ಸೀರಿಯಸ್ಲೀ ಸೀರಿಯಸ್ಸು: ಸತ್ತ ನೊಣ, ಹೆಗ್ಗಣಗಳ ಪರಿಮಳ!

ಸೀರಿಯಸ್ಲೀ ಸೀರಿಯಸ್ಸು: ಸತ್ತ ನೊಣ, ಹೆಗ್ಗಣಗಳ ಪರಿಮಳ!

ಬರಹ

‘ಕಂಡವರ ತಟ್ಟೆಯಲ್ಲಿನ ಸತ್ತ ನೊಣದ ಬಗ್ಗೆ ಮಾತನಾಡುವ ಮೊದಲು ನಿಮ್ಮ ತಟ್ಟೆಯಲ್ಲಿನ ಸತ್ತ ಹೆಗ್ಗಣವನ್ನು ತೆಗೆದುಹಾಕಿ’ ಎಂಬುದು ಚರ್ಚಾಸ್ಪರ್ಧೆಗಳಲ್ಲಿ ವೀರಾವೇಷದಿಂದ ಹೋರಾಡಿ ಹಲವು ಬಾರಿ ವಿಜಯಿಯಾಗಿ ವಿಜಯಮಾಲೆಯನ್ನು ಧರಿಸಿ ಮೆರೆದು ಜನರು ಮರೆತು ಹೋದವರೂ, ವೀರಮರಣವನ್ನಪ್ಪಿ ನಾಲ್ಕು ಕ್ಷಣ ನೆರೆದವರ ಮೌನಾಚರಣೆಯನ್ನು ಸ್ವೀಕರಿಸಿದವರೂ, ಮುಖಹೇಡಿಗಳಾಗಿ ಹೌಹಾರಿ ಬಸವಳಿದು ಹೋದವರೂ ಎಲ್ಲರಿಗೂ ಪ್ರಿಯವಾದ ವಾಕ್ಯ. ಇದರರ್ಥ ನಿಮ್ಮಲ್ಲಿರುವ ದೊಡ್ಡ ತಪ್ಪನ್ನು ಮೊದಲು ತಿದ್ದಿಕೊಳ್ಳಿ ಆಮೇಲೆ ಇನ್ನೊಬ್ಬರಲ್ಲಿರುವ ಸಣ್ಣ ತಪ್ಪಿನ ಬಗ್ಗೆ ಮಾತನಾಡಲು ನಿಮಗೆ ಅರ್ಹತೆ ಬರುತ್ತದೆ ಎಂದು. ಉದಾಹರಣೆಗೆ: ಕೂದಲಿಗೆ ಶ್ಯಾಂಪೂ ಹಾಕೆ ಬೇಡ, ಹಾಳಾಗುತ್ತವೆ ಎಂದು ತಂದೆ ಮಗನಿಗೆ ಉಪದೇಶ ಮಾಡುತ್ತಾನೆ. ತಂದೆಯ ಬೋಳು ತಲೆಯಲ್ಲಿನ ನಾಲ್ಕು ಕೂದಲುಗಳನ್ನು ಹುಡುಕಿ ತೋರಿಸಿ ಮಗ ಮೇಲಿನ ವಾಕ್ಯವನ್ನು ಹೇಳಬಹುದು.

ಇಷ್ಟು ಪೀಠಿಕೆಯನ್ನು ಬಯಸುವ ಸಂಗತಿಯಾಗುವುದು ಎಂಬುದು ನಿಮ್ಮಂತಹ ಬುದ್ಧಿವಂತರಿಗೂ ಹೊಳೆದಿರಲಾಗದು. ಇಷ್ಟು ದಿನ ಭಾರತದ ಯಾವ ಮೂಲೆಯಲ್ಲಿ ಬಾಂಬುಗಳು ಸಿಡಿದರೂ, ಸಿಡಿಯದೆ ಮಲಗಿ ನಿದ್ದೆ ಹೋದರೂ, ಬಾಂಬಿನ ಸದ್ದು ಮಾಡುವ ಆನೆ ಪಟಾಕಿ ಅಬ್ಬರಿಸಿದರೂ, ನಾಲ್ಕು ಮಂದಿ ತಲೆಗೆ ಬಿಳಿಯ ಟೊಪ್ಪಿ ತೊಟ್ಟವರು ಒಂದೇ ದಿನ ಕಾಣೆಯಾದರೂ ‘ಭಯೋತ್ಪಾದನೆ’, ‘ಉಗ್ರವಾದ’, ‘ಮೂಲಭೂತವಾದ’, ‘ಮತಾಂಧತೆ’ ಎಂದೆಲ್ಲಾ ದಿನಪತ್ರಿಕೆಗಳ ಅಂಕಣಕೋರರು, ವಾರಪತ್ರಿಕೆಗಳ ಸೊಂಪಾದಕರು ಅಂಕಣಗಳ ಮೇಲೆ ಅಂಕಣಗಳನ್ನು ಚಚ್ಚುತ್ತಿದ್ದರು. ಕೆಲವರು ಅಲ್ ಖೈದ, ಮಷ್ಕಿರಿ ತೊಯ್ಬಾ, ಮಜಾಹಿದ್ದೀನ್ ಎಂದೆಲ್ಲಾ ಯಾರಿಗೂ ಅರ್ಥವಾಗದ ಶಬ್ಧಗಳ ದಾಳಿಯನ್ನು ಮಾಡುತ್ತಾ ಜನಸಾಮಾನ್ಯರನ್ನು ಭಯಭೀತರನ್ನಾಗಿಸುತ್ತಿದ್ದರು. ಕೇಸರಿ ಪಾರ್ಟಿಯಂತೂ ಪರಮ ತತ್ವಜ್ಞಾನಿಯ ಫೋಸಿಗೆ ರೆಡಿಯಾಗುತ್ತಾ ‘ನಾವು ಯಾವ ಕಾಲದಿಂದ ಹೇಳುತ್ತಾ ಬಂದಿದ್ದೇವೆ, ಅವರ ಮತಾಂಧತೆ ಹೆಚ್ಚಾಯಿತು ಅಂತ, ನೀವು ಕೇಳಲಿಲ್ಲ. ಸರಕಾರದ ಮೃದು ಧೋರಣೆಯಿಂದಾಗಿ ಗಟ್ಟಿ ಗಟ್ಟಿ ಬಾಂಬುಗಳು ಸ್ಪೋಟಗೊಳ್ಳುತ್ತಿವೆ. ನಮ್ಮವರನ್ನು ನೋಡಿ ಎಂದಿಗೂ ಒಬ್ಬರ ಮೇಲೆ ಕೈ ಎತ್ತಿದವರಲ್ಲ. ನಮ್ಮವರು ಯಾರ ಮೇಲಾದರೂ ದಂಡೆತ್ತಿ ಹೋದ ಉದಾಹರಣೆ ಇತಿಹಾಸದಲ್ಲಿ ಸ್ಯಾಂಪಲ್ಲಿಗಾದರೂ ಇದ್ದರೆ ತೋರಿಸಿ ನಾವು ಪ್ರಸ್ತುತ ಹಾಕಿಕೊಂಡಿರುವ ಶಾರ್ಟ್ಸ್ ಕಳಚಿ ನಿಮ್ಮಂತೆ ಪ್ಯಾಂಟು ತೊಡುತ್ತೇವೆ.’ ಎಂದು ಮೈಕುಗಳ ಮುಂದೆ ವಾಗ್ಝರಿಯನ್ನು ಹರಿಸಿ ಮೈಕನ್ನೂ, ನೋಡುಗರ ಕಣ್ಣುಗಳನ್ನು ಒದ್ದೆಯಾಗಿಸುತ್ತಿದ್ದರು.

ಇವರಿಗೆ ವಿರುದ್ಧವಾದದ್ದನ್ನೇ ಹೇಳುತ್ತಾ ಬಂದಿರುವ ಹ್ಯಾಂಡ್ ಪಾರ್ಟಿಯವರು ಆಡಳಿತದಲ್ಲಿದ್ದಾಗ ಅದರ ಹೋಂ ಮಿನಿಸ್ಟರು, ‘ಉಗ್ರವಾದವನ್ನು ನಾವು ಯಾವ ಕಾರಣಕ್ಕೂ ಸಹಿಸುವುದಿಲ್ಲ. ಭಯೋತ್ಪಾದಕರನ್ನು ಕಂಡಲ್ಲಿ ಗುಂಡಿಕ್ಕಿ ಕೊಂದು ಸೆರೆಹಿಡಿದು ನ್ಯಾಯಾಲಯದ ಮುಂದೆ ನಿಲ್ಲಿಸುತ್ತೇವೆ. ಭಯೋತ್ಪಾದಕರ ಒತ್ತಾಯಕ್ಕೆ ಮಣಿಯುವ ಪ್ರಶ್ನೆಯೇ ಇಲ್ಲ’ ನಾಲ್ಕೈದು ಸೂಟು ಬದಲಿಸುವ ನಡುವೆ ಸಮಯ ಮಾಡಿಕೊಂಡು ಹಿಂದಿನ ಹೇಳಿಕೆಯನ್ನೇ ನೆನಪಿನಿಂದ ಹೊರತೆಗೆದು ಮರು ಉಚ್ಚರಿಸಿ ಬೆವರೊರೆಸಿಕೊಳ್ಳುತ್ತಾರೆ. ಅಲ್ಲಿ ಇಲ್ಲಿ ಕೆಲವು ಭೂಮಿಯ ಮೇಲಿನ ಏಕೈಕ ಬುದ್ಧಿವಂತ ಪ್ರಾಣಿಗಳು ‘ಭಯೋತ್ಪಾದನೆಗೆ ಯಾವ ಧರ್ಮವನ್ನೂ ಹೊಣೆಯಾಗಿಸಲು ಸಾಧ್ಯವಿಲ್ಲ. ಒಂದು ಸಮಾಜ ಶಾಂತಿಯಿಂದ ಇದೆ ಎಂದರೆ, ಸಹಬಾಳ್ವೆ ಬ್ರಾತೃತ್ವವನ್ನು ಪಾಲಿಸುತ್ತಿದೆ, ಸರ್ವರಿಗೂ ಸ್ವತಂತ್ರವನ್ನು ಕೊಟ್ಟಿದೆ ಎಂದಾಗ ಅದಕ್ಕೆ ಅವರು ಪಾಲಿಸುವ ಧರ್ಮ, ಅವರ ಸಂಸ್ಕಾರವನ್ನು ಹೊಣೆ ಮಾಡಬೇಕು. ಆದರೆ ಅವರು ಹಿಂಸೆಗಿಳಿದು ಮುಗ್ಧ ಮಕ್ಕಳ, ಅಮಾಯಕರ ಪ್ರಾಣವನ್ನು ತೆಗೆಯುವಾಗ, ತಮ್ಮ ದೇಶವನ್ನೇ ಒಡೆದೊಡೆದು ದಳ್ಳುರಿಯಲ್ಲಿ ಬೇಯಿಸುವಾಗ ಅದಕ್ಕೆ ಧರ್ಮವನ್ನು ಹೊಣೆ ಮಾಡಬಾರದು. ಭಯೋತ್ಪಾದನಕನಿಗೆ ಧರ್ಮವಿಲ್ಲ. ಆತನ ಕೃತ್ಯಗಳೆಲ್ಲವೂ ಸ್ವಂತ ವಿವೇಚನೆಯಿಂದ ಬಂದವು.’ ಎಂದು ಘನಘಂಬೀರವಾದ ವಿಚಾರವನ್ನು ಮಂಡಿಸಿ ಗಡ್ಡ ಕೆರೆಯುತ್ತಾ ನಿಂತಿರುವಾಗ ಹ್ಯಾಂಡ್ ಪಕ್ಷದ ವಕ್ತಾರ ಬಂದು ‘ನಾವು ಅದನ್ನೇ ಹೇಳುತ್ತಿದ್ದದ್ದು, ಭಯೋತ್ಪಾದನೆಗೆ ಧರ್ಮ ಕಾರಣವಲ್ಲ. ಹಾಗೆಯೇ ಭಯೋತ್ಪಾದನೆಯನ್ನು ಮತದ ಹೆಸರು ಹೇಳಿ ಕರೆಯುವುದು ತಪ್ಪು. ಭಯೋತ್ಪಾದಕರದು ಅಲ್ಪಸಂಖ್ಯಾತರ ಮೇಲಿನ ದಬ್ಬಾಳಿಕೆಯ ವಿರುದ್ಧದ ಬಂಡಾಯದ ದನಿ’ ಎಂದು ಉಸುರುತ್ತಾರೆ. ಕೇಸರಿ ಪಕ್ಷದವರು ಇವರಿಬ್ಬರ ಮಾತುಗಳನ್ನು ಕೇಳುತ್ತಾ ಚಿದ್ವಿಲಾಸದ ನಗೆ ಬೀರುತ್ತಾ, ‘ತುಷ್ಟೀಕರಣ’ ಎಂದು  ಉದ್ಗರಿಸುತ್ತಾರೆ.

ಆದರೆ ಕಾಲ ಚಕ್ರ ಉರುಳಿದ ಹಾಗೆ ಚಿದ್ವಿಲಾಸದ ನಗೆ ಬೀರುವವರ ಸರದಿಯೂ ಬದಲಾಗಿದೆ. ಕೇಸರಿ ಪಕ್ಷದವರು ಬೆವರಿಳಿಯುವ ಹಣೆಯನ್ನು ತಮ್ಮ ಜುಬ್ಬಗಳಿಗೆ ತಿಕ್ಕಿಕೊಳ್ಳುತ್ತಿದ್ದರೆ ಹ್ಯಾಂಡಿನವರು ಬೀಗುತ್ತಿದ್ದಾರೆ. ಕೇಸರಿ ಪಕ್ಷದ ಬೆಂಬಲಿಗರು ಬಾಂಬುಗಳನ್ನು ಮಾಡುವಲ್ಲಿ ಹೆಸರು ಮಾಡಿದ್ದಾರೆ, ಹ್ಯಾಂಡಿನವರಷ್ಟು ಚೆನ್ನಾಗಿ ಮಾಡುವುದನ್ನು ಇನ್ನೂ ಕಲಿತಿಲ್ಲವಾದರೂ ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತಿದ್ದಾರೆ. ನಾಲ್ಕೈದು ಮಂದಿ ಈ ಮಹಾನ್ ಪ್ರಯೋಗದಲ್ಲಿ ತಮ್ಮ ಜೀವವನ್ನೇ ಹವಿಸ್ಸನ್ನಾಗಿ ಅರ್ಪಿಸಿದ್ದಾರೆ. ಹ್ಯಾಂಡಿನ ಅನುಯಾಯಿಗಳಷ್ಟು ತರಬೇತಿಯನ್ನು ಕೇಸರಿ ಪಕ್ಷದ ಅಭಿಮಾನಿಗಳು ಪಡೆಯಬೇಕು ಎಂಬ ಉದ್ದೇಶದಿಂದ ನೇರವಾಗಿ ಸೇನೆಯಿಂದ ಉನ್ನತ ಅಧಿಕಾರಿಯನ್ನು ತರಬೇತಿ ನೀಡಲು ನೇಮಿಸಲಾಗಿದೆ. ಹಾಗೆಯೇ ಇವರ ಮೇಲೆ ಭಗವಂತನ ಕೃಪೆ ಹೆಚ್ಚಾಗಿರಲಿ ಎಂದು ಸಾಧ್ವಿ ಮಣಿಯವರ ನೆರವನ್ನೂ ಪಡೆಯಲಾಗಿದೆ. ಬುದ್ಧಿಜೀವಿಗಳು ಆಚೆ ಈಚೆ ನೋಡಿ ಮೊದಲು ಯಾರಾದರೂ ಮಾತನಾಡಲಿ ಎಂದು ಕಾಯುತ್ತಿದ್ದಾರೆ. ಕೇಸರಿ ಪಕ್ಷದವರು ಮಾಡುತ್ತಿದ್ದ ಆರೋಪಗಳ ಕಾಪಿಯನ್ನು ಪತ್ರಿಕೆಯ ಕಛೇರಿಗಳಿಂದ ಸ್ಪೀಡ್ ಪೋಸ್ಟಿನಲ್ಲಿ ತರಿಸಿಕೊಂಡ ಹ್ಯಾಂಡ್ ಪಕ್ಷದವರು ಅವನ್ನು ಉರುಹೊಡೆಯುವಲ್ಲಿ ಮಗ್ನರಾಗಿದ್ದರೆ ಕೇಸರಿ ಪಕ್ಷದವರು ಹ್ಯಾಂಡ್ ಪಕ್ಷದವರ ಹೇಳಿಕೆಗಳ ಮೊರೆಹೋಗಿದ್ದಾರೆ. ಈ ಮಧ್ಯೆ ನಗೆ ಸಾಮ್ರಾಟರಂತಹ ಮಾಜಿ ಜವಾಬ್ದಾರಿಯುತ ಪ್ರಜೆಗಳು ಹಾಗೂ ಹಾಲಿ ರಾಜಕೀಯ ವಿಶ್ಲೇಷಕರು ಕೇಸರಿ ಹಾಗೂ ಹ್ಯಾಂಡ್ ಪಕ್ಷಗಳ ಈ ಸಾಮರಸ್ಯವನ್ನು, ಕೊಡುತೆಗೆದುಕೊಳ್ಳುವಿಕೆಯನ್ನು ನಾವು ಇಷ್ಟು ವರ್ಷಗಳ ಇತಿಹಾಸದಲ್ಲಿ ಎಂದಿಗೂ ಕಂಡಿಲ್ಲ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.