ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ

ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ

ಬರಹ

vh

(ಮಂಗಳೂರು ಆಕಾಶವಾಣಿ 16/11/2008ರಂದು ಪ್ರಸಾರ ಮಾಡಿದ ಡಾ. ವೀರೇಂದ್ರ  ಹೆಗ್ಗಡೆಯವರ ಸಂದರ್ಶನದ ಮೊದಲಭಾಗದಲ್ಲಿ ಕೇಳಿಸಿಕೊಂಡ ಅಂಶಗಳು)

ವೀರೇಂದ್ರ ಹೆಗ್ಗಡೆಯವರು ಧರ್ಮಸ್ಥಳದ ಧರ್ಮಾಧಿಕಾರಿ. ಅವರು ಸದ್ದಿಲ್ಲದೆ ಮಾಡುತ್ತಿರುವ ಜನಸೇವೆ ಜನಾರ್ದನನ ಸೇವೆಗೆ ಅರ್ಥ ಮೂಡಿಸಿದೆ.

ತಮ್ಮ ಬಾಲ್ಯದಲ್ಲಿ ಬಂಟ್ವಾಳದ ಬಂಡಸಾಲೆಯಲ್ಲಿ ಅವರು ಬೆಳೆದಿದ್ದರು. ಪ್ರಾಥಮಿಕ ಶಾಲೆಯೂ ಬಂಟ್ವಾಳದಲ್ಲೇ. ಅಲ್ಲಿ ಹೆಗ್ಗಡೆಯವರ ಮಗನೆಂದು ಶಾಲೆಯಲ್ಲಿ ಸಿಗುತ್ತಿದ್ದ ವಿಶೇಷ ಆದರವನ್ನು ನೋಡಿ ಅವರನ್ನು ಬೆಂಗಳೂರಿನ ಸೈಂಟ್ ಜಾಸೆಫ್ ಶಾಲೆಗೆ ಸೇರಿಸುವ ನಿರ್ಧಾರವನ್ನು ಅವರ ತಂದೆಯವರು ಮಾಡಿದರಂತೆ.

ಬಂಟ್ವಾಳದ ಅವರ ಮನೆಯ ಪಕ್ಕವೇ ಸಿನೆಮಾ  ಟಾಕೀಸು ಇತ್ತಂತೆ. ಅವರ ತಂದೆಯವರ ಜತೆ ಒಂದೆರಡು ಸಿನೆಮಾ ನೋಡಿಯೂ ಇದ್ದರಂತೆ. ಅವು ಅಳುಮುಂಜಿ ಸಿನಿಮಾಗಳಾಗಿದ್ದುವು. ಹೀಗಾಗಿ ಚಲನಚಿತ್ರಗಳೆಂದರೆ ಅಳು ಎನ್ನುವ ಭಾವನೆ ಅವರಲ್ಲಿ ಮೂಡಿ,ಅವರಿಗೆ ಚಿತ್ರಗಳನ್ನು ನೋಡುವ ಉತ್ಸಾಹವೇ ತಗ್ಗಿತು.

ಬಾಲ್ಯದಲ್ಲಿ ಕೇಳಿದ ಒಂದು ಕತೆ: ರಜಾದಲ್ಲಿ ಹುಡುಗನೊಬ್ಬ ಅಜ್ಜಿ ಮನೆಗೆ ಹೊರಟಿದ್ದನಂತೆ. ಕಾಡು ದಾರಿ. ಹುಲಿ,ಸಿಂಹ,ತೋಳ ಅವನಿಗೆ ಸಿಗುತ್ತೆ.ತಿನ್ನೋಕೆ ಬಂದ ಪ್ರಾಣಿಗಳಲ್ಲಿ, ಹುಡುಗ ತಾನು ಅಜ್ಜಿ ಮನೆಗೆ ಹೊರಟಿರುವುದನ್ನು ಹೇಳಿ,ವಾಪಸ್ಸು ಬರುವಾಗ ತನ್ನನ್ನು ತಿನ್ನಿ ಎಂದು ವಿನಂತಿಸುತ್ತಾನೆ. ಅಜ್ಜಿ ಮನೆಯಿಂದ ಹೊರಡುವ ದಿನ ಅಜ್ಜಿಯೊಂದಿಗೆ ತನಗೆ ಅಪಾಯ ಕಾದಿದೆ ಎಂದಾಗ, ಅಜ್ಜಿ ಆತನನ್ನು ಕುಂಬಳಕಾಯಿಯ ಒಳಗೆ ಕುಳ್ಳಿರಿಸಿ,ಉರುಳಿಸಿ ಕಳುಹಿಸುತ್ತಾಳೆ. ಪ್ರಾಣಿಗಳು ಉರುಳುತ್ತಾ ಬಂದ ಕುಂಬಳಕಾಯಿಯನ್ನು ನೋಡಿ ಅಚ್ಚರಿಯಿಂದ "ನೀನ್ಯಾರು?" ಎಂದಾಗ, ಹುಡುಗ ಅಜ್ಜಿ ಹೇಳಿಕೊಟ್ಟಂತೆ "ಗುಡು ಗುಡು ಗುಮ್ಮಟ ದೇವ ಬಂದ ...ದಾರಿ ಬಿಡಿ..ದಾರಿ ಬಿಡಿ" ಎಂದು ಹೇಳುತ್ತಾನೆ. ಅವುಗಳು ಹೆದರಿ, ಅದನ್ನು ಮುಂದೆ ಹೋಗಲು ಬಿಡುತ್ತವೆ.

ಚಿತ್ರ ತೆಗೆಯುವುದು ಅವರ ಹವ್ಯಾಸ. ಮನೆಯವರೊಂದಿಗೆ ವರ್ಷಕ್ಕೊಮ್ಮೆಯಾದರೂ ದೂರ ಪ್ರವಾಸ ಹೋಗುವುದನ್ನು ರೂಡಿಸಿಕೊಂಡಿದ್ದಾರೆ. ಆಗ ಛಾಯಾಚಿತ್ರಣಕ್ಕೆ ಸದವಕಾಶ. ಪ್ರವಾಸ ಕಾಲದಲ್ಲಿ ಏನಾದರು ಹೊಸ ಯೋಚನೆಗಳು ಬಂದರೆ ಒಡನೆಯೆ ಅದನ್ನು ತಮ್ಮ ಸಂಸ್ಥೆಯ ಮುಖ್ಯಸ್ಥರಿಗೆ ತಿಳಿಸಿ, ಕೆಲಸ ಆರಂಭಿಸಲು ಹೇಳುವ ಕ್ರಮವನ್ನು ಇಟ್ಟುಕೊಂಡಿದ್ದಾರೆ. ಅವರ ಸಹಚರರು ಅವರ ದೂರವಾಣಿ ಕರೆ ಬಂತೆಂದರೆ ಇಂತಹ "ಕೂಡಲೇ ಮಾಡು" ಆದೇಶ ಎಂದು ಊಹಿಸಿ, ಧರ್ಮಾಧಿಕಾರಿಯವರ ಬುಲೆಟ್ ಬಂತು ಎಂದು ನಗೆಯಾಡುವುದಿದೆಯಂತೆ.

ದೇವರಾಜ ಅರಸುರವರು ಒಂದು ಸಲ ಕರೆ ಮಾಡಿ ಧರ್ಮಾಧಿಕಾರಿಗಳಿಗೆ ಮಂಗಳೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್  ನೀಡುವುದಾಗಿ ಹೇಳಿದರಂತೆ. ಅದನ್ನು ನಯವಾಗಿ ತಿರಸ್ಕರಿಸಲು ವೀರೇಂದ್ರ ಹೆಗ್ಗಡೆಯವರು ಬೆಂಗಳೂರಿಗೇ ಹೋಗಿ ಅರಸು ಅವರನ್ನು ಭೇಟಿಯಾಗಿ, ಅವರಿಗೆ ಮನವರಿಕೆ ಮಾಡಿಕೊಟ್ಟರಂತೆ!

ಈ ಕೊಂಡಿಯನ್ನೂ ನೋಡಿ:

ವೀರೇಂದ್ರ ಹೆಗ್ಗಡೆ