ಅರ್ಪಣಾ...

ಅರ್ಪಣಾ...

ಬರಹ

ಇರುವೆಗಳ ಸಾಲು ತುಂಬಾ ಉದ್ದವಿತ್ತು.ಬಹಳ ಉದ್ದ ...ಒಂದರ ಹಿಂದೆ ಒಂದು...ಅದರ ಹಿಂದೆ ಮತ್ತೊಂದು ಬರುತ್ತಲೇ ಇದ್ದವು. ಎಲ್ಲಿಂದ ಬರುತ್ತಿವೆ ? ಎಲ್ಲಿಗೆ ಹೋಗುತ್ತಿವೆ ? ಎಂಬುದು ಪುಟ್ಟಿಗೆ ಪ್ರತಿದಿನದ ಪ್ರಶ್ನೆಯಾಗಿದ್ದರಿಂದ ಅಂದೇನೂ ವಿಶೇಷವಿರಲಿಲ್ಲ. ಪುಟ್ಟಿ ಹಾಗೇನೇ. ಶಾಲೆಗೆ ಹೋಗುವ ಸಂಭ್ರಮದಲ್ಲಿಯೇ ಇರುವೆಗಳು,ಮರಗಳು,ಹಕ್ಕಿಗಳು ಎಲ್ಲರನ್ನೂ ಮಾತಾಡಿಸಬೇಕು.ಆ ಸಮಯದಲ್ಲಿ ಜೊತೆಗಿರುವವರನ್ನು ಸಂಪೂರ್ಣ ಮರೆತುಬಿಡುತಿದ್ದಳು...ಒಮ್ಮೊಮ್ಮೆ ತನ್ನನ್ನೂ ಸಹ.

"ಅರ್ಪಣಾ.." ಮಿಸ್ ಕೂಗಿದರೂ ಪುಟ್ಟಿ ಸುಮ್ಮನಿದ್ದಳು. "ಯೆಸ್ ಮೇಡಂ" ನಾಲ್ಕನೇ ಬಾರಿಗೆ ಕೂಗಿದಾಗ ನೆನಪಾಯಿತು..ತನ್ನ ಹೆಸರು. ಎಲ್ಲರೂ ಪುಟ್ಟಿ ಎಂದೇ ಕೂಗಿ ಕೂಗಿ ಅಮ್ಮ ಪ್ರೀತಿಯಿಂದ ಇಟ್ಟ ಹೆಸರು "ಅರ್ಪಣಾ" ನೆನಪಾಗುವುದು ಶಾಲೆಯಲ್ಲಿ ಮಿಸ್ ಕೂಗಿದಾಗಲೇ. ಆದರೆ ಆ ಹೆಸರಿನ ಅರ್ಥ,ಹಿನ್ನೆಲೆ ಆ ವಯಸ್ಸಿನಲ್ಲಿ ಅವಳಿಗೆ ಅರ್ಥವಾಗುವುದಿರಲಿ,ತಿಳಿಯುವ ಕುತೂಹಲವೂ ಇರಲಿಲ್ಲ.

"ಅಮ್ಮಾ.. ಮಾರ್ಕ್ಸ್ ಕಾರ್ಡ್ ಮೇಲೆ ಅಪ್ಪನ ಸಹಿ ಹಾಕಬೇಕಂತೆ..." ಪುಟ್ಟಿ ಓಡಿ ಬಂದು ಮಾರ್ಕ್ಸ್ ಕಾರ್ಡ್ ಕೊಟ್ಟಳು. "ಪುಟ್ಟೀ... ನಿಂಗೆ ಏನ್ ತಂದಿದೀನಿ ನೋಡು.." ಅಮ್ಮನ ಕೈಲಿದ್ದ ಕಲರ್ ಬಾಕ್ಸ್ ನೋಡಿ ಪುಟ್ಟಿಯ ಮುಖದಲ್ಲಿ ಬಣ್ಣಗಳು ಮಿಂಚಿದವು.ಹಾಗೇ ಕೈಯಿಂದ ಎಳೆದುಕೊಂಡು ಪಕ್ಕದ ಮನೆಯ ಪಾಪುವಿಗೆ ತೋರಿಸಲು ಓಡಿದಳು.. ಎಲ್ಲಾ ಮಕ್ಕಳಂತೆ. ಅಮ್ಮನ ಕಣ್ಣೀರಿನ ಹನಿ ಬಿದ್ದು ಒದ್ದೆಯಾಗಿದ್ದ ಕುಂಚಗಳನ್ನು ಗಮನಿಸಲೇ ಇಲ್ಲ....! ಅಮ್ಮನಿಗೂ ಅದು ಬೇಕಾಗಿರಲಿಲ್ಲ. ಪ್ರತಿ ತಿಂಗಳಿನಂತೆ ಈ ತಿಂಗಳೂ ಪುಟ್ಟಿಯ ಮಾರ್ಕ್ಸ್ ಕಾರ್ಡ್ 'ಎ' ಗ್ರೇಡನ್ನೇ ತೋರಿಸುತ್ತಿದ್ದರೂ ಸಹಿಹಾಕಲು ಇಲ್ಲದ ಅಪ್ಪನನ್ನು ಎಲ್ಲಿಂದ ತರುವುದು? ಇಂದೂ ಸಹ ಪ್ರತಿ ತಿಂಗಳಿನಂತೆ ಮಗಳನ್ನು ಸಂಭಾಳಿಸಿದ್ದಾಯಿತು. ಇನ್ನೆಷ್ಟು ದಿನ ಹೀಗೆ ಅಪ್ಪನ ಸಹಿ ಹಾಕುವುದು..? ಎಲ್ಲಾ ಭಾವನೆಗಳನ್ನು ಆಕೆಯ ಮುಖವೊಂದೇ ತೋರಿಸುತ್ತಿತ್ತು. ನೋಡಲು ಮಾತ್ರ ಯಾರೂ ಇರಲಿಲ್ಲ...

"ಅಮ್ಮಾ ನಾನು ಪೇಂಟಿಂಗ್ ಇವತ್ತೇ ಮಾಡ್ತೀನಿ.." "ಬೇಡಮ್ಮಾ ನಾಳೆ ಮಾಡುವಿಯಂತೆ..ಇವತ್ತಿನ ಹೋಂ ವರ್ಕ್ ಇನ್ನೂ ಮುಗಿಸಿಲ್ಲ.." "ನೋ ಇವತ್ತೇ ಮಾಡ್ತೀನಿ.." ಅಮ್ಮನನ್ನು ದಿಟ್ಟಿಸಿದಳು ಪುಟ್ಟಿ. "ಸರಿ ಏನ್ ಬೇಕಾದ್ರೂ ಮಾಡಿಕೋ..." ಥೇಟ್ ಅವನಂತೆ. ಹಠಮಾರಿ..ಗಂಡಾಗಿ ಹುಟ್ಟಬೇಕಿತ್ತು.ಅಲ್ಲ ಅವನಿಗೆ ನಾ ಹೇಳಿದ್ದನ್ನು ಕೇಳುವ ತಾಳ್ಮೆಯೂ ಇರಲಿಲ್ಲ.. ನನಗೂ ಹೇಳಿದ್ದನ್ನೇ ಹೇಳಲು ಸಮಯುವೂ ಇರಲಿಲ್ಲ. ಅವರೆಲ್ಲಿ ಕೇಳ್ತಾರೆ ? ಗಂಡಸರ ಜಾತಿಯೆ ಇಷ್ಟು.ಅವರಿಗೆ ಬೇಕಾದ ಹಾಗೆ ಕೇಳಲು ನಾವಿದ್ದೀವಲ್ಲ. ಅಂತಹವನನ್ನು ನಾನು ಪ್ರೇಮಿಸುತ್ತಿದ್ದೆ ಎಂದರೆ ಅಸಹ್ಯವಾಗುತ್ತದೆ.ನನ್ನ ಮೇಲೆ, ಆ ನನ್ನ ಮನಸ್ಸಿನ ಮೇಲೆ ಸಿಟ್ಟು ಬರುತ್ತದೆ. ಅವನಿಗೊಪ್ಪಿಸಿದ ಈ ದೇಹವನ್ನು ಸುಟ್ಟು ಬಿಡಬೇಕೆಂದೆನಿಸುತ್ತದೆ..

"ಅಮ್ಮಾ ನಂಗಿದು ಬೇಡ.." ಹಳೆಯ ಕಲರ್ ಬಾಕ್ಸ್ನ್ನು ತೋರಿಸಿ ಪುಟ್ಟಿ ಹೇಳಿದಾಗ ಉಕ್ಕಿ ಬರುತ್ತಿದ್ದ ಭಾವನೆಗಳಿಗೆ ತಡೆ ಹಾಕಿದಳು ಅಮ್ಮ.ಹೊಸದು ಬಂದ ಮೇಲೆ ಹಳೆಯದನ್ನು ಬಿಸಾಕುವ ಬುದ್ದಿ ಅಪ್ಪನದ್ದೇ..ಅಮ್ಮನ ನೋಟಕ್ಕೆ ಉತ್ತರಿಸಲು ತಿಳಿಯದ ಪುಟ್ಟಿಗೆ ಈ ತರಹದ ಸ್ಥಿತಿ ಹೊಸದೇನಲ್ಲ.

ಪುಟ್ಟಿಯನ್ನು ಕಂಡಾಗ ಅಮ್ಮನಿಗೆ ಎಲ್ಲಾ ಭಾವನೆಗಳು ಉಮ್ಮಳಿಸುತ್ತವೆ..ಹಳೆಯದೆಲ್ಲ ನೆನಪಾಗುತ್ತದೆ...ಹಳೆಯದನ್ನೆಲ್ಲ ಮರೆಯಲೂ ಆಕೆಗೆ ಪುಟ್ಟಿಯೇ ಬೇಕು..ಅಮ್ಮನ ಸುಖಕ್ಕೂ ದುಃಖಕ್ಕೂ ಪುಟ್ಟಿಯೇ ಕಾರಣ.. ಅವಳನ್ನು ನೋಡಿಯೇ ಅವಳಿಗಾಗಿಯೇ ಆಕೆ ಇನ್ನೂ ಜೀವಂತವಾಗಿದ್ದಾಳೆ. ಪ್ರತಿದಿನ ಕೆಲಸಕ್ಕೂ ಹೋಗುತ್ತಾಳೆ.. ಅವಳನ್ನು ಕಂಡಾಗ ಜೀವನದಲ್ಲಿ ಹೊಸ ಉತ್ಸಾಹ ಬರುತ್ತದೆ. ಭಾವನಾ ವಾಹಿನಿಗೆ ಪುಟ್ಟಿ ತಡೆ ಹಾಕುತ್ತಾಳೆ..ಅಥವಾ ಅದರ ದಿಕ್ಕು ಬದಲಿಸುತ್ತಾಳೆ. ಅಮ್ಮ ದಿನವೂ ಪುಟ್ಟಿಯ ಮುಖವನ್ನೇ ನೋಡುತ್ತಾ ನಿದ್ದೆ ಹೋಗುತ್ತಾಳೆ....

ಹೊರಗೆ ಮೋಡಗಳು ಡಿಕ್ಕಿ ಹೊಡೆದಾಗಲೇ ಆಕೆ ನಿದ್ರೆಯಿಂದೆದ್ದಿದ್ದು. ಆಮೇಲೆ ನಿದ್ರೆ ಬರಲಿಲ್ಲ.ಮಳೆ ಹೊರಗೆ ಜೋರಾಗಿಯೇ ಇತ್ತು..ಗಡಿಯಾರದ ಸಣ್ಣ ಮುಳ್ಳು ಮಾತ್ರ ಮಿಂಚಿನ ಬೆಳಕಿಗೆ ಗಂಟೆ ಮೂರು ದಾಟಿದ್ದನ್ನು ತೋರಿಸುತ್ತಿತ್ತು. ಇಂತಹದೇ ರಾತ್ರಿಯೊಂದು ನನ್ನ ಬಾಳಿನಲ್ಲಿ ನಡೆಯುತ್ತಿದ್ದ ನಾಟಕದ ಕೊನೆಯ ಅಂಕಕ್ಕೆ ಹಿನ್ನೆಲೆಯೊಂದನ್ನು ಒದಗಿಸಿತ್ತು...ಇಂತಹದೇ ಒಂದು ರಾತ್ರಿ ಅವನು ನನ್ನನ್ನು ಬಿಟ್ಟು ಹೋಗಿದ್ದು..ಮೃಗದಂತೆ ವರ್ತಿಸಿದ್ದು..ಅಂದು ಗಾಳಿ ಇಲ್ಲದೆ ಮಳೆ ಬೀಳುತ್ತಿದ್ದರೂ ಆಕೆಯ ಬಾಳಿನಲ್ಲಿ ಬೀಸಿದ ಬಿರುಗಾಳಿ ಸರ್ವನಾಶವನ್ನುಂಟುಮಾಡಿತ್ತು.
ಮದುವೆಯಾಗಿರಲಿಲ್ಲ ನಿಜ...ಆದರೆ ನಾನು ಅವನ ಹೆಂಡತಿಯಾಗಿದ್ದೆ...ಆತ ನನ್ನ ಗಂಡನಾಗಿದ್ದ....ಇಲ್ಲ ಅವನು ಗಂಡನಾಗಿರಲಿಲ್ಲ ಗಂಡನಂತೆ ನಾಟಕ ಮಾಡಿದ್ದ ...ಎಲ್ಲಾ ಗಂಡಸರಂತೆ. ನಾನು ಅವನಿಗೆ ಎಲ್ಲವನ್ನೂ ಕೊಟ್ಟೆ. ಮನಸ್ಸು,ಹೃದಯ ,ದೇಹ....ಎಲ್ಲಾ..ಆದರೆ ಆತ ...? ನನಗೇನಾದರೂ ಆತ ಕೊಟ್ಟಿದ್ದರೆ ಅದು ಪುಟ್ಟಿ ಒಂದೇ...ನನ್ನನ್ನೇ ನಾನು ಆತನಿಗೆ ಅರ್ಪಿಸಿಕೊಂಡಿದ್ದಕ್ಕಾಗಿ "ಅರ್ಪಣಾ" ಎಂದು ಹೆಸರಿಟ್ಟವಳೂ ನಾನೇ..ನಾನೇನಾದರೂ ಜೀವಂತವಾಗಿದ್ದರೆ ಅದು ಪುಟ್ಟಿಗಾಗಿಯೇ ..ಪುಟ್ಟಿ ನನ್ನ ಜೀವ...

ಮಳೆ ಇನ್ನೂ ಜೋರಾಯಿತು..ಮನೆಯ ಸೋರುವ ಮಾಡಿನಿಂದ ಬಿದ್ದ ಮಳೆಯ ಹನಿ ಕಣ್ಣೀರಿನ ಜೊತೆ ಬೆರೆತು ನೆಲದಲ್ಲಿ ಇಂಗಿ ಹೋಗುತ್ತಿತ್ತು...ಮಳೆಯ ಸದ್ದಿಗೆ ಅಂತರಂಗದ ಆರ್ತನಾದ ಕೇಳದಾಯಿತು...ಆಕೆಯ ಮುಖದಲ್ಲಿದ್ದ ಪ್ರಶ್ನಾರ್ಥಕ ಚಿಹ್ನೆ ಅತ್ತಂತೆ ಕಾಣುತ್ತಿತ್ತು.. ನೋಡಲು ಮಾತ್ರ ಯಾರೂ ಇರಲಿಲ್ಲ...

ಆಕೆ ಜೀವಂತವಾಗಿದ್ದಾಳೆ.ಮಂಜಾಗಿರುವ ಕಣ್ಣಿಂದಾಗಿ ಏನೂ ಕಾಣೀಸುತ್ತಿಲ್ಲ ಅಷ್ಟೆ..ಗಂಟೆಯೂ ಜಾಸ್ತಿಯೇನಾಗಿಲ್ಲ .ದಿನಕ್ಕಿಂತಲೂ ಸ್ವಲ್ಪ ತಡವಾಯಿತು. ತಿನ್ನಲು ಉಪ್ಪಿಟ್ಟು ಮಾಡಿ ಪುಟ್ಟೀಗೆ ಶಾಲೆಗೆ ಹೋಗಲು ರೆಡಿ ಮಾಡಲು ಇನ್ನೇನು ಎರಡು ಗಂಟೆ ಸಾಕು ಎಂದುಕೊಂಡು ಎದ್ದಳು.ಪುಟ್ಟಿ ಇನ್ನೂ ಎದ್ದಿಲ್ಲ...ರಾತ್ರಿ ಅರ್ಧ ಮಾಡಿದ್ದ ಪೇಂಟಿಂಗ್ ಅಲ್ಲೇ ಪಕ್ಕದಲ್ಲಿ ಬಿದ್ದಿತ್ತು..ಪುಟ್ಟಿಯ ಪೇಂಟಿಂಗ್ ಎಂದರೆ ಅದು ಬಣ್ಣಗಳ ಚೆಲ್ಲಾಟ ಅಷ್ಟೇ ..ಮತ್ತೇನೂ ವಿಶೇಷವಿಲ್ಲ...ಆದರೆ ಅವಳಿಗೆ ಆಕೆಯ ಛಿದ್ರ ಬದುಕು ಅದರಲ್ಲಿ ಕಂಡಿತು...ಛಿದ್ರ ಮನಸೂ ಕಂಡಿತು...

ಆತ ಹೊರಗಡೆ ಕಾಯುತ್ತಿದ್ದ. ಪುಟ್ಟಿಗಾಗಿ ...ಈತ ಅವನಲ್ಲ. ಅವನಂತೆಯೂ ಇಲ್ಲ ..ಆದರೂ ಅವನನ್ನು ಈ ನನ್ನ ಮನಸ್ಸು ನಂಬುತ್ತಿಲ್ಲ ...ಗಂಡಸರೇ ಇಷ್ಟು..ನಂಬಿಕೆಗೆ ಅರ್ಹರಲ್ಲ... ಆದರೂ ಈತ ಜಾಣ... ಎಂತಹವರ ನಂಬಿಕೆಯನ್ನೂ ಪಡೆಯಬಲ್ಲ.. ಒಳ್ಳೆಯವನೇ.. ಆದರೆ ಅನನುಭವಿ..ಎಷ್ಟಾದರೂ ನನ್ನಷ್ಟು ಅನುಭವವಿರಲು ಸಾಧ್ಯವೇ ಇಲ್ಲ ... ಎಲ್ಲವನ್ನೂ ಅನುಭವಿಸಿಬಿಟ್ಟಿದ್ದೇನೆ ನಾನು....

ಇವನಿಗೂ ಪುಟ್ಟಿಯನ್ನು ಕಂಡರೆ ಪಂಚಪ್ರಾಣ ..ನಿನ್ನೆ ಕಲರ್ ಬಾಕ್ಸ್ ತಂದವನೂ ಅವನೇ..ವಯಸ್ಸಿನಲ್ಲಿ ಚಿಕ್ಕವನಾದರೂ ಒಂಥರಾ ಗೌರವ..ಅಭಿಮಾನ..ಕೆಲಸಕ್ಕೆ ಸೇರಿ ಹದಿನೈದು ದಿನಗಳಾದ ಮೇಲೇ ನನ್ನ ಜೊತೆ ಆತ ಮಾತನಾದಲು ಪ್ರಾರಂಭಿಸಿದ್ದು..ಮಾತು ಕಡಿಮೆ ..ಮೌನ ಜಾಸ್ತಿ.. ಹೀಗಂತ ಇವನಿಗೆ ಪುಟ್ಟಿಯ ಮಾರ್ಕ್ಸ್ ಕಾರ್ಡ್ ಮೇಲೆ ಸಹಿ ಹಾಕುವ ಅಧಿಕಾರ ಕೊಡಲೇ...ನನ್ನ ಮನಸ್ಸಿನಲ್ಲಿ ಜಾಗ ಕೊಡಲೇ ಸಾಧ್ಯವೇ ಇಲ್ಲ....ಕೊಡಲು ಜಾಗವೆಲ್ಲಿದೆ?ಮನಸ್ಸು ಚೂರು ಚೂರಾಗಿದೆಯಲ್ಲವೇ? ...

ಆತ ಮಾತಾಡಲಿಲ್ಲ.. ಆಕೆಯೂ..ಪುಟ್ಟಿ ರೆಡಿಯಾದಳು.ದಿನವೂ ಅವನ ಜೊತೆಗೇ ಶಾಲೆಗೆ ಹೋಗುವುದು.ಬರುವುದೂ ಅವನ ಜೊತೆಗೇ...ಸಮಾಜದ ಬಗ್ಗೆ ಆಕೆಗೆ ಚಿಂತೆಯಿಲ್ಲ .. ಪುಟ್ಟಿಯದೊಂದೇ ಚಿಂತೆ....ಆಕೆಯ ಮನಸ್ಸು ಎರಡಾಗಿ ಹೊಡೆದಾಡುತ್ತಿದ್ದವು...ಎರಡಕ್ಕೂ ಅಪಾಯವಾಗದಂತೆ ಮನಸ್ಸಿಗೆ ಬೆಸುಗೆ ಹಾಕುವ ಕಾರ್ಯವೂ ನಡೆದಿತ್ತು....

ಆತ ಮಾತಾಡಿದ್ದ ..."ಆದರೆ ಪುಟ್ಟಿಗೆ ಅಪ್ಪ ಬೇಡವೇ?" ಬೇಕು.. ಮಾರ್ಕ್ಸ್ ಕಾರ್ಡ್ ನಲ್ಲಿ ಸಹಿ ಹಾಕಲು...ಕಲರ್ ಬಾಕ್ಸ್ ತಂದುಕೊಡಲು...ಶಾಲೆಗೆ ಕರೆದೊಯ್ಯಲು....ನನಗೆ ಬೇಡ ..ಆದರೆ ಪುಟ್ಟಿಗೆ ಅಪ್ಪ ಬೇಕು..ಪುಟ್ಟಿಗೂ ಅಪ್ಪ ಬೇಕು.. ಅವರಿಬ್ಬರೂ ಹೋಗಿಯಾಗಿತ್ತು..ದೊಡ್ಡ ಮುಳ್ಳು ಹನ್ನೆರಡರ ಮೇಲೂ ಸಣ್ಣದು ಎಂಟರ ಮೇಲೂ ಏರಿ ಕೂರಲು ಪೈಪೋಟಿ ನಡೆಸಿದ್ದವು...ಆಕೆ ಕೆಲಸಕ್ಕೆ ಹೋಗಲು ಅಣಿಯಾದಳು..ಪುಟ್ಟಿಯ ಪೇಂಟಿಂಗ್ ಎತ್ತಿಟ್ಟು ಆಫೀಸಿಗೆ ಹೊರಟಳು.

ಆಕೆ ಮಾತಾಡಿದಳು "ಪುಟ್ಟಿಗೆ ಅಪ್ಪ ಬೇಕು..".

ಆತನೂ ಮಾತಾಡಿದ....."ನಿನಗೆ ....?"

" "

" " ...ಮೌನ ಮಾತಾಡಿತು.

ಪುಟ್ಟಿಗೆ ಹೆಚ್ಚೇನೂ ವ್ಯತ್ಯಾಸವಾಗಿಲ್ಲ.ಅವಳಿಗೆ ಮುಖದಲ್ಲಿ ಗೊಂದಲಗಳಿಲ್ಲದ ಹೊಸ ಅಮ್ಮ ಸಿಕ್ಕಿದ್ದಾಳೆ.ಹೊಸ ಅಪ್ಪ ಸಿಕ್ಕಿದ್ದಾನೆ. ಮೊದಲಿನಂತೇ ಶಾಲೆಗೆ ಕರೆದೊಯ್ಯುತ್ತಾನೆ.ಬರುವಾಗಲೂ ಜೊತೆಗಿರುತ್ತಾನೆ..ಹೊಸ ಕಲರ್ ಬಾಕ್ಸ್ ತಂದಿದ್ದಾನೆ..ಈಗ ಪುಟ್ಟಿಯೂ ಪೇಂಟಿಂಗ್ಗೆ ಆಕಾರ ನೀಡುವುದನ್ನು ಅವನಿಂದ ಕಲಿಯುತ್ತಿದ್ದಾಳೆ...ಸೋರುತ್ತಿದ್ದ ಮನೆಯ ಮಾಡು ರಿಪೇರಿಯಾಗಿದೆ..ಅವನೇ ಏಣಿ ಹತ್ತಿ ಮಾಡಿದ್ದಾನೆ...

ಇರುವೆಗಳ ಸಾಲು ಅಷ್ಟೇ ಉದ್ದ ......ಅವು ಎಲ್ಲಿಂದ ಬರುತ್ತಿವೆ? ಎಲ್ಲಿಗೆ ಹೋಗುತ್ತಿವೆ ? ಎಂಬುದು ಇನ್ನೂ ಪುಟ್ಟಿಗೆ ಬಿಡಿಸಲಾರದ ಪ್ರಶ್ನೆ ಮತ್ತು ಉತ್ತರ ಹುಡುಕುವ ಅವಶ್ಯಕತೆ ಅವಳಿಗೀಗಿಲ್ಲ.