ಕನಕದಾಸ ಜಯಂತಿ-ಮತ್ತೊಂದು ಸರ್ಕಾರಿ ರಜೆ ಬೇಕಿತ್ತೆ?

ಕನಕದಾಸ ಜಯಂತಿ-ಮತ್ತೊಂದು ಸರ್ಕಾರಿ ರಜೆ ಬೇಕಿತ್ತೆ?

Comments

ಬರಹ

ಸರ್ಕಾರಿ ರಜೆಗಳ ಪಟ್ಟಿಗೆ ಮತ್ತೊಂದು ದಿನ ಸೇರ್ಪಡೆಯಾಗಿದೆ. ಕರ್ನಾಟಕ ಸರ್ಕಾರ ಕನಕ ಜಯಂತಿಗೆ ನೆಗೋಷಿಯಬಲ್ ಇನ್ಸ್ತ್ರುಮೆಂಟ್ಸ್ ಕಾಯಿದೆಯಡಿಯಲ್ಲಿ ರಜೆ ಘೋಷಿಸಿದೆ. ಮೊದಲೇ ಸರ್ಕಾರಿ ಕೆಲಸ ದೇವರ ಕೆಲಸವೆಂದು ಭಾವಿಸಿರುವ ಮತ್ತು ನಿಮ್ಮ ಕೆಲಸಗಳಿಗೆ ಆ ದೇವರನ್ನೇ ನಂಬಿಕೊಳ್ಳಿ ಎಂದು ತಮ ಸಂಬಳ ಸಾರಿಗೆ ತುಟ್ಟಿಭತ್ಯೆಯ ಲೆಕ್ಕಾಚಾರದಲ್ಲಿ ಬ್ಯುಸಿಯಾಗಿರುವ ನೌಕರರು ಮು.ಮಂ. ಎಡ್ಯೂರಪ್ಪನವರನ್ನು ಅಭಿನಂದಿಸಿರಬಹುದು.

ಮೊದಲೇ ಈ ದೇಶದಲ್ಲಿ ರಜೆಗಳ ಸಂಖ್ಯೆ ಜಾಸ್ತಿ. ಜೊತೆಗೆ ಅವರ ಜಾತಿಯ ಹಬ್ಬಕ್ಕೆ/ಆಚರಣೆಗೆ ರಜ ಕೊಟ್ಟರೆ ಇವರು ಬೇಜಾರಾಗಬಹುದೆಂದು ಇವರ ಹಬ್ಬ/ಆಚರಣೆಗೂ ರಜೆ ಕೊಟ್ಟು ಅಸಂತೃಪ್ತಿಯನ್ನು ಶಮನ ಮಾಡುವ ಕ್ರಮ. ಎಲ್ಲದರಲ್ಲೂ ರಾಜಕೀಯದ ದಟ್ಟ ವಾಸನೆ.

ಕನಕದಾಸರ ಬಗ್ಗೆ ಗೌರವಿವಿಲ್ಲದ ಕನ್ನಡಿಗರು ಯಾರೂ ಇಲ್ಲ. ಜಾತಿ ಪದ್ಧತಿಯನ್ನು , ವರ್ಣಾಶ್ರಮ ಧರ್ಮದ ಪ್ರತ್ಯೇಕತೆಯನ್ನು ತಮ್ಮ ಕೃತಿಗಳ ಮೂಲಕ ವಿಮರ್ಶಿಸಿ, ರಾಗಿಯ ಬಗ್ಗೆ ರಾಮಧಾನ್ಯ ಚರಿತೆ ಬರೆದ ಕನಕ ಹೆಸರಿಗೆ ತಕ್ಕ ಹಾಗೆ ಕನಕ ಅಂದರೆ ಬಂಗಾರ! ಕನಕನ ಬಾಳೆಹಣ್ಣಿನ ದೃಷ್ಟಾಂತ ದೇವರು ಎಲ್ಲೆಡೇಯೂ ಇರುವಾಗ ಹುಲುಮಾನವ ಎಲ್ಲಿ ಏನನ್ನು ಮುಚ್ಚಿಡಲು ಸಾಧ್ಯ ಎಂಬುದರ ಸೂಚಕ. ಕುಲ ಕುಲವೆಂದು ಹೊಡೆದಾಡದಿರಿ...ನಿಮ್ಮ ಕುಲದ ನೆಲೆಯನೇದ್ರೂ ಬಲ್ಲಿರಾ....ಯಾರಿಗೆ ಯಾರುಂಟು ಎರವಿನ ಸಂಸಾರ.....ನೀರ ಮೇಲಿನ ಗುಳ್ಳೆ ಸ್ಥಿರವಲ್ಲ ಹರಿಯೆ....ಎಂದು ಸಾರಿ ಹೇಳಿದ ಕನಕರಿಗೆ ಗೌರವ ಎಂದು ಈ ರಜೆಯ ಘೊಷಣೆಯ ಹಿಂದೆ ಜಾತಿ ರಾಜಕೀಯದ ವಾಸನೆ ದಟ್ಟವಾಗಿದೆ.

ನಾವು ಸಂತರಿಗೆ, ಸಾಧುಗಳಿಗೆ, ಮಹಾತ್ಮರಿಗೆ ಗೌರವವೆಂದು ರಜೆ ಕೊಡುತ್ತ ಹೋದರೆ ಕೆಲಸಕ್ಕೆ ಉಳಿಯುವ ದಿನಗಳು ಉಳಿಯುವುದೇ ಇಲ್ಲವೇನೋ? ನಾವು ಅವರಿಗೆ ಗೌರವವನ್ನು ರಜೆಯ ಮೂಲಕವೇ ಸಲ್ಲಿಸಬೇಕೆ? ಅವರ ಆದರ್ಶ ಮತ್ತು ಕನಸುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವತ್ತ ಆಲೋಚಿದರೆ ಸಾಲದೆ?

ಕಳೆದ ಕೆಲವು  ವರ್ಷಗಳಿಂದ  ಡಾ.ಅಂಬೇಡ್ಕರ್ ಜನ್ಮದಿನದಂದು ರಜೆ ಕೊಡಲಾಗುತ್ತಿದೆ. ಏಪ್ರಿಲ್ ೧೪ರಂದು ಆ ದಿನ ಬರುವುದರಿಂದ ಶಾಲಾ ಕಾಲೇಜುಗಳಿಗೆ ಆಗಲೇ ಬೇಸಿಗೆ ರಜೆ ಆರಂಭವಾಗಿರುತ್ತದೆ. ಶಾಲೆ,ಕಾಲೇಜುಗಳಲ್ಲದೆ ಇನ್ನೆಲ್ಲಿ ತಾನೆ ಈ ಆಚರಣೆಗಳನ್ನು ನಡೆಸಲು ಸಾಧ್ಯ? ಸರಿ, ಸರ್ಕಾರ ಮತ್ತೊಂದು ಸುತ್ತೋಲೆ ಹೊರಡಿಸಿ ಏಪ್ರಿಲ್ ೧೪ರಂದು ಮಕ್ಕಳನ್ನು ಮೇಷ್ತ್ರುಗಳನ್ನು ಬರಲು ಹೇಳಿತು. ಬರುವವರು ಯಾರು? ಸರಿ ಮುಂದಿನ ವರ್ಷದಿಂದ ಬೇಸಿಗೆ ರಜೆಯನ್ನೇ ಏಪ್ರಿ ೧೪ರ ನಂತರ ಕೊಡಲಾಯಿತು.

ಇವತ್ತೂ ಅಷ್ಟೆ. ಕುತೂಹಲಕ್ಕೆಂದು ಹಲವು ಸರ್ಕಾರಿ ಕಛೇರಿಗಳಿಗೆ ಹೋಗಿ ನೋಡಿ. ಎಲ್ಲೂ ಕನಕದಾಸರಿಗೆ ಹುಟ್ಟುಹಬ್ಬ ಆಚರಿಸಿದ ಕುರುಹಗಳು ಸಿಕ್ಕುವುದಿಲ್ಲ. ಶಾಲೆ, ಕಾಲೇಜುಗಳಲ್ಲಿ ನೆಪಮಾತ್ರದ ಆಚರಣೆ ನಡೆಸಿ ಕನಕದಾಸರ ಬಗ್ಗೆ ಒಂದೆರಡು ಮಾತು ಹೇಳಿರುತ್ತಾರೆ, ಅಷ್ಟೆ! ನಮ್ಮ ಸಿನಿಮಾ ವಾಹಿನಿಗಳು ತಪ್ಪದೇ ಭಕ್ತ ಕನಕದಾಸ ಚಿತ್ರವನ್ನು ಪ್ರಸಾರ ಮ್ಡಿರುತ್ತವೆ, ಅಷ್ತೆ.

ಇನ್ನೊಂದು ವಿಷಯ: ತಾಲೂಕು, ಜಿಲ್ಲಾ ಮಟ್ಟ, ರಾಜ್ಯ ಮಟ್ಟದಲ್ಲಿ ಕನಕದಾಸ ಜಯಂತಿ ನಡೆಯುತ್ತಿದೆಯಲ್ಲ, ಅಲ್ಲೆಲ್ಲ ಕುರುಬ ಜನಾಂಗದವರೇ ಮುಖ್ಯ ಅತಿಥಿಗಳಾಗಿಯೋ, ಭಾಷಣಕಾರರಾಗಿಯೋ ಅಥವ ಕಾರ್ಯಕ್ರಮದ ವ್ಯವಸ್ಥಾಪಕರೋ ಆಗಿರುತ್ತಾರೆ. ಯಾಕೆ ಕನಕ ಈ ನಾಡಿಗೆ ಸೇರಿದವನಲ್ಲವ? ಕನಕನನ್ನು ಜಾತಿಯೊಂದರ ಮೂಲಕ್ಕೆ ತಳ್ಳಿ ಭಾವೇಕತೆ ಮೆರೆದ ಮಹಾತ್ಮನಿಗೆ ಪುನಃ ಜಾತಿಯ ಸಂಕೋಲೆ ಹಾಕುತ್ತಿರುವುದರ ಸಂಕೇತವಲ್ಲವೆ?

ಯಾಕೋ ಕನಕದಾಸರ ಪದ್ಯವೇ ಮತ್ತೆ ನೆನಪಾಗುತ್ತಿದೆ: ಕುಲಕುಲಕುಲವೆಂದು ಹೊಡೆದಾಡದಿರಿ ನಿತ್ಯ, ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet