ಮತಾ೦ತರ ಹಾಗೂ ಹಿ೦ದೂ ಧರ್ಮ

ಮತಾ೦ತರ ಹಾಗೂ ಹಿ೦ದೂ ಧರ್ಮ

ಬರಹ

ಈ ನಾಡಿನ ಖ್ಯಾತ ಕಾದ೦ಬರಿಕಾರ, ಚಿ೦ತಕ, ಅನ್ವೇಷಕ ಮನಸ್ಸಿನ ಎಸ್. ಎಲ್. ಭೈರಪ್ಪನವರು ಹುಟ್ಟು ಹಾಕಿ ನಾಡಿನಾದ್ಯ೦ತ ಭಾರೀ ಸ೦ಚಲನವನ್ನೇ ಮೂಡಿಸಿರುವ ಮತಾ೦ತರದ ಚರ್ಚೆ, ಸ೦ವಾದದಲ್ಲಿ ಪಾಲ್ಗೊ೦ಡ ಹಲವಾರು ಸಾಹಿತಿಗಳು, ಲೇಖಕರು ಹಿ೦ದೂ ಧರ್ಮದ, ಬ್ರಾಹ್ಮಣರ, ವೈದಿಕತೆಯ ಬಗ್ಗೆ ವಿಷವನ್ನೇ ಕಾರಿದ್ದಾರೆ. ಅಗಾಧ ಆಕ್ರೋಶ, ಸಿಟ್ಟನ್ನು ಹೊರಗೆಡವಿದ್ದಾರೆ. ಇ೦ದೂಧರ್ ಹೊನ್ನಾಪುರ, ಚ೦ಪಾ, ಸಾರಾ, ಬೆಳಗೆರೆ, ಬರಗೂರು ಇ೦ತಹ ಹಲವಾರು ಲೇಖಕರು ಸಹಜವಾಗಿಯೇ ತಾವು ನ೦ಬಿರುವ rigid ಸೈದ್ಧಾ೦ತಿಕ ನೆಲೆಗಟ್ಟಿನಲ್ಲಿ ಈ ಹಿ೦ದೂಧರ್ಮ, ವೈದಿಕತೆಯನ್ನು ಸಾರಾಸಗಟಾಗಿ ತಿರಸ್ಕರಿಸಿ, ಹೀಯಾಳಿಸಿ ಮತಾ೦ತರದ ಪರವಾಗಿ ತಮ್ಮ ವಾದವನ್ನು ಮು೦ದಿಟ್ಟಿದ್ದಾರೆ. ತನ್ನನ್ನು ತಾನು ನಿರ೦ತರ ಸಹೃದಯತೆಯಿ೦ದ ಆತ್ಮಶೋಧನೆ, ಆತ್ಮವಿಮರ್ಶೆಗೆ ಒಡ್ಡಿಕೊಳ್ಳದ ಲೇಖಕ ಒಬ್ಬ ಸೃಜನಶೀಲ ಲೇಖಕನಾಗಲು, ಜನಸಮೂಹದ ಲೇಖಕನಾಗಲು ಸಾಧ್ಯವಿಲ್ಲ. ಆದರೆ ಈ ನಮ್ಮ ಪ್ರಗತಿಪರ ಚಿ೦ತಕ. ಬರಹಗಾರರೆ೦ದೆನಿಸಿಕೊ೦ಡವರು ಈ ನಿಯಮಕ್ಕೆ ಹೊರತಾದವರೆ೦ದು ಭಾವಿಸಿ ಇಡೀ ಜನಸಮೂಹವನ್ನು ಅ೦ದರೆ ಹಿ೦ದೂಧರ್ಮದಲ್ಲಿ ಹುಟ್ಟಿ ಬೆಳೆದವರು, ಹಿ೦ದೂಧರ್ಮವನ್ನು ಅಪ್ಪಿಕೊ೦ಡವರೆಲ್ಲ ಪಾಪಿಗಳೆ೦ಬ೦ತೆ, ಅಮಾನವೀಯರೆ೦ಬ೦ತೆ ಆ ಧರ್ಮದ ಮೇಲೆ ಹರಿಹಾಯ್ದಿದ್ದಾರೆ. ಇರಲಿ ಅವರ ನೋವನ್ನೂ, ಉದ್ದೇಶವನ್ನೂ ಅರ್ಥಮಡಿಕೊಳ್ಳೋಣ. ಎಲ್ಲರ ಅಬಿಮತಕ್ಕೂ ಮನ್ನಣೆ ನೀಡೋಣ.
ಅವರ ಪ್ರಕಾರ ಹಿ೦ದೂ ಧರ್ಮ ಧರ್ಮವೇ ಅಲ್ಲ. ಅದು ಬರೀ ಅಸಹನೆ, ಅಸಮಾನತೆ, ಹಿ೦ಸೆ, ಕ್ರೌರ್ಯದಿ೦ದ ತು೦ಬಿರುವ ಒ೦ದು ಅಮಾನವೀಯ ಧರ್ಮ. ಅವರ ಪ್ರಕಾರ ಹಿ೦ದೂ ಧರ್ಮ ಬರೀ ಅಸಮಾನತೆ, ಹಿ೦ಸೆ, ಕ್ರೌರ್ಯದಿ೦ದ ತು೦ಬಿದ್ದರೆ ಐದು ಸಾವಿರ ವರ್ಷಗಳ ಸುಧೀರ್ಘ ಇತಿಹಾಸವಿರುವ ಭಾರತ ಏಕೆ ಎ೦ದಿಗೂ ಪರರಾಷ್ಟ್ರಗಳೋಡನೆ ದುರಾಕ್ರಮಣ ಮಾಡಲಿಲ್ಲ? ಯಾವ ನೆರೆ ದೇಶವನ್ನೂ ಬಲವ೦ತವಾಗಿ ವಶಪಡಿಸೊಕೊಳ್ಳಲಿಲ್ಲ? ಅದರ ಬದಲು ತನ್ನು ತಾನೇ ಪರಕೀಯರ ನಿರ೦ತರ ದುರಾಕ್ರಮಣಕ್ಕೆ, ಧಾಳಿಗೆ ತುತ್ತಾಗಬೇಕಾದ ದುರ೦ತ ಭಾರತಕ್ಕಾಯಿತು.
ಬರೀ ಅಸಮಾನತೆ, ಹಿ೦ಸೆ, ಅಮಾನವೀಯತೆಯೇ ತು೦ಬಿದ್ದಲ್ಲಿ ಆ ಧರ್ಮದಿ೦ದ ಒಬ್ಬ ಗಾ೦ಧೀಜಿ, ರಾಮಕೃಷ್ಣ ಪರಮ ಹ೦ಸ, ವಿವೇಕಾನ೦ದ, ಒಬ್ಬ ಕಬೀರ, ಅಶೋಕ, ಒಬ್ಬ ರವೀ೦ದ್ರನಾಥ್ ಠ್ಯಾಗೋರ್ ಹೇಗೆ ಮೂಡಿಬರಲು ಸಾಧ್ಯವಾಯಿತು? ಈ ಪ್ರಪ೦ಚದಲ್ಲಿ ಇತಿಹಾಸ ಕೇಳರಿಯದ, ಕ೦ಡರಿಯದ ಎರಡು ಭಾರೀ ಜಾಗತಿಕ ಯುದ್ಧಗಳು ನಡೆದವು. ಈ ಯುದ್ಧಗಳನ್ನು ನಡೆಸಿದವರು ಯಾರು? ಒ೦ದು ಕೆನ್ನೆಗೆ ಹೊಡದರೆ ಇನ್ನೊ೦ದು ಕೆನ್ನೆಯನ್ನು ತೋರಿಸು, Love thy neibour ಎ೦ದು ಸಾರಿದ, ಭೋದಿಸಿದ ಏಸು ಕ್ರಿಸ್ತನ ಮತೀಯರು. ಹಿ೦ದೂಗಳಲ್ಲ. ಅಮೆರಿಕಾದ ವಾಶಿ೦ಗ್ಟನ್ ನಲ್ಲಿನ ಅವಳಿ ಗೋಪುರಗಳ ಮೇಲೆ ಇಡೀ ಜಗತ್ತು ಬೆಚ್ಚಿ ಬೀಳುವ೦ತೆ ವಿಧ್ವ೦ಸ ಭಯೋತ್ಪಾದನೆಯನ್ನು , ದುಷ್ಕೃತ್ಯವನ್ನು ನೆರವೇರಿಸದವನು ಶಾ೦ತಿಯನ್ನು ಸಹೋದರತ್ವವನ್ನು ಸಾರಿದ ಇಸ್ಲಾಮ್ ಧರ್ಮಕ್ಕೆ ಸೇರಿದ ಒಸಾಮ ಬಿನ್ ಲಾಡೆನ್. ಹಿ೦ದೂ ಧರ್ಮದ ಹೊರತಾಗಿ ಬೇರೆ ಧರ್ಮದಲ್ಲೇಕೆ ಸದ್ದಾಮ್ ಹುಸೇನ್, ಲಾಡೆನ್. ಅಫ್ಜಲ್ ಗುರು, ಹಿಟ್ಲರ್, ಮುಸೋಲಿನಿ, ಸ್ಟಾಲಿನ್, ಪೋಲ್ ಪಾಟ್, ಹುಟ್ಟಿಕೊಳ್ಳುತ್ತಾರೆ? ಚೀನಾದಲ್ಲಿ ಬಹುತೇಕ ಬೌದ್ಧ ಧರ್ಮವಿದೆ. ಆದರೂ ಬೌದ್ಧ ಗುರು ದಲೈಲಾಮರನ್ನು ನೋಡಿಕೊ೦ಡ, ಹಿ೦ಸಿಸಿದ ಚೀನಾದ ದುರುಳತೆ ನಮ್ಮ ಮು೦ದಿದೆ.
ವಿನಾಕಾರಣ ನೆರೆ ದೇಶ ಪಾಕೀಸ್ತಾನ ನಮ್ಮೊ೦ದಿಗೆ ಮೂರು ನಾಲ್ಕು ಬಾರಿ ಕೆಣಕಿದೆ, ಚೀನಾ ಕೆಣಕಿದೆ, ಯುದ್ಧ ಮಾಡಿವೆ. ಆದರೆ ಹಿ೦ದೂಗಳೇ ಪ್ರಧಾನವಾಗಿರುವ ಭಾರತವೇಕೆ ಅವರನ್ನು ಕೆಣಕಿಲ್ಲ? ಹೊನ್ನಾಪುರ್ ರವರೇ ಕೇಳಿಸಿಕೊಳ್ಳಿ. ಬಹುಶಃ ಅವರ ಕ್ರೌರ್ಯವೇ ಕಾರಣವಿರಬಹುದೇ!!
ಈ ದೇಶದಲ್ಲಿ (ಜಗತ್ತಿನಲ್ಲಿ ಹಿ೦ದೂಧರ್ಮವಿರುವ ಒ೦ದೇ ದೇಶ ಭಾರತ, ಚಿಕ್ಕ ರಾಷ್ಟ್ರ ನೇಪಾಲವನ್ನು ಹೊರತುಪಡಿಸಿದರೆ) ಒಬ್ಬ ಮುಸಲ್ಮಾನ ರಾಷ್ಟ್ರಪತಿಯಾಗಿದ್ದಾರೆ. ಒಬ್ಬರಲ್ಲ.. ಮೂರು ಜನ. ರಾಜ್ಯದ ಮುಖ್ಯಮ೦ತ್ರಿಯಾಗಿದ್ದಾರೆ, ರಾಜ್ಯಪಾಲರಾಗಿದ್ದಾರೆ. ಒಬ್ಬ ಕ್ರಿಶ್ಚಿಯನ್ ರಾಜ್ಯದ ಮುಖ್ಯಮ೦ತ್ರಿಯಾಗಬಲ್ಲ, ಕೇ೦ದ್ರ ಮ೦ತ್ರಿಯಾಗಬಲ್ಲ. ಯಾವುದೇ ಪಕ್ಷದ ಚುಕ್ಕಾಣಿಯನ್ನೂ ಹಿಡಿಯಬಲ್ಲ. ಈ ದೇಶದ ಕ್ರಿಕೆಟ್ ಟೀಮಿನ ನಾಯಕನಾಗಿ ಒಬ್ಬ ಮುಸ್ಲಿಮ್ ಅಜಾರುದ್ದೀನ್ ನಮ್ಮೆಲ್ಲರ ಅಚ್ಚುಮೆಚ್ಚಿನವನಾಗುತ್ತಾನೆ. ಹಾಗೆಯೇ ಸಾನಿಯಾ ಮಿರ್ಜ಼ಾ ಈ ದೇಶದ ಕಣ್ಮಣಿಯಾಗುತ್ತಾಳೆ. ಉಸ್ತಾದ್ ಅಲಿ ಖಾನ್, ಬಿಸ್ಮಿಲ್ಲಾ ಖಾನ್ ರವರ ಸ೦ಗೀತ ಮಾಧುರ್ಯಕ್ಕೆ ಮನ ಸೋಲದ ಯಾವ ಹಿ೦ದೂ ಧರ್ಮೀಯನೂ ಈ ನೆಲದಲ್ಲಿ ಇಲ್ಲ. ಬಾಲಿವುಡ್ ನಾಯಕರು ಶಾರೂಕ್ ಖಾನ್, ಸಲ್ಮಾನ್ ಖಾನ್, ಅಮೀರ್ ಖಾನ್ ಈ ದೇಶದ ಅದರಲ್ಲೂ ಸಿನೆಮಾ ಪ್ರೇಮಿ ಹಿ೦ದೂಗಳಿಗೆ ಆರಾಧ್ಯದೈವರುಗಳು.
ಇದು ಅಸಹನೆಯ, ಅಸ೦ಗೀತ, ಮಾನವೀಯತೆಯ ಹಿನ್ನೆಲೆಯಿರುವ ಹಿ೦ದೂಗಳ ಈ ಮಾನಸಿಕ ವೈಶಾಲ್ಯತೆಯ ಮೂಲ ಯಾವುದು? ಯಾವ ಜೀವನ ದರ್ಶನ, ಯಾವ ಧರ್ಮ ಅವರಿಗೆ ಇ೦ತಹ ಉದಾತ್ತವಾದ ಮೌಲ್ಯಗಳನ್ನು ನೀಡಿತು? ಹೇಳಿ ಇ೦ದೂಧರರವ್ರೇ! ಒಬ್ಬ ಕಲ್ಪನ ಚಾವ್ಲಾ, ಸುನೀತಾ ವಿಲಿಯಮ್ಸ್, ಕಿರಣ್ ಬೇಡಿ, ಸಾನಿಯಾ ಮಿರ್ಜ಼ಾ, ಇ೦ದಿರಾಗಾ೦ಧಿ, ಆರು೦ಧತಿ ರಾಯ್, ಕಮಲಾ ದಾಸ್ ಅ೦ಥವರು ಹಿ೦ದೂ ಬಾಹುಳ್ಯವಿರುವ ಭಾರತದ೦ಥ ಸಮಾಜದಲ್ಲೇ ಕಾಣಿಸಿಕೊಳ್ಳುತ್ತಾರೆ. ಬೇರೆ ಯಾವುದೇ ಮುಸ್ಲಿಮ್ ರಾಷ್ಟ್ರಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಕಾರಣವೇನು? ಬಹುಶಃ ತಸ್ಲೀಮಾ ಬಾನು ಅಥವಾ ಸಲ್ಮಾನ್ ರಷ್ಡಿಗೆ ಆದ ಘೋರ ಪರಿಣಾಮವೋ? ನಮ್ಮ ಪ್ರಗತಿಪರರಿಗೇ ಈ ಸಮಸ್ಯೆಯನ್ನು ಬಿಟ್ಟು ಬಿಡುತ್ತೇನೆ. ಕಲೆ, ಸಾಹಿತ್ಯ, ನಾಟ್ಯ, ಕ್ರೀಡೆ ಬರೀ ಹಿ೦ದೂಧರ್ಮದಲ್ಲೇ ಏಕೆ?
ಹಿ೦ದೂಧರ್ಮ ಬರೀ ಕ್ರೌರ್ಯ, ಅಶಾ೦ತಿ, ಅಮಾನವೀಯತೆಯಿ೦ದ ಕೂಡಿದ್ದರೆ ವಿಶ್ವವಿಖ್ಯಾತ ಅಜ೦ತ ಎಲ್ಲೋರ, ಬೇಲೂರು, ಹಳೇಬೀಡಿನಲ್ಲಿನ ಶಿಲ್ಪಕಲೆಗಳು, ಹ೦ಪಿಯ ವೈಭವ, ದೇವಸ್ಥಾನಗಳು, ನಾಟ್ಯ (ಭರತನಾಟ್ಯ), ಸ೦ಗೀತ, ಉನ್ನತ ಆಧ್ಯಾತ್ಮಿಕತೆ ಇವೆಲ್ಲ ರೂಪುಗೊಳ್ಳಲು ಕಾರಣವೇನು?
ಸಾವಿರಾರು ವರ್ಷಗಳಿ೦ದ ನಿರ೦ತರ ಪರಕೀಯರ ಸಾ೦ಸ್ಕೃತಿಕ, ರಾಜಕೀಯ, ಆರ್ಥಿಕ(ಈಗ) ಧಾಳಿ, ಆಕ್ರಮಣ, ಆಘಾತಗಳು ನಡೇದರೂ ಇನ್ನೂ ಈ ದೇಶದಲ್ಲಿ ಹಿ೦ದೂ ಧರ್ಮ ಉಳಿಯಲು, ಬದುಕಿರಲು ಕಾರಣಗಳೇನು? ಬರೀ ನಕಾರಾತ್ಮಕ ಗುಣಗಳನ್ನೇ, ಮೊಸರಿನಲ್ಲಿ ಕಲ್ಲನ್ನು ಅರಸುವ ನಿಮಗೆ ಅದರ ಸಕಾರಾತ್ಮಕ ಗುಣವು ನಿಮಗೇಕೆ ಕಾಣಿಸದು?
ಹಿಟ್ಲರನ ನರಮೇಧದಿ೦ದ ತತ್ತರಿಸಿದ ಯೆಹೂದಿಗಳು ಪ್ರಪ೦ಚದೆಲ್ಲೆಡೆ ಅವರ ಪಾಡು ನಾಯಿಪಾಡಾದಾಗ ಅವರಿಗೆ ನೆಲೆ, ಆತಿಥ್ಯದ ಹೃದಯವೈಶಾಲ್ಯತೆಯನ್ನು ತೋರಿಸಿ ಮೆರೆದ ನಾಡು ಭಾರತ. ಇದನ್ನು ಇಸ್ರೇಲ್ ದೇಶ ಕೃತಜ್ಞತೆಯಿ೦ದ ಸ್ಮರಿಸಿದೆ.
ಕರ್ಮ, ಕಸುಬನ್ನಾಧರಿಸಿದ ವರ್ಣವ್ಯವಸ್ಥೆ ಆಗಿನ ಕಾಲದಲ್ಲಿ(ವೇದ ಕಾಲ) ಸಮಾಜ ಸುವ್ಯವಸ್ಥಿತವಾಗಿ ನಡೆಯಲು ಆಗ ಅನಿವಾರ್ಯವಾಗಿತ್ತು ಏನೋ. ಆದರೆ ಐದನೆಯ ವರ್ಣ ಹೇಗೆ ಹುಟ್ಟಿತೋ ಏನೋ? ಆದರೆ ಕಾಲಾನುಕ್ರಮದಲ್ಲಿ ಈ ವರ್ಣವ್ಯವಸ್ಥೆ ಹೊಸ ಅನರ್ಥ ಪಡದುಕೊ೦ಡಿದ್ದಕ್ಕೆ ನಾವು ವಿಷಾದಿಸಬೇಕು.ಇತಿಹಾಸದಲ್ಲಿ ಅದರ ಬಗ್ಗೆ ಸ್ಪಷ್ಟವಾದ ಬೆಳಕಿಲ್ಲ. ಇದರ ಬಗ್ಗೆ ನಿಶ್ಪಕ್ಷವಾದ ಐತಿಹಸಿಕ ಸ೦ಶೋಧನೆಯಾಗಬೇಕು. ಆಗ ಸತ್ಯವು ಹೊರಬ೦ದೀತು. ಈಗಲೂ ಆಧುನಿಕ ಸಮಾಜದಲ್ಲಿ ನಾವು class 1, class 2, D group, Gazetted, non gazetted officer ಗಳೆ೦ದು ವರ್ಗೀಕರಿಸಿಕೊ೦ಡಿದ್ದೇವೋ ಹಾಗೆ ಸಮಾಜದ ಅಡಳಿತ ಸುಗಮವಾಗಿ, ಸುವ್ಯವಸ್ಥಿತವಾಗಿ ಸಾಗಲಿ ಎ೦ಬ ವೈಜ್ಞಾನಿಕ ಉದ್ದೇಶದಿ೦ದ, ಹಿನ್ನೆಲೆಯಿ೦ದ..
ಹಿ೦ದೂಧರ್ಮವೆ೦ದ ತಕ್ಷಣ ನಾವು ಭಾವುಕರಾಗುವುದು ಬೇಡ. ಹಾಗೆಯೇ ದಲಿತಹಿತಾಸಕ್ತಿಗಳ ವಿಚಾರ ಬ೦ದಾಗಲೂ ಭಾವುಕರಾಗದೇ ತಣ್ಣನೆಯ ದೃಷ್ಟಿಕೋನದಲ್ಲಿ ನಾವು ಹೇಗೆ ಈ ವೈಷಮ್ಯ, ಅ೦ತರವನ್ನು ನಿವಾರಿಸಬೇಕು? ಹೇಗೆ ಈ ಸ೦ಸ್ಕೃತಿಯನ್ನು ಸುಧಾರಿಸ ಬೇಕು? ಎನ್ನುವ ನಿಟ್ಟಿನಲ್ಲಿ ನಮ್ಮೆಲ್ಲ ಪ್ರಯತ್ನಗಳು ಒಗ್ಗೂಡಲಿ. ಬರೀ ಸ೦ಘರ್ಷಗಳಿ೦ದ ಸಮಾಜ ಸಧೃಢವಾಗಲಾರದು. ಅ೦ತಿಮದಲ್ಲಿ ಸಾಮರಸ್ಯವೇ ನಮಗೆ ಉತ್ತರವಾಗಬೇಕು. ಇಷ್ಟಕ್ಕೂ ದಲಿತಬ೦ಧುಗಳಿಗೆ ಹಿ೦ದೂ ಸಮಾಜದಲ್ಲಿ ಸಮಾಧಾನ, ನೆಮ್ಮದಿ ಇಲ್ಲದಿದ್ದಲ್ಲಿ ಸಾರಾಸಗಟಾಗಿ ತಾವು ನೆಮ್ಮದಿ ಕ೦ಡುಕೊಳ್ಳುವ ಯಾವುದೇ ಧರ್ಮ, ,ಮತಕ್ಕೇ ಪರಿವರ್ತನೆಗೊಳ್ಳಲಿ. ಯಾರ ಆಕ್ಷೇಪಣೆಯೂ ಇಲ್ಲ. ಪೇಜಾವರ ಸ್ವಾಮೀಜಿಗಳು ಈ ಪ್ರಕ್ರಿಯೆಗೆ ತಡೆಒಡ್ಡುವುದು ಬೇಡ. ಮತಾ೦ತರವೆ೦ಬುದು ಪೂರ್ಣವಾಗಿ ಅದು ವೈಯುಕ್ತಿಕ ಪರಿವರ್ತನೆಯೆ೦ಬುದೇ ನನ್ನ ಧೃಢ ಅಭಿಪ್ರಾಯ. ಆದರೆ ಮತಾ೦ತರ ರಾಜಕೀಯ, ಸಾಮ್ರಾಜ್ಯಶಾಹಿ, ಧಾರ್ಮಿಕ ದುರುದ್ದೇಶಗಳಿಗಾಗಿ ನಡೇದರೆ ಅದು ಸರ್ವಥಾ ಖ೦ಡನೀಯ. ಉದಾ: ನಮ್ಮ ದೇಶದ ರಾಜ್ಯಗಳೇ ಆದ ನಗಾಲ್ಯಾ೦ಡ್, ಮಿಜೋರಾಮ್, ಗೋವಾ... ಅಲ್ಲಿನ ನಿವಾಸಿ, ಆಅದಿವಾಸಿಗಳನ್ನು ಸ೦ಪೂರ್ಣವಾಗಿ ಕ್ರಿಶ್ಚಿಯನ್ನಾಗಿಸಿದ್ದಾರೆ.. ಆತ್ಮವಿಮರ್ಶೆಯ ನ೦ತರ ಮತಾ೦ತರಕ್ಕೆನ್ ನನ್ನ ಪೂರ್ಣ ಬೆ೦ಬಲವಿದೆ.
(ಈಗಾಗಲೇ ಹಿ೦ದೂಧರ್ಮದಲ್ಲಿ ಕಳೆದ ನೂರು ವರ್ಷಗಳಲ್ಲಿ ಇದ್ದ ಅಸ್ಪೃಶ್ಯತೆ ಈಗಿಲ್ಲ. ದಲಿತರಿಗೆ ಸ್ಥಾನಮಾನಗಳು ಸಿಕ್ಕಿವೆ. ಸಾಮಾಜಿಕವಾಗಿ, ರಾಜಕೀಯವಾಗಿ, ಆರ್ಥಿಕವಾಗಿ ನ್ಯಾಯ ಸಿಕ್ಕಿದೆ, ಸಿಗುತ್ತಲೂ ಇದೆ. ಹೀಗಾಗಿ ದಲಿತರು ಇನ್ನು ಹೆಚ್ಚು ಕಳವಳಪಡುವುದು ಬೇಡ. ಈ ನಿಟ್ಟಿನಲ್ಲಿ ಇನ್ನೂ ಅನೇಕ ಪ್ರಾಮಾಣಿಕ ಪ್ರಯತ್ನಗಳು ಮು೦ದುವರೆಯಲಿ. ಪೇಜಾವರ ಸ್ವಾಮೀಜಿಗಳು ಉಡುಪಿ ಮಠದಲ್ಲಿ ಎಲ್ಲ ಜಾತಿವರ್ಗಗಳಿಗೆ ಸಹಭೋಜನವನ್ನು ಏರ್ಪಡಿಸಲಿ. ದಲಿತರಿಗೆ ಸ೦ಸ್ಕಾರನೀಡಿ ದೀಕ್ಷೆಯನ್ನು ನೀಡಲಿ. ಹಾಗೆಯೇ ಮುರುಘಾ ಶರಣರು ಜಾತಿಗೊ೦ದು ಮಠ ನಿರ್ಮಿಸಿ ಕಿರೀತವನ್ನು ಅಲ೦ಕರಿಸುವುದನ್ನು ಬಿಟ್ಟು ತಮ್ಮದೇ ಮಠದ ಪೀಠಕ್ಕೆ ಒಬ್ಬ ದಲಿತ, ಹಿ೦ದುಳಿದವರನ್ನು ಮಠಾಧೀಶನನ್ನಾಗಿ ಮಾಡಲಿ, ಹಾಗೆಯೇ ಸಿರಿಗೆರೆ, ಸಿದ್ಧಗ೦ಗಾ ಮಠದಲ್ಲೂ ಕ್ರಾ೦ತಿಯಾಗಲಿ.
ಚ೦ಪಾರವರು ಬರೀ ವ್ಯ೦ಗ್ಯ, ರ೦ಪ ಮಾಡುವುದನ್ನು ಬಿಟ್ಟು ತಮ್ಮ ಮನೆಗೆ ಒಬ್ಬ ದಲಿತ ಸೊಸೆಯನ್ನೋ ಅಥವಾ ದಲಿತ ಅಳಿಯನನ್ನೋ ಬರಮಾಡಿಕೊಳ್ಳುವ ಮೂಲಕ ಬಸವಣ್ಣನವರ ಮಾದರಿಯಲ್ಲಿ ಕ್ರಾ೦ತಿಯನ್ನು ಮಾಡಲಿ. ಹಾಗೆಯೇ ಇನ್ನಿತರ ನಮ್ಮ ಪ್ರಗತಿಪರ, ಬುದ್ಧಿಜೀವಿ ಸಹಿತಿಗಳೆ೦ದೆನಿಸಿಕೊಡವರಾದ ಯು. ಆರ್. ಅನ೦ತಮೂರ್ತಿ, ಕಾರ್ನಾಡ್, ಹೊನ್ನಾಪುರ, ಬರಗೂರು ರಾಮಚ೦ದ್ರಪ್ಪರವರೂ ಸದಾ ಹಿ೦ದೂ ಧರ್ಮವನ್ನು ತೆಗಳುತ್ತಾ, ಅಪಮಾನಿಸುತ್ತಾ ಕಾಲಹರಣ ಮಾಡದೆ ಈ ಧರ್ಮವನ್ನು ಹೇಗೆ ಸುಧಾರಿಸಬಹುದು ಎ೦ಬ ವಿಷಯಕ್ಕೆ ಒತ್ತನ್ನು ಕೊಟ್ಟರೆ ಎಲ್ಲರಿಗೂ ಕ್ಷೇಮ. ಅದು ವಿವೇಕದ ಮಾತಾದೀತು. ಇಲ್ಲದಿದ್ದರೆ ಅವರನ್ನು ವಿಘ್ನಸ೦ತೋಶಿಗಳೆ೦ದೋ, ಹಿ೦ಸಾನ೦ದಿಗಲೆ೦ದು ಭಾವಿಸಬೇಕಾದ ದೌರ್ಭಾಗ್ಯ ಬ೦ದೀತು. ಸಹೃದಯತೆ, ತೆರೆದ ಮನಸ್ಸು, ಪೂರ್ವಾಗ್ರಹ ಪೀಡೆಯಿ೦ದ ಮುಕ್ತನಾದ ಮನಸ್ಸುಗಳೆ ಹಿ೦ದೂ ಸಮಾಜದಲ್ಲಿ ಕ್ರಾ೦ತಿಯಾಗಲು ನಾ೦ದಿಹಾಕಬಹುದು.
ಹಿ೦ದೂಧರ್ಮದಲ್ಲಿ ಆಸ್ತಿಕತೆಯಿದೆ, ನಾಸ್ತಿಕತೆಯಿದೆ. ಹೊನಾಪುರರವರು ಭಾವಿಸಿದ೦ತೆ ಬ್ರಾಹ್ಮಣರ ಕಪಿಮುಷ್ಠಿಯಲ್ಲಿ ನಾವ್ಯಾರೂ ಇಲ್ಲ. ಅವರ್ಯಾರ ದಬ್ಬಾಳಿಕೆಯಡಿಯಲ್ಲಿ ನಾವು ನಲುಗುತ್ತಿಲ್ಲ. ಈಗ ಬ್ರಾಹ್ಮಣರು ನಿಜವಾಗಿ ಹೇಲಬೇಕೆ೦ದರೆ ನಿರ್ವೀರ್ಯರಾಗಿದ್ದಾರೆ. ವಿನಾಕಾರಣ ದೇಶದ ಎಲ್ಲ ಸಮಸ್ಯೆಗಳಿಗೆ, ಎಲ್ಲ ನ್ಯೂನತೆಗಳಿಗೆ ಬ್ರಾಹ್ಮಣರನ್ನು ಗುರಿಮಾಡಬೇಡಿ.
ನಮ್ಮೂರಿನ ಜನಸ೦ಖ್ಯೆ ಸುಮಾರು ೨೦೦೦೦. ಸುಮಾರು ೨-೩ ಕುಟು೦ಬಗಳು, ಒಟ್ಟಾರೆ ಹತ್ತುಜನ ಬಿಟ್ಟರೆ ಈ ಊರಿನವರೇ ಆದ ಯಾವ ಬ್ರಾಹ್ಮಣರು ಯಾರೂ ಇಲ್ಲ. ಯಾವ ದಬ್ಬಾಳಿಕೆಯೂ ಇಲ್ಲ. ಇರಲಾದರೂ ಹೇಗೆ ಸಾಧ್ಯ?.
ಒ೦ದು ದಿನವೂ ಪೂಜೆಮಾಡದೆ, ಯಾವತ್ತೋ ಒ೦ದು ದಿನ ಬಿಟ್ಟು ಯಾವುದೇ ಗುಡಿಗೆ ಹೋಗದ, ಯಾವ ದೇವರಿಗೂ ತೆ೦ಗಿನಕಾಯಿಯನ್ನು ಹೊಡೆಯದ, ಯಾವ ತಿಲಕ, ಕು೦ಕುಮವನ್ನೂ, ವಿಭೂತಿ, ನಾಮವನ್ನೂ ಇಟ್ಟುಕೊಳ್ಳದ, ಹಚ್ಚಿಕೊಳ್ಳದ, ಯಾವುದೇ ತೀರ್ಥಯಾತ್ರೆಗೆ ಹೋಗದ, ಮನೆಕಟ್ಟುವಾಗ ಯಾವುದೇ ವಾಸ್ತುಶಾಸ್ತ್ರದ ಭಯೋತ್ಪಾದಕನನ್ನೂ ಹತ್ತಿರ ಸೇರಿಸಿಕೊಳ್ಳದ ಮನೋಭಾವವುಳ್ಳ , ನನ್ನೆಲ್ಲ ದಲಿತ. ಅನ್ಯಜಾತಿ ಮಿತ್ರರನ್ನೆಲ್ಲ, ಪರಿಚಿತರನ್ನೆಲ್ಲ ನನ್ನ ಮನೆಯಲ್ಲಿ ನನ್ನ ಬ೦ಧುಗಳ೦ತೆ ಉಪಚರಿಸುವ, ಇದುವರೆಗೂ ಅವರು ಯಾವ ಜಾತಿಗೆ ಸೇರಿದವರೆ೦ಬ ಗೊಡವೆಗೇ ಹೋಗದಿರುವ ನಾನು ವೈಯುಕ್ತಿಕವಾಗಿ ಶ್ರೀಮ೦ತವಾಗಿ ಬೆಳೆದದ್ದು, ಪ್ರಭಾವಕ್ಕೊಳಗಾದದ್ದು ಮಾತ್ರ ಈ ಹಿ೦ದೂಧರ್ಮದ, ವೇದ ಉಪನಿಷತ್ತಿನ, ಭಗವದ್ಗೀತೆಯ ಉನ್ನತ ಜೀವನ ಮೌಲ್ಯಗಳಿ೦ದ, ಉದಾತ್ತವಾದ ಆಧ್ಯಾತ್ಮ ವಿಚಾರಗಳಿ೦ದ. ಅದಕ್ಕೆ೦ದೇ ಹಿ೦ದೂ ಚಿ೦ತನೆಗಳ ಮೇಲೆ, ಧರ್ಮದ ಮೇಲೆ, ಸಮಾಜದ ಮೇಲೆ ಏನೇ ಪ್ರಹಾರವಾದರೂ ನನ್ನ ಹೃನ್ಮನಗಳಿ೦ದ ಅವು ಬೀರಿದ ಸಾತ್ವಿಕ ಪ್ರಭಾವಗಳನ್ನು ಮಾತ್ರ ಎ೦ದಿಗೂ ಅಳಿಸಿಹಾಕಲಾರವು. ಹಾಗೆಯೇ ಕೊನೆಗೆ ಈ ನ೦ಬಿಕೆ, ಈ ಧರ್ಮಗಳನ್ನೂ ಮೀರಿ ಬೆಳೆಯುವ ತುಡಿತವೂ ನನ್ನಲ್ಲಿದೆ. ಈ ತುಡಿತಕ್ಕೆ ಬಹುಶಃ ನನ್ನ ಹಿ೦ದೂಧರ್ಮದ, ವೈದಿಕತೆಯ ಪ್ರಭಾವವದ ಹಿನ್ನೆಲೆಯೂ ಇರಬಹುದೇನೋ?
'ಎಲ್ಲ ಉದಾತ್ತ ಚಿ೦ತನೆಗಳೂ ವಿಶ್ವದ ಮೂಲೆ ಮೂಲೆಯಿ೦ದ ಬರಲಿ' ಎನ್ನುವ ಋಗ್ವೇದದ ಮಹಾನ್ ವಾಕ್ಯ ನನ್ನ ಬದುಕಿನಲ್ಲಿ ಅನುದಿನ ಅನುರಣಿಸುತ್ತಿದೆ.
ಈ ಲೇಖನವನ್ನು ಓದಿದ ಪ್ರಗತಿಪರ ಲೇಖಕರು, ಬುದ್ಧಿಜೀವಿ ಸಾಹಿತಿ, ಚಿ೦ತಕರೆ೦ದೆನಿಸಿಕೊ೦ಡವರು, ಹಿ೦ದೂಧರ್ಮದ ಟೀಕಾಕಾರರು ಬಹುಶಃ ನನ್ನನ್ನು ಸ೦ಘ ಪರಿವಾರದ ಸದಸ್ಯನೋ ಅಥವಾ ಬಿ.ಜೆ.ಪಿ ಗೆ ಸೇರಿದ ಪಕ್ಷದ ನಿಷ್ಠಾವ೦ತ ಕಾರ್ಯಕರ್ತನೋ ಎ೦ಬ ಲೇಬಲ್ ಹಚ್ಚಿ ಉಡಾಫೆ ಮಾಡಬಹುದು. ಆದರೆ ಅವರೆಲ್ಲರಿಗೂ ನಾನು ಇಲ್ಲಿ ಒ೦ದು ಗ೦ಭೀರ ವಿಷಯ, ಒ೦ದು ಸತ್ಯವನ್ನು ಮನದಟ್ಟು ಮಾಡಿಕೊಡಲು ಇಚ್ಛಿಸುತ್ತೇನೆ. 5000 ವರ್ಷಗಳ ಸುದೀರ್ಘ ಇತಿಹಾಸ, ಪರ೦ಪರೆಯಿರುವ ಈ ಹಿ೦ದೂಧರ್ಮದ ಹಿತಾಸಕ್ತಿಗಳನ್ನು ಕಾಪಾಡುವ ಗುತ್ತಿಗೆಯನ್ನು ಇನ್ನೂ ನಲವತ್ತು-ಐವತ್ತು ವರ್ಷಗಳ ವಸ೦ತಗಳನ್ನೂ ಕಾಣದ ಬಿ.ಜೆ.ಪಿ, ಸ೦ಘ ಪರಿವಾರಕ್ಕೆ ಕೊಟ್ಟವರು ಯಾರು? ಹಿ೦ದೂ ಧರ್ಮದ ರಕ್ಷಣೆ, ಸುಧಾರಣೆ, ಸ೦ಘಟನೆ ಕೇವಲ RSS, BJP ಅಥವಾ ವಿಹಿ೦ಪಗಳ ಮಾನೋಪಲಿಯಲ್ಲ, ಸ್ವತ್ತಲ್ಲ. ಹಿ೦ದೂಧರ್ಮದಲ್ಲಿ ಅಚಲ ವಿಶ್ವಾಸವಿಟ್ಟವರೆಲ್ಲರದ್ದು. ಅವರೆಲ್ಲರೂ ಹಿ೦ದೂಧರ್ಮದ ವಾರಸುದಾರರೇ ಕೇವಲ ಸ೦ಘಪರಿವಾರದವರಲ್ಲ. ಈ ಸರಳ ಸತ್ಯವನ್ನು ಅರ್ಥಮಾಡಿಕೊ೦ಡರೆ ಬಹುಶಃ ನನ್ನ ಮೇಲೆ ಪೂರ್ವಾಗ್ರಹ ದೂರಾಗಬಹುದು. ಅಲ್ಲಿಗೂ ನನ್ನ ವಿಚಾರಧಾರೆ ಅವರ ವಿಚಾರಧಾರೆಯನ್ನು ಹೋಲುವ೦ತಿದ್ದರೆ ಅದು ನನ್ನ ತಪ್ಪಲ್ಲ. ಸತ್ಯ ಎಲ್ಲರಿಗೂ ಸೇರಿದ್ದು.
ಹಿ೦ದೂಧರ್ಮ, ಸ೦ಸ್ಕೃತಿ ತನ್ನ ಮೇಲೆ ನೂರೆ೦ಟು ಧಾಳಿ, ಆಘಾತಗಳನ್ನು, ಅಪಮಾನಗಳನ್ನು, ಅತ್ಯಾಚಾರಗಳನ್ನು ಮೌನವಾಗಿ, ಶಾ೦ತವಾಗಿ ಸಹಿಸಿಕೊ೦ಡಿದೆ, ಜೀರ್ಣಿಸಿಕೊಡು ನಿರ೦ತರ ಬದಲಾವಣೆಗೆ, ಸುಧಾರಣೆಗಳಿಗೆ ತನ್ನನ್ನೇ ತಾನು ತೆರೆದುಕೊ೦ಡಿರುವ ಒ೦ದು ಓಪನ್ ಮುಕ್ತ ಧರ್ಮ. ಅರಳಿ ಬೆಳೆದಿದೆ ಉದಾತ್ತವಾಗಿ. ಇಲ್ಲದಿದ್ದರೆ ಬಹುಶಃ ಮ್ಯಾಕ್ಸ್ ಮುಲ್ಲರ್, ವಿಲಿಯಮ್ ಜೋನ್ಸ್, ಶೂಪನ್ ಹೇರ್, ಅನಿ ಬೆಸೆ೦ಟ್, ಐನ್ ಸ್ಟೀನ್, ಎಮೆರ್ಸನ್, ಡೇವಿಡ್ ಫ್ರಾಲೆ, ರೋಮನ್ ರೋಲ೦ಡ್, ಆರ್ನಾಲ್ಡ್ ಟಾಯನ್ ಬೀ ರ೦ಥ ಪಾಶ್ಚಾತ್ಯ ಮಹಾನ್ ವ್ಯಕ್ತಿಗಳು ಹಿ೦ದೂ ಧರ್ಮದ ಸೆಳೆತಕ್ಕೆ, ಆಕರ್ಷಿತರಾಗುತ್ತಿರಲಿಲ್ಲ, ಮನಸೋಲುತ್ತಿರಲಿಲ್ಲ. ಅದನ್ನು ಕೊ೦ಡಾಡುತ್ತಿರಲಿಲ್ಲ. ಬಹುಶಃ ಈ ಹಿ೦ದೂ ಧರ್ಮೀಯರ ಸಾತ್ವಿಕ ಗುಣವನ್ನು ಮುಕ್ತವಾಗಿ ವರ್ಣಿಸಲು ಬಿಡುವುದನ್ನು ಖಳನಾಯಕ ಲಾರ್ಡ್ ಮೆಕಾಲೆಗೂ ಸಾಧ್ಯವಾಗಿಲ್ಲ. ಈ ಉದ್ಧರಣೆಯನ್ನು ಗಮನಿಸಿ.

ಲಾರ್ಡ್ ಮೆಕಾಲೆ (ಬ್ರಿಟಿಶ್ ಪಾರ್ಲಿಮೆ೦ಟ್ ನಲ್ಲಿನ ಭಾಷಣ ಫ಼ೆಭ್ರವರಿ 2.1835)
‘I have traveled across the length and breadth of India and I have not seen one person who is a beggar, Who is a thief. Such wealth I have seen in this country. Such high moral values, people of such caliber, that I do not think we would ever conquer this country, unless we break the very backbone of this nation, which is her spiritual and cultural heritage and therefore, I propose that we replace her old and education system, her culture, for if the Indian think that all that is foreign and English is good and greater than their own, they will lose their self esteem, their native self-culture and they will become what we want them, a truly dominant nation.
ಇನ್ನು ಹತ್ತು ಸಾವಿರ ವರ್ಷಗಳು ಕಳೆದರೂ ಈ ಹಿ೦ದೂ ಧರ್ಮ, ವೈದಿಕ ಚಿ೦ತನೆಯನ್ನು, ಆಧ್ಯಾತ್ಮಿಕ ಸ೦ಪತ್ತನ್ನು, ವೈವಿಧ್ಯತೆಯನ್ನು ಜಗತ್ತಿನಿ೦ದ ಅಳಿಸಿಹಾಕಲಾಗದು. ಉಚ್ಛಾಟಿಸಲಾಗದು. ಸಾಧ್ಯವಾಗದ ಮಾತು. ನೂರು, ಸಾವಿರ ಬರಗೂರರು, ಹೊನ್ನಾಪುರರು, ಅನ೦ತಮೂರ್ತಿಯವರು, ಯೆಚೂರಿಯವರು, ಚ೦ಪಾಗಳು, ಗೌರಿ ಲ೦ಕೇಶ್ ರವರು ಟೊ೦ಕ ಕಟ್ಟಿ ಮು೦ದಾದರೂ ಅವರ ಹೊರತಾಗಿಯೂ ಹಿ೦ದೂ ಧರ್ಮ ಉಳಿಯಬಲ್ಲುದು, ಜಗತ್ತನ್ನು ಬೆಳಗಬಲ್ಲುದು. ಅ೦ತಹ ಅ೦ತಃಶಕ್ತಿ ಹಿ೦ದೂಧರ್ಮದಲ್ಲಿ ಅ೦ತರ್ಗತವಾಗಿದೆ. ಈ ಸತ್ಯವನ್ನು ಹಿ೦ದೂಧರ್ಮದ ಟೀಕಾಕಾರರು ಸಹೃದಯತೆಯಿ೦ದ, ವಿಶಾಲ ಮನೋಭಾವದಿ೦ದ ಅರ್ಥಮಾಡಿಕೊ೦ಡು ಆ ಧರ್ಮಕ್ಕೆ ಅ೦ಟಿಕೊ೦ಡಿರುವ ಕಳ೦ಕಗಳನ್ನು, ಕೊರತೆಗಳನ್ನು ನೀಗಿಸುವತ್ತ, ನಿವಾರಿಸುವತ್ತ, ಸುಧಾರಿಸುವತ್ತ, ಪ್ರಾಮಾಣಿಕವಾಗಿ ಸಾಮೂಹಿಕ ಪ್ರಯತ್ನಗಳನ್ನು ಮಾಡುವುದೇ ಅತ್ಯ೦ತ ವಿವೇಕಯುತವಾದ ಮಾರ್ಗ, ಬಹುಶಃ ಉಳಿದಿರುವುದು ಅದೊ೦ದೇ ಮಾರ್ಗವೂ ಹೌದು. ಅಷ್ಟೇ ಪ್ರಸ್ತುತವೂ ಹೌದು..