ಹಸಿರು ಮಿಡತೆ

ಹಸಿರು ಮಿಡತೆ

ಬರಹ

(ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಕಥೆ)

ಮೇಜಿನ ಮೇಲಿದ್ದ ದೀಪದ ಜೊತೆಗೆ ಆಟವಾಡುತ್ತಾ ತಟ್ಟನೆ ಏನೋ ನೆನಪಿಸಿಕೊಂಡು ಮೈ ಅದುರಿಸಿದಳು ರಚನಾ!
ರಾತ್ರೋ ರಾತ್ರಿ ಮುಗಿಲೆತ್ತರಕ್ಕೆ ಬೆಳೆದು ನಿಂತ ಆವರಣ ಗೋಡೆಯ ಹಿಂದಿರುವುದೇನು? ಅನ್ನುವ ಕುತೂಹಲ ಇನ್ನೂ ತಣಿದಿರಲಿಲ್ಲ! ಗೇಟ್‍ನ ಸಂಧಿಗೆ ಕಣ್ಣುಗಳನ್ನು ತೂರಿಸಿ ಹುಡುಕುವ ಪ್ರಯತ್ನ ಮಾಡುತ್ತಿದ್ದಳು.
ತಾನು ಓಡಾಡಿದ ಸ್ಯಾಮ್ ಅಂಕಲ್‍ನ ಎಸ್ಟೇಟ್ ಅದು! ಕಿತ್ತಳೆ ಹಣ್ಣುಗಳನ್ನು ಕಿತ್ತು, ಸ್ಯಾಮ್ ಅಂಕಲ್‍ನ ಜೊತೆಗೆ ಎಸ್ಟೇಟ್‍ನ ಹುಲ್ಲುಗಳ ಮೇಲೆ ನಡೆದಾಡಿದ್ದಳು. ಕೈಯಲ್ಲಿ ಕೋವಿ ಹಿಡಿದುಕೊಂಡೆ ಆತ ಜೀಪನ್ನೇರುತ್ತಿದ್ದ!
ಕಿತ್ತಳೆಯ ಸಿಪ್ಪೆ ಸುಲಿದು ಅದೆಷ್ಟೋ ಬಾರಿ ಅದರ ರಸವನ್ನು ಅವನ ಕಣ್ಣಿಗೆ ಹಾರಿಸಿದ್ದಳು.
"ನೀನು ಬಾರಿ ಚಾಲಾಕಿನ ಹುಡುಗಿ. ಹಸಿರು ಮಿಡತೆ ತರಹ ಚುರುಕಾಗಿದ್ದಿಯಾ. ನೀನು ಈ ಎಸ್ಟೇಟ್‍ಗೆ ಮಗಳಾಗಿ ಬರ್ತೀಯಾ? ಈ ಎಸ್ಟೇಟ್‍ಗೆ ನಿನಗಿಂತ ಒಳ್ಳೆ ವಾರ್‍ಅಸುದಾರರು ಬೇರಾರು ಸಿಗಲಿಕ್ಕಿಲ್ಲ. ನೀನೇ ಸರಿಯಾದ ಒಡತಿ" ಮಕ್ಕಳಿಲ್ಲದ ಸ್ಯಾಮ್ ಅಂಕಲ್‍ನ ಕಣ್ಣುಗಳಲ್ಲಿ ಆಸೆಯ ದೀಪವಿತ್ತು.
"ಅಂಕಲ್, ನೀವು ನನ್ನ ಛೇಡಿಸ್ತಿದ್ದೀರಾ?... ಇಷ್ಟು ದೊಡ್ಡ ಎಸ್ಟೇಟ್‍ನ ನಾನು ನಿಭಾಯಿಸಲಾರೆ. ನಿಮ್ಮ ಜೊತೆಗೆ ಸುತ್ತಾಡೋದಿಕ್ಕೆ ನಾನು ಬರ್ತೀನಿ.."
ಸ್ಯಾಮ್‍ನ ಕಣ್ಣುಗಳು ಹನಿಗೂಡಿದವು.
"ವೈಶಾಲಿ ಹೋದ ನಂತರ ನನ್ನ ಆಸಕ್ತಿಯೆಲ್ಲಾ ಬಿದ್ದೋಯ್ತು. ನಿನ್ನ ತಂದೆ ಗಿರಿಯಪ್ಪನ ಕೇಳ್ದೆ. `ನನಗಿರೋಳು ಒಬ್ಳೆ ಮಗಳು. ಹೇಗಯ್ಯಾ ನಿನ್ನ ಎಸ್ಟೇಟ್‍ಗೆ ಕಳುಹಿಸ್ಲಿ?' ಅಂದು ನಿರಾಕರಿಸಿ ಬಿಟ್ಟ. ಎಸ್ಟೇಟನ್ನು ಮಾರೋದಿಕ್ಕೆ ನಂಗೆ ಇಷ್ಟವಿಲ್ಲ. ನಿನ್ನಂತಹ ಚುರುಕಿನ ಹುಡುಗಿ ನನ್ನ ಎಸ್ಟೇಟಿಗೆ ಬೇಕಿತ್ತು"
"ಅಂಕಲ್, ನಾನು ಯಾವತ್ತೂ ನಿಮ್ಮ ಜೊತೆಗಿರ್ತೀನಿ. ಆದರೆ ಎಸ್ಟೇಟ್‍ನ ವಾರಸುದಾರಿಕೆ ಬೇಡ"
ಅವಳ ಮಾತಿಗೆ ಪ್ರೀತಿಯಿಂದ ಮೈದಡವಿದ್ದ...
ಆಲೋಚನೆಯ ಗುಂಗಿನಲ್ಲಿರುವಾಗಲೇ ಅವಳಿಗೆ ಗೋಚರಿಸಿತ್ತು, ಗೋಡೆಯ ಮೇಲೆ ಬಿದ್ದ ನೆರಳು!

ಸಂಧಿನಿಂದ ಕಣ್ಣುಗಳನ್ನು ಹಿಂದಕ್ಕೆಳೆದುಕೊಂಡು ತನ್ನ ತಲೆಗೆ ಕುಟ್ಟಿಕೊಂಡಳು. ತನ್ನದೇ ನೆರಳನ್ನು ಕಂಡು ಹೆದರುವ ತಾನೊಬ್ಬಳು ಎಂತಹ ಧೈರ್ಯವಂತೆ!
ಆದರೆ.. ಈಗ ಅವಳಿಗೆ ಸ್ಪಷ್ಟವಾಯಿತು. ಅದು ತನ್ನ ನೆರಳಲ್ಲ!
ಗೋಡೆಗೆ ಹತ್ತಿರವಾಗಿರುವಾಗ ನೆರಳು ಹಾಗೇ ಬೀಳಲಾರದು! ಅಂದರೆ... ತನ್ನನ್ನು ಯಾವುದೋ ವ್ಯಕ್ತಿ ಹಿಂಬಾಲಿಸಿದ್ದ! ಇನ್ನು ಸ್ವಲ್ಪ ಸಮಯ ತಾನು ಅಲ್ಲಿರುವ ಹಾಗಿದ್ದರೆ ಆ ವ್ಯಕ್ತಿ ಗೋಚರಿಸುತ್ತಿದ್ದ! ಆದರೆ ತಾನು ಯಾರದೋ ಪಿಸು ಮಾತುಗಳನ್ನು ಕೇಳಿ ದಾಪುಗಾಲು ಹಾಕಿ ಮನೆ ಸೇರಿದ್ದೆ! ಆ ಮಾತುಗಳು ಈಗಲೂ ನೆನಪಿದೆ...
"ಆ ಹುಡುಗಿ ಇದ್ದಾಳಲ್ಲ... ಹಸಿರು ಮಿಡತೆ... ಈಗ ಇಲ್ಲಿ ಕಾಣಿಸ್ಕೊಂಡಿದ್ಲು.. ತಿರುಗಿ ನೋಡ್ತೀನಿ ಸುಯ್ಯಂತ ಹಾರಿ ಹೋದ್ಲು"
ತಾನು ಗೋಡೆಯ ಸುತ್ತಲೂ ಮಾರು ದೂರ ನಡೆದಿದ್ದನ್ನು ಎಸ್ಟೇಟಿನ ಒಳಗಿದ್ದ ವ್ಯಕ್ತಿ ಗಮನಿಸಿದ್ದಾನೆ! ಇನ್ನೊಬ್ಬ ವ್ಯಕ್ತಿ ತನ್ನನ್ನು ಹಿಂಬಾಲಿಸಿದ್ದಾನೆ! ಆ ವ್ಯಕ್ತಿಯ ನೆರಳನ್ನು ತಾನು ಕಂಡಿದ್ದು!
ಮೈ ಬೆವರಿತು! ಸ್ವಿಚ್ ಹಿಡಿದ ಕೈ ತರತರ ಕಂಪಿಸಿತು.
ಕಣ್ಣು ಮುಚ್ಚಿಕೊಂಡು ಮತ್ತೊಮ್ಮೆ ನೆನಪಿಸಿಕೊಂಡಳು ರಚನಾ. ನೆರಳು ಗೋಡೆಯ ಮೇಲೆ ಸ್ಪಷ್ಟವಾಗಿ ಮೂಡಿತ್ತು. ಆದರೆ ಅರ್ಧದಷ್ಟು ಮಾತ್ರ!
ಅಂದರೆ ವ್ಯಕ್ತಿ ದೂರದಲ್ಲಿದ್ದ!
`ಬೆಳಗ್ಗಿನ ಮತ್ತು ಸಂಜೆಯ ಸೂರ್ಯಕಿರಣಗಳು ಭೂಮಿಗೆ ವಕ್ರವಾಗಿ ಬೀಳುವುದರಿಂದ ನೆರಳು ಉದ್ದವಾಗಿ ಕಾಣುತ್ತದೆ'
ಅಂದರೆ... ವ್ಯಕ್ತಿ ದೂರದಲ್ಲಿರಲಿಲ್ಲ... ತನ್ನ ಹತ್ತಿರದಲ್ಲೆ ಇದ್ದ!
ಆ ವ್ಯಕ್ತಿ ತನ್ನನ್ನು ಹಿಂಬಾಲಿಸಿ ತನಗೆ ಅಪಾಯವನ್ನು ಮಾಡಲಿದ್ದಾನೆ! ದೀಪ ಆರಿಸಿ ಬಂದು ಹಾಸಿಗೆ ಸೇರಿದವಳಿಗೆ ಏನೇನೋ ವಿಚಿತ್ರ ಕನಸುಗಳು.

***
ಉದ್ದಕ್ಕೂ ಹರಡಿಕೊಂಡಿದ್ದ ಮುಳ್ಳು ಬೇಲಿಯನ್ನು ಆದರಿಸಿ ಇಬ್ಬನಿ ತುಂಬಿದ ಹುಲ್ಲು ಹಾದಿಯ ಮೇಲೆ, ಸೀರೆಯನ್ನು ಎತ್ತಿ ಹಿಡಿದು ನಡೆಯುತ್ತಿದ್ದಳು ರಚನಾ. ಗೋಡೆಯಾಚೆ ನಡೆಯುವ ವಿದ್ಯಮಾನವಿನ್ನೂ ಅಸ್ಪಷ್ಟ. ಮುಂಜಾನೆಯ ಹೊತ್ತಿಗೆ ಅಲ್ಲಿ ಯಾರೂ ಇರಲಾರೆಂಬ ಧೈರ್ಯದಿಂದ ಸಾಹಸಕ್ಕೆ ಇಳಿದಿದ್ದಳು.
`ಯಾರೋ ಅಸಾಮಿ... ಎಸ್ಟೇಟನ್ನು ಮಾರ್ತೀರಾಂತ ಕೇಳ್ದ. ಇಲ್ಲಾಂದೆ.. ಬೆದರಿಸಿ.. ನೋಡ್ಕೋತಿನಿ.. ಅಂತ ಹೇಳಿ ಹೋದ. ನನಗೆ ಅಪಾಯ ತಪ್ಪಿದ್ದಲ್ಲ' ಸ್ಯಾಮ್ ಅಂಕಲ್‍ನ ಮಾತುಗಳು.
ಅದೇ ತನ್ನ ಹಾಗೂ ಸ್ಯಾಮ್ ಅಂಕಲ್‍ನ ಕೊನೆಯ ಭೇಟಿ! ಸ್ಯಾಮ್ ಅಂಕಲ್ ಎಲ್ಲಿ ಹೋದ್ರು? ಏನಾದ್ರೂ? ಯಾವುದೂ ತಿಳಿದಿಲ್ಲ. ಆ ಆಗಂತುಕ ಅವರಿಗೆ ಅಪಾಯ ತಂದಿರಬಹುದು!
ಗೇಟಿನ ಸಂಧಿಯಲ್ಲಿ ಒಳಗೆ ದೃಷ್ಟಿ ಹರಿಸಿದಳು. ಆವರಣದ ಗೋಡೆಯಷ್ಟು ಎತ್ತರಕ್ಕಿರುವ ಗೇಟಿನ ಬಾಗಿಲುಗಳು ಬೀಗ ಜಡಿದು ಭದ್ರವಾಗಿವೆ!
ಅದಾಗಲೇ ಯಾವುದೋ ವಾಹನದ ಯಂತ್ರದ ಮೊರೆತದ ಸದ್ದು ಕೇಳಿಸಿತು! ಒಂದೆ ಉಸುರಿಗೆ ಗೇಟಿನ ಬಳಿಯಿಂದ ಹಾರಿ ಪೊದೆಯ ಹಿಂದೆ ಅವಿತು ಕುಳಿತಳು. ಇಬ್ಬನಿಯಲ್ಲಿ ತೊಳೆದ ಜೇಡರ ಬಲೆಯೊಂದು ಮುಖಕ್ಕೆ ಅಂಟಿಕೊಂಡಾಗ ಅಸಹ್ಯವೆನಿಸಿತು.
ಅದೇ ಸಮಯಕ್ಕೆ ವಾಹನ ಬಂದು ನಿಂತಿತು. ಯಂತ್ರದ ಸದ್ದೂ ನಿಂತಿತು. ದಪ್ಪನೆಯ ಕುಳ್ಳಗಿನ ವ್ಯಕ್ತಿ ವಾಹನದಿಂದ ಇಳಿದು ಬೀಗ ತೆರೆದ. ಮತ್ತೆ ವಾಹನವೇರಬೇಕೆನ್ನುವಾಗ ಅವನಿಗೆ ಸಂಶಯ ಬಂದವರಂತೆ ನೋಡುತ್ತಿದ್ದ. ಗೇಟಿನ ಬಳಿಯಿಂದ ಪೊದೆಯವರೆಗೆ ದೃಷ್ಟಿ ಹಾಯಿಸಿದ. ಯಾರೋ ನಡೆದು ಕೊಂಡು ಹೋದಂತೆ ಹುಲ್ಲಿನ ಮೇಲಿನ ಇಬ್ಬನಿ ಕರಗಿತ್ತು! ಪೊದೆಯ ಬಳಿ ಹೆಜ್ಜೆ ಹಾಕಲಾರಂಭಿಸಿದ.
ರಚನಾಳ ಎದೆ ಬಡಿತ ತೀವ್ರವಾಯಿತು. ತಾನೀಗ ಆತನ ಕೈಗೆ ಸಿಕ್ಕಿ ಬೀಳಲಿದ್ದೇನೆ!! ಉಸಿರು ಬಿಗಿ ಹಿಡಿದಳು.
ಆತ ತಟ್ಟನೆ ನಿಂತು ಬಿಟ್ಟ. ಒಂದೆರಡು ಬಾರಿ ವಿಸಿಲ್ ಹಾಕಿದ. ಮುಖ ಹೊರಳಿಸಿದಳು ರಚನಾ. ದೂರದಲ್ಲಿ ಕಂಪೌಂಡಿನ ಅಂಚಿಗೆ ಸರಿದು ಹೋಗುತ್ತಿದ್ದ ವ್ಯಕ್ತಿಯೊಬ್ಬ ಕಾಣಿಸಿದ!
ಸಧ್ಯ ತನ್ನನ್ನು ಕುಳ್ಳಗಿನ ವ್ಯಕ್ತಿ ನೋಡಿಲ್ಲ! ಸಮಾಧಾನದ ಉಸಿರು ದಬ್ಬಿದಳು.
ಆತ ಮತ್ತೆ ವಾಹನವೇರಿ ಯಂತ್ರವನ್ನು ಚಾಲನೆಗೆ ತಂದು, ಮುಂದಕ್ಕೋಡಿಸಿದ. ಮತ್ತೆ ವಾಹನ ನಿಂತ ಸದ್ದು!
ತಟ್ಟನೆ ಪೊದೆಗಳಿಂದ ಹೊರಗೆ ಬಂದು ಎಸ್ಟೇಟಿನ ಒಳಗೆ ದೃಷ್ಟಿ ಹಾಯಿಸಿದಳು.
ಹಳದಿ ಬಣ್ಣದ ಮರಳ ರಾಶಿ!
ಗೇಟಿನ ಬಾಗಿಲುಗಳು ಮುಚ್ಚಿಕೊಳ್ಳುತ್ತಲೆ ಸರಿದು ಮರೆಯಾಗಿ ನಿಂತಳು.
ಇನ್ನು ಸ್ವಲ್ಪ ಹೊತ್ತು ತಾನು ಅಲ್ಲಿ ನಿಂತಿದ್ದರೆ ಸಿಕ್ಕಿ ಹಾಕಿಕೊಳ್ಳುತ್ತಿದ್ದೆ! ವೇಗದ ನಡುಗೆಯಲ್ಲಿ ಮುಂದೆ ಸರಿದಳು. ಗೋಡೆಯ ಅಂಚಿಗೆ ಸರಿದು ಹೋಗುತ್ತಿದ್ದ ವ್ಯಕ್ತಿಯನ್ನು ನೋಡಿ ಅತ್ತ ಹೆಜ್ಜೆ ಸರಿಸಿದಳು. ಇವಳು ನೋಡುತ್ತಿದ್ದಂತೆಯೇ ಆತ ಇಳಿಜಾರಿಗೆ ಇಳಿದು ಮಾಯವಾದ! ಸ್ವಲ್ಪದರಲ್ಲೆ ತಪ್ಪಿದ ಅವಕಾಶ! ಆ ವ್ಯಕ್ತಿಯನ್ನು ನಿಲ್ಲಿಸಿ ಬಾಯಿ ಬಿಡಿಸುತ್ತಿದ್ದರೆ, ಎಸ್ಟೇಟಿನಲ್ಲಿ ನಡೆಯುವ ವಿಷಯವನ್ನು ತಿಳಿದುಕೊಳ್ಳಬಹುದಿತ್ತು. ಅಲ್ಲಿಂದ ಪಕ್ಕಕ್ಕೆ ಹೊರಳಿದವಳಿಗೆ ಕಂಡಿತು...!
ಆವರಣದ ಗೋಡೆಗೆ ತಾಗಿಕೊಂಡಿರುವ ಸಣ್ಣಗಿನ ಮರ!
ಅದನ್ನು ಹತ್ತಿದರೆ ನಿರಾಯಾಸವಾಗಿ ಗೋಡೆಯ ಮೇಲೆ ನಿಂತು ಒಳಗೆ ನೋಡಬಹುದು! ಆಲೋಚನೆ ಬರುತ್ತಲೇ ಮರ ಹತ್ತಿದಳು. ಅಲ್ಲಿಂದ ನಿಧಾನಕ್ಕೆ ಗೋಡೆಯ ಮೇಲೆ ನಿಂತವಳಿಗೆ ಬೆಳಗ್ಗಿನ ತಂಡಿಗೆ ಎರಡೆರಡು ಬಾರಿ ಸೀನು ಬಂತು. ಆಯ ತಪ್ಪಿ ಗೋಡೆಯ ಮೇಲಿನಿಂದ ದೊಪ್ಪನೆ ಕೆಳಗೆ ಬಿದ್ದಳು! ಸಣ್ಣ ಚಿತ್ಕಾರವೊಂದು ಅವಳ ಬಾಯಿಯಿಂದ ಹೊರಟಿತು. ಏನಾಯಿತೆಂದು ತಿಳಿಯುವಷ್ಟು ಸಮಯವಿಲ್ಲ. ಎದ್ದು ಸುತ್ತಲೂ ನಿರುಕಿಸಿದಳು. ಯಾರಾದರೂ ತನ್ನನ್ನು ಗಮನಿಸಿಯಾರೆಂಬ ಹೆದರಿಕೆಯಿತ್ತು.
ಅನಪೇಕ್ಷಿತವಾಗಿ ಚಕ್ರವ್ಯೂಹದೊಳಗೆ ನುಗ್ಗಿದಂತಾಯಿತು. ತಟ್ಟನೆ ಯಂತ್ರದ ಮೊರೆತದ ಸದ್ದು ಕೇಳಿಸಿತು. ಹುಲ್ಲು ಮೆದೆಯಲ್ಲಿ ಬಾಗಿ ನಿಂತಳು. ತಾನು ಕಂಡ ವಾಹನ ಸರಿದು ಹೋಗುತ್ತಿರಬಹುದು! ಯಂತ್ರದ ಸದ್ದು ಅಡಗುತ್ತಲೇ ನಿಧಾನವಾಗಿ ಹೆಜ್ಜೆಗಳನ್ನು ಸರಿಸಿ ರಸ್ತೆಯಂಚಿಗೆ ಬಂದಳು. ಅಲ್ಲೆಲ್ಲಾ ತಾನು ಸ್ಯಾಮ್ ಅಂಕಲ್‌ನ ಜೊತೆಗೆ ಓಡಾಡಿದ್ದನ್ನು ನೆನಪಿಸಿಕೊಂಡಳು. ಎಸ್ಟೇಟಿನ ಮೂಲೆ ಮೂಲೆಯೂ ಅವಳಿಗೆ ಪರಿಚಿತ!
ತಟ್ಟನೆ ಕಾಲುಗಳು ಸ್ಥಗಿತಗೊಂಡವು!
ವಾಹನ ಇನ್ನೂ ಅಲ್ಲೇ ಇದೆ!
ತಾನೆಂದುಕೊಂಡಂತೆ ಅದು ಸರಿದು ಹೋಗಿಲ್ಲ. ಹಳದಿ ಮರಳು ರಾಶಿಯ ಬಳಿ ನಿಂತಿದೆ! ರಸ್ತೆಯಂಚಿಗೆ ಒಂದೇ ಉಸುರಿಗೆ ಹಾರಿ ಮರದ ಕಡೆಗೆ ನಡೆದಳು. ಗೋಣಿ ಚೀಲದಲ್ಲಿ ಹಳದಿ ಮರಳನ್ನು ತುಂಬಿಸಿ ವಾಹನಕ್ಕೆ ಏರಿಸುತ್ತಿದ್ದರು.
ಹಳದಿ ಮರಳು! ವಿಚಿತ್ರವೆನಿಸಿತು.
ಎಲ್ಲಾ ಮೂಟೆಗಳನ್ನು ವಾಹನಕ್ಕೆ ತುಂಬಿಸಿಯಾದ ಬಳಿಕ, ದಪ್ಪ ಕುಳ್ಳನೆಯ ವ್ಯಕ್ತಿ ಜಿಗಿದು ವಾಹನವೇರಿ ಮತ್ತೆ ಯಂತ್ರವನ್ನು ಚಾಲನೆಗೆ ತಂದ. ವಾಹನ ಗೇಟಿನವರೆಗೂ ಸಾಗಿ ನಿಂತಿತು. ಕುಳ್ಳನೆಯ ವ್ಯಕ್ತಿ ವಾಹನದಿಂದ ಇಳಿದು ಗೇಟನ್ನು ತೆರೆದ. ಮತ್ತೆ ವಾಹನವನ್ನು ಮುಂದಕ್ಕೋಡಿಸಿದ. ಅದೇ ಸಮಯಕ್ಕೆ ಇಳಿಜಾರಿಗೆ ಇಳಿದು ಹೋದ ವ್ಯಕ್ತಿ ಕಾಣಿಸಿದ! ಮುಖ್ಯದ್ವಾರದ ಪಕ್ಕದಲ್ಲಿದ್ದ ಸಣ್ಣಗಿನ ಗೇಟನ್ನು ತೆರೆದುಕೊಂಡು ಒಳಗೆ ಬರುತ್ತಿದ್ದ!
ಕಣ್ಣುಗಳನ್ನು ಕಿರಿದುಗೊಳಿಸಿ ನೋಡುತ್ತಿದ್ದಳು. ಮುಖದ ತುಂಬಾ ಗಡ್ಡ ಬೆಳೆಸಿದ್ದ ಆ ವ್ಯಕ್ತಿ ಹತ್ತಿರವಾಗುತ್ತಿದ್ದಂತೆ ಅವಳ ಬಾಯಿಯಿಂದ ಉದ್ಗಾರ ಬಂತು.
ಸ್ಯಾಮ್ ಅಂಕಲ್!
ಆತ ರಸ್ತೆಯಂಚಿಗೆ ನಡೆದು ಕಾಟೇಜನ್ನು ದಾಟಿ ಮುಂದಕ್ಕೆ ಹೋದ!
ಮೆಲ್ಲನೆ ಅವನನ್ನು ಹಿಂಬಾಲಿಸಿ ನಡೆದಳು. ಆತ ನಡೆದು ಕಿತ್ತಳೆ ಹಣ್ಣಿನ ಮರಗಳ ನಡುವೆಯಿದ್ದ ಸಣ್ಣ ಗುಡಿಸಲನ್ನು ಸೇರ್‍ಇಕೊಂಡ.
ಎಸ್ಟೇಟಿನ ಮಾಲೀಕನಿಗೆ ಗುಡಿಸಲಿನಲ್ಲೇನು ಕೆಲಸ? ಕುತೂಹಲ ತಡೆಯಲಾರದೆ ಅತ್ತಿತ್ತ ದೃಷ್ಟಿ ಹೊರಳಿಸಿ ತಟಕ್ಕನೆ ಗುಡಿಸಲಿನೊಳಗೆ ನುಗ್ಗಿದಳು.
ಮಫ್ಲರನ್ನು ಬಿಚ್ಚಿ ಗೋಡೆಗಾನಿಸಿದ ಆತ , ಸದ್ದಿಗೆ ತಿರುಗಿ ನೋಡಿ ಉದ್ಗರಿಸಿದ.
"ನಿನ್ಯಾರು?"
"ಸ್ಯಾಮ್ ಅಂಕಲ್?!"
"ಅಲ್ಲ... ನಾನು ಸ್ಯಾಮ್ ಅಂಕಲ್ ಅಲ್ಲ... ನೀನು ಇಲ್ಲಿ ಬರ್ಬೇಡ..." ಆತ ಅರಚಿದಾಗ ರಚನಾ ಬೆವತು ಹೋದಳು.
"ಅಂಕಲ್, ನನ್ನ ಮಗಳೂಂತ ಕರೆದ್ರಿ... ಆ ಪ್ರೀತಿ ಎಲ್ಲಿ ಹೋಯ್ತು? ಅಂಕಲ್, ನೀವು ಏನೋ ನನ್ನಿಂದ ಮುಚ್ಚಿಡ್ತಾ ಇದ್ದೀರಿ. ಏನಿದೆಲ್ಲಾ ಎತ್ತರದ ಆವರಣ... ಹಳದಿ ಮರಳು... ಈ ಗುಡಿಸಲು...?" ಸ್ಯಾಮ್‍ನ ಕಣ್ಣುಗಳಲ್ಲಿ ನೀರು ಜಿನುಗಿತು. ನಾಲಗೆಯಿಂದ ತುಟಿಯನ್ನು ಸವರಿಕೊಂಡು ರಚನಾಳ ಕೈ ಹಿಡಿದು ಕಣ್ಣುಗಳಿಗೆ ಒತ್ತಿಕೊಂಡ.
"ಅಂಕಲ್, ಏನಿದೆಲ್ಲಾ?"
"ಹೇಳ್ತಿನಮ್ಮಾ, ಈ ಎಸ್ಟೇಟ್ ಈಗ ನನ್ನ ಕೈಯಲಿಲ್ಲಮ್ಮಾ. ಆ ಧೂರ್ತ ನನ್ನಿಂದ ಇದನ್ನೆಲ್ಲ ಕಿತ್ತುಕೊಂಡು ಬಿಟ್ಟ"
"ಏನು ಹೇಳ್ತ ಇದ್ದೀರಾ ಅಂಕಲ್?"
"ನಿಂಗಿದೆಲ್ಲಾ ಅರ್ಥವಾಗೊದಿಲ್ಲ.. " ಸ್ಯಾಮ್ ಅಂಕಲ್ ಗೋಡೆಯಾಚೆಗೆ ಮುಖ ಹೊರಳಿಸಿ ಕೈಯನ್ನು ಗೋಡೆಗೆ ಆನಿಸಿ ನಿಂತ.
"ಅಂಕಲ್, ನನ್ಗೆ ಅರ್ಥವಾಗದ ವಿಷಯಗಳು ತುಂಬಾ ಇವೆ. ಏನೂಂತ ಸರಿಯಾಗಿ ಹೇಳಿ.... ಆ ಹಳದಿ ಮರಳು... ಈ ಗುಡಿಸಲಲ್ಲಿ ನೀವು?"
"ಅದು ಹಳದಿ ಮರಳಲ್ಲ. ಅದು ರಾಸಾಯನಿಕ ಗೊಬ್ಬರ. ಆ ವ್ಯಕ್ತಿ ನನ್ನಿಂದ ಜಬರ್ದಸ್ತಿಯಲ್ಲಿ ಆಸ್ತಿಯನ್ನು ತನ್ನ ಹೆಸರಿಗೆ ಮಾಡ್ಕೊಂಡ. ಈ ಎಸ್ಟೇಟ್‍ನಲ್ಲಿ ಬಂಗಾರ ಬೆಳೆಸ್ತೇನೇಂತ ಅದೆಲ್ಲಿಂದಲೋ ಕೃತಕ ಗೊಬ್ಬರವನ್ನು ತಂದು ಹಾಕಿದ್ದಾನೆ. ಇಲ್ಲಿ ನಡೆಯೋ ವಿದ್ಯಮಾನಗಳು ಯಾರಿಗೂ ತಿಳಿಬಾರ್ದೂಂತ ಎತ್ತರಕ್ಕೆ ಆವರಣ ಹಾಕಿಸ್ದ. ಈಗ ನೋಡಿದ್ರೆ... ಎಸ್ಟೇಟ್‍ನ ಬೆಳೆಗಳೆಲ್ಲಾ ಸರಿಯಾದ ಆರೈಕೆಯಿಲ್ಲದೆ ಸೊರಗಿ ಹೋಗಿವೆ. ನಂಗೂ ಕಾವಲು ಹಾಕಿ ಕಾಯ್ತಾ ಇದ್ದಾನೆ. ನೀನು ನನಗೆ ಸಹಾಯ ಮಾಡಲಾರೆ...ನಾನು ಇಳಿಜಾರಿಗೆ ಹೋಗುವಾಗಲೆಲ್ಲ ನಿನ್ನ ಹುಡುಕ್ತಿದ್ದೆ"
"ಇಳಿಜಾರಿಗೆ ಹೋಗುವಾಗ ಯಾರೂ ನಿಮ್ಮನ್ನು ಗಮನಿಸುವುದಿಲ್ವೆ?"
"ಅಲ್ಲೂ ನನ್ನ ಹಿಂಬಾಲಿಸ್ತಾರೆ"
ತಟ್ಟನೆ ಅವಳಿಗೆ ನೆನಪಾಯಿತು. ಬೆಳಗ್ಗೆ ವಾಹನ ಬಂದಿರುವ ಹೊತ್ತಲ್ಲಿ ತಾನು ಕಂಡಿದ್ದು ಸ್ಯಾಮ್ ಅಂಕಲ್‍ನನ್ನು! ಅಂದರೆ ಸ್ಯಾಮ್ ಅಂಕಲ್‍ನ ಕಾವಲುಗಾರ ತನ್ನನ್ನು ನೋಡಿದ್ದಾನೆ!
ಆಗಲೆ ಕಾರಿನ ಸದ್ದು ಕೇಳಿಸಿತು. ಎಚ್ಚೆತ್ತುಕೊಂಡಳು ರಚನಾ!
"ಒಂದೇ ಒಂದು ಸಹಾಯ ಮಾಡ್ತೀಯಾ?"
"ಹೇಳಿ ಅಂಕಲ್.."
"ನನ್ನ ಇಲ್ಲಿಂದ ಕರೆದುಕೊಂಡು ಹೋಗು.."
"ಖಂಡಿತವಾಗಿಯೂ ಆದ್ರೆ ಇಲ್ಲಿಯ ಪ್ರತಿಯೊಂದು ವಿಷಯವನ್ನು ತಿಳ್ಕೊಂಡ ನಂತರ"
ಕಪ್ಪು ಬಣ್ಣದ ಕಾರು ಕಾಟೇಜ್ ಬಳಿ ನಿಲ್ಲುತ್ತಲೇ ಅಂಕಲ್ ಅವಳನ್ನು ಅವಸರಿಸಿದ.
"ಓಡು ಇಲ್ಲಿಂದ. ಆತ ಈಗ ಈ ಕಡೆಗೆ ಬರ್ತಾನೆ"
"ಯಾರಾತ?" ಅವಳಿಗೆ ಯೋಚಿಸುವಷ್ಟು ಸಮಯ ನೀಡದೆ ಅವಳನ್ನು ದೂಡಿದ. ಅವಳು ಮರಗಳ ಮರೆಯಲ್ಲಿ ಸಾಗಿ ಸಣ್ಣ ಗೇಟಿನ ಮೂಲಕ ಹೊರಗೆ ಬಂದು ನಿಟ್ಟುಸಿರಿಟ್ಟಳು.
ಎಲ್ಲವೂ ವಿಚಿತ್ರವಾಗಿ ಕಂಡಿತು. ವ್ಯಕ್ತಿ, ಸ್ಯಾಮ್ ಅಂಕಲ್‍ನ ಆಸ್ತಿಯನ್ನು ತನ್ನ ಹೆಸರಿಗೆ ಮಾಡಿಕೊಂಡು ಅವರನ್ನು ಮೂಲೆ ಗುಂಪು ಮಾಡಿ, ಅವರನ್ನು ಆಳುತ್ತಿದ್ದಾನೆ! ಅಂಕಲ್ ಆ ವ್ಯಕ್ತಿ ಯಾರೆಂದು ಹೇಳಲೂ ಹೆದರುತ್ತಿದ್ದಾರೆ! ನಿಧಾನಕ್ಕೆ ಹೆಜ್ಜೆ ಸರಿಸುತ್ತಿದ್ದವಳು, ಹಿಂದಿನಿಂದ ಯಾರದೋ ನಡುಗೆಯ ಸದ್ದು ಕೇಳುತ್ತಲೇ ನಡಿಗೆಯ ವೇಗವನ್ನು ಹೆಚ್ಚಿಸಿ ಮನೆಯ ಕಡೆಗೆ ಹೊರಟಳು.

***
ಮನೆಯ ಮುಂದೆ ಹಳೇ ಕಾಲದ ಕಪ್ಪು ಕಾರು ನಿಂತಿತ್ತು! ಅದನ್ನು ಕಾಣುತ್ತಲೇ ತಲೆ ಕೊಡವಿಕೊಂಡಳು. ಈ ಕಾರನ್ನು ತಾನು ನೋಡಿದ್ದು ಸ್ಯಾಮ್ ಅಂಕಲ್‍ನ ಎಸ್ಟೇಟ್‍ನಲ್ಲಿ! ಇಲ್ಲಿಗೆ ಹ್ಯಾಗೆ ಬಂತು? ವ್ಯಕ್ತಿ ತಾನು ಅಂಕಲ್ ಜೊತೆಗೆ ಮಾತನಾಡಿದ್ದನ್ನು ಗಮನಿಸಿ ತನ್ನನ್ನು ಹಿಂಬಾಲಿಸಿ ಬಂದಿದ್ದಾನೆ!  ಹೆಜ್ಜೆ ಮುಂದಿರಿಸ ಹೋದವಳು ತಟ್ಟನೆ ನಿಂತಳು. ಕಾರು ಮರಳುವವರೆಗೆ ತಾನು ಮನೆಗೆ ತೆರಳಬಾರದು. ಹಿಂದೆ ಹೆಜ್ಜೆ ಹಾಕಲಿದ್ದವಳನ್ನು ತಡೆದು ನಿಲ್ಲಿಸಿದ್ದು ಕೋವಿ ಹಿಡಿದು ನಿಂತಿದ್ದ ವ್ಯಕ್ತಿ!
ಅಪ್ಪಾ! ಅನಾಯಸವಾಗಿ ಅವಳ ಬಾಯಿಯಿಂದ ಉದ್ಗಾರ ಹೊರಟಿತು.
"ಹೌದಮ್ಮಾ, ನಾನೆ... ನಿನ್ನ ಅಪ್ಪ. ಸ್ಯಾಮ್ ಈಗಷ್ಟೆ ಎಸ್ಟೇಟ್‍ನಿಂದ ತಪ್ಪಿಸಿಕೊಂಡು ಬಿಟ್ಟ. ನೀನು ಅವನ ಜೊತೆಗೆ ಇದ್ದಿದ್ದನ್ನು ನಮ್ಮ ಡ್ರೈವರ್... ಅಂದರೆ ಕುಳ್ಳಗಿನ ವ್ಯಕ್ತಿ ನೋಡಿದ್ದಾನೆ. ನಿಜ ಹೇಳು ಸ್ಯಾಮ್ ಅಂಕಲ್ ಎಲ್ಲಿದ್ದಾನೆ?" ಕೋವಿಯ ತುದಿಯನ್ನು ಮಗಳ ಕಡೆಗೆ ಗುರಿಯಿಟ್ಟ ಗಿರಿಯಪ್ಪ.
"ಅಪ್ಪಾ, ನಂಗೊತ್ತಿಲ್ಲ..."
"ಸುಳ್ಳು ಹೇಳ್ಬೇಡ. ನಿನ್ನ ಅಂಕಲ್ ಎಷ್ಟೊಂದು ಔದಾರ್ಯವಂತ. ನಿನ್ನನ್ನು ಎಸ್ಟೇಟ್‍ನ ವಾರಸುದಾರಳನ್ನಾಗಿ ಮಾಡುತ್ತೇನೆಂದ. ನಾಳೆ ನೀನು ಮದುವೆಯಾಗಿ ಹೋದರೆ ಆಸ್ತಿನೂ ನಿನ್ನ ಜೊತೆಗೆ ಹೊರಟು ಹೋಗುತ್ತದೆ. ಅದಕ್ಕೆ ಇದು ನನ್ನ ಉಪಾಯ. ಮೊದಲೇ ಸ್ಮಗ್ಲಿಂಗ್ ಗುಂಪಿನೊಂದಿಗೆ ಸಂಪರ್ಕವಿರುವ ನನಗೆ... ಈಗ ಬಾಸ್ ಪಟ್ಟ. ಎಸ್ಟೇಟ್ ಈಗ ನನ್ನ ಕಾರ್ಯ ಸ್ಥಾನ" ನಗಲಾರಂಭಿಸಿದ.
ರಚನಾ ಬೆದರಿದ ಹುಲ್ಲೆಯಂತೆ ತರ ತರ ಕಂಪಿಸಿದಳು. ಇದು ಅನಿರೀಕ್ಷಿತ! ತನ್ನ ತಂದೆ ಸ್ಮಗ್ಲಿಂಗ್ ಗುಂಪಿಗೆ ಸೇರಿದವರು! ಆ ಮಾತುಗಳನ್ನು ಅರಗಿಸಿಕೊಳ್ಳಲಾಗಲಿಲ್ಲ.
"ಏಯ್, ಆ ಸ್ಯಾಮ್ ಎಲ್ಲಿದ್ದಾನೆ ಹೇಳು?..." ಗಿರಿಯಪ್ಪ ಗದರಿಸಿದ.
"ಇಲ್ಲೆ ಇದ್ದೇನೆ ಗಿರಿಯಪ್ಪ... ಈ ಸ್ಯಾಮ್‍ನನ್ನು ಯಾರು ಅಷ್ಟು ಸುಲಭದಲ್ಲಿ ಮೋಸ ಮಾಡೋದಿಕ್ಕೆ ಸಾಧ್ಯವಿಲ್ಲ" ಸ್ಯಾಮ್‍ನ ಮಾತುಗಳು ಬಂದಾಗ ಗಿರಿಯಪ್ಪ ಹಿಂತಿರುಗಿದ.
ಅವನ ಹಿಂದೆ ಪೊಲೀಸ್ ಅಧಿಕಾರಿ ನಿಂತು ಗಿರಿಯಪ್ಪನ ಕಡೆಗೆ ರಿವಾಲ್ವರನ್ನು ಗುರಿಯಿಟ್ಟಿದ್ದರು.
"ಗಿರಿಯಪ್ಪ ನಿನ್ನ ಆಟ ಇನ್ನು ನಡೆಯೋದಿಲ್ಲ. ನೀನು ಅವಸರದಲ್ಲಿ ಹೊರಟವನು ಮೊಬೈಲ್ ಫೋನನ್ನು ಬಿಟ್ಟು ಹೋಗಿದ್ದಿಯಾ. ಸ್ಯಾಮ್ ಅದರಿಂದ ನಮಗೆ ಫೋನ್ ಮಾಡಿ ತಿಳಿಸ್ದ. ಅದರಿಂದಾಗಿ ನಿನ್ನ ತಂಡವನ್ನು ಈಗಾಗ್ಲೆ ಹಿಡಿದಿದ್ದೇವೆ" ಅಧಿಕಾರಿಯ ಮಾತಿಗೆ ಗಿರಿಯಪ್ಪ ಅಸಹಾಯಕನಾಗಿ ಕೋವಿಯನ್ನು ಕೆಳಗೆ ಹಾಕಿದ.
ಅಧಿಕಾರಿಯ ಸಹಾಯಕರು ಅವನನ್ನು ಬಂಧಿಸಿದರು.
ರಚನಾಳ ಕಣ್ಣುಗಳಲ್ಲಿ ನೀರು ಹನಿಗೂಡಿತು.
ಸ್ಯಾಮ್ ಅಂಕಲ್ ಅವಳ ಬಳಿ ಬಂದು ತಲೆ ನೆವರಿಸಿದ.
"ರಚನಾ ನೀನು ನನ್ನ ಮಗಳಮ್ಮಾ..." ಎಂದು ಪ್ರೀತಿಯಿಂದ ಹೇಳಿದ.
"ಹೌದಮ್ಮಾ, ಇನ್ನು ಮುಂದೆ ಎಸ್ಟೇಟಿಗೂ ನೀನೇ ವಾರಸುದಾರಳು" ಎಂದು ಅಧಿಕಾರಿ ಸ್ಯಾಮ್ ಅಂಕಲ್ ನೀಡಿದ್ದ ಪತ್ರಗಳನ್ನು ಅವಳ ಕೈಯಲ್ಲಿಟ್ಟರು. ಸ್ಯಾಮ್ ಅಂಕಲ್, ರಚನಾ ಇಬ್ಬರೂ ಅಧಿಕಾರಿಗೆ ವಂದಿಸಿ ಎಸ್ಟೇಟ್‍ಗೆ ನಡೆದರು.