ಸಿಸ್ಕೊ ಕಂಪನಿಯಲ್ಲಿ ರಾಜ್ಯೋತ್ಸವ

ಸಿಸ್ಕೊ ಕಂಪನಿಯಲ್ಲಿ ರಾಜ್ಯೋತ್ಸವ

ಸಂಭ್ರಮ,,, ಈ ಹೆಸರಲ್ಲಿಯೇ ಸಂತಸದ ಹೊಳೆ, ಹಬ್ಬದ ಕಳೆ ಇದೆ. ಸಿಸ್ಕೊ ಕಂಪನಿಯ ಕನ್ನಡ ಬಳಗ "ಸಂಭ್ರಮ" ಕಳೆದ ಶುಕ್ರವಾರ, ೧೪/೧೧/೨೦೦೮, ರಂದು ಅದ್ದೂರಿಯಾಗಿ ಕನ್ನಡದ ಹಬ್ಬವಾದ ರಾಜ್ಯೋತ್ಸವವನ್ನು ಆಚರಿಸಿತು. ಕಾರ್ಯಕ್ರಮಕ್ಕೆ ಬೆಂಗಳೂರಿನ ಸಿಸ್ಕೊ ಕಂಪನಿಯ ಎಲ್ಲ ಕಚೇರಿಗಳು ಮದುಮಗಳಂತೆ ಅಲಂಕೃತಗೊಂಡಿದ್ದವು.

ಈ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಬಂದಿದ್ದವರು ಹಿರಿಯ ಸಾಹಿತಿಗಳಾದ ಶ್ರೀ ಸಾ. ಶಿ.ಮರುಳಯ್ಯನವರು. ಎಷ್ಟು ಹಿರಿಯ ಸಾಹಿತಿಯೋ ಅಷ್ಟೇ ಸಹೃದಯಿ, ಬಿಚ್ಚು ಮನಸ್ಸಿನ ನುಡಿಯವರು. ಸಿಸ್ಕೊ ಕನ್ನಡಿಗರೊಂದಿಗೆ ಸಾಮಾನ್ಯರಲ್ಲಿ ಸಾಮಾನ್ಯರಂತೆ ಬೆರೆತು ಹಬ್ಬಕ್ಕೆ ಇನ್ನಷ್ಟು ಮೆರುಗು ತಂದರು. ಸಮಾರಂಭದ ಮತ್ತೊಂದು ಆಕರ್ಷಣೆಯಂದರೆ, ಸಿಸ್ಕೋ ಸಂಸ್ಥೆಯ ಆಡಳಿತಾಧಿಕಾರಿ (ಭಾರತ), ಅರವಿಂದ್ ಸೀತಾರಾಮನ್ ರವರು ಆಗಮಿಸಿದ್ದು. ಅರವಿಂದ್ ಸೀತಾರಾಮನ್ ರವರು ಸಭೆಯನ್ನುದ್ದೇಶಿಸಿ ಮಾತನಾಡಿ, ಕರ್ನಾಟಕದ ಇತಿಹಾಸ, ಕಲೆ, ಸಂಸ್ಕೃತಿ, ಭವ್ಯ ಪರಂಪರೆಯ ಬಗ್ಗೆ ತಮಗಿರುವ ಅಪಾರ ಗೌರವವನ್ನು ತಮ್ಮ ಮಾತಿನಲ್ಲಿ ವ್ಯಕ್ತಪಡಿಸಿದರು.ಅಷ್ಟೇ ಅಲ್ಲದೇ, ಕರ್ನಾಟಕವನ್ನು ಆಳಿದ ಬೇರೆ ಬೇರೆ ಸಾಮ್ರಾಜ್ಯಗಳ ಬಗ್ಗೆ ನೆರೆದಿದ್ದ ಸಭಿಕರಿಗೆ ಪ್ರಶ್ನೆಗಳನ್ನು ಕೇಳಿ ಕರ್ನಾಟಕಕ್ಕಿರುವ ಭವ್ಯ ಇತಿಹಾಸವನ್ನು, ಅದನ್ನು ನಾವೆಲ್ಲರೂ ತಿಳಿಯಬೇಕಾದ ಅಗತ್ಯವನ್ನು ನೆರೆದಿದ್ದ ಎಲ್ಲರ ಮನದಲ್ಲಿ ತುಂಬುವಲ್ಲಿ ಯಶಸ್ವಿಯಾದರು. ಸಿಸ್ಕೊ ಕಂಪನಿಯಲ್ಲಿ , ಈ ಕನ್ನಡ ಹಬ್ಬ ಪ್ರತಿ ವರ್ಷ ತಪ್ಪದೇ ನಡೆಯಬೇಕು, ಅದಕ್ಕೆ ಬೇಕಾಗುವ ಎಲ್ಲ ಆರ್ಥಿಕ ನೆರವನ್ನು ತಾವು ನೀಡುವುದಾಗಿ ಘೋಷಿಸಿದ ಅವರ ಮಾತಿಗೆ ನೆರೆದ ಜನ ಸಿಳ್ಳೆ ಚಪ್ಪಾಳೆಯ ಮೂಲಕ ತಮ್ಮ ಹರ್ಷ ವ್ಯಕ್ತಪಡಿಸಿದರು.

ರತ್ನನ ಪದಗಳ ಮೂಲಕ ಕನ್ನಡಿಗರ ಮನದಲ್ಲಿ ಅಚ್ಚಳಿಯದೇ ನೆಲೆಸಿರುವ, ನಾಯಿ ಮರಿ ನಾಯಿ ತಿಂಡಿ ಬೇಕೇ? ಮುಂತಾದ ಹಲವಾರು ಸರಳ ಪದಗಳ ಮೂಲಕ ಚಿಣ್ಣರ ಸಾಹಿತ್ಯಕ್ಕೆ ಹೊಸ ಆಯಾಮವನ್ನೇ ಕೊಟ್ಟ ಕನ್ನಡದ ಖ್ಯಾತ ಸಾಹಿತಿ ಜಿ. ಪಿ. ರಾಜರತ್ನಂರವರ ಜನ್ಮ ಶತಮಾನೋತ್ಸವದ ಪ್ರಯುಕ್ತ ಸಮಾರಂಭದ ವೇದಿಕೆಯನ್ನು ಜಿ. ಪಿ. ರಾಜರತ್ನಂ ವೇದಿಕೆ ಎಂದು ನಾಮಕರಣ ಮಾಡಿ ಕಾರ್ಯಕ್ರಮವನ್ನು ಅವರಿಗೆ ಅರ್ಪಿಸಲಾಯಿತು. ಸಿಸ್ಕೊ ಕನ್ನಡಿಗರು ಪ್ರಸ್ತುತ ಪಡಿಸಿದ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ಜನ ಮನ ಸೂರೆಗೊಂಡವು. ಸಂಭ್ರಮ ತಂಡ ನಡೆಸಿದ ರತ್ನನ ಪದಗಳನ್ನೇ ಆದರಿಸಿದ ಕಿರು ನಾಟಕ ವಿಶೇಷ ಮನ್ನೆಣೆಗೆ ಪಾತ್ರವಾಯಿತು. ಕನ್ನಡ ಸಾಹಿತ್ಯವನ್ನು ಪೋಷಿಸುವ ಧ್ಯೇಯದೊಂದಿಗೆ, ರಸ ಪ್ರಶ್ನೆ ವಿಜೇತರಿಗೆ ಕನ್ನಡ ಸಾಹಿತ್ಯ ಪರಿಷತ್ತಿನವರು ಪ್ರಕಟಿಸಿರುವ ಎರಡು ಪುಸ್ತಕ ಮಾಲಿಕೆಗಳನ್ನು ಕಾಣಿಕೆಯಾಗಿ ನೀಡಿದರು.

ಈ ನೆಲದ ಋಣ ಐ.ಟಿ ಕನ್ನಡಿಗನ ಮೇಲಿದೆ, ಕನ್ನಡ ಸಾಹಿತ್ಯ, ಸಂಗೀತ, ಸಿನೆಮಾ, ಮಾಧ್ಯಮವನ್ನು ಆತ ಬಳಸಬೇಕು, ಬೆಳೆಸಬೇಕು, ಎಲ್ಲೇ ಹೋದರೂ ಕನ್ನಡದಲ್ಲಿ ವ್ಯವಹರಿಸಲು ಹಿಂಜರಿಯಬಾರದು, ಇಷ್ಟಾದರೇ ಕರ್ನಾಟಕದ ಹೃದಯವಾದ ಬೆಂಗಳೂರಿನಲ್ಲಿ ಕನ್ನಡವನ್ನು ಅಳಿಸಲು ಯಾರಿಂದಲೂ ಆಗದು ಎನ್ನುವ ಸಂಭ್ರಮ ತಂಡದ ಹರೀಶಾ ಅವರ ಮಾತು ಸಭಿಕರನ್ನು ಚಿಂತನೆಗೆ ಹಚ್ಚಿತು. ಕಾರ್ಯಕ್ರಮದ ಕೊನೆಯಲ್ಲಿ ಎಲ್ಲರಿಗೂ ಕರ್ನಾಟಕದ ಬೇರೆ ಬೇರೆ ಭಾಗದ ವಿಶೇಷವನ್ನೊಳಗೊಂಡ ಭರ್ಜರಿ ಊಟ ಬಡಿಸಲಾಯಿತು. ತಮ್ಮ ಇಳಿ ವಯಸ್ಸಲ್ಲೂ, ಸಮಾರಂಭದ ಕೊನೆಯವರೆಗೂ ಹಾಜರಿದ್ದು, ಎಲ್ಲರೊಡನೆ ಬೆರೆತ ಸಾ.ಶಿಯವರು ನೆರೆದಿದ್ದ ಸಭಿಕರ ಗೌರವಕ್ಕೆ ಪಾತ್ರರಾದರು.

Rating
No votes yet

Comments