ಚಲಿಸದ ಮೆಟ್ಟಿಲುಗಳು...

ಚಲಿಸದ ಮೆಟ್ಟಿಲುಗಳು...

ಬರಹ

ಕಲಭಾಗದ ಚರ್ಚ್ ಗೋಡೆಯ ಬಣ್ಣ ಬಿಳಿಯದಾಗಿದ್ದರೂ ಸ್ವಲ್ಪ ಕೆಂಪಾಗಿ ಕಾಣಲು ಸಂಜೆ ಆರು ಗಂಟೆಯ ಸೂರ್ಯ ಕಾರಣವಾಗಿದ್ದ. ಬೆಳ್ಳಕ್ಕಿಗಳು ದುಡಿದು ಬಂದು ಸುಸ್ತಾದವರಂತೆ ಮರದ ಎತ್ತರದ ಟೊಂಗೆಯ ಮೇಲೆ ಕುಳಿತು ಮಾತಾಡುತ್ತಿದ್ದವು. "ಲೇಟಾಗೋಯ್ತು... ಇವತ್ತು" ಎಂದು ತನ್ನಷ್ಟಕ್ಕೇ ಮಾತಾಡುತ್ತಾ ಚರ್ಚ್ ನ ಮುಂದುಗಡೆ ಇರುವ ಲೈಬ್ರರಿಯ ಮೆಟ್ಟಿಲೇರುತ್ತಿದ್ದ ಮಾಬ್ಲಣ್ಣನಿಗೆ ಏಕೋ ಎವತ್ತು ಯಾವತ್ತಿಗಿಂತ ಲೈಬ್ರರಿ ಎತ್ತರದಲ್ಲಿದೆ ಎನಿಸುತ್ತಿತ್ತು.. ರವಿ ಜಾರುತ್ತಲೇ ಇದ್ದ.. ವಯಸ್ಸಾಗುತ್ತಿದ್ದ ಮಾಬ್ಲಣ್ಣನಿಗೆ ಮೆಟ್ಟಿಲುಗಳು ಆ ನಸುಗತ್ತಲಿನಲ್ಲಿ ಸರಿಯಾಗಿ ಕಾಣದಿದ್ದರೂ ಇಪ್ಪತ್ತೆರಡು ವರ್ಷಗಳಿಂದ ದಿನದ ಹಾದಿಯಾಗಿದ್ದರಿಂದ ಒಮ್ಮೆಯೂ ಮೆಟ್ಟಿಲುಗಳ ಬಗ್ಗೆ ಗಮನಿಸದೆ ಏನೋ ಆಲೋಚನೆ ಮಾಡುತ್ತಾ ನಡೆಯುತ್ತಿದ್ದ... ಏಕೆಂದರೆ ಮೆಟ್ಟಿಲುಗಳು ತಮ್ಮ ಜಾಗ ಬಲಿಸುವುದಿಲ್ಲ.

ಶಾಸ್ತ್ರಿ ಅಂಗಡಿಯಲ್ಲಿ ಕೆಲಸ ಮಾಡುತ್ತಾ ಇದ್ದಾಗ ಕಂಡ ಹಳದೀ ಕವರಿನ ಗೃಹಪ್ರವೇಶದ ಆಮಂತ್ರಣ ಪತ್ರಿಕೆಯೊಂದು ಆತನನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿತ್ತು. ಜವಳಿ ಅಂಗಡಿಯಲ್ಲಿನ ಗೌಜಿಗೆ ಮರೆತೇ ಹೋಗಿದ್ದ ಅವನ ಸಣ್ಣ ಗುರಿಗೆ ಆ ಪತ್ರಿಕೆ ಕಲ್ಲು ಬೀಸಿತ್ತು.. ಗುರಿ ತಪ್ಪಲಿಲ್ಲ.. ಅಪ್ಪನ ಆಸ್ತಿ ಎಂದು ಅವನಿಗಿದ್ದದ್ದು ಒಂದು ಸಣ್ಣ ಮನೆಯೊಂದೇ.. ಈಗ ಅಪ್ಪನೂ ಇಲ್ಲ.. ತನಗೊಂದು ದೊಡ್ದ ಮನೆ ಕಟ್ಟಿಕೊಳ್ಳಬೇಕು ಎಂಬ ಆಸೆ ಮೂಡಿದ್ದು ಶಾಲೆಗೆ ಹೋಗುವಾಗ.. ಈ ಆಮಂತ್ರಣ ಪತ್ರಿಕೆ ಅದನ್ನು ನೆನಪಿಸಿತ್ತು...ತೆಗೆದು ಓದಿದ.. ನಾಗರಾಜ ಶೆಟ್ಟಿ ಸುರ್ಕಟ್ಟೆಯಲ್ಲಿ ಹಾಲಿನ ಡೇರಿ ಪ್ರಾರಂಭಿಸಿ ನಾಲ್ಕೈದು ವರ್ಷಗಳೊಳಗೆ ಮನೆ ಕಟ್ಟಿಸಿದ್ದ.. ಜೊತೆಗೆ ಸ್ವಲ್ಪ ಜನರನ್ನೂ ಸಂಪಾದಿಸಿದ್ದ.. ಮಾಬ್ಲಣ್ಣ ಕವರು ಮಾತ್ರ ಅಲ್ಲಿಯೇ ಬಿಟ್ಟು ಕರೆಯೋಲೆಯನ್ನು ಕಿಸೆಯಲ್ಲಿ ಹಾಕ್ಕೊಂಡು ಮನೆಯ ಬಸ್ ಹತ್ತಿದ..

ಮಾಬ್ಲಣ್ಣ ಹಾಲು ಡೇರಿಯನ್ನು ಪ್ರಾರಂಭಿಸುವುದಕ್ಕೆ ನಾಗರಾಜ ಶೆಟ್ಟಿ ಕಾಗದಪತ್ರಗಳ ಸಹಾಯ ಮಾತ್ರ ಮಾಡಿದ್ದು... "ಇವರಿಗೆ ಅರ್ಜಿ ಕೊಡು.. ಅವರಿಗೆ ಅರ್ಜಿಕೊಡು.. ಶಾನುಭೋಗರಿಗೆ ಒಂದೈವತ್ತು ಕೊಟ್ರೆ ಮಾತ್ರ ಕೆಲಸ ಆಗುದೂ.." ಎಲ್ಲಾ ಹೇಳಿದ್ದು ಮಾತ್ರ.. ಬಿಟ್ಟರೆ ಉಳಿದ ಕೆಲಸವೆಲ್ಲಾ ಮಾಬ್ಲಣ್ಣಂದೇ..ಡೇರಿ ಮಾಡಲು ಜಾಗ ಹುಡುಕುವುದರಿಂದ ಹಿಡಿದು "ಹಾಲಿನ ಕೇಂದ್ರ,ಕಲಭಾಗ " ಅಂತ ಕ್ಯಾನಿನ ಮೇಲೆ ಬರೆಸುವುದರ ತನಕ ಮಾಬ್ಲಣ್ಣ ನಿದ್ರೆ ಮಾಡಿರಲಿಲ್ಲ... ಚರ್ಚ್ ನ ಮುಂದುಗಡೆಯ ಲೈಬ್ರರಿ ಓದುವುದಕ್ಕೆ ಬಿಟ್ಟರೆ ಏನೂ ಪ್ರಯೋಜನವಿಲ್ಲ.. ಅಲ್ಲಿಗೆ ಓದಲು ಈ ಕಲಭಾಗದಲ್ಲಿ ಯಾರೂ ಹೋಗುವುದೂ ಇಲ್ಲಾ..ಹೀಗಾಗಿ ಅದೇ ಡೇರಿ ಮಾಡಲು ಸೂಕ್ತ ಜಾಗ ಅಂತ ನಿರ್ಧಾರ ಮಾಡಿ ಶಾನುಭೋಗರಿಗೆ ಹೇಳಿದ್ದ.. " ನೋಡು ಲೈಬ್ರರಿಯನ್ನೆಲ್ಲಾ ಬಂದ್ ಮಾಡಕಾಗಲ್ಲ.. ನೀನು ಬೇಕಾದರೆ ಅದಕ್ಕೆ ಅಂಟಿಕೊಂಡಿರುವ ಪಂಚಾಯತದ ಒಂದು ಖೋಲಿ ಕಾಲಿ ಇದೆ ..ಅಲ್ಲೇ ಮಾಡು.. " ಅವರಿಗೆ ಐವತ್ತು ಕೊಟ್ಟಮೇಲೆ ಅವರು ಹೇಳಿದ್ದರು..

ಕೋಣೆಗೆ ಬಾಗಿಲು ಬಿಟ್ಟು ಏನೂ ಇರಲಿಲ್ಲ..ನೆಲಕ್ಕೆ ಹಾಕಿದ್ದ ಸಿಮೆಂಟ್ ಕಿತ್ತು ನೆಲಕ್ಕೆ ಕಜ್ಜಿ ಆದಂತಿದ್ದು... ಜೇಡರ ಬಲೆಗಳಿಗೆ ಬಹುಶಃ ಇಲ್ಲಿ ಯಾರಾದರೂ ಬರುವುದು ಇಷ್ಟವಿರಲ್ಲಿಲ್ಲ ಅನಿಸುತ್ತದೆ.. ಅದಕ್ಕಾಗಿಯೇ ಇರುವ ಒಂದು ಬಲ್ಬನ್ನು ಕಾಣದಂತೆ ಬಚ್ಚಿಟ್ಟಿದ್ದವು.. ಮಾಬ್ಲಣ್ಣ ಬಂದಮೇಲೆ ಸೋತ ಸಾಮಂತರಂತೆ ಮೂಲೆ ಸೇರಿದ್ದವು... ಏಕೋ ಎನೋ ಗೊತ್ತಿಲ್ಲದಂತೆ ಇಲ್ಲದ ಹುರುಪೊಂದು ಮಾಬ್ಲಣ್ಣನ ಮನಸ್ಸನ್ನು ಹೊಕ್ಕಿತ್ತು.. ಅವಶ್ಯಕತೆ ಅನಿವಾರ್ಯವಾದಾಗ ಹೀಗೆ ಆಗುವುದು ಮಾನವ ಸಹಜ ಗುಣ.. ಮಾಬ್ಲಣ್ಣ ಅಪ್ಲಿಕೇಶನ್ ಕೊಡುವಾಗ "ಮಹಾಬಲ ಹೆಗಡೆ" ಎಂದು ಕೊನೆಯಲ್ಲಿ ಎಂದಿಗಿಂತ ದೊಡ್ದದಾಗಿಯೇ ಸಹಿ ಹಾಕುತ್ತಿದ್ದ.. ಹಾಲು ಒಕ್ಕೂಟಕ್ಕೊಂದು ಫೋಟೋ ಕೊಡಬೇಕೆಂದು ಗಜಾನನ ವೈದ್ಯರು ಹೇಳಿಕಳುಹಿಸಿದಾಗ ಹೊಸ ಅಂಗಿ ಹಾಕಿ, ನೀಟಾಗಿ ತಲೆ ಬಾಚಿ, ಪೌಡರ್ ಹಚ್ಚಿ ಸ್ತೂಡಿಯೋಕ್ಕೆ ಹೊರಟಿದ್ದ.. ಅದನ್ನು ನೋಡಿ ನೆರೆಮನೆಯ ಸಾವಿತ್ರಕ್ಕ "ಏನೋ ಮಾಬ್ಲ... ಹುಡ್ಗಿ ನೋಡ್ಲಿಕ್ಕಾ..? " ಅಂತ ಅಣಕ ಮಾಡಿ ಕಿಸಕ್ಕನೆ ನಕ್ಕಿದ್ದಳು..

ಮಾಬ್ಲಣ್ಣ ಸಂಸಾರದ ಬಗ್ಗೆ ಯೋಚಿಸಿಯೇ ಇರಲಿಲ್ಲ.. ಹಾಗೆ ಸುಮ್ಮ ಸುಮ್ಮನೆ ಯಾವ ವಿಷಯವನ್ನು ಯೋಚಿಸುವುದಿಲ್ಲ.. ಸ್ವಂತಿಕೆ ಎನ್ನುವುದು ಮಾಬ್ಲಣ್ಣನ ಜೀವನದಲ್ಲಿ ಮೊದಲಿನಿಂದಲೂ ಕಾಣದ ಸಂಗತಿ... ನಾಲ್ಕನೇ ಕ್ಲಾಸಿನಲ್ಲಿ ಇರಬೇಕಾದರೆ ಯಾರೋ ಹೇಳಿಕೊಟ್ಟರು ಎಂದು ಸುಧಾ ಅಕ್ಕೋರಿಗೆ "ಐ ಲವ್ ಯು" ಹೇಳಿದ್ದ.. ಅದರ ಅರ್ಥ ಆಗವನಿಗಾಗದಿದ್ದರೂ ಅದರ ನಂತರದ ಪರಿಣಾಮ ಮೂರು ದಿನಗಳ ವರೆಗೂ ಕಾಡಿತ್ತು.. "ಕಲಿಸುವ ಗುರುಗಳಿಗೆ ಅಂತ ಮಾತು ಹೇಳ್ತ್ಯಾ.. ಪೋಲಿ.." ಅಂತ ಅಪ್ಪನ ಕೈಲಿ ಹೊಡೆತ ತಿಂದು ಮೂರು ದಿನ ಜ್ವರ ಬಂದು ಮಲಗಿದ್ದ.. ವಿದ್ಯೆ ತಲೆಗೆ ಹತ್ತಲಿಲ್ಲ.. ಹತ್ತನೇ ಕ್ಲಾಸ್ ನಲ್ಲಿ ಇರಬೇಕಾದ್ರೆ ಕಾಮತರ ಮಗ ಗೇರುಬೀಜ ವ್ಯಾಪಾರ ಮಾಡಿದ್ದನ್ನು ನೋದಿ ತಾನೂ ದುಡ್ಡು ಮಾಡಬೇಕೆಂದು ಆ ವ್ಯಾಪಾರಕ್ಕೂ ಕೈ ಹಾಕಿದ್ದ...ನಮ್ಮಂತವರಿಗೆಲ್ಲ ಅಲ್ವೋ ವ್ಯಾಪರ ಅಂದ ಅಪ್ಪನ ಮಾತು ಕೈಸುಟ್ಟು ಹೋದಮೆಲೆ ಅರಿವಿಗೆ ಬಂದಿತ್ತು.. ಹತ್ತರಲ್ಲಿ ಡುಮ್ಕಿ ಅವನನ್ನು ಶಾಸ್ತ್ರಿ ಅಂಗಡಿಯೆದುರು ತಂದು ನಿಲ್ಲಿಸಿತ್ತು. ಈಗ ಪುನಃ ಸುರ್ಕಟ್ಟೆ ಶೆಟ್ಟೀ ಮಾಡದ್ದನ್ನು ನೋಡಿ ಡೇರಿ ಪ್ರಾರಂಭಿಸಿದವ ಈ ಮಾಬ್ಲಣ್ಣ. ಸಮುದ್ರದ ಅಲೆಗಳು ಮುಂದಿನದ್ದನ್ನು ಹಿಂಬಾಲಿಸಿ ದಡಕ್ಕೆ ಬಂದು ಅಪ್ಪಳಿಸಿ ಮೌನವಾಗುವ ರೀತಿ..

ಪ್ರಾರಂಭದಲ್ಲಿ ಐದಾರು ಮನೆಗಳಿಂದ ಮಾತ್ರ ಹಾಲು ಬರುತ್ತಿತ್ತು... ಆ ಸಂಖ್ಯೆ ಇಪ್ಪತ್ತರಿಂದ ಮೂವತ್ತಾಗಲು ತಿಂಗಳೇ ಹಿಡಿಯಿತು.. ದಿನಾ ಆರು ಗಂಟೆಗೆ ಬಂದು ಡೇರಿ ಬಾಗಿಲು ತಗೆದು ಕೂರುತ್ತಿದ್ದುದು ಮಾಬ್ಲಣ್ಣ ಮಾತ್ರ.. ಹಾಲು ಕೊಡಲು ಜನ ಬರುವುದು ಆರುವರೆಯಿಂದ ಪ್ರಾರಂಭವಾದರೆ ಗಾಡಿ ಬರುವವರೆಗೂ ಮಾಬ್ಲಣ್ಣನಿಗೆ ಬಿಡುವಿಲ್ಲದ ಕೆಲಸ.. ಇವತ್ತು ಭಟ್ಟರ ಮನೆ ಹಾಲು ಯಾಕೆ ಬರಲಿಲ್ಲ.. ಸುಬ್ರಾಯನ ಮನೆ ಎಮ್ಮೆ ಕರು ಹಾಕಿತೋ ಏನೋ.. ಈ ರೀತಿ ಯೋಚಿಸುತ್ತಾ ಹಾಲು ಅಳತೆ ಮಾಡಿ ಅವರ ಕಾರ್ಡ್ ನಲ್ಲಿ ಬರೆದು ಕೊಡುವುದು ದಿನಚರಿಯಾಗಿತ್ತು. ಮೊದಲೆಲ್ಲಾ ಲೀಟರ್ ಗೆ ಇಂತಿಷ್ಟು ಎಂಬಂತಿದ್ದ ಲೆಕ್ಕ ಲ್ಯಾಕ್ಟೋಮೀಟರ್‍ ತಂದ ಮೇಲೆ ಹಾಲಿನ ಗುಣಮಟ್ಟದ ಮೇಲೂ ಬೆಲೆ ನಿರ್ಧರಿಸುವಂತಾಯಿತು. ಆಗ ಮಾಬ್ಲಣ್ಣನ ಸಹಾಯಕ್ಕೆ ಬಂದವ ಸುರ್‍ಏಶ.. ಬಿ.ಎ. ಮಾಡಿ ಮನೆಯಲ್ಲಿದ್ದವನಿಗೆ ಗ್ರಾಮ ಪಂಚಾಯತ ಸದಸ್ಯನಾದ ಅವನಪ್ಪನಿಂದ ಲೈಬ್ರರಿ ನೋಡಿಕೊಳ್ಳುವ ಕೆಲಸ ಸಿಕ್ಕಿತು.. ಆ ಸಂದರ್ಭದಲ್ಲಿ ಮಾಬ್ಲಣ್ಣನ ಎಲ್ಲಾ ಲೆಕ್ಕ ನೋಡಿಕೊಳ್ಳುತ್ತಿದ್ದವ ಸುರೇಶ.

ಹಾಲು ಗಾಡಿ ಸಂಜೆ ಏಳರಿಂದ ಏಳೂವರೆಯವರೆಗೆ ಯಾವಾಗ ಬೇಕಾದ್ರೂ ಬರ್ತಿತ್ತು.. ಸುರ್ಕಟ್ಟೆಯಲ್ಲಿ ನಾಗರಾಜ ಶೆಟ್ಟಿಯ ಡೇರಿಯ ಹಾಲಿನ ಕ್ಯಾನು ಹಾಕ್ಕೊಂಡು ಕಲಭಾಗದ ಮಾರ್ಗವಾಗಿ ಕೆಕ್ಕಾರ ಕಡೆ ಹೋಗುತ್ತಿತ್ತು. ಲೈಬ್ರರಿಯ ಎದುರಿಗೆ ಮೆಟ್ಟಿದ್ದುದರಿಂದ ಹಿಂಭಾಗದ ಚರ್ಚ್ ಮೂಲಕ ಗಾಡಿ ಡೇರಿಯನ್ನು ತಲುಪುತ್ತಿತ್ತು.ಮಾಬ್ಲಣ್ಣನಿಗೆ ವಿಚಿತ್ರ ಅನ್ನಿಸಿದ್ದು ಲ್ಯಾಕ್ಟೋಮೀಟರ್.. ಹಾಲಲ್ಲಿ ಮುಳುಗಿಸಿದರೆ ಹೇಗೆ ಪಾಯಿಂಟ್ ತೋರ್‍ಇಸುಉತದೆ ಎಂದು ಅರ್ಥವಾಗದಿದ್ದರೂ ಚರ್ಚಿಗೆ ಸಂಜೆ ಹೊತ್ತಿಗೆ ಟ್ಯೂಶನ್ ಹೆಳಿಸಿಕೊಳ್ಳಲು ಬರುವ ಕೆಲ ಹುಡುಗರಿಗೆ ಅದನ್ನು ತೋರಿಸಿ "ನೋಡ್ರೋ ಇದೇ ನಿಮ್ಮ ಪುಸ್ತಕದಲ್ಲಿ ಬರೋ ಲ್ಯಾಕ್ಟೋಮೀಟರ್.... ಹೇ..ಮುಟ್ಬೇಡಿ ಹಾಳಾಗುತ್ತೆ.." ಅಂತ ಒಂದೆರಡು ಸಲ ಮಾತಾಡಿದ್ದ.

ಬೆತ್ತಗೇರಿಯಲ್ಲಿ ಹೆಣ್ಣು ನೋಡಲು ಹೋಗೋಣ ಎಂದಾಗ ಮೊದಲು ಸ್ವಲ್ಪ ಹಿಂದೆ ಮುಂದೆ ನೋಡಿದರೂ ಶ್ರೀಪಾದ ಹೇಳಿದ ಅಂತ ಹೋದ.. ಹೋದವನು ಒಪ್ಪಿಯೇ ಬಂದ... ಮಾಬ್ಲಣ್ಣನಂತೇ ಕುಳ್ಳಗಿದ್ದ ಭಾಗೀರಥಿ ಮಾಬ್ಲಣ್ಣನ ಭಾಗವಾದಳು. ಹೊಸ ಸಂಸಾರಕ್ಕೆ ಒಂದು ಜಗಲಿಯ ಚಿಕ್ಕ ಮನೆ ಇನ್ನೂ ಸಣ್ಣದಾಗಿ ಕಂಡಿತು.ಮನದ ಆಸೆ ಸ್ವಲ್ಪ ಬಲಿಯಿತು..ಬೆಳೆಯಿತು..

ಎರಡು ವರ್ಷದ ಹಿಂದೆ ರಾಮಚಂದ್ರಾಪುರ ಮಠದಲ್ಲಿ ಗೋ ಸಮ್ಮೇಳನವಾದಾಗಲೇ ನಾಗರಾಜ ಶೆಟ್ಟಿಯ ಭೇಟಿ ಪುನಃ ಆಗಿದ್ದು.. ಈಗ ಆತ ಮುದುಕನಾಗಿದ್ದ..ಎಲ್ಲೋ ವಿಶಾಖಪಟ್ಟಣದಲ್ಲಿ ಮಗಳ ಮನೆಯಲ್ಲಿರ್ತಾನಂತೆ.. ಸನ್ಮಾನ ಅಂತ ಮಠಕ್ಕೆ ಬಂದಿದ್ದ.. ಇಪ್ಪತ್ತು ವರ್ಷಗಳ ಕಾಲ ಗೋ ಸೇವೆಯಲ್ಲಿ ಪಾತ್ರವಹಿಸಿದ್ದಕ್ಕಾಗಿ ಇಬ್ಬರಿಗೂ ಶಾಲು ಹೊದೆಸಿದರು.. ಮಾಬ್ಲಣ್ಣ ಭಾಗೀರಥಿಯನ್ನೂ ಕರೆದುಕೊಂಡು ಹೋಗಿದ್ದ.. ಹೊಸ ಅಂಗಿ ಹೊಲಿಸಿದ್ದ..ಮುಖಕ್ಕೆ ಪೌಡರ್ ಹಚ್ಚಿಕೊಂಡು ಮುಂದಿನ ಕುರ್ಚಿಯಲ್ಲಿ ಕುಳಿತು ಟೀ.ವಿ.ಯವರಿಗೆ ಫೋಸುಕೊಟ್ಟಿದ್ದ.. " ಹದಿನಾಲ್ಕು ವರ್ಷವಾಯ್ತು.. ಇನ್ನೂ ಮಕ್ಕಳಾಗದ್ದಕ್ಕೆ ಸ್ವಾಮಿಗಳ ಬಳಿ ಫಲ ಮಂತ್ರಾಕ್ಷತೆ ತರುವುದನ್ನು ಮರೆಯಲಿಲ್ಲ..

ಅಲ್ಲಿಂದ ಬಂದಮೇಲೇ ಸೀದಾ ಕೆನರಾ ಬ್ಯಾಂಕಿಗೆ ಹೋಗಿ ಮ್ಯಾನೇಜರರನ್ನು ಕಂಡು ಬಂದ.. "ಇನ್ನು ಮನೆ ಕಟ್ಟೂದೇ.. " ಅಂತ ಎಲ್ಲರ ಬಳಿ ಹೇಳಿದ್ದೂ ಆಯಿತು. ಸಹಿ ಹಾಕಲು ಹೈಸ್ಕೂಲ್ ಮಾಸ್ತರಾಗಿದ್ದ ಶ್ರೀಪಾದನನ್ನೇ ಒಪ್ಪಿಸಿದ.. ಆದರೆ ಇಂದು ಗೋವಿಂದಣ್ಣನ ಅಂಗಡಿಯಲ್ಲಿ ಗೌಡರ ಕೇರಿಯ ಶಂಕ್ರ ಗೌಡ ಯಾಕೆ ಹಾಗಂದ ಮಾತ್ರ ಅರ್ಥವಾಗಲಿಲ್ಲ.. ಸರ್ಕಾರದವರು ಹಾಲು ಡೇರಿಗಳನ್ನೆಲ್ಲಾ ಮುಚ್ತಾರಂತೆ...ಅದು ಹೇಗೆ ಸಾಧ್ಯಾ..ಹಾಲಿರುವವರೆಗೂ ಡೇರಿ ಇದ್ದೇ ಇರುತ್ತದೆ.. ಮನೆಗೆ ಮರಳುವಾಗ ರೈಲು ಸುರಂಗ ಹೊಕ್ಕುವಾಗ ಉಂಟಾಗುವ ಅಂಧಕಾರದ ಅನುಭವ ರಸ್ತೆಯಲ್ಲುಂಟಾಯಿತು...

ಆದ್ರೂ ನಾಗರಾಜ ಶೆಟ್ಟಿಯನ್ನೊಮ್ಮೆ ಕೇಳಿಯೇ ಬಿಡೋಣ ಎಂದು ಮಧ್ಯಾಹ್ನ ಊಟವಾದ ಮೇಲೂ ನಿದ್ರೆ ಬಾರದಿದ್ದಾಗ ನೆರೆಮನೆಯ ಸಾವಿತ್ರಕ್ಕನ ಮನೆಗೆ ಹೋಗಿ ಫೋನ್ ಹಚ್ಚಿದ. ನಿಜವಾದರೆ ಅಂತ ಭಯವಾಯಿತು.. ಫೋನ್ ಮಾಡದೆ ಮನೆಗೆ ಬಂದ.. ಹಳೇ ಟ್ರಂಕಿನಲ್ಲಿದ್ದ ನಾಗರಾಜ ಶೆಟ್ಟಿ ಮನೆಯ ಪ್ರವೇಶದ ಆಮಂತ್ರಣ ಪತ್ರಿಕೆ ತೆಗೆದು "ಭಾಗೀ.. ನಮ್ಮನೆ ಪ್ರವೇಶದ್ದೂ ಇದೇ ತರಹ ಮಾಡ್ಸುವಾ.. ಇಲ್ನೋಡು.. ಮನೆಗೆ "ಗೋ ಗೃಹ " ಅಂತ ಹೆಸರಿಡುವ..ಹಾಂ" ಒಬ್ಬನೇ ಮಾತಾಡುತ್ತಿದ್ದ ಗಂಡನನ್ನು ಸೇರಿದವಳು ಭಾಗೀರಥಿ.. "ಈಗ್ಯಾಕೆ ನಿಮಗೆ ಈ ಹುಚ್ಚು ..ಮೊದಲು ಕಾಗದ ಪತ್ರ ಎಲ್ಲಾ ಆಗ್ಬೇಕು..ಸಾಲ ಮಂಜೂರಾಗಬೇಕು.. ಮನೆ ಕಟ್ಟಬೇಕು..ಆಮೇಲೆ ಹೆಸರಿಡುವುದು.." ಅಂತ ಎದ್ದು ಹೋದಳು.. ಮೊದಮೊದಲು ಸ್ವಂತವಾಗಿ ಯೋಚಿಸುತ್ತಿದ್ದ ಮಾಬ್ಲಣ್ಣನಿಗೆ ಸಂತೋಷವಾಗಿತ್ತು.. ಈ ಹಾಲು ನನಗೆ ಸ್ವಂತವಾದ ಬದುಕು ಕಲ್ಪಿಸಿದೆ.. ಸ್ವಂತವಾಗಿ ಯೋಚಿಸಲು ಕಲಿಸಿದೆ.. ಟ್ರಂಕು ಮುಚ್ಚಿ ಮತ್ತೆ ಅಟ್ಟದ ಮೇಲಿಟ್ಟ..

ಈಗ ಮಾಬ್ಲಣ್ಣ ಲೈಬ್ರರಿ ಬೀಗ ತೆಗೆಯುತ್ತಿದ್ದಾನೆ.. ಸುರೇಶ ಇವತ್ತು ಬರಲ್ಲ ಎಂದು ಹೇಳಿ ಬೀಗ ಕೊಟ್ಟು ಹೋಗಿದ್ದ.. ಲೈಬ್ರರಿ ತೆಗೆದಿಟ್ಟು ತನ್ನ ಡೇರಿ ಬಾಗಿಲು ತೆಗೆದ.. ಸ್ವಿಚ್ಚು ಎತ್ತರದಲ್ಲಿದ್ದುದರಿಂದ ಮಾಬ್ಲಣ್ಣ ಒಂದು ಪೈಪಿನ ತುಂಡಿಟ್ಟುಕೊಂಡಿದ್ದಾನೆ.. ಅದರಿಂದ ಬಡಿದು ಸ್ವಿಚ್ ಹಾಕಿದ. ಬಲ್ಬಿನ ಸಣ್ಣ ಬೆಳಕು ಕೋಣೆಯನ್ನು ಬೆಳಗಿತು. ಮಾಬ್ಲಣ್ಣನಿಗೆ ಗೊತ್ತಿತ್ತು ಇವತ್ತು ಹೆಚ್ಚೆಂದರೆ ಆರೇಳು ಮಂದಿ ಬರಬಹುದು.. ನಾಡಿದ್ದು ದೇವಸ್ಥಾನದ ದೇವಕಾರ್ಯಕ್ಕೆ ಹಾಲು ಜಾಸ್ತಿ ಬೇಕಾಗಿರುವುದರಿಂದ ಈ ವಾರ ಹಾಲು ಕಡಿಮೆ ಬರುತ್ತದೆ ಎಂದು ದೇವಸ್ಥಾನದ ಮೊಕ್ತೇಸರ ಬೆಳಿಗ್ಗೆ ಹೇಳಿದ್ದ.. ಬಂದಷ್ಟು ಹಾಲನ್ನು ಕ್ಯಾನಿಗೆ ಹಾಕಿದ್ರಾಯಿತು ಎಂದು ಕವುಚಿಟ್ಟಿದ್ದ ಕ್ಯಾನು ಹಾಗು ಅಳತೆ ಪಾತ್ರೆ ಒರ್‍ಅಸಿಟ್ಟ.. ಅಂದುಕೊಂಡಿದ್ದಕ್ಕಿಂತಲೂ ಕಡಿಮೆಯೇ ಇತ್ತು ಹಾಲಿನ ಪ್ರಮಾಣ..

ಗಂಟೆ ಏಳೂವರೆ ಆಯಿತು...ದೂರದಲ್ಲಿ ಕಾನ್ ಜಿರಲೆ ಕೂಗುತ್ತಿರುವುದು ಕೇಳುತ್ತಿತ್ತು.. ಏನಿದು ಇವತ್ತು ಗಾಡಿಯೇ ಬರ್ಲಿಲ್ಲ.. ಯೋಚಿಸಿದ... ಭಯವಾಯಿತು.. ಸರ್ಕಾರದವರೇನಾದ್ರೂ ಇವತ್ತೇ ಮುಚ್ಚಿಬಿಟ್ರೇ..? ಆ ಶಂಕ್ರ ಗೌಡನಿಗೆ ಹೇಗೆ ಗೊತ್ತಾಯಿತು.. ? ಇದ್ರೂ ಇರಬಹುದು..ಆ ಗೌಡನ ತಂಗಿ ಮೈದುನ ಸಿದ್ದಾಪುರದಲ್ಲಿ ಡೇರಿ ಮಾಡ್ತಾನೆ ಅಂತ ಕೇಳಿದ್ದೆ.. ಗಟ್ಟಿಯಾಗಿ ಕೂಗಿಬಿಡಬೇಕು ಅನ್ನಿಸಿತು.. ಸುತ್ತಲೆಲ್ಲೂ ಬೇರೆ ಯಾರೂ ಇರಲಿಲ್ಲ.. ಆ ಕತ್ತಲಲ್ಲೂ ಚರ್ಚ್ ಬೆಳ್ಳಗೆ ಕಾಣುತ್ತಿತ್ತು.. ಗಾಡಿ ಬರದಿದ್ದುದು ನೋಡಿ ಕಾದು ಕಾದು ಸುಸ್ತಾಗಿ ಮಾಬ್ಲಣ್ಣ ಕ್ಯಾನ್ ಸಮೇತ ಮನೆಗೆ ಹೋಗಲು ಅಣಿಯಾದ.. " ಈ ಹಾಲನ್ನೂ ನಾಳೆ ದೇವಸ್ಥಾನಕ್ಕೆ ಕೊಟ್ಟರಾಯಿತು..ಸುಮ್ಮನೆ ಯಾಕೆ ಹಾಳುಮಾಡುವುದು.." ಅವನಿಗೆ ಅವನೇ ಕೊಟ್ಟ ವಿವರಣೆ.

ಕ್ಯಾನ್ ಹಿಡಿದು ಮೆಟ್ಟಿಲಿಳಿಯಲು ಕಷ್ಟವಾಗುತ್ತದೆ ಎಂದು ಚರ್ಚ್ ದಾರಿಯಲ್ಲಿ ಹೋಗುತ್ತಿದ್ದ.. ಚರ್ಚ್ ನ ಗೋಪುರದ ಮೇಲಿರುವ ಗಂಟೆ ಬಡಿದಂತಾಗಿ ಹೆದರಿ ಮಾಬ್ಲಣ್ಣ ಕೈಲಿದ್ದ ಕ್ಯಾನು ಬಿಟ್ಟೇ ಬಿಟ್ಟ.. "ಟಣ್..ಟಣ್.." ಅಂತ ಎರಡು ಸಲ ಬಿದ್ದು ಆ ಅಲ್ಯೂಮಿನಮ್ ಕ್ಯಾನು ತನ್ನಲ್ಲಿದ್ದ ಹಾಲನ್ನೆಲ್ಲ ಹೊರ ಕಾರಿತು.. ಹಾಲು ನೆಲಕ್ಕೆ ಬಿದ್ದಿದ್ದ ಒಣ ಎಲೆಗಳನ್ನೆಲ್ಲಾ ನೆನೆಸಿತ್ತು.. ಒಣ ಮಣ್ಣೂ ಹಾಲು ಕುಡಿದು ನಿಟ್ಟುಸಿರು ಬಿಟ್ಟಿತು.. ಚರ್ಚ್ ನ ಗೇಟ್ ಮುಂದೆ "ಶಂಭೋ....." ಎಂದು ಜೋರಾಗಿ ಕೂಗಿ ನಮಸ್ಕಾರ ಮಾಡ್ತಿದ್ದ ಮಾಬ್ಲಣ್ಣನನ್ನು ಯಾವುದೋ ಬೀದಿ ನಾಯಿ ಮೂಸಲು ಬಂದಿತ್ತು.. "ಹಡಬೇ ಕುನ್ನಿ.." ಎಂದು ಕಲ್ಲು ಬೀಸಿ ಬಿರಬಿರನೆ ಎದ್ದು ಮನೆಗೆ ನಡೆದವನಿಗೆ ಭಾಗೀರಥಿಯ ಮಾತುಗಳ್ಯಾವವೂ ಕೇಳಿಸಲಿಲ್ಲ.. ಕಂಬಳಿ ಎಳೆದು ಮುಸುಕು ಹಾಕಿ ಮಲಗಿಕೊಂಡ...