ ಇದ್ದ ಹಾಗೆ ಕಾಣಲಿಲ್ಲ .
ಏನೇ ಇರಲಿ ನಾನು ಇಲ್ಲಿ ಪಟ್ಟಿ ಮಾಡುತ್ತಿರುವೆ.
೧. ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ . ( ಇದರಲ್ಲಿ ಕನ್ನಡದಲ್ಲಿ ಸಂಸ್ಕೃತದ ವ್ಯಾಕರಣವನ್ನು ಕಲಿಸಲಾಗುತ್ತದೆ. ಅದು ತಪ್ಪು. ಎಂದು ವಿವರಿಸಲಾಗಿದೆ. - ಇನ್ನೊಂದು ವಿಚಾರ ಎಂದರೆ. ಕರ್ಮಣೀ ಪ್ರಯೋಗ ಕನ್ನಡದಲ್ಲಿಲ್ಲ ; ಎಂಬ ವಿಚಾರ . )
೨. ಕನ್ನಡ ವಾಕ್ಯ ರಚನೆ. ( ಕನ್ನಡ ವಾಕ್ಯಗಳ ರಚನೆಯ ಬಗ್ಗೆ ಮಾಹಿತಿ ಇದೆ. ನನಗೇನೂ ಹೊಸತೇನೂ ಕಾಣಲಿಲ್ಲ)
ಇವೆರಡೂ ಶಂಕರ ಭಟ್ಟರದು. ಇನ್ನೊಂದು ಪುಸ್ತಕ - ಕನ್ನಡ ಶಬ್ದ ರಚನೆ - ಇನ್ನೂ ಇಟ್ಟುಕೊಂಡಿದ್ದೇನೆ. ' ಬನ್ನಿ ಕನ್ನಡ ಬರಹವನ್ನು ಸರಿಪಡಿಸೋಣ' ಕೊಳ್ಳಲೇ ಇಲ್ಲ . ಕಣ್ಣಾಡಿಸಿದೆ. ಕನ್ನಡದಲ್ಲಿ ಮಹಾಪ್ರಾಣ ಅಕ್ಷರಗಳನ್ನು ಕೈ ಬಿಡಬೇಕು ಎಂಬ ವಾದ ಅದರಲ್ಲಿದೆ . ನನಗಂತೂ ಇದ್ದ ಹಾಗೆ ಕನ್ನಡ ಸುಂದರವಾಗೇ , ಸರಿಯಾಗೇ ಇದೆ. ನಾನೇನೂ ವೈಯಾಕರಣಿಯೂ ಅಲ್ಲ, ಸಾಹಿತಿಯೂ ಅಲ್ಲ, ಸುಧಾರಕನೂ ಅಲ್ಲ . ಸ್ವಂತದ ಖುಶಿಗಾಗಿ ಓದುವವನು. ಹಾಗಾಗಿ ಕೊಳ್ಳಲೇ ಇಲ್ಲ ಸುಮಾರು ನೂರು ರೂಪಾಯಿ ಉಳಿಸಿದೆ. ಗಳಿಸಿದೆ ! - ಯಾಕಂದರೆ 'ಉಳಿಸಿದ ಹಣ ಗಳಿಸಿದ ಹಣ' ಅಲ್ಲವೇ?)
೩. ನೋಬೆಲ್ ಸಾಹಿತಿ ಸಿಂಗರ್ ನ ವಾಚಿಕೆ. - ಒಂದು ಕಥೆ- ಒಬ್ಬ ಕಳ್ಳನ ಕಥೆ - ಹಿಂದೊಮ್ಮೆ ಸಂಪದದಲ್ಲಿ ಬರೆದಿದ್ದೇನೆ. ಇವತ್ತೇ ಇನ್ನೊಂದು ಕಥೆ- ಅಮೇರಿಕಾದಿಂದ ಬಂದವನು- ಕುರಿತು ಸಂಪದಕ್ಕೆ ಕಳಿಸಿದ್ದೇನೆ.
೪. ಗಿಲ್ಗಮೇಶ್- ಸಾವಿರ್‍ಆರು ವರ್ಷಗಳ ಹಿಂದಿನ , ಸುಮೇರಿಯಾದ ಪುರಾಣ. - ದೇವತೆಗಳು ಅಮರರು . ಇದರ ಕಥಾನಾಯಕನಿಗೆ ತಾನೂ ದೇವತೆಗಳ ಹಾಗೆ ಅಮರನಾಗುವ ಬಯಕೆ . ಅದಕ್ಕಾಗಿ ಅವನ ಪ್ರಯತ್ನದ ಕುರಿತಾಗಿ ಇದೆ. ( ಒಂದು ದಿನ ಇದರ ಬಗ್ಗೆ ಹೆಚ್ಚಿನ ವಿವರ ಕೊಡುವೆ)
೪. ವ್ಯಾಸರಾಯ ಬಲ್ಲಾಳರ ವೈದ್ಯಕೀಯ ಹಿನ್ನೆಲೆಯ ಕಾದಂಬರಿ . ಓದಿಸಿಕೊಳ್ಳಲಿಲ್ಲ (!). ನಾನು ಓದಬೇಕೋ ? ಅದು ಓದಿಸಿಕೊಳ್ಳಬೇಕೋ?
೫. ಎನ್ಕೆಯವರ ಅಶ್ವತ್ಥಮರ . ಇತ್ತೀಚೆಗೆ ಶ್ರೀನಿವಾಸ ವೈದ್ಯರ 'ಹಳ್ಳ ಬಂತು ಹಳ್ಳ'ದ ಜತೆ ಹೋಲಿಕೆಯ ಕುರಿತು ಬರೆದಿದ್ದೇನೆ. ಕೊಟ್ಟ ಮೇಲೆ ಒಂದು ವಿಚಾರ ಬಂತು. ಕನ್ನಡದಲ್ಲಿ ಶಬ್ದಕೋಶಗಳು ಪ್ರ್‍ಆದೇಶಿಕ ಆಡುಭಾಷೆಯ ಶಬ್ದಗಳನ್ನು ಒಳಗೊಂಡಿರುತ್ತವೆಯೇ ? ಇಲ್ಲದಿದ್ದರೆ ಇದೂ ಕನ್ನಡದಲ್ಲಿ ಆಗಬೇಕಾದ ಕೆಲಸವಲ್ಲವೇ ? ಇದೂ ಭಾಷೆಯನ್ನು ಬೆಳೆಸುವ ಕೆಲಸ ಅಲ್ಲವೇ ? ಅಂಥ ಕೆಲಸವನ್ನು ನಾನೇಕೆ ಶುರು ಮಾಡಬಾರದು ? ಹಾಗೆ ಮಾದುವದಕ್ಕೆ ಇದೂ ಒಂದು ಆಕರವಾಗುತ್ತಿತ್ತಲ್ಲ ? ಇರಲಿ ಇನ್ನೂ ಕಾಲ ಮಿಂಚಿಲ್ಲ . -- ನಿಮ್ಮ ಅಭಿಪ್ರ್‍ಆಯ , ತಿಳಿಸಿ .
೬. ರಸ್ಕಿನ್ ಬಾಂಡ್ ರವರ ಅನೇಕ ಪುಸ್ತಕಗಳು ಇಂಗ್ಲೀಷನಲ್ಲಿವೆ . ಚೆನ್ನಾಗಿರುತ್ತವೆ. ಅಂಥ ಅವರ ಒಂದು ಪುಸ್ತಕ - ಕನ್ನಡದಲ್ಲಿ 'ರಶ್ದಿಯ ಸಾಹಸಗಳು'- ಸಲ್ಮಾನ್ ರಷ್ದಿ ಅಲ್ಲ! ರಷ್ದಿ ಎಂಬ ಒಬ್ಬ ಹುಡುಗನ ಸಾಹಸ. ಮಕ್ಕಳಿಗಾಗಿ . ಚೆನ್ನಾಗಿ ಓದಿಸಿಕೊಂಡು ಹೋಗುತ್ತದೆ.
೭. ಜಗತ್ತಿನ ಬಾಲ್ಯದ ಕಥೆಗಳು - ಪಾದ್ರಿಯೊಬ್ಬರು ಭಾರತದಲ್ಲಿದ್ದಾಗ ಬೇರೆ ಬೇರೆ ಹಳ್ಳಿಗಾಡು ಜನರಿಂದ ಸಂಗ್ರಹಿಸಿದ ಕಥೆಗಳು , ಜಗದ ಹುಟ್ಟಿನ ಬಗ್ಗೆ ವಿವಿಧ ಸಂಶೋಧನೆಗಳ ಬಗ್ಗೆ ಜನಪದ ಕಥೆಗಳು. - ವಿಶೇಷವೇನಿಲ್ಲ.
೮. ಏಷ್ಯದ ಜನಪದ ಕಥೆಗಳು. ಏಷ್ಯದ ಪ್ರತಿ ದೇಶದಿಂದ ಒಂದೊಂದು ಜನಪದ ಸಾಹಿತ್ಯದಿಂದಾಯ್ದ ಮಕ್ಕಳ ಕಥೆಗಳು . ಅದರಲ್ಲಿ ಒಂದು 'ವಿನ್-ವಿನ್' ತತ್ವವನ್ನು ಪ್ರತಿಪಾದಿಸುವ ಕಥೆ. ನನಗೆ ಸೇರಿತು.
೯. ಮೂವತ್ತು ಮಳೆಗಾಲ - ಸಂಪುಟ - ೧. ಸಂಪದದಲ್ಲಿ ಬರೆದಿದ್ದೇನೆ. ಇದರಲ್ಲಿ ಒಂದು ಕವನ - ಕವಿತೆಯ ಬಗ್ಗೆ ಇದೆ. ಕವಿತೆ ಕಾವ್ಯ ಅರ್ಥ ಮಾಡಿಕೊಳ್ಳುವ ಬಗೆ ಕುರಿತು ಒಂದು ಲೇಖನ ಬರೆದಿದ್ದೆ . ಇನ್ನೊಂದು ಲೇಖನ ಈ ಕವಿತೆಯನ್ನು ಉಲ್ಲೇಖಿಸಿ ಬರೆಯಲಿದ್ದೇನೆ.
ಕೆಲವು ಕವಿತೆಗಳನ್ನು ತಿಳಿದೆನು , ಕೆಲವು ಇಲ್ಲ. ( ಇದೇ ತಾನೆ ಕಾವ್ಯಕ್ಕೂ ಶಾಸ್ತ್ರಕ್ಕೂ ವ್ಯತ್ಯಾಸ? )
ಕೆಲವು ಸಾಲುಗಳನ್ನು ಬರೆದಿಟ್ಟುಕೊಂಡೆ.
ಇನ್ನು ಕೆಲವು ಪುಸ್ತಕಗಳು ನೆನಪಿಲ್ಲ .
(ಪ್ರ್‍ಆದೇಶಿಕ ಆಡು ಬಾಷೆಯ ಶಬ್ದಕೋಶ ಕುರಿತು ನಿಮ್ಮ ಅಭಿಪ್ರ್‍ಆಯ ತಿಳಿಸಿ)
ಒಂದು ಸೂಚನೆ. ಹಿಂದಿನ ಚರ್ಚೆಯ ಪುಟವನ್ನು ಓದಲಾಗದಷ್ಟು ದೀರ್ಘವಾಗಿದೆ. ನಿರ್ವಾಹಕರು ಮುಂದಿನ ಟಿಪ್ಪಣಿಗಳನ್ನು ಬೇರೆಡೆಗೆ ಅಥವಾ ಇಲ್ಲಿಗೆ ವರ್ಗಾಯಿಸಬಹುದೆ?