ಅಳಿಸಲಾರದ ನಾನು

ಅಳಿಸಲಾರದ ನಾನು

"ನಾನು ಹೋದರೆ ಹೋದೇನು"

ನುಡಿ-ಅದೆಷ್ಟು ಚಂದ!

ನಾನೂ ಯೋಚಿಸಿದೆ,
ಪ್ರೋಫೈಲ್ ನಲ್ಲಿ ನನ್ನ ವಿವರ ಅಳಿಸಿ ಬಿಡಬೇಕೆಂದು
ಕೂಡಲೆ ಹೊಳೆಯಿತು
ಇಂದು ಅಳಿಸಿಬಿಡಬಹುದು
ನಾಳೆ?
ಸಂಘ-ಸಂಸ್ಥೆಯವರು ಸನ್ಮಾನಕ್ಕೆ ಕರೆದಾಗ?

ದೊಡ್ದವರನು ಕಾಣ ಬೇಕಾದಾಗ?
ವಾಚ್ ಮನ್ ಗೆ ಕೊಡಬೇಕು ನನ್ನ ಚೀಟಿ
ಅದರಲಿರಲೇ ಬೇಕು..
ನನ್ನಲ್ಲಿ ಇರುವ-ಇಲ್ಲದ
ಎಲ್ಲಾ ಕ್ವಾಲಿಫಿಕೇಶನ್ ಗಳು
ಹತ್ತಾರು ಸಂಘಟನೆಗಳ ಪದವಿಗಳು!!

ಉಹೂಂ

ಅಳಿಸಲಾರೆ
ಕಾಗದದ ಮೇಲೆ
ಅದು ಹಾಗೇ ಇರಲಿ
ಕಾರ್ಯವಾಸಿ...ಜೊತೆಗಿರಲಿ

ಆದರೆ...

ಅಳಿಸಲೇ ಬೇಕು
ನನ್ನೊಳಗೆ
ನಾನು ಎಂಬುದ ಚಚ್ಚಿ ಚಚ್ಚಿ ಬಡಿಯಬೇಕು
ಸೊರಗಿ ಹಣ್ಣಾಗುವ ವರೆಗೂ ಬಿಡದೆ ತಣಿಸಲು ಬೇಕು

ದಾರಿ...

ಹುಡುಕಬೇಕು
ಗುಡಿಸಲ ಬದಿಯಲಿ
ಕೊಚ್ಚೆಯಲಿ ಆಡುವ
ಮಗುವನು ಎತ್ತಿ
ಮೈ ತೊಳೆದು ಮೈ ದಡವಿ
ಮುದ್ದಾಡ ಬೇಕು
ಬಿಳಿಯ ಅಂಗಿಯಮೇಲಾದ
ಕೊಚ್ಚೆಯ ಗುರುತನೇ ತಿಲಕ ವೆನ್ನಲು ಬೇಕು

ತಲೆಗೆದರಿ
ಹರುಕು ಬಟ್ಟೆಯನುಟ್ಟ
ಆ ಮುದುಕಿಯ ಮಗ್ಗಲಲಿ ಕುಳಿತು
ಸಾಂತ್ವನದ ಮಾತಾಡ ಬೇಕು
ಹಸಿದ ಹೊಟ್ಟೆಯ ನೋಡಿ ಮರುಗಬೇಕು
ನನ್ನ ಅನ್ನದಲ್ಲಿಷ್ಟು ನೀಡಬೇಕು|

"ನಾನು" ಎಂಬುದ ನನ್ನೊಳಗೆ ಅಳಿಸಿ ಹಾಕಲು ಇಷ್ಟು ಸಾಕು||
[ಈಗಷ್ಟೇ ಹಂಸಾನಂದಿಯವರ ಕನಕ...ಲೇಖನ ಓದಿದಾಗ ಬಂದ ಮನದಾಳದ ಅನಿಸಿಕೆ]

ಹರಿಹರಪುರಶ್ರೀಧರ್

Rating
No votes yet

Comments