ಓ ಮಾತೆಯೇ, ಗಂಗೆಯೇ, ಮಿಸ್ಸೂರಿ ತಾಯಿಯೇ, ಪೊರೆವುದೆಲ್ಲರನು !

ಓ ಮಾತೆಯೇ, ಗಂಗೆಯೇ, ಮಿಸ್ಸೂರಿ ತಾಯಿಯೇ, ಪೊರೆವುದೆಲ್ಲರನು !

ಬರಹ

ಜಂಬೂದ್ವೀಪದಲ್ಲಿನ ಭಾರತವರ್ಷದಲ್ಲಿ, ಭಗೀರಥಮಹಾರಾಜನು ವಿಶ್ವ ಪ್ರಯತ್ನದಿಂದ ಗಂಗಾಮಾತೆಯನ್ನು ಶಿವನಮುಡಿಯಿಂದ ಬಿಡಿಸಿಕೊಂಡು ಭೂಮಿಯಮೇಲೆ ಹರಿಯುವಂತೆ ಮಾಡಿದ ಪೌರಾಣಿಕಕಥೆಗಳು, ಭಾಗವತ ಪುರಾಣದಲ್ಲಿ, ದಾಖಲಾಗಿವೆ. ಪಶ್ಚಿಮಾರ್ಧ ಗೋಳದಲ್ಲಿನ, ನಾಗರಿಕರ ಸೌಭಾಗ್ಯ ಚೆನ್ನಾಗಿರುವಂತಿದೆ. ಇಲ್ಲಿನ ಕಥೆಗಳಲ್ಲಿ ನೀರಿಗಾಗಿ ಪರದಾಟ ಇದ್ದಂತಿಲ್ಲ. ಇಲ್ಲಿನ ಸಮಸ್ಯೆಗಳ ಬಗ್ಗೆ ವಿಶ್ವಕ್ಕೆ ತುಂಬಾತಡವಾಗಿ ವಿವರಗಳು ಗೊತ್ತಾದವು. ಇಲ್ಲಿನ ಪೌರಾಣಿಕ ಕಥೆಗಳೇ ಭಿನ್ನ.

*
ಧಾರುಣೀಪತಿ ಕೇಳು ವರಭಾ
ಗೀರಥೀನಾಮವದು ಗಂಗೆಗೆ
ಸೇರಿದುದು ತರಲಾ ಭಗೀರಥನೀ ಧರಾತಳಕೆ
ಘೋರದುರಿತಾರ್ಣವಕೆ ಘನ ನಿ
ಸ್ತಾರವನು ಕರುಣಿಸಿದ ಭೂಪನ
ಭೂರಿಭಾಗ್ಯವನೇನನೆಂಬೆನು ಭೂಪ ಕೇಳೆಂದ-[೫೩]

*
[’ಕರ್ಣಾಟಕ ಭಾಗವತ,’ ೮ ನೆಯ ಸಂಧಿ. ’ಭಗೀರಥನು ಗಂಗೆಯನ್ನು ತಂದ ಸಂಧಿ’, ಪುಟ-೫೬೬].

ಜಲಸಂಪತ್ತು ವಿಶ್ವದ ಯಾವುದೇ ಭಾಗದಲ್ಲಿರಲಿ; ಅದು ಗಂಗೆಗೆ ಸಮಾನ. ಜಲದ ಶುಭ್ರತೆ, ಹಾಗೂ ಶುಚಿತ್ವವನ್ನು ನಾವು ಕಾಪಾಡಿಕೊಳ್ಳಬೇಕು. ಅಮೆರಿಕೆಯ, ’ಮಿಸ್ಸೂರಿನದಿಯಮ್ಮ,’ ನನ್ನು ಭಾಗೀರಥಿಯೆಂದೇ ಭಾವಿಸಿ ಸನ್ಮಾನಪೂರ್ವಕವಾಗಿ ಅದನ್ನು ನಮ್ಮ ಬಳಕೆಗೆ ತಂದುಕೊಳ್ಳಬೇಕು. ಅಮೆರಿಕದ ಭಾರತೀಯರಿಗೆ, ಮದುವೆ, ಮುಂಜಿ, ಮುಂತಾದ ಶುಭಕಾರ್ಯಗಳಿಗೆಲ್ಲಾ ಮಿಸ್ಸೂರಿಯಮ್ಮನ ಜಲವೇ ಗಂಗೋದಕದಷ್ಟು ಪಾವಿತ್ರ್ಯತೆ ಉಳ್ಳದ್ದು, ಎನ್ನುವ ಧೃಡಸಂಕಲ್ಪಮಾಡಬೇಕು. ನಾವಿರುವೆಡೆಯಲ್ಲೇ ಎಲ್ಲವೂ ಇರುತ್ತವೆ. ಆ ಸ್ಥಳವನ್ನೇ ನಮ್ಮ ಮಾತೃಭೂಮಿಯತರಹ ಮನಸ್ಸಿನಲ್ಲಿ ಆಹ್ವಾನಿಸಿಕೊಂಡು, ಇರುವದೇಶ, ಹಾಗು ಜನ್ಮಿಸಿದದೇಶಗಳಿಗೆ ಕೀರ್ತಿತರುವ ರೀತಿಯಲ್ಲಿ ನಡೆದುಕೊಳ್ಳಬೇಕು !

ಮಿಸ್ಸೂರಿ-ತಾಯಿಯ ಭವ್ಯವಿಗ್ರಹ :

’ಜೆಫರ್ಸನ್ ಸಿಟಿ,’ಯ, ’ಕ್ಯಾಪಿಟಲ್ ಕಟ್ಟಡ,’ ದ ಬದಿಯಲ್ಲಿರುವ ಕಂಚಿನ ಪ್ರತಿಮೆಗಳು, ಕಾಲ, ದೇಶಗಳ ಮಿತಿಯನ್ನು ಮೀರಿ, ಇಂದಿನಪೀಳಿಗೆಗೂ ಮಾರ್ಗದರ್ಶನ ನೀಡುತ್ತಿವೆ ! ಇದು, ರಾಬರ್ಟ್ ಅಟ್ಕಿನ್ ರವರ ಮತ್ತೊಂದು ಭವ್ಯ ಶಿಲ್ಪ. ಇದು, ’ಮಿಸ್ಸೂರಿತಾಯಿ,’ ಯ ಸುಂದರವಿಗ್ರಹ. ಈ ವಿಗ್ರಹಗಳೆಲ್ಲಾ ರೋಮನ್ ಶೈಲಿಯವು. ಕಲಾವಂತಿಕೆಯ ದೃಷ್ಟಿಯಿಂದ ಅಪ್ರತಿಮವಾಗಿವೆ. ಯೂರೋಪಿನಲ್ಲಿ, ಈತರಹದ ನೂರಾರು ಶಿಲ್ಪಗಳು, ಮಿಲಾನ್, ಇಟಲಿ, ರೋಂ, ವಿಯೆನ್ನಾ, ಪ್ಯಾರಿಸ್, ಲಂಡನ್ ಮುಂತಾದ ಇನ್ನೂ ಹಲವು ಶಹರುಗಳಲ್ಲಿ ವಿಜೃಂಭಿಸುತ್ತಿವೆ.

ತಲೆಯಮೇಲೆ, ಬಳ್ಳಿಯ ಕಿರೀಟವಿದೆ. ಎಡತೋಳು, ತೆನೆಗಳಮೇಲೆ ಹಾಗೂ ಹಣ್ಣುಗಳ ಗೊಂಚಲಿನ ಬಳಿ ವಿಶ್ರಮಿಸಿರುವರು. ಬಲಗೈನಲ್ಲಿ ಗೋಧಿಯತೆನೆಗಳ ಗುಚ್ಛವಿದೆ. ಮೊಳಕಾಲಿನ ಬಳಿ ಆಮೆಯಿದೆ. ನದಿಯನೀರಿನ ಆಸರೆಯಲ್ಲಿ ಲಕ್ಷಗಟ್ಟಲೆ ಜೀವಿಗಳು ಬದುಕುತ್ತಿದ್ದಾರೆ. ಜೀವನ ನಿರ್ವಹಣೆಗೆ ಪ್ರಕೃತಿದತ್ತವಾದ ಅರಣ್ಯ, ನದಿ, ಹಾಗೂ ಬೆಟ್ಟಗಳಿವೆ. ಎನ್ನುವುದಕ್ಕೆ ಈ ಶಿಲ್ಪದ ಕೆತ್ತನೆಯಲ್ಲಿ ಸಾಂಕೇತಿಕವಾಗಿ ದಾಖಲಿಸಲಾಗಿದೆ. ಕ್ಯಾಟ್ ಫಿಶ್, ೪ ಪುಟ್ಟಮೀನುಗಳು, ಚಿತ್ರದಲ್ಲಿ ಸ್ಪಷ್ಟವಾಗಿ ಕಾಣಿಸುತ್ತವೆ. ಮಿಸ್ಸೂರಿತಾಯಿಯ ವಿಗ್ರಹದ ಹಿಂಭಾಗದಲ್ಲಿ ನದಿಯೇ ಜೀವನಾಧಾರವಾಗಿರುವ, ಪ್ರದೇಶಗಳಲ್ಲಿ ಮೀನುಗಾರಿಕೆ ಹಾಗೂ ಕ್ರೀಡೆಗಳಿಗೆ ಆದ್ಯತೆ. ಎತ್ತಿನ ತಲೆಬುರುಡೆಯ ಸಂಕೇತ, ಆಗಾಗ ಆಗುವ ಪ್ರವಾಹ, ಕ್ಷಾಮಮುಂತಾದ ಸಾವು-ನೋವುಗಳ ಆಕಸ್ಮಿಕಗಳ ದಾಖಲೆಗಳು, ೪ ಫಲಕಗಳಿವೆ. ಇವು ಮಿಸಿಸಿಪ್ಪೀದೇವನ ಶಿಲ್ಪದಲ್ಲಿರುವಂತೆಯೇ ಇಲ್ಲೂ ಇವೆ. ಹೀಗೆ, ೧೯೧೫ ರ ಸಮಯದಲ್ಲಿ ನಿರ್ಮಾಣವಾದ ಈಭವ್ಯ ಶಿಲ್ಪಗಳು, ಪ್ರಗತಿಪಥದಲ್ಲಿ ಮುಂದೆಸಾಗುವ, ಗುಟ್ಟನ್ನು ಸಾರುವ ವಿಶ್ವ-ಸಂದೇಶಗಳು, ಅನನ್ಯವಾಗಿವೆ.