ಅಮೆರಿಕಾದ ಕ್ರಾಂತಿ! ಭಾರತದ ಭ್ರಾಂತಿ!

ಅಮೆರಿಕಾದ ಕ್ರಾಂತಿ! ಭಾರತದ ಭ್ರಾಂತಿ!

ಬರಹ

ಅಮೆರಿಕಾದಲ್ಲಿ ಸ್ವಾತಂತ್ರ್ಯ ಯುದ್ಧದ ಹೆಸರಿನಲ್ಲಿ 1863ರಲ್ಲಿ ನಡೆದದದ್ದು ನಿಜವಾದ ಕ್ರಾಂತಿಯಲ್ಲ. ಒಬಾಮಾ ಆ ರಾಷ್ಟ್ರದ ಅಧ್ಯಕ್ಷನಾಗಿ ಆಯ್ಕೆಯಾಗಿರುವುದೇ ಆ ದೇಶದಲ್ಲಿ ಸಂಭವಿಸಿರುವ ನಿಜವಾದ ಕ್ರಾಂತಿ ಎಂದು ಜಾಗತಿಕ ರಾಜಕೀಯ ವಿಶ್ಲೇಷಕರು ಹೇಳತೊಡಗಿದ್ದಾರೆ. ಇದನ್ನು ಇನ್ನಷ್ಟು ತಿದ್ದಿ ಹೇಳುವುದಾದರೆ, ಅಮೆರಿಕಾದ ನಿಜವಾದ ಕ್ರಾಂತಿ ಈಗ ಆರಂಭವಾಗಿದೆ! ಅದರ ಯಶಸ್ಸು ಒಬಾಮಾರ ಆಡಳಿತದ ಯಶಸ್ಸನ್ನು ಅವಲಂಬಿಸಿರುತ್ತದೆ. ಬರಾಕ್ ಹುಸೇನ್ ಒಬಾಮಾ ಅಮೆರಿಕಾದ ಜನರ ವ್ಯಕ್ತಿತ್ವದಲ್ಲೇ ಅಂತರ್ಗತವಾಗಿರುವ ಸಾಹಸಶೀಲತೆ, ಸ್ವಾತಂತ್ರ್ಯಪ್ರಿಯತೆ ಮತ್ತು ಆಧುನಿಕತೆಗಳ ಪ್ರತೀಕ. ಅಮೆರಿಕಾ ಮೂಲದ ಕ್ರಿಶ್ಚಿಯನ್ ಅಮ್ಮ ಮತ್ತು ಕೀನ್ಯಾ ಮೂಲದ ಮುಸ್ಲಿಂ ಅಪ್ಪನ ಮಗನಾಗಿ ಹುಟ್ಟಿದ ಬರಾಕ್, ತನ್ನ ತಾಯಿಯ ಎರಡನೇ ಗಂಡನ ದೇಶವಾದ ಇಂಡೋನೇಷ್ಯಾದಲ್ಲಿ ತನ್ನ ಬಾಲ್ಯವನ್ನು ಕಳೆದವರಾಗಿ ಆ ದೇಶದೊಂದಿಗೂ ಸಂಬಂಧ ಹೊಂದಿದವರು. ಹೀಗೆ ಅಮೆರಿಕಾ, ಆಫ್ರಿಕಾ ಮತ್ತು ಏಷ್ಯಾದ ಸಂಸ್ಕೃತಿಗಳಲ್ಲಿ ತಮ್ಮ ವ್ಯಕ್ತಿತ್ವ ರೂಪಿಸಿಕೊಂಡಿರುವ ಒಬಮಾ, ನಿಜವಾದ ಅರ್ಥದಲ್ಲಿ ಜಾಗತಿಕ ಪ್ರಜೆ. ಹೀಗಾಗಿ ಈವರೆಗೆ ಜಾಗತಿಕ ಯಜಮಾನಿಕೆಯ ರಾಷ್ಟ್ರವೆನಿಸಿದ್ದ ಅಮೆರಿಕಾಕ್ಕೆ ಈಗ ನಿಜವಾದ ಜಾಗತಿಕ ಪ್ರಜೆಯೊಬ್ಬನ ಯಜಮಾನಿಕೆಯೂ ಸಿಕ್ಕಿದೆ. ಆದರೆ ವಿಪರ್ಯಾಸವೆಂದರೆ, ಜಾಗತಿಕ ಪ್ರಜೆಯೊಬ್ಬನ ಅಧ್ಯಕ್ಷತೆಯನ್ನು ಈ ದೇಶ ಹೊಂದುವ ಹೊತ್ತಿಗೆ, ಅದರ ಜಾಗತಿಕ ಯಜಮಾನಿಕೆ ಎನ್ನುವುದೇ ಕಳಚಿ ಬಿದ್ದಿದೆ! ಅಥವಾ ಅಂತಹ ಸಂದರ್ಭವೇ ಒಬಾಮಾರಂತಹವರು ಅಧ್ಯಕ್ಷರಾಗಿ ಆಯ್ಕೆಯಾಗುವುದನ್ನು ಅನುವು ಮಾಡಿಕೊಟ್ಟಿದೆಯೇ?

ಮೊದಲು ಅನಾಗರಿಕ ಗುಲಾಮಗಿರಿ, ಅದು ನಿಷೇಧಿತವಾದ ನಂತರವೂ ಮುಂದುವರೆದಿದ್ದ ಅಸಭ್ಯ ಜನಾಂಗವಾದಗಳ ವಿರುದ್ಧ ಎರಡು ಶತಮಾನಗಳಿಂದಲೂ ಹೋರಾಡುತ್ತಲೇ ಬಂದ ಅಮೆರಿಕದ ಕಪ್ಪು ಜನ ಫ್ರೆಡ್ರಿಕ್ ಡೌಗ್ಲಾಸ್, ರೋಸಾ ಪಾರ್ಕರ್ ಮತ್ತು ಮಾರ್ಟಿನ್ ಲೂಥರ್ ಕಿಂಗ್(ಜೂ) ನಂತರ ಇದ್ದಕ್ಕಿದ್ದಂತೆ ಬರಾಕ್ ಒಬಾಮಾರಲ್ಲಿ ತಮ್ಮ ಹೊಸ ನಾಯಕನನ್ನು ಕಂಡುಕೊಂಡಿದ್ದಾರೆ. ಹಾಗಾಗಿ ಅವರು ಇವರೆಲ್ಲರಿಗಿಂತ ಭಿನ್ನರೂ ಆಗಿದ್ದಾರೆ. ಈ ಹಿಂದಿನವರೆಲ್ಲರ ಹೋರಾಟದ ಮಾಗಿದ ಫಲವೆನ್ನಿಸಿರುವ ಒಬಾಮಾ ಬರೀ ಕಪ್ಪುಜನರ ನಾಯಕನಲ್ಲ. ಅಮೆರಿಕಾ ಬದಲಾಗುವ ಕಾಲ ಬಂದಿದೆ ಎಂಬ ತೀವ್ರ ಅನ್ನಿಸಿಕೆಗೆ ಒಳಗಾಗಿರುವ ಎಲ್ಲ ಜನಾಂಗಳ, ಧರ್ಮಗಳ, ಬಣ್ಣಗಳ ಅಮೆರಿಕನ್ ಪ್ರಜೆಗಳ ನಾಯಕರಾಗಿದ್ದಾರೆ. ಹಾಗಾಗಿಯೇ ಅವರು ಈ ರಾಷ್ಟ್ರದ ಅಧ್ಯಕ್ಷೀಯ ಚುನಾವಣೆಗಳಲ್ಲಿ ಇತ್ತೀಚೆಗೆ ಕಾಣದಿದ್ದಂತಹ ಭಾರಿ ಜಯವನ್ನು ಗಳಿಸಲು ಸಾಧ್ಯವಾಗಿದೆ. ಹೆಚ್ಚು ಕಡಿಮೆ ರಾಷ್ಟ್ರದ ಎಲ್ಲ ಭಾಗಗಳಿಂದ ಇವರಿಗೆ ಬೆಂಬಲ ದೊರಕಿದೆ. ಅಮೆರಿಕಾ ನಿರ್ಣಾಯಕವೆನ್ನಿಸುವಂತೆ ಈ ಚುನಾವಣೆಯಲ್ಲಿ ತನ್ನೆಲ್ಲ ಆಧುನಿಕತೆ ಮತ್ತು ಪ್ರಗತಿಪರತೆಯ ಹಿಂದೆ, ಕಂಡೂ ಕಾಣದಂತೆ ಅಡಗಿಸಿಟ್ಟುಕೊಂಡಂತಿದ್ದ ವರ್ಣಭೇದವೆಂಬ ಅನಿಷ್ಟವನ್ನು ಬಹಿರಂಗವಾಗಿಯಾದರೂ ದೂರೀಕರಿಸಿದೆ. ಒಬಾಮಾರನ್ನು ಚುನಾವಣೆಯ ಮುನ್ನವೇ ಕೊಲ್ಲಲು ಕೆಲವು ಬಿಳಿಯ ಜನಾಂಗವಾದಿಗಳು ಯತ್ನಿಸಿದ್ದರು ಎಂಬುದನ್ನು ನಾವು ಮರೆಯಬಾರದು.

ಒಬಾಮಾರ ಆಯ್ಕೆ ಅಮೆರಿಕಾ ತಾನು ಈವೆರೆಗೆ ಎತ್ತಿ ಹಿಡಿಯುತ್ತಾ ಬಂದಿರುವ ವ್ಯಕ್ತಿತ್ವ ಬೆಳವಣಿಗೆಯ ಮುಕ್ತ ವಾತಾವರಣ, ತನ್ನಲ್ಲಿ ಅಡಗಿಸಿಕೊಂಡಿದ್ದ ಎಲ್ಲ ಪಾರಂಪರಿಕ ಅಡೆ ತಡೆಗಳು ನಾಶವಾಗುವ ಕಾಲ ಬಂದಿದೆ ಎಂಬ ಸಂದೇಶದ ಪ್ರತೀಕವೂ ಆಗಿದೆ ಎಂದು ಹೇಳಬೇಕು. ಏಕೆಂದರೆ ಒಬಾಮಾ, ಶ್ರೀಮಂತ ಅಥವಾ ಪ್ರತಿಷ್ಠಿತ ಕೌಟುಂಬಿಕ ಹಿನ್ನೆಲೆಯಿಂದ ಬಂದವರಲ್ಲ. ಯಾವುದೇ ಕ್ಷೇತ್ರದಲ್ಲೂ - ತಾವು ಶಿಕ್ಷಣ ಮತ್ತು ವೃತ್ತಿಗಾಗಿ ಆಯ್ದುಕೊಂಡ ಕಾನೂನು ಶಾಸ್ತ್ರದಲ್ಲೂ - ಪರಿಣತರೆನಿಸಿಕೊಂಡವರಲ್ಲ. ಮೊದಲ ಬಾರಿಗಷ್ಟೇ ರಾಷ್ಟ್ರದ ಸೆನೆಟ್ಗೆ ಆಯ್ಕೆಯಾದವರು! ಆದರೆ ತಮ್ಮ ಇಂತಹ ಸಾಮಾನ್ಯತೆಯಲ್ಲಿ ಹುಟ್ಟಿದ ಸಾಮಾನ್ಯ ಪರಿಜ್ಞಾನದಿಂದಲೇ, ಇಂದಿನ ಜಾಗತಿಕ ಸಂದರ್ಭದಲ್ಲಿ ಅಮೆರಿಕಾಕ್ಕೆ ಏನಾಗುತ್ತಿದೆ ಎಂಬುದನ್ನು ಸರಿಯಾಗಿ ಗ್ರಹಿಸಿ, ಅದನ್ನು ಸರಿಯಾದ ಭಾಷೆಯಲ್ಲಿ ಮತ್ತು ಸರಿಯಾದ ಭಾವನೆಯಲ್ಲಿ ಜನರಿಗೆ ಮನವರಿಕೆ ಮಾಡಿಕೊಡುವ ಮೂಲಕ ನಾಯಕರೆನಿಸಿಕೊಂಡವರೀತ. ಅಮೆರಿಕಾದ ಮತದಾರರಲ್ಲಿ ಶೇ.66 ಜನ ಅತಿ ತೂಕದವರಂತೆ. ಶೇ. 32 ಜನ ಬೊಜ್ಜಿಗರಂತೆ. ಇದು ಅಮೆರಿಕಾದ ಇಂದಿನ ಸಾಮಾಜಿಕ - ಆರ್ಥಿಕ ಸಂದರ್ಭದ ಪ್ರತೀಕವೂ ಹೌದು! ಅದೊಂದು ಬೊಜ್ಜು ಹೆಚ್ಚಾಗಿ ಏದುಸಿರು ಬಿಡುತ್ತಿರುವ ದೇಶ. ಈ ದೇಶ ಹೀಗೇಕಾಯಿತು ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಮತ್ತು ಅದಕ್ಕೆ ಪರಿಹಾರವಾದರೂ ಏನು ಎಂಬುದನ್ನು ಸೂಚಿಸುವಂತಿರುವ ಮಿಶ್ರ ಜನಾಂಗದ, ಸಾಮಾನ್ಯ ಕೌಟುಂಬಿಕ ಹಿನ್ನೆಲೆಯ, ಸರಿಯಾದ ಎತ್ತರ ಮತ್ತು ಅದಕ್ಕೆ ಸರಿಯಾದ ತೂಕದ ಸದ್ಗೃಹಸ್ಥರೊಬ್ಬರನ್ನು ಅಮೆರಿಕಾದ ಜನತೆ ಆಯ್ಕೆ ಮಾಡಿಕೊಂಡು ತನ್ನ ವಿವೇಕವನ್ನು ಮೆರೆದಿದೆ!

ಆದರೆ ಒಬಮಾರ ಮುಂದಿರುವ ದಾರಿ ಸುಗಮವಾದ್ದೇನಲ್ಲ. ಕಳೆದ ಮೂರು ತಿಗಳಲ್ಲಿ ಶೇ.-3ರ ಅವಪ್ರಗತಿಗೆ ಸಿಕ್ಕಿರುವ ಅಮೆರಿಕಾದ ಈ ಸಂಕಷ್ಟದ ದಿನಗಳಲ್ಲಿ ಅದರ ನಾಯಕತ್ವ ವಹಿಸಬೇಕಾದ ಅಗ್ನಿ ಪರೀಕ್ಷೆಯನ್ನು ಅವರು ಎದುರಿಸಬೇಕಾಗಿದೆ. ಅಥವಾ ಅದಕ್ಕಾಗಿಯೇ ಅಮೆರಿಕಾದ ಜನ ಅವರನ್ನು ಆಯ್ಕೆ ಮಾಡಿದೆ ಎಂದರೆ ಸರಿಯಾದೀತೇನೋ! ಅಮೆರಿಕಾಕ್ಕೆ ಇದೊಂದು ಪರ್ವಕಾಲ ಎನ್ನಲಾಗುತ್ತಿದೆ. ಅದು ತನ್ನ ಭಾರದಿಂದ ತಾನೇ ಕುಸಿದು ಬಿದ್ದಿದ್ದು, ಈಗ ತನ್ನ ವಿವಿಧ ಅಂಗಾಂಗಳಲ್ಲಿ ಶೇಖರಗೊಂಡಿರುವ ಅಸಹಜ ಮತ್ತು ಅನಗತ್ಯ ಕೊಬ್ಬನ್ನು ಕರಗಿಸಿಕೊಂಡು ಮತ್ತೆ ಎದ್ದು ನಿಲ್ಲಲು ಬೇಕಾದ ವಿವೇಕವನ್ನೂ, ಜಾಣ್ಮೆಯನ್ನೂ ಮತ್ತು ಪ್ರಬುದ್ಧತೆಯನ್ನು ಪ್ರದರ್ಶಿಸಬೇಕಿದೆ. ಕಾಲ - ದೇಶಗಳು ತನ್ನ ನಾಯಕನ್ನು ತಾವೇ ಆಯ್ದುಕೊಳ್ಳುವಂತೆ, ಅಮೆರಿಕಾದ ಕಾಲ - ದೇಶಗಳು ಒಬಾಮರನ್ನು ತನ್ನ ನಾಯಕನನ್ನು ಆಯ್ದುಕೊಂಡಿದೆ. ಈವೆರಿಗಿನ ಒಬಾಮಾರ ಹೇಳಿಕೆಗಳು, ಅಭಿಪ್ರಾಯಗಳು ಈ ಆಯ್ಕೆ ಜಗತ್ತಿನ ಹಿತ ದೃಷ್ಟಿಯಿಂದಲೂ ಸಮರ್ಪಕವಾಗಿಯೇ ಇದೆ ಎನ್ನಿಸಿದೆ. ಶ್ರೀಮಂತಿಕೆಯ ಮೇಲಿನ ನಿಯಂತ್ರಣ, ಬಡವರ ಮತ್ತು ಮಧ್ಯಮ ವರ್ಗದವರ ಕ್ಷೇಮಾಭ್ಯುದಯಕ್ಕೆ ಹೆಚ್ಚಿನ ಹಣ, ಭೂಗ್ರಹವನ್ನು ಅವನತಿಯತ್ತ ಕೊಂಡೊಯ್ಯುತ್ತಿರುವ ಕೈಗಾರಿಕಾ ಮಾಲಿನ್ಯಕ್ಕೆ ತಡೆಗೆ ಬದ್ಧತೆ, ಅಮೆರಿಕಾದ ಜಾಗತಿಕ ಯಜಮಾನಿಕೆಗೆ ಕೊನೆ, ಮತೀಯ ಭಯೋತ್ಪಾದನೆಯ ನಿರ್ಮೂಲನ, ಮಾನವ ಹಕ್ಕುಗಳ ರಕ್ಷಣೆ ಇತ್ಯಾದಿ ವಿಷಯಗಳ ಬಗೆಗಿನ ಅವರ ಧೋರಣೆಗಳು ರೇಗನ್ - ಥ್ಯಾಚರ್ ಕಾಲದಿಂದ ಆರಂಭವಾದಂತೆ ಜಗತ್ತನ್ನು ಆಳತೊಡಗಿದ್ದ ಮತ್ತು ಜಗತ್ತಿನ ಇಂದಿನ ಮಹಾ ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗಿರುವ ಶೀಲಗೆಟ್ಟ ನವ - ಉದಾರವಾದಿ ಬಂಡವಾಳಶಾಹಿ ಜೀವನ ದೃಷ್ಟಿಗೆ ವಿರುದ್ಧವಾಗಿಯೇ ಇವೆ.

ಒಬಾಮಾ ತನ್ನ ಸ್ಫೂರ್ತಿಗಳಲ್ಲಿ ಒಬ್ಬರಾದ ಮಾರ್ಟಿನ್ ಲೂಥರ್ ಕಿಂಗ್ ಅವರಿಗೆ ಯಾರು ದೊಡ್ಡ ಆದರ್ಶವಾಗಿದ್ದರೋ, ಆ ಮಹಾತ್ಮ ಗಾಂಧಿ ತಮಗೂ ಆದರ್ಶವಾಗಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಈ ಚುನಾವಣೆಗಳ ಎರಡು - ಮೂರು ದಿನಗಳ ಹಿಂದಷ್ಟೇ ನಿಧನರಾದ ತಮ್ಮ ಅಜ್ಜಿ (ತಂದೆಯ ತಾಯಿ) ಯಿಂದ ತಾವು ಗಾಂಧಿ ವಿಚಾರಗಳನ್ನು ಮತ್ತು ಮಹಾಭಾರತದ ಕಥೆಗಳನ್ನು ಕೇಳಿ ಪ್ರಭಾವಿತರಾಗಿರುವುದಾಗಿಯೂ ಅವರು ಹೇಳಿದ್ದಾರೆ. ಆದರೆ ಈ ಮಹಾಭಾರತ ಮತ್ತು ಗಾಂಧಿಗಳಿಗೆ ಜನ್ಮ ನೀಡಿದ ಭಾರತದ ನವ ಶ್ರೀಮಂತ ವರ್ಗ, ಒಬಾಮಾರ ರಾಷ್ಟ್ರೀಯ ಪುನಶ್ಚೇತನ ಕಾರ್ಯಕ್ರಮಗಳಿಂದ ತಮಗೆ ತೊಂದರೆಯುಂಟಾಗುವುದೆಂಬ ಆತಂಕದಲ್ಲಿ ಅವರ ಆಯ್ಕೆಯನ್ನು ಅರ್ಧ ಮನಸ್ಸಿನಿಂದಲೇ ಸ್ವಾಗತಿಸಿದ್ದಾರೆ! ಎಲ್ಲ ಅಂಗಗಳಲ್ಲಿ ಕೊಬ್ಬು ತುಂಬಿಕೊಂಡಿದ್ದ ಅಮೆರಿಕಾ ತನ್ನ ಈ ಕೊಬ್ಬನ್ನು ಇಳಿಸಿಕೊಳ್ಳಲು ತಯಾರಾಗುತ್ತಿದ್ದಂತೆ, ಇತ್ತೀಚಿನ ವರ್ಷಗಳಲ್ಲಿ ತನ್ನ ಕೆಲವು ಅಂಗಾಂಗಗಳಲ್ಲಿ ಮಾತ್ರ ಕೊಬ್ಬು ತುಂಬಿಕೊಂಡು ವಿಕಾರವಾಗತೊಡಗಿದ್ದ ಭಾರತವೂ, ತನ್ನ ಸಾರ್ವತ್ರಿಕ ಆರೋಗ್ಯದ ದೃಷ್ಟಿಯಿಂದ ಆ ಕೊಬ್ಬನ್ನು ಇಳಿಸಿಕೊಳ್ಳಲೇ ಬೇಕಾದ ಪರಿಸ್ಥಿತಿ ಉಂಟಾಗಿದೆ. ಅದಕ್ಕಾಗಿಯಾದರೂ ಅದು ಒಬಾಮರಿಗೆ ಕೃತಜ್ಞವಾಗಿರಬೇಕಾಗಿದೆ.

ಹೀಗೆ ಅಮೆರಿಕಾದಲ್ಲಿ ನವ ಉದಾರವಾದಿ ಜೀವನ ದೃಷ್ಟಿಕೋನದ ವಿರುದ್ಧ ಹೊಸ ಜಾಗತಿಕ ಕ್ರಾಂತಿಯ ಸಿದ್ಧತೆ ಎಂಬಂತೆ 'ಬದಲಾವಣೆ'ಯ ಸಂದೇಶ ಬಿತ್ತರವಾಗುತ್ತಿದ್ದಂತೆ, ಅದೇ ದೇಶದಿಂದ ನಮ್ಮ ಎಸ್.ಎಲ್.ಭೈರಪ್ಪನವರು ತಮ್ಮ ಹಳಸಿದ ಹಿಂದೂ ನವ ಉದಾರವಾದಿ ಕ್ರಾಂತಿಯ ಕಹಳೆಯೂದಿ ನಮ್ಮ ಸಂಪ್ರದಾಯವಾದಿಗಳನ್ನೂ, ಬಂಡಾಯಗಾರರನ್ನೂ ಒಟ್ಟಿಗೇ ಬಡಿದೆಬ್ಬಿಸಿದ್ದಾರೆ! ಮತಾಂತರದ ಗಲಭೆ, ಪುಂಡ ಹಿಂದೂವಾದಿಗಳ ಸಾರ್ವತ್ರಿಕ ಖಂಡನೆ ಮತ್ತು ಮುಖಭಂಗದೊಂದಿಗೆ ಮುಕ್ತಾಯವಾಗುತ್ತಿದೆ ಎಂಬ ಆತಂಕದಲ್ಲಿ ಬರೆದಂತಿರುವ ಮತ್ತು ಪ್ರಕಟಿಸಿದಂತಿರುವ ಈ ಲೇಖನಕ್ಕೆ ನಮ್ಮ ಬಂಡಾಯಗಾರರು ಮತ್ತು ಪ್ರಗತಿಪರರು ಎನ್ನಿಸಿಕೊಂಡವರು ಮುಗಿಬಿದ್ದು ಪ್ರತಿಕ್ರಿಯಿಸುತ್ತಾ, ಭೈರಪ್ಪನವರ ಮತ್ತು ಅದನ್ನು ಪ್ರಕಟಿಸಿದ ಸಂಪಾದಕನ ಉದ್ದೇಶವನ್ನು ಅವರ ನಿರೀಕ್ಷೆಗೂ ಮೀರಿ ಈಡೇರಿಸುತ್ತಿರುವ ದೃಶ್ಯ ನಿಜವಾಗಿಯೂ ಭಯಾನಕವಾಗಿದೆ. ಅವರಲ್ಲಿ ಕೆಲವರಂತೂ ಈ ಪ್ರತಿಕ್ರಿಯೆಯ ಮೂಲಕ ಎಂತಹ ಮೂರ್ಖ ಕೃತಾರ್ಥತೆಯನ್ನು ಅನುಭವಿಸುತ್ತಿದ್ದಾರೆಂದರೆ - 'ಆವರಣ'ದಷ್ಟೇ ದುರುದ್ದೇಶಪೂರಿತ ಮತ್ತು mediocre ಆಗಿರುವ - ಈ ಲೇಖನವನ್ನು ಪ್ರಕಟಿಸುವ ಮೂಲಕ ಆರೋಗ್ಯಪೂರ್ಣ ಮತ್ತು ಮುಕ್ತ ಚರ್ಚೆಗೆ ಅನುವು ಮಾಡಿಕೊಟ್ಟಿದ್ದಾರೆಂದು ಸಂಬಂಧಪಟ್ಟ ಪತ್ರಿಕೆಯ ಸಂಪಾದಕರಿಗೆ ತಮ್ಮ ಕೃತಜ್ಞತೆಯನ್ನೂ ಸೂಚಿಸಿದ್ದಾರೆ! ಬಹುಶಃ ಇದಕ್ಕಿಂತ ನಯವಂಚನೆಯ 'ಪ್ರಗತಿಪರ' ನಾಟಕ ಇನ್ನೊಂದಿರಲಾರದು.

ಸುಳ್ಳುಗಳನ್ನು ಸೃಷ್ಟಿಸುವುದು ಮತ್ತು ಹರಡುವುದೇ ನಮ್ಮ ಎಲ್ಲ ಧರ್ಮಗಳ ಪುರೋಹಿತಶಾಹಿಯ ಕೆಲಸ. ಕೆಲವರು ಹಳೆಯ ಸುಳ್ಳುಗಳನ್ನು ಪುನರಾವರ್ತಿಸುತ್ತಾ ಹಾಸ್ಯಾಸ್ಪದರಾಗಿದ್ದರೆ, ಇನ್ನು ಕೆಲವರು ಹೊಸ ಸುಳ್ಳುಗಳನ್ನು ಹೆಣೆದು ಹೇಳುವ ಮೂಲಕ ಜಾಣರೆನಿಸಿಕೊಂಡಿದ್ದಾರೆ! ಇಂತಹ ಜಾಣ ಪುರೋಹಿತರಲ್ಲಿ ಒಬ್ಬರು ನಮ್ಮ ಪೇಜಾವರ ಸ್ವಾಮಿಗಳು. ಸದಾ ಸುದ್ದಿಯಲ್ಲಿದ್ದು ಸಮಕಾಲೀನ ನಾಯಕರೆನಿಸಿಕೊಳ್ಳುವ ತವಕದಲ್ಲಿದ್ದಂತೆ ತೋರುವ ವಿಶ್ವೇಶ್ವರ ತೀರ್ಥರು, ಜಗತ್ತು ಅಸತ್ಯವೆಂದು ಬುದ್ಧ ಹೇಳಿದ್ದಾನೆ ಎಂದು ಹೊಸ ಸಂಶೋಧನೆಯನ್ನು ಕೈಗೊಂಡು ಭಾರತೀಯ ತತ್ವಜ್ಞಾನವನ್ನು ಕುರಿತ ತಮ್ಮ ಅಜ್ಞಾನವನ್ನೂ ಮತ್ತು ತಮ್ಮ ಮಠೀಯ ಸ್ಥಾನಮಾನದಿಂದ ಮಾತ್ರ ಸೃಷ್ಟಿಸಿಕೊಂಡಂತೆ ತೋರುವ ಭಂಡ ಧೈರ್ಯವನ್ನೂ ಪ್ರದರ್ಶಿಸಿದ್ದಾರೆ. ಬಹುಶಃ ಇದು, ತಾವು (ಆಕಸ್ಮಿಕವಾಗಿಯಷ್ಟೇ) ಹುಟ್ಟಿದ ಜಾತಿ ಕಾರಣದಿಂದಲೇ ನಂಬಬೇಕಾಗಿರುವ ಮಾಧ್ವ ಮತ ಶಂಕರರ ಅದ್ವೈತವನ್ನು ಖಂಡಿಸಲು ಬಳಸುವ ತರ್ಕದಿಂದ ಉದ್ಭವವಾದದ್ದು.

ಹಾಗೆ ನೋಡಿದರೆ ಶಂಕರ ಬುದ್ಧನ ತಾತ್ವಿಕ ಅನುಯಾಯಿ ಎಂದೇ ಹೇಳಬೇಕು. ಮಾನುಷ ಅನುಭವದ ಪರಿಪೂರ್ಣತೆಯನ್ನು ಬುದ್ಧ, ಅದರ ಪರಿಣಾಮದ ಹೆಸರಿನಲ್ಲಿ 'ಮಹಾ ಮೌನ' ಅಥವಾ 'ಶೂನ್ಯತಾ' ಎಂದು ಕರೆದ. ಆದರೆ ಮುಂದೆ ಈ 'ಶೂನ್ಯ' (ಸಾಮಾನ್ಯ ಜನರ ನೆಲೆಯಲ್ಲಿ) ಅಪಾರ್ಥಕ್ಕೀಡಾಗಿ, ತಾತ್ವಿಕ ಅರಾಜಕತೆಗೆ ಮತ್ತು ಆನಂತರ ಅನೇಕ ಲೌಕಿಕ ಅನಾಚಾರಗಳಿಗೆ ಕಾರಣವಾದಾಗ, ನಂತರ ಬಂದ ಶಂಕರರು ಅದಕ್ಕೆ ರಚನಾತ್ಮಕ ಅರ್ಥ ನೀಡಿ 'ಆತ್ಮ' ಅಥವಾ 'ಭಗವಂತ' (ಎಲ್ಲ ಹುಟ್ಟಿ, ಮತ್ತೆ ಎಲ್ಲ ಮರಳುವ ಜಾಗ) ಎಂದು ಕರೆದರು. ಇದರಿಂದ ಆದ ಲೌಕಿಕ ಹಾಗೂ ಪಾರಮಾರ್ಥಿಕ ಅನಾಹುತಗಳು ಈ ಹಿಂದಿನ ಅನಾಹುತಗಳನ್ನು ಮೀರಿಸಿದಂತಹವು ಎಂಬುದು ಬೇರೆ ವಿಷಯ! ಇವನ್ನು ತಹಬಂದಿಗೆ ತರಲು ನಡೆದ ಅಪೂರ್ಣ ಮತ್ತು ವಿಫಲ ತಾತ್ವಿಕ ಪ್ರಯತ್ನಗಳೇ ವಿಶಿಷ್ಟಾದ್ವೈತ ಮತ್ತು ದ್ವೈತಗಳು. ಅಂತಿಮವಾಗಿ ಇವೆಲ್ಲ ಬುದ್ಧನ ನಂತರ ದುರ್ಬಲಗೊಂಡಿದ್ದ ಪುರೋಹಿತಶಾಹಿಯನ್ನು ಇನ್ನಷ್ಟು ಸಬಲ ಮತ್ತು ವ್ಯವಸ್ಥಿತಗೊಳಿಸಿ ಮತ್ತಷ್ಟು ಸಾಮಾಜಿಕ ಅನಾಹುತಗಳನ್ನೂ, ತಾತ್ವಿಕ ಗೋಜಲನ್ನೂ ಸೃಷ್ಟಿಸಿದವಷ್ಟೆ.

ಈ ವಿವಿಧ ತಾತ್ವಿಕ ಜಿಜ್ಞಾಸೆಗಳ ಮೂಲ ಆಚಾರ್ಯರ ಸತ್ಯಾನ್ವೇಷಣೆಯ ಪ್ರಯತ್ನಗಳ ಕಳಕಳಿ ಮತ್ತು ಪ್ರಾಮಾಣಿಕತೆಯನ್ನು ಯಾರೂ ಪ್ರಶ್ನಿಸಲಾರರು. ಆದರೆ, ಇವುಗಳನ್ನು ಆಧರಿಸಿ ಅವರ ಅನುಯಾಯಿಗಳು ನಡೆಸುತ್ತಾ ಬಂದಿರುವ ಧಾರ್ಮಿಕ ರಾಜಕಾರಣ ಇಂದಿನ ರಾಜಕಾರಣದ ಪುಢಾರಿತನಕ್ಕೆ ಯಾವ ರೀತಿಯಲ್ಲೂ ಕಡಿಮೆಯದಲ್ಲ! ಪೇಜಾವರರದು ಇಂತಹ ಅಪ್ಪಟ ಪುಢಾರಿತನ. ಅವರು ಮಾಧ್ವ ಸಾಹಿತ್ಯವನ್ನು ಜಡವಾಗಿ ಓದಿಕೊಂಡಿರುವುದರ ಹೊರತಾಗಿ, ಇನ್ನೇನ್ನಾದರೂ ಸಹಾನುಭೂತಿಯಿಂದ ಓದಿದ್ದಾರೆಯೇ ಎಂದು ಯಾರಾದರೂ ಅನುಮಾನಪಡುವಷ್ಟ್ಟು ಭಂಡ ಧೈರ್ಯ ಅವರ ಸದ್ಯದ ಮಾತುಗಳಲ್ಲಿ ಎದ್ದು ಕಾಣುತ್ತದೆ. ಬೌದ್ಧ ಧರ್ಮ ಎಲ್ಲಿ ಮತ್ತು ಹೇಗೆ ಜಗತ್ತು ಅಸತ್ಯ ಎಂದು ಹೇಳುತ್ತದೆ ಎಂಬುದನ್ನು ಪೇಜಾವರರು ಸ್ಪಷ್ಟಪಡಿಸುವವರೆಗೂ ಅವರನ್ನು ಸುಳ್ಳುಬುರಕರೆಂದೇ ಕರೆಯಬೇಕಾಗುತ್ತದೆ. ಬುದ್ಧನ ನಾಲ್ಕು ಆರ್ಯ ಸತ್ಯಗಳಲ್ಲಿ ಮೊದಲನೆಯ ಸತ್ಯವಾದ 'ಸಂಸಾರ ದುಃಖಮಯ' ಎಂಬುದರಲ್ಲೇ ಜಗತ್ತಿನ ಸತ್ಯತೆಯ ವ್ಯಾಖ್ಯಾನವಿದೆ. ಈ ದುಃಖವನ್ನು ನಿವಾರಿಸಿಕೊಳ್ಳುವ ನೆಮ್ಮದಿಯ ಮಾರ್ಗವೇ ಬೌದ್ಧ ಧರ್ಮ ಎನ್ನಿಸಿಕೊಂಡಿರುವುದು. ಹೀಗಾಗಿ ಬೌದ್ಧ ಧರ್ಮವೆನ್ನುವುದು ಅಪ್ಪಟ ಲೋಕ ಧರ್ಮ. ಇನ್ನು ಪೇಜಾವರರು ನೆಚ್ಚಿರುವ ಮಾಧ್ವ ಸಿದ್ಧಾಂತ ಹೇಳುವ ಲೋಕ ಸತ್ಯತೆ, ಹಣದ ಲೇವಾದೇವಿ ಮತ್ತು ಅದನ್ನು ಗೂಂಡಾಗಿರಿಯ ಮೂಲಕ ರಕ್ಷಿಸಿಕೊಳ್ಳುವಷ್ಟು ಅಪ್ಪಟ 'ವಾಸ್ತವವಾದಿ'ಯಾದದ್ದು ಎಂಬುದು ಬೇರೆ ವಿಷಯ!

ಪೇಜಾವರರು ದಲಿತರು ಬೌದ್ಧಮತಕ್ಕೆ ಬದಲಾಗಿ ಜಾತಿ ಪದ್ಧತಿಯಿಲ್ಲದ್ದೆಂದು ಹೇಳಲಾಗುವ ಆರ್ಯ ಸಮಾಜವನ್ನು ಸೇರಿಕೊಳ್ಳಲು ಕರೆ ನೀಡಿದ್ದಾರೆ! ಅಂದರೆ ಜಾತಿ ಪದ್ಧತಿಯಿಲ್ಲದೆ ಹಿಂದೂ ಧರ್ಮವಿರಲಾರದು ಎಂದೇ ಅವರು ಹೇಳುತ್ತಿರುವುದು! ಈಗ ಹೇಳಿ ವೀರ ಹಿಂದೂವಾದಿಗಳೇ, ಹಿಂದೂ ಧರ್ಮದ ನಿಜವಾದ ಶತ್ರುಗಳು ಕ್ರಿಶ್ಚಿಯನ್ನರೋ, ಮುಸ್ಲಿಮರೋ ಅಥವಾ (ಅಂತರ್ಜಾತಿ ವಿವಾಹಗಳಿಗೆ ಮತ್ತು ವಿಧವಾ ವಿವಾಹಗಳಿಗೆ ಶಾಸ್ತ್ರ ಸಮ್ಮತಿ ಇಲ್ಲದಿರುವುದರಿಂದ ಅವಕ್ಕೆ ತಮ್ಮ ಅನುಮೋದನೆಯೂ ಇಲ್ಲವೆಂದು ಬಹು ಹಿಂದೆಯೇ ಸ್ಪಷ್ಟಪಡಿಸಿರುವ) ಇಂತಹ ಭಂಡ ಮಠಾಧಿಪತಿಗಳೋ? ಇವರ ಜಾತಿ ಪದ್ಧತಿಯನ್ನು ಒಪ್ಪದವರು ಯಾವ ಧರ್ಮಕ್ಕೆ ಹೋದರೆ ಇವರಿಗೇನು? ಅವರ ಉಸಾಬರಿ ಇವರಿಗೇಕೆ? ಆರ್ಯ ಸಮಾಜದಲ್ಲಿ ಜಾತಿ ಪದ್ಧತಿ ಇಲ್ಲವಂತೆ! ಎಲ್ಲಿದೆ ಅಂತಹ ಆರ್ಯ ಸಮಾಜ? ಶೂದ್ರರೂ ಜನಿವಾರ ಹಾಕಿಕೊಂಡು ಮೂರನೆಯ ಅಥವಾ ನಾಲ್ಕನೇ ದರ್ಜೆಯ ಬ್ರಾಹಣರೆನಿಸಿಕೊಳ್ಳುವುದರ ಹೊರತಾಗಿ ಇನ್ನಾವ 'ಸಾರ್ಥಕತೆ'ಯೂ ಈ ಆರ್ಯ ಸಮಾಜದಿಂದ ದೊರೆಯದು! ಇದು ಹಿಂದೂ ಧರ್ಮದ ಶೂದ್ರರಿಗೆ ಮತ್ತು ಅಸ್ಪೃಶ್ಯರಿಗೆ ನಿರ್ಮಿಸಲಾಗಿರುವ special cell ಅಷ್ಟೆ!

ಪಶ್ಚಿಮ ಉತ್ತರ ಪ್ರದೇಶ ಮತ್ತು ಹರ್ಯಾಣದ ಬಹುಭಾಗ ಆರ್ಯಸಮಾಜದ ದೀಕ್ಷೆ ಪಡೆದ ಸಮಾಜವೇ ಆಗಿದೆ. ಆದರೆ ಜಾತಿ ಮೀರಿ ಸ್ನೇಹ ಮಾಡಿದ್ದಾರೆಂದೋ, ಪ್ರೇಮಿಸಿದ್ದಾರೆಂದೋ ತಂದೆ ತಾಯಿಗಳೇ ಅಥವಾ ಸೋದರರೇ ಆ ಮಕ್ಕಳನ್ನು ಗುಂಡಿಟ್ಟು ಅಥವಾ ಬಹಿರಂಗವಾಗಿ ಊರ ಮುಂದಿನ ಮರಕ್ಕೆ ನೇಣು ಹಾಕಿ ಕೊಲ್ಲುವ ಪರಮ ನೀಚ ಕುಟುಂಬಗಳೂ ಆರ್ಯ ಸಮಾಜದ ಹಿನ್ನೆಲೆ ಹೊಂದಿದವೇ! ಇವನ್ನು ಊರ ಹಿರಿಯರು 'ಮರ್ಯಾದೆ ಕೊಲೆ' ಎಂದು ನಿರ್ಲಜ್ಜವಾಗಿ ಕರೆದುಕೊಂಡು ಹೆಮ್ಮೆ ಪಡುವುದೂ ಉಂಟು! ಹಾಗಾಗಿ ಮೊದಲು ಪೇಜಾವರರು ಅಲ್ಲಿಗೆ (ಇತ್ತೀಚೆಗೆ ತಾನೇ ದೆಹಲಿ ಪಕ್ಕದ ಹಳ್ಳಿಯೊಂದರಲ್ಲಿ ಇಂತಹ ಘಟನೆ ನಡೆದಿದೆ) ಅಥವಾ ಮೂಲತಃ ದಲಿತರೇ ಆದ ಬಡ ಕ್ರಿಶ್ಚಿಯನ್ನರ ಮೇಲೆ ವಿವಿಧ ರೀತಿಯ ಅತ್ಯಾಚಾರಗಳು ನಡೆಯುತ್ತಿರುವ ಕಂಧಮಹಲ್ಗೆ ಹೋಗಿ ಅಲ್ಲಿ ತಮ್ಮ ರಾಕ್ಷಸ ಕುಲದವರಿಗೆ ಶಾಂತಿ ದೀಕ್ಷೆ ನೀಡಲಿ. ನಂತರ ಇವರು ಕೊಡುವುದಾಗಿ ಹೇಳುವ 'ಬ್ರಹ್ಮ ದೀಕ್ಷೆ'ಗೆ ಎಷ್ಟು ಜನ ದಲಿತರು ಸಾಲುಗಟ್ಟಿ ನಿಲ್ಲುವರೋ ನೋಡೋಣ!

ಪೇಜಾವರರ ಇಂತಹ ಭಂಡ ಧೈರ್ಯದ ನೆರಳಿನಲ್ಲಿಯೇ ಯಡಿಯೂರಪ್ಪನವರಂತಹ ಮೂಢರು ದೇವರಿಗೆ ಮುವ್ವತ್ತು ಲಕ್ಷ ರೂಪಾಯಿಗಳ ಬೆಲೆಯ ಆನೆಯೊಂದನ್ನು ಲಂಚವಾಗಿ ನೀಡುವ ಧೈರ್ಯ ಮಾಡಿರುವುದು. ಇದು ತಾವು ಮುಖ್ಯ ಮಂತ್ರಿಯಾದರೆ ತೀರಿಸುವುದಾಗಿ ಮಾಡಿಕೊಂಡಿದ್ದ ಹರಕೆಯಂತೆ! ಇಷ್ಟು ದೊಡ್ಡ ಬೆಲೆಯ ಹರಕೆ ಮಾಡಿಕೊಂಡು ಮುಖ್ಯ ಮಂತ್ರಿಯಾಗುವುದರ ಉದ್ದೇಶವಾದರೂ ಏನು? ಉದ್ದೇಶ ಜನಸೇವೆಯೇ ಆಗಿದ್ದರೆ, ಭಗವಂತ ಯಾವ ಲಂಚವೂ ಇಲ್ಲದೆ ಆ ಕೆಲಸಕ್ಕಾಗಿ ಯಡಿಯೂರಪ್ಪನವರನ್ನು ಆಯುತ್ತಿದ್ದ. ನಿಜವಾದ ಭಗವಂತನ ಕೆಲಸವೇ ಅದಲ್ಲವೇ? ಆದರೆ ಯಡಿಯೂರಪ್ಪ ದೇವರಿಗೇ ಲಂಚದ ಆಸೆ ತೋರಿಸಿ ಅವನನ್ನು ಯಾಮಾರಿಸುವ ಪ್ರಯತ್ನ ಮಾಡಿ, ದೇವರ ಕಲ್ಪನೆಯನ್ನೇ ಭ್ರಷ್ಟಗೊಳಿಸಿದ್ದಾರೆ ಮತ್ತು ತಾವೂ ತಮ್ಮ (ಸಂಘ) ಪರಿವಾರವೂ ಎಗ್ಗಿಲ್ಲದೆ ತಿಂದು ತೇಗಲು ಮುಕ್ತ ಪರವಾನಗಿ ಪಡೆದುಕೊಂಡಿದ್ದಾರೆ. ಕರ್ನಾಟಕದ ಮಟ್ಟಿಗೆ ಆಧುನಿಕ ಕಾಲದಲ್ಲಿ ಧರ್ಮ ಸಾಮ್ರಾಜ್ಯ ಬಹುಶಃ ಇಷ್ಟೊಂದು ದುಷ್ಟ ಮತ್ತು ಭ್ರಷ್ಟ ಎಂದೂ ಆಗಿರಲಿಲ್ಲವೆಂದು ಕಾಣುತ್ತದೆ. ಇದನ್ನು ಸುಮ್ಮನೆ ಕೂತು ನೋಡುತ್ತಿರುವ ಕರ್ನಾಟಕದ ಜನತೆ ಇದರ ದುಷ್ಪರಿಣಾಮಗಳನ್ನು ಒಂದಲ್ಲ ಒಂದು ದಿನ ಎದುರಿಸಲೇ ಬೇಕಾಗುತ್ತದೆ. ಆ ದಿನಗಳೇನೂ ದೂರವಿದ್ದಂತೆ ಕಾಣುವುದಿಲ್ಲ.