ವೈದಿಕರು ಭಾರತದ ಮೂಲನಿವಾಸಿಗಳಲ್ವಾ?!

ವೈದಿಕರು ಭಾರತದ ಮೂಲನಿವಾಸಿಗಳಲ್ವಾ?!

Comments

ಬರಹ

ನಾನು ಕಂಡ, ಓದಿದ ಬಹುತೇಕ ಬ್ರಾಹ್ಮಣ ದ್ವೇಷಿಗಳು ಒಂದು ವಾದವನ್ನು ಮುಂದಿಡುತ್ತಾರೆ. ಆರ್ಯರು ಅಂದರೆ ಬ್ರಾಹ್ಮಣರು ಎಲ್ಲಿಂದಲೋ ಭಾರತಕ್ಕೆ ಬಂದರು ದ್ರಾವಿಡರನ್ನು ದಕ್ಷಿಣಕ್ಕೆ ತಳ್ಳಿ ತಾವು ಆಕ್ರಮಿಸಿಕೊಂಡರು, ತಮ್ಮ ಸಂಸ್ಕೃತಿಯನ್ನು ಹೇರಿದರು ಎಂದು. ಸಂಶೋಧನೆಗಳ ಪ್ರಕಾರ ಈ ಥಿಯರಿ ನಿಜ ಎಂದು ಹೇಳಲು ಯಾವುದೇ ಪುರಾವೆ, ಕಾರಣಗಳು ಇಲ್ಲದಿದರೂ ಅದನ್ನೇ ಹಿಡಿದುಕೊಂಡು ವಾದಿಸುತ್ತಾರೆ.

ಒಂದು ವೇಳೆ ಅದು ನಿಜವೆಂದೇ ಇಟ್ಟುಕೊಳ್ಳೋಣ. ಕ್ರಿಸ್ತಪೂರ್ವದಲ್ಲೇ ಅಂದರೆ ಸುಮಾರು ಐದುಸಾವಿರ ವರ್ಷಗಳಿಗಿಂತ ಹಿಂದೆ ಜಗತ್ತಿನಲ್ಲಿ ಈಗಿರುವಂತೆ ಯಾವ ದೇಶದೇಶದ ಗಡಿಯೂ ಗುರುತಿಸಿಲ್ಪಟ್ಟಿರಲಿಲ್ಲ. ಅಸಲಿಗೆ ಭಾರತವೆಂಬ ದೇಶವೇ ಇರಲಿಲ್ಲ. ಆಗ ಜಗತ್ತಿನಲ್ಲಿ ಒಂದು ಜನಾಂಗ ಅಥವಾ ಒಂದಿಷ್ಟು ಜನ ಒಂದು ಕಡೆಯಿಂದ ಇನ್ನೊಂದು ಕಡೆಗೆ ವಲಸೆ ಹೋಗುವುದೂ, ತಮಗನುಕೂಲವಾದ ಕಡೆ ನೆಲೆಯೂರುವುದೂ ನೆಡೆಯುತ್ತಿತ್ತು. ಯಾಕಂದರೆ ಬಹುತೇಕ ಭೂಮಿ ಯಾರ ಸ್ವತ್ತೂ ಆಗಿರಲಿಲ್ಲ. ಅಂತಹ ಕಾಲದಲ್ಲಿ ಆರ್ಯರು ಭಾರತಕ್ಕೆ ಬಂದಿರಬಹುದು. ಬಂದವರು ಖಂಡಿತ ಇಲ್ಲಿದ್ದ ಮೂಲನಿವಾಸಿಗಳಿಗಿಂತ ಜಾಸ್ತಿ ಸಂಖ್ಯೆಯಲ್ಲಿರುವುದಕ್ಕೆ ಸಾಧ್ಯವಿಲ್ಲ .(ಈಗಲೂ ಮೂರೇ ಪರ್ಸೆಂಟು). ಅಂದ ಮೇಲೆ ಅದು ಹೇಗೆ ಇಲ್ಲಿರುವವರನ್ನು ಸೋಲಿಸಿ ದಕ್ಷಿಣಕ್ಕೆ ಓಡಿಸಿದರು? ದಕ್ಷಿಣಕ್ಕೆ ಓಡಿಸಿದುದೂ ನಿಜವಾದರೆ ಉತ್ತರದಲ್ಲಿದ್ದ ಮೂಲನಿವಾಸಿಗಳು ದಕ್ಷಿಣಕ್ಕೆ ಬಂದು ಸೇರಿಕೊಂಡು ದಕ್ಷಿಣದಲ್ಲಿ ಮೂಲನಿವಾಸಿಗಳ ನೆಲೆಯನ್ನು ಅತಿಕ್ರಮಣ ಮಾಡಿಕೊಂಡಂತಾಗಲಿಲ್ಲವೇ? ಹೊರಗಿನಿಂದ ಬಂದ ಅಲ್ಪಸಂಖ್ಯಾತ ವೈದಿಕರು ಅದು ಹೇಗೆ ಇಲ್ಲಿರುವ ಬಹುಸಂಖ್ಯಾತರ ಮೇಲೆ ತಮ್ಮ ಸಂಸ್ಕೃತಿಯನ್ನು ಹೇರಲು ಸಾಧ್ಯವಿತ್ತು? ಅಷ್ಟು ಸುಲಭವಾಗಿ ಅವರು ಶ್ರೇಷ್ಟರೆಂದು ಇಲ್ಲಿನ ಮೂಲನಿವಾಸಿಗಳು ತಲೆಬಾಗಿಬಿಟ್ಟರು? ಅವರಿಗೆ ಸಾಮಾಜಿಕವಾಗಿ ಮೇಲಿನ ಸ್ಥಾನ ಅದು ಹೇಗೆ ದೊರೆಯಿತು?! ಯಾವುದಕ್ಕೂ ಉತ್ತರವಿಲ್ಲ.

ಇತ್ತೀಚೆಗೆ ಬಂದ ಮುಸ್ಲಿಮ ಕ್ರೈಸ್ತರನ್ನು ಭಾರತೀಯರೆಂದು ಒಪ್ಪಿಕೊಳ್ಳುವ ನಮ್ಮ ಬ್ರಹ್ಮದ್ವೇಷಿ ಬುದ್ದಿಜೀವಿಗಳಿಗೆ ಎಷ್ಟೋ ಸಾವಿರ ವರ್ಷಗಳ ಹಿಂದೆ ಬಂದು ಇಲ್ಲಿನವರಾದವರನ್ನು ಭಾರತದ ಮೂಲನಿವಾಸಿಗಳು ಎಂದು ಒಪ್ಪಿಕೊಳ್ಳಲು ಏನು ತೊಂದರೆ? ಈಗಿರುವ ಅಮೆರಿಕಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ದಕ್ಷಿಣ ಅಮೆರಿಕಾ ಮುಂತಾದ ಕಡೆಗಳಲ್ಲೆಲ್ಲಾ ಯೂರೋಪ್ ದೇಶದಿಂದ ವಲಸೇ ಹೋದವರೇ ಇರುವದನ್ನು ಕಾಣಬಹುದು, ಜೊತೆಗೆ ಆಫ್ರಿಕಾದಿಂದ ಬಂದವರು ಕೂಡ ಇದ್ದಾರೆ. ಅಲ್ಲಿ ಅಲ್ಲಿನ ಮೂಲನಿವಾಸಿಗಳಾದ ಯಾವ ಧರ್ಮಕ್ಕೂ ಸೇರಿರದ ರೆಡ್ ಇಂಡಿಯನ್ನರನ್ನು ಯೂರೋಪಿನವರು ಬಹುಸಂಖ್ಯೆಯಲ್ಲಿ ಕೊಂದು ಹೆಸರಿಲ್ಲದಂತೆ ಮಾಡಿ ಉಳಿದವರಿಗೆ ಶಿಲುಬೆ ತೊಡಿಸಿ ಕ್ರೈಸ್ತರನ್ನಾಗಿ ಮಾಡಿಬಿಟ್ಟರು. ಇವತ್ತು ಅಮೆರಿಕಾದಲ್ಲಿ ಬಿಳಿಯರು ಮತ್ತು ಅವರ ಗುಲಾಮಗಿರಿಗೆ ಆಫ್ರಿಕಾದಿಂದ ಹೋದ ಕರಿಯರೇ ಜಾಸ್ತಿ ಇರುವುದು. ಆದರೆ ನಮ್ಮ ದೇಶದಲ್ಲಿ ಹೀಗ್ಯಾವುದೂ ಆಗಲಿಲ್ಲ. ಎಲ್ಲರೂ ಕೂಡ ಅವರವರ ಆಚಾರ, ವಿಚಾರ, ಸಂಪ್ರದಾಯಗಳನ್ನು ಪಾಲಿಸಲು ಯಾವ ಧಕ್ಕೆಯೂ ಬರಲಿಲ್ಲ. ಯಾರು ಯಾರನ್ನೂ ಕೊಲ್ಲಲಿಲ್ಲ, ಯಾವ ಜನಾಂಗಗಳನ್ನೂ ನಾಶಮಾಡಲಿಲ್ಲ, ಯಾರ ಮೇಲೂ ಯಾವ ಆಚಾರಗಳನ್ನೂ ಬಲವಂತವಾಗಿ ಹೇರಲಿಲ್ಲ. ಇಲ್ಲಿಗೆ ಬಂದವರು(ಆರ್ಯರು!), ಬಂದ ಮೇಲೆ ಇಲ್ಲಿನ ಮೂಲನಿವಾಸಿಗಳಂತೆಯೇ ಆದರು. ಅವರ ಆಚಾರಗಳೂ ಇಲ್ಲಿನ ಎಲ್ಲಾ ಜಾತಿ, ಬುಡಕಟ್ಟು ಜನರಂತೆಯೇ ಇದ್ದುದರಿಂದ, ಅವರ ಜೊತೆಯಲ್ಲೇ ಸಾವಿರಾರು ವರ್ಷಗಳಿಂದ ಇಲ್ಲಿಯೇ ನೆಲೆಸಿ ಅವರು ಕೂಡ ಈ ನೆಲದ, ಈ ದೇಶದ ಮೂಲನಿವಾಸಿಗಳೇ ಆದಂತಾಯಿತು.

ಅದಕ್ಕೋಸ್ಕರವೇ ಒಟ್ಟಾರೆ ಸಿಂಧೂ ನದಿ ಈಚೆಗಿನ ಪ್ರದೇಶದ ಜನರೆಲ್ಲರ ಧಾರ್ಮಿಕ, ಸಾಮಾಜಿಕ ಸಾಮ್ಯತೆಗಳಿಂದ ಅವರೆಲ್ಲರೂ ಹಿಂದೂಗಳೆಂದು ಗುರುತಿಸಲ್ಪಟ್ಟರು.
ಅದರಿಂದಾಗಿ ಹಿಂದೂ ಧರ್ಮವೆಂದರೆ ಎಲ್ಲಾ ಜಾತಿಗಳ ಜನರೂ ಇದ್ದಾರೆಯೇ ಹೊರತು, ಅದು ಕೇವಲ ವೈದಿಕರ ಧರ್ಮವಲ್ಲ, ಸ್ವತ್ತಲ್ಲ. ವೈದಿಕರು ಹಿಂದೂ ಎನಿಸಿಕೊಳ್ಳಲು ಎಷ್ಟು ಹಕ್ಕುದಾರರೋ ಈಗ ಹಿಂದೂ ಧರ್ಮದವರೆಂದು ಗುರುತಿಸಲ್ಪಡುವ ಎಲ್ಲಾ ಜಾತಿ, ಬುಡಕಟ್ಟಿನವರೂ ಅಷ್ಟೆ ಹಕ್ಕುದಾರರು. ಹಿಂದೂ ಎನ್ನುವ ಧರ್ಮದಲ್ಲಿ ಕ್ರೈಸ್ತ , ಮುಸ್ಲಿಂ ಮುಂತಾದ ಸ್ಥಾಪಿತ ಮತಗಳಲ್ಲಿರುವಂತೆ ಎಲ್ಲರಿಗೂ ಒಂದೇ ದೇವರು, ಒಂದೇ ವಿಧಿವಿಧಾನ, ಆಚಾರ ವಿಚಾರ ಗಳಿಲ್ಲ. ಎಲ್ಲರೂ ತಮ್ಮ ತಮ್ಮ ಆಚಾರಗಳನ್ನು ಪಾಲಿಸಲು, ತಮ್ಮ ತಮ್ಮ ದೇವರನ್ನು ಪೂಜಿಸಲು ಸ್ವತಂತ್ರರು. ನಿಜವಾಗಿಯೂ ಹೇಳಬೇಕೆಂದರೆ ಇದರರ್ಥ ಆರ್ಯರೆಂದು ಈಗಿನ ಕೆಲವರು ದೂಷಿಸುವ ಬ್ರಾಹ್ಮಣರು/ವೈದಿಕರು ’ಹೊರಗಿನಿಂದ’ ಬಂದವರಾಗಿರಲಿಲ್ಲ, ಅವರ ಸಂಸ್ಕೃತಿ ಇಲ್ಲಿನ ಜನರಿಗಿಂತ ಭಿನ್ನವಾಗಿರಲಿಲ್ಲ, ಭಿನ್ನವಲ್ಲ ಎಂಬುದು ಇದರ ಸಾರಾಂಶ.

ಆದರೆ ಕೆಲವರು ’ಮೂಲನಿವಾಸಿ’ ಎಂಬ ಪದದ ಡೆಫಿನಿಷನ್ನನ್ನೇ ತಿರುಚಿ ಇನ್ನೂ ದೂಷಿಸುತ್ತಲೇ ಇರುವುದು ವಿಪರ್ಯಾಸ!
ರಜಪೂತ ಬೇರಿನ ಧರ್ಮಸಿಂಗು ಕನ್ನಡ ನೆಲದ ಮೂಲನಿವಾಸಿಯಲ್ಲದಿದ್ದರೂ ಇಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಏರಿದರು ಎಂದರೆ ಹೇಗಾಗುವುದೋ ಹಾಗೆಯೇ ಇದು ಕೂಡ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet