ಹೆಲ್ಮೆಟ್ ಹಿಂದಿನ ಮುಖ

ಹೆಲ್ಮೆಟ್ ಹಿಂದಿನ ಮುಖ

ಬರಹ

ಹುಡುಗಿ ಒಳಗೇ ನಗುತ್ತಾಳೆ
ಪ್ರೀತಿ ಶುರುವಾಗಿ ವಾರವಿರಬಹುದು
ಅವನ ಪ್ರತಿ ಮಾತಿಗೂ
ಇವಳು ನಗುತ್ತಾಳೆ
ಮೊಬೈಲು ರಿಂಗಣಿಸಿದಾಗ
ಮಾತಿನ ಕಾಮನಬಿಲ್ಲು
ಗಂಟೆ ನಿಮಿಷಗಳ ಅರಿವಿಲ್ಲ
ಪ್ರೀತಿಯೆಂದರೆ ಇದೇ ಇರಬಹುದು
ನಾನೂ ನೋಡುತ್ತಲೇ ಇದ್ದೇನೆ
ಗಾಡಿ ಓಡಿಸುವಾಗಲೂ
ಮಾತಿಗೆ ಬಿಡುವಿಲ್ಲ
ಹೆಲ್ಮೆಟ್ ಒಳಗೆ ಮೌನ
ಮಾತು , ಹುಸಿಕೋಪ, ನಾಚಿಕೆ
ಎಲ್ಲಾ ಏನೇನಿಲ್ಲ ?
ನಾನೂ ನೋಡುತ್ತಲೇ ಇದ್ದೇನೆ
ದಿನ ದಿನವೂ ಹೊಸಬಗೆಯ
ಮಾತಿನ ಬಣ್ಣ
ದುಂಡಗಿನ ಹೆಲ್ಮೆಟ್ಟಿನ
ಬಿಳಿಗಾಜಿನ ಹಿಂದೆ
ಹೊಳೆವ ಪ್ರೆಮಕಂಗಳು
ನಾನೂ ನೋಡುತ್ತಲೇ ಇದ್ದೇನೆ
ಹೀಗೇ
ತಿಂಗಳು ಕಳೆಯಿತೇನೋ
ಒಂದು ದಿನ
ಮಾತಿಲ್ಲ ನಗುವಿಲ್ಲ
ಮುಗ್ಧೆ ಸ್ಥಬ್ಧ, ನಿಶ್ಯಬ್ಧ
ಬರಿಯ ಮೌನಕ್ಕೆ ಶರಣು
ಹೆಲ್ಮೆಟ್ಟಿನ ಗಾಜಿನ ಹಿಂದೆ
ಕಣ್ಣಂಚಲ್ಲಿ ಸಣ್ಣಗೆ ನೀರು
ಜಿನುಗುತ್ತಿದೆ (ಧೈರ್ಯವಂತೆ)
ಏನಾಯಿತು , ಏನೋ ಆಯಿತು ಹೋಯಿತು
ನಾನರಿಯೆ
ನಾನೂ ನೋಡುತ್ತಲೇ ಇದ್ದೇನೆ
ದುಂಡಗಿನ ಹೆಲ್ಮೆಟ್ಟಿನ೦ತೆ

ದಿನವೂ ಕಂಪನಿ ಬಸ್ಸಿನಿಂದ ನೋಡುತ್ತಿದ್ದ ಒಂದೇ ಮುಖ (ಕ್ಷಮಿಸಿ ಹೆಲ್ಮೆಟ್ಟಿನ ಒಳಗಿನಿಂದ ಮುಖ ಪೂರ್ಣ ಕಾಣದು) ಮತ್ತದರ ವಿವಿಧ ಭಾವಗಳು ನನಗೆ ತೋಚಿದಂತೆ. ನಾ ಹೊರಗಿನವ ಆ ಮುಖಕ್ಕೆ ಹೆಲ್ಮೆಟ್ಟಿನ ಒಳಗೆ ಮೊಬೈಲ್ ಸೇರಿಸಿ ಮಾತಾಡುತ್ತಿದ್ದ ರೀತಿ ಮತ್ತು ಒಂದು ದಿನ ಅದು ನಿಂತ ಕಾರಣ ನನ್ನದೇ ಕಲ್ಪನೆಯಲ್ಲಿ ಗೀಚಿದ್ದೇನೆ ಅಷ್ಟೆ