"ಈ ನೀರು ಕುಡದ್ರ ಉಚ್ಚಿ ಕುಡಧಾಂಗ ಆಗತೈತಿ ನೋಡಪಾ..!"

"ಈ ನೀರು ಕುಡದ್ರ ಉಚ್ಚಿ ಕುಡಧಾಂಗ ಆಗತೈತಿ ನೋಡಪಾ..!"

ಬರಹ

ಅರ್ಘ್ಯಂ ಸಂಸ್ಥೆಯು ಪ್ರಾರಂಭಿಸಿರುವ ವಾಟರ್ ಪೋರ್ಟಲ್ ಯೋಜನೆಯ ಕನ್ನಡ ಆವೃತ್ತಿಗೆ ನೀವೆಲ್ಲರೂ ಈಗಾಗಲೇ ಭೇಟಿ ಕೊಟ್ಟಿರುತ್ತೀರಿ. ಈ ಯೋಜನೆ ಸಂಪದದ ಸಹಯೋಗದಿಂದ ಮೂಡಿಬರುತ್ತಿದೆ. ಸಹಯೋಗದ ಭಾಗವಾಗಿ ಮತ್ತೊಂದು ಲೇಖನ ನಿಮ್ಮೆಲ್ಲರ ಮುಂದೆ.ಲೇಖನ: ಹರ್ಷವರ್ಧನ್ ಶೀಲವಂತ್, ಚಿತ್ರಗಳು: ಕೇದಾರನಾಥ್, ಜೆ ಜಿ ರಾಜ್

"ತಮ್ಮ..ಅದನೇನ್ ನೋಡ್ತಿ..ನಮ್ಮನೇನ್ ಕೇಳ್ತಿ..? ಒಂದ ಮಾತಿನ್ಯಾಗ ಹೇಳ್ಯಾ..?
- ಈ ನೀರು ಕುಡದ್ರ ಉಚ್ಚಿ ಕುಡಧಾಂಗ ಆಗತೈತಿ ನೋಡಪಾ..!"


ಆಹೆಟ್ಟಿ ಗ್ರಾಮದ ಕಮಲಮ್ಮನ ಮಾತುಗಳಿವು. ಕೇಳಿದ ನನಗೂ, ಗೆಳೆಯ ಛಾಯಾಪತ್ರಕರ್ತ ಕೇದಾರನಾಥ್ ಅವರಿಗೂ ಕರುಳು ಕಿತ್ತು ಬಂದಂತಹ ಅನುಭವ.

ಧಾರವಾಡ ಜಿಲ್ಲೆಯ ನವಲಗುಂದ ತಾಲ್ಲೂಕಿನ ಕಟ್ಟಕಡೆಯ ಹಳ್ಳಿ ಆಹೆಟ್ಟಿ (ಆಯಟ್ಟಿ). ಮೂರು ಸಾವಿರ ಜನಸಂಖ್ಯೆ. ಹದಿನೆಂಟುನೂರರಷ್ಟು ‘ಪ್ರೌಢ’  ಮತದಾರರನ್ನು ಹೊಂದಿರುವ ಗ್ರಾಮ. ಧಾರವಾಡ ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಸೇರಿರುವ, ತೊಟ್ಟು ನೀರಿಗೂ ದೈನೇಸಿಯಾಗಿರುವ ಬಾಯಾರಿದ ಹಳ್ಳಿ. ಇಲ್ಲಿನ ಗ್ರಾಮಸ್ಥರ ದಾಹ ತೀರಿಸಿಕೊಳ್ಳುವ ಪರಿ ಶೋಚನೀಯ. ನಾಗರಿಕ ಸಮಾಜ ಮಾನವೀಯತೆಯ ನೆಲೆಯಲ್ಲಿ ಒಮ್ಮೆ ನಿಂತು ಯೋಚಿಸಬೇಕಾದಷ್ಟು ಗಂಭೀರ ಸ್ಥಿತಿ ಇಲ್ಲಿದೆ.

ಆಹೆಟ್ಟಿ ಗ್ರಾಮದ ಹೆಣ್ಣು ಮಕ್ಕಳು, ಗಂಡಸರು ತಮ್ಮ ಚಿಕ್ಕ ಮಕ್ಕಳೊಂದಿಗೆ ನೀರು ಹೊರುವುದನ್ನು ನಿತ್ಯ ಕಾಯಕ ಮಾಡಿಕೊಂಡಿದ್ದಾರೆ. ನಿತ್ಯ ೪-೬ ಕಿಲೋ ಮೀಟರ್ ದೂರ ಕ್ರಮಿಸಿ ಕುಡಿಯಲು ಕಲುಷಿತ ನೀರು ಒಗ್ಗೂಡಿಸುವುದೇ ಹರಸಾಹಸದ ಕೆಲಸ. ಗ್ರಾಮದ ಪಕ್ಕದಲ್ಲಿ ಹರಿದಿರುವ ‘ತುಪರಿ ಹಳ್ಳ’ ದಲ್ಲಿ ‘ಒರ್ತಿ’ ತೋಡಿ ಕಪ್ಪಾದ ನೀರನ್ನು ಪ್ಲಾಸ್ಟಿಕ್ ಬಿಂದಿಗೆಗಳಲ್ಲಿ ತಾಸುಗಟ್ಟಲೇ ತುಂಬಿಸುವುದು ಅವರಿಗೆ ಅನಿವಾರ್ಯ. ಹೊತ್ತುಕೊಂಡು, ಇಲ್ಲವೇ ಸೈಕಲ್, ಎತ್ತಿನ ಬಂಡಿ, ಕೈಗಾಡಿ, ಟ್ರ್ಯಾಕ್ಟರ್ ಹೀಗೆ ನೂರೊಂದು ರೀತಿಯಲ್ಲಿ ಬಣ್ಣದ ಪ್ಲಾಸ್ಟಿಕ್ ಕೊಡಗಳಲ್ಲಿ ಕಲುಷಿತ ನೀರು ‘ಕುಡಿಯಲು’ ಹೊತ್ತೊಯ್ಯದೇ ಉಪಾಯವಿಲ್ಲ.

ಮುಂದೆ ಓದಿ >>