ನಕ್ಸಲ್ ಚಳುವಳಿ: ಸಮಾಜದ್ದೇ ಬಳುವಳಿ?

ನಕ್ಸಲ್ ಚಳುವಳಿ: ಸಮಾಜದ್ದೇ ಬಳುವಳಿ?

ಬರಹ

ನಕ್ಸಲ್ ಚಳುವಳಿ: ಸಮಾಜದ್ದೇ ಬಳುವಳಿ?

ಈ ನವೆಂಬರ್ 19ರ ಬೆಳಗಿನ ಝಾವ ಮುವ್ವರು ನಕ್ಸಲರು ಪೋಲೀಸರ ಗುಂಡಿಗೆ ಬಲಿಯಾಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಹೊರನಾಡು ಸಮೀಪ ಮಾವಿನ ಹೊಲದ ಬಳಿ ಪೋಲೀಸರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಹತರಾದ ಈ ಮುವ್ವರೂ ಮಧ್ಯ ವಯಸ್ಸನ್ನೂ ದಾಟದ ಎಳೆ ಜೀವಗಳು. ಅಭಿಷೇಕ್ ಅಲಿಯಾಸ್ ವೆಂಕಟೇಶ್ ಎಂದು ಗುರುತಿಸಲಾಗಿರುವ ತರುಣನ ವಯಸ್ಸು ಕೇವಲ ಹತ್ತೊಂಭತ್ತು ವರ್ಷಗಳು... ಈ ಸಾವುಗಳೊಂದಿಗೆ, ರಾಜ್ಯದ ಮಲೆನಾಡಿನಲ್ಲಿ ನಕ್ಸಲರಿಗೆ ಸಂಬಂಧಿಸಿದ ಹಿಂಸಾಚಾರದಲ್ಲಿ ಕಳೆದ 5 ವರ್ಷಗಳಲ್ಲಿ ಒಟ್ಟು 13 ಜನ ಬಲಿಯಾದಂತಾಗಿದೆ. ಇವರಲ್ಲಿ ಕರ್ನಾಟಕದಲ್ಲಿ ನಕ್ಸಲ್ ಚಳುವಳಿಯನ್ನು ಹುಟ್ಟು ಹಾಕಿದ ಸಾಕೇತ್ ರಾಜನ್ ಸೇರಿದಂತೆ ಏಳು ಜನ ನಕ್ಸಲರಾಗಿದ್ದರೆ, ಮುವ್ವರು ಅವರಿಗೆ ಆಶ್ರಯ ನೀಡಿದ್ದರೆಂದು ಪೋಲೀಸರಿಂದ ಸಂಶಯಕ್ಕೊಳಗಾಗಿದ್ದವರು. ಇನ್ನಿಬ್ಬರು ಪೋಲೀಸ್ ಮಾಹಿತಿದಾರರರೆಂದು ನಕ್ಸಲರಿಂದ ಸಂಶಯಕ್ಕೊಳಪಟ್ಟು ಕೊಲ್ಲಲ್ಪಟ್ಟವರು. ಇನ್ನೋರ್ವ ಮೊನ್ನೆಯ ಗುಂಡಿನ ಚಕಮಕಿಯಲ್ಲಿ ಹತನಾದ ನಕ್ಸಲ್ ನಿಗ್ರಹ ದಳದ ಪೋಲೀಸ್ ಪೇದೆ ಗುರುಪ್ರಸಾದ್.

ನಕ್ಸಲ್ ಚಳುವಳಿಯಿಂದ ಪೀಡಿತವಾಗಿರುವ ಇತರ ರಾಜ್ಯಗಳಲ್ಲಿ ಈ ಚಳುವಳಿಯಿಂದಾಗಿ ಸಂಭವಿಸುತ್ತಿರುವ ಹಿಂಸಾಚಾರಕ್ಕೆ ಹೋಲಿಸಿದರೆ, ಇವೇನೂ ಅಷ್ಟು ಆತಂಕಕಾರಿಯಾದ ಅಂಕಿ ಅಂಶಗಳಂತೆ ತೋರುವುದಿಲ್ಲ. ಆದರೆ ಈ ಚಳುವಳಿ ಕರ್ನಾಟಕದಲ್ಲಿ ಹೀಗೇ ಬೆಳೆದರೆ ಆಗಬಹುದಾದ ಅನಾಹುತ ಮಾತ್ರ ಭೀಕರವಾದುದು. ಆದನ್ನು ನಾವೀಗ ಆಂಧ್ರ, ಛತ್ತೀಸಘಡ, ಒರಿಸ್ಸಾ, ಝಾರ್ಖಂಡ್ ಮತ್ತು ಬಿಹಾರಗಳಲ್ಲಿ ನೋಡುತ್ತಿದ್ದೇವೆ. ಈಗ ಈ ರಾಜ್ಯಗಳಲ್ಲಿ ಭದ್ರವಾಗಿ ನೆಲೆಗೊಂಡಿರುವ ನಕ್ಸಲ್ ಗುಂಪುಗಳು ಈ ರಾಜ್ಯಗಳ ಅರಣ್ಯ ಪ್ರದೇಶಗಳ ಜನತೆಯನ್ನು ತಮ್ಮ ಆಡಳಿತಕ್ಕೆ ಒಳಪಡಿಸಿಕೊಂಡು, ಅಲ್ಲಿ ಬಂದೂಕಿನ ರಾಜ್ಯಗಳನ್ನು ಸ್ಥಾಪಿಸಿವೆ. ಇವರ ಮತ್ತು ಪೋಲೀಸರ ಬಂದೂಕಗಳ ನಡುವೆ ಸಿಕ್ಕ ಈ ಜನತೆ ಯಾವ ನಾಗರಿಕ ಹಕ್ಕು ಮತ್ತು ಸೌಲಭ್ಯಗಳಿಗೂ ಬಾಧ್ಯರಾಗದೆ, ಅಸಹಾಯಕ ಸ್ಥಿತಿಯಲ್ಲಿದ್ದಾರೆ. ಇನ್ನು ಈ ಗುಂಪುಗಳೊಳಗೇ ಸೈದ್ಧಾಂತಿಕ ಅಥವಾ ವಸೂಲಿ ಸಂಬಂಧಿತ ಭಿನ್ನಾಭಿಪ್ರಾಯಗಳಿಂದಾಗಿ ಸೃಷ್ಟಿಯಾಗುವ ಒಳಗುಂಪುಗಳ ನಡುವೆ ನಡೆಯುವ ಕದನಗಳ ಮಧ್ಯೆ ಸಿಕ್ಕಿ ಹತರಾಗುವ ಅಮಾಯಕರ ಸುದ್ದಿ, ನಾಗರಿಕ ಲೋಕಕ್ಕೆ ತಲುಪುವುದೇ ಇಲ್ಲ. ನಕ್ಸಲ್ ಹಿಂಸಾಚಾರಕ್ಕೆ ಅತಿ ಹೆಚ್ಚು ಬಲಿಯಾಗುತ್ತಿರುವವರು ಭ್ರಷ್ಟ ರಾಜಕಾರಣಿಗಳೂ ಅಲ್ಲ, ದುಷ್ಟ ಜಮೀನುದಾರರೂ ಅಲ್ಲ; ಬದಲಿಗೆ, ಕರ್ತವ್ಯ ನಿರತ ಬಡ ಪೋಲಿಸ್ ಸಿಬ್ಬಂದಿ. ಇಂತಹ ಮೊದಲ ಬಲಿ, ಕರ್ನಾಟಕದ ನಕ್ಸಲರಿಂದ ಈಗ ದಾಖಲಾಗಿದೆ. ಇದು ಈ ನಕ್ಸಲರು ಈಗ ಎಷ್ಟರ ಮಟ್ಟಿಗೆ ಶಸ್ತ್ರಸಜ್ಜಿತರಾಗಿದ್ದಾರೆ ಎಂಬುದನ್ನು ತೋರಿಸುತ್ತದೆ. ಈ ಸೂಚನೆಯನ್ನು ಆಧರಿಸಿ, ನಕ್ಸಲ್ ನಿಗ್ರಹ ಪೋಲೀಸ್ ಕಾರ್ಯಾಚರಣೆ ಇನ್ನಷ್ಟು ತೀವ್ರ ಮತ್ತು ವ್ಯಾಪಕವಾದರೆ ಆಶ್ಚರ್ಯವಿಲ್ಲ. ಇದಂತೂ ಕರ್ನಾಟಕದ ಸಾರ್ವಜನಿಕ ಶಾಂತಿಯ ಹಿತದೃಷ್ಟಿಯಿಂದ ಶುಭ ಸೂಚನೆಯಲ್ಲ.

ಕರ್ನಾಟಕದ ಮಟ್ಟಿಗಂತೂ, ನಕ್ಸಲರು ಹತರಾದಾಗಲೆಲ್ಲ ಸಾಮಾನ್ಯ ಜನ ಮೊದಲ ಪ್ರತಿಕ್ರಿಯೆಯಾಗಿ ಅವರ ಬಗ್ಗೆ ಮರುಗುವುದೇ ಹೆಚ್ಚು. ಏಕೆಂದರೆ ಅವರೆಲ್ಲ ಯಾವುದೇ ವೈಯುಕ್ತಿಕ ಪ್ರತಿಫಲಾಪೇಕ್ಷೆ ಇಲ್ಲದೆ ತಮ್ಮ ಪರವಾಗಿ ಅನ್ಯಾಯಗಳ ವಿರುದ್ಧ ಪ್ರತಿಭಟಿಸುತ್ತಾ, ಸಮಗ್ರ ಸಾಮಾಜಿಕ ಬದಲಾವಣೆಗಾಗಿ ಕಾರ್ಯಾಚರಣೆ ನಡೆಸುತ್ತಾ ಪ್ರಾಣ ತೆತ್ತವರು ಎಂದವರು ಭಾವಿಸುತ್ತಾರೆ. ಅವರಲ್ಲಿ ಬಹಳಷ್ಟು ಜನ ಬಡವರ ಮಕ್ಕಳು. ಈ ಬಡತನಕ್ಕೆ ಈಗಿರುವ ರಾಜಕೀಯ ವ್ಯವಸ್ಥೆಯಿಂದ ಪರಿಹಾರ ಅಸಾಧ್ಯವೆಂದು ತೀರ್ಮಾನಿಸಿ, ಈ ವ್ಯವಸ್ಥೆಗೆ ಕಾರಣರಾಗಿರುವ ವರ್ಗ ಶತ್ರುಗಳನ್ನು ಹತ ಮಾಡುವ ಮೂಲಕ ಹೊಸ ರಾಜಕೀಯ ವ್ಯವಸ್ಥೆಯನ್ನು ಸ್ಥಾಪಿಸಬಹುದೆಂದು ನಂಬಿದ ಅರೆ - ಮುಗ್ಧರಿವರು. ಇಂದಿನ ರಾಜಕೀಯ ವ್ಯವಸ್ಥೆ ಸಾಂವಿಧಾನಿಕ ಹೋರಾಟಗಳ ಮೂಲಕ ರಿಪೇರಿಯ ಸಾಧ್ಯತೆಗಳನ್ನು ಅಲ್ಲಗೆಳೆಯುವಷ್ಟು ಅವನತಿಗೊಂಡಿದೆ, ನಿಜ. ಆದರೆ ಈ ರಾಜಕೀಯ ವ್ಯವಸ್ಥೆಯ ಜಾಗದಲ್ಲಿ ಇವರು ತರಬಯಸುವ ವ್ಯವಸ್ಥೆ ಇದಕ್ಕಿಂತ ಹೆಚ್ಚು ಘೋರವಾಗಿರುವ ಮತ್ತು ಅದರ ವಿರುದ್ಧ ದನಿ ಎತ್ತುವ ಅವಕಾಶವೇ ಇಲ್ಲದಿರುವ ವ್ಯವಸ್ಥೆಯಾಗಿರುವ ಸಾಧ್ಯತೆಗಳೇ ಹೆಚ್ಚು. ಆಲೋಚನೆ ಮತ್ತು ವಿವೇಕ ಕೊನೆಗೊಂಡಾಗ ಆರಂಭವಾಗುವುದೆಂದು ಹೇಳಲಾಗುವ ಹಿಂಸೆ ಸಾಮಾಜಿಕ ಬದಲಾವಣೆಯ ಒಂದು ಅಂಗೀಕಾರ್ಹ ಅಸ್ತ್ರ ಎಂಬ ಅವರ ನಂಬಿಕೆಯಲ್ಲೇ ಈ ಸಾಧ್ಯತೆ ಅಂತರ್ಗತವಾಗಿದೆ.

ಆದರೆ ಈ ಚಳುವಳಿಯಿಂದ ಆಕರ್ಷಿತರಾಗುವ ಯುವಜನ ತಾವು ಕಟ್ಟಬೇಕೆಂದಿರುವ ಹೊಸ ಬಗೆಯ ರಾಜಕಾರಣದ ಬಗ್ಗೆ ಇಷ್ಟು ಆಳವಾಗಿ ಯೋಚಿಸುವ ವ್ಯವಧಾನವಿಲ್ಲದವರು. ಕರ್ನಾಟಕದಲ್ಲಿ ನಕ್ಸಲ್ ಚಳುವಳಿಗೆ ಒಂದು ಸಿದ್ಧಾಂತ ಮತ್ತು ಸಂಘಟನಾ ಸ್ವರೂಪವನ್ನು ನೀಡಿದ ಸಾಕೇತ್ ರಾಜನ್, ಜಾಗತಿಕ ರಾಜಕೀಯ ಹೋರಾಟಗಗಳ ಬಗೆಗೆ ಮತ್ತು ನಿರ್ದಿಷ್ಟವಾಗಿ ಕರ್ನಾಟಕದ ರಾಜಕೀಯ ಇತಿಹಾಸದ ಬಗೆಗೆ ತನ್ನದೇ ಒಳನೋಟಗಳುಳ್ಳ ಆಳವಾದ ಪಾಂಡಿತ್ಯ ಹೊಂದಿದ್ದ ಪ್ರಚಂಡ ಬುದ್ಧಿಜೀವಿ. ಹಾಗೇ ನಕ್ಸಲ್ ವಿಚಾರಧಾರೆಯೊಂದಿಗೆ ನಾವು ಸಾಮಾನ್ಯವಾಗಿ ಗುರುತಿಸುವ ಕ್ರುದ್ಧತೆಯನ್ನು ಒಂದಿಷ್ಟೂ ಬಹಿರಂಗವಾಗಿ ತೋರಿಸಿಕೊಳ್ಳದ 'ಸಜ್ಜನ' ಈತ. ಹಾಗಾಗಿಯೇ ಕರ್ನಾಟಕದ ಅನೇಕ ಸಜ್ಜನ ಹುಡುಗ - ಹುಡುಗಿಯರು ಎಲ್ಲ ಉದಾರವಾದಿ ಜನಪರ ಚಳುವಳಿಗಳು ತಮ್ಮ ವಿಶ್ವಾಸಾರ್ಹತೆ ಕಳೆದುಕೊಂಡು ಕುಸಿದು ಬಿದ್ದಿದ್ದ ಸಂದರ್ಭದಲ್ಲಿ ಈತನ ಪ್ರಭಾವಕ್ಕೆ ಸಿಕ್ಕಿ, ತಮ್ಮ ಯೌವ್ವನದ ಆದರ್ಶಪ್ರಿಯತೆಯ ಒತ್ತಡದಲ್ಲಿ ಅವಸರದ ತೀರ್ಮಾನಗಳನ್ನು ಕೈಗೊಂಡಿದ್ದು ಸಹಜವೇ ಆಗಿತ್ತು.

ಇದಕ್ಕೆ ಇನ್ನೊಂದು ಕಾರಣವೂ ಉಂಟು. ಬಲಪಂಥೀಯ ಅತಿವಾದಿಗಳಂತೆ, ಈ ಎಡ ಪಂಥೀಯ ಅತಿವಾದಿಗಳೂ ಒಮ್ಮೆಗೇ ನೇರ ಕಾರ್ಯಾಚರಣೆಗಳಿಗೆ ಇಳಿಯುವವರಲ್ಲ. ಇವರದೇನಿದ್ದರೂ ಗುಪ್ತ ಕಾರ್ಯಾಚರಣೆಗಳು. ಮೊದಲು ಇವರು ರಾಜ್ಯಾದ್ಯಂತ ವಿದ್ಯಾರ್ಥಿ ಸಂಘಟನೆ ಕಟ್ಟಿದರು. ನಂತರ ತಮ್ಮ ಚಟುವಟಿಕೆಗಳಿಗೆ ಸೂಕ್ತವಾದ ನೆಲೆಯನ್ನು ಗುರುತಿಸಿಕೊಂಡು, ಶಿವಮೊಗ್ಗ - ಚಿಕ್ಕಮಗಳೂರು ಆಸುಪಾಸಿನಲ್ಲಿ ಜನರ ಸಹಾನುಭೂತಿ ಗಳಿಸಿದ್ದ 'ತುಂಗಾ ಉಳಿಸಿ' ಚಳುವಳಿಯನ್ನು ಹೊಕ್ಕರು. ಸಾಕೇತ್ ರಾಜನ್ರಿಂದ ಕಲಿತ ಸಜ್ಜನಿಕೆ ಮತ್ತು ಮತ್ತು ಸವಿನುಡಿಗಳ ಮೂಲಕ ಸಮಾಜದ ಅನೇಕ ಗಣ್ಯರ, ಉದಾರವಾದಿ ಬುದ್ಧಿಜೀವಿಗಳ ಮನ್ನಣೆ ಗಳಿಸಿದರು. ಈ ಗಣ್ಯರೂ, ಬುದ್ಧಿಜೀವಿಗಳೂ ಕಳೆದ ಕೆಲವು ವರ್ಷಗಳಿಂದ ತುಕ್ಕು ಹಿಡಿದು ಹೋಗಿದ್ದ ತಮ್ಮ 'ಪ್ರಗತಿಪರತೆ'ಯನ್ನು ಸಾಬೀತುಗೊಳಿಸಿಕೊಳ್ಳಲು ಇವರೊಂದಿಗೆ ಗುರುತಿಸಿಕೊಂಡರು. ಇದರಿಂದಾಗಿ ಸಾಕಷ್ಟು ಸಾರ್ವಜನಿಕ ಮಾನ್ಯತೆ ಮತ್ತು ಹಣದ ಬೆಂಬಲವೂ ಇವರಿಗೆ ದೊರಕಿತು. ಇದರ ಸದುಪಯೋಗಪಡಿಸಿಕೊಂಡ ಈ ಗುಂಪು ನಂತರ 'ಕೋಮು ಸೌಹಾರ್ದ ವೇದಿಕೆ' ಎಂಬ ಹೆಸರಿನಡಿ ಇನ್ನಷ್ಟು ಅಮಾಯಕರ ಬೆಂಬಲ ಗಳಿಸಿಕೊಂಡು, 'ಕುದುರೆಮುಖ ರಾಷ್ಟ್ರೀಯ ಉದ್ಯಾನವನ'ದ ಹೋರಾಟ ಆರಂಭಿಸಿ ಕರ್ನಾಟಕದಲ್ಲಿ ತನ್ನ ರಾಜಕೀಯ ನೆಲೆ ಕಂಡುಕೊಳ್ಳುವಲ್ಲಿ ಯಶಸ್ವಿಯಾಯಿತು. ಏಳೆಂಟು ವರ್ಷಗಳ ಹಿಂದೆ ಶಿವಮೊಗ್ಗ ಮತ್ತು ಕುವೆಂಪು ವಿಶ್ವವಿದ್ಯಾಲಯದ ಆವರಣದಲ್ಲಿ ಯಾವುದೇ ವಿಚಾರ ಸಂಕಿರಣ ನಡೆದರೂ ಇವರ ರಾಜಕೀಯ ಸಾಹಿತ್ಯ ಕೃತಿಗಳ ಮಾರಾಟವೇ ಅವುಗಳ ಮುಖ್ಯ ಉದ್ದೇಶ ಎನ್ನಿಸುವಷ್ಟರ ಮಟ್ಟಿಗೆ ಅಲ್ಲಿ ಇವರ ಹಾವಳಿ ಶುರುವಾಗಿತ್ತು.

ಇದರ ಹಿಂದೆ ಶಿವಮೊಗ್ಗಾದ ಅನೇಕ ಅಧ್ಯಾಪಕರ ಮತ್ತು ಬುದ್ಧಿಜೀವಿಗಳ 'ಕ್ರಾಂತಿಕಾರಕತೆ'ಯ ಭ್ರಾಂತಿಯೂ ಕೆಲಸ ಮಾಡಿತ್ತು. ಇವರು ದಾರಿ ತಪ್ಪಿದ ಆ ಹುಡುಗರನ್ನು ತಮ್ಮ ಈ ಭ್ರಾಂತಿಯಲ್ಲಿ ಅಮಾಯಕವಾಗಿ ಪ್ರೋತ್ಸಾಹಿಸಿದ್ದೂ ಉಂಟು. ಪೋಲೀಸ್ ಕಾರ್ಯಾಚರಣೆ ಶುರುವಾದ ಮೇಲೆ ಆ ತಪ್ಪಿಗಾಗಿ ಕೈ ಕೈ ಹಿಸುಕಿಕೊಳ್ಳತೊಡಗಿದ ಇವರು, ಆಗಲೇ ತಮ್ಮ ವಿವೇಕದಲ್ಲಿ ಆ ಹುಡುಗರ ಚಟುವಟಿಕೆಗಳನ್ನು ವಿವರಗಳಲ್ಲಿ ಗಮನಿಸಿ ಅವರಿಗೆ 'ಬುದ್ಧಿ' ಹೇಳಿದ್ದರೆ, ಅವರು ಹಿಡಿದಿರುವ ದಾರಿಯ ಅಪಾಯ ಮತ್ತು ನಿರರ್ಥಕತೆಗಳ ಬಗ್ಗೆ ಎಚ್ಚರಿಸಿ ನಿರುತ್ತೇಜಿಸಿದ್ದರೆ, ಸಾಕೇತ್ ರಾಜನ್ ತನ್ನ ವಿಪರೀತ ಓದಿನ ಒತ್ತಡದಲ್ಲ್ಲ್ಲಿ ಥಣ್ಣಗೆ ಹೊತ್ತಿಸಿದ್ದ ನಕ್ಸಲ್ ಬೆಂಕಿಗೆ ಅನೇಕ ಮುಗ್ಧ ಜೀವಗಳು ಆಹುತಿಯಾಗುವುದನ್ನು ತಪ್ಪಿಸಬಹುದಿತ್ತು.

ಈ ಚಳುವಳಿಯ ಕಾರ್ಯಸೂಚಿಗೆ ಅನುಗುಣವಾಗಿಯೋ, ಕೌಟುಂಬಿಕ ಕಾರಣಗಳಿಂದಾಗಿಯೋ ಅಥವಾ ಪೋಲೀಸ್ ಕಾರ್ಯಾಚರಣೆಯ ಭಯದಿಂದಾಗಿಯೋ ಕಾಡನ್ನು ಹೊಗಲಾಗದೆ ನಾಡಿನಲ್ಲೇ ಉಳಿದುಕೊಂಡು, ಈಗ ಸಾಕೇತ್ ರಾಜನ್ನ ಸಾವಿನ ನಂತರ ಮತ್ತು ಸಾರ್ವಜನಿಕವಾಗಿ ತಮ್ಮನ್ನು ಮಾನ್ಯ ಮಾಡಿದ್ದ ಸ್ಥಳೀಯ ಗಣ್ಯರು ಮತ್ತು ಬುದ್ಧಿಜೀವಿಗಳು ಇದ್ದಕ್ಕಿದ್ದಂತೆ ಕೈಬಿಟ್ಟ ದಿಗ್ಭ್ರಮೆಯಲ್ಲಿ ಸಣ್ಣ ಪುಟ್ಟ ಕೆಲಸಗಳನ್ನು ಮಾಡಿಕೊಂಡು ಜೀವನ ಸಾಗಿಸುತ್ತಿರುವ ಈ ಹುಡುಗ-ಹುಡುಗಿಯರನ್ನು ಕಂಡರೆ ಬೇಸರವಾಗುತ್ತದೆ. ಇನ್ನೂ ಒಳಗೆ ಬೆಂಕಿ ಇಟ್ಟುಕೊಂಡೇ ಓಡಾಡುತ್ತಿರುವ ಇವರಲ್ಲಿ ಕೆಲವರು ಒಳಗೊಳಗೇ ಉರಿದು ಕರಕಲಾಗುತ್ತಿದ್ದರೆ, ಇನ್ನು ಕೆಲವರು ಈ 'ಬೆಂಕಿ'ಯನ್ನು ತಾವು ಹಿಡಿದಿರುವ ಹೊಸ 'ಉದ್ಯೋಗ'ಗಳಲ್ಲಿ ಬಳಸಿ, ದೊಡ್ಡ ವಸೂಲಿವೀರರಾಗಿಯೋ ಅಥವಾ ತಮಗೆ ಆಶ್ರಯ ನೀಡಿದ ಉದ್ಯಮಿಗಳ ಏಜೆಂಟರಾಗಿಯೋ ಪರಿವರ್ತಿತರಾಗಿ 'ಭಾರಿ ಕುಳ'ಗಳೆನಿಸಿದ್ದಾರೆ. ಆದರೂ ಇವರ ಕ್ರಾಂತಿಕಾರಕ ಪ್ರವಚನಗಳ 'ಬಿಸಿ'ಯೇನೂ ಕಡಿಮೆಯಾಗಿಲ್ಲ! ಕರ್ನಾಟಕದಲ್ಲಿ ನಕ್ಸಲ್ ಚಳುವಳಿ ನಿಜವಾಗಿ ಬೇರು ಬಿಡುವ ಮುನ್ನವೇ ಅದು ತನ್ನ ನಾಯಕನನ್ನು ಕಳೆದುಕೊಂಡು, ಶೀಲ ವಿಚಲಿತವಾದುದರ ಪರಿಣಾಮವಿದು.

ಇದರ ಪರಿಣಾಮವನ್ನು ಕಾಡಿನೊಳಗಿರುವ ಅದರ ಚಟುವಟಿಕೆಗಳಲ್ಲೂ ಗಮನಿಸಬಹುದು. ಎರಡು ಗುಂಪುಗಳಾಗಿ ಒಡೆದು ಹೋಗಿರುವ ಈ ಚಳುವಳಿಯ ಒಂದು ಗುಂಪು ಮಾತ್ರ ಈಗ ಕಾಡಿನೊಳಗಿದೆ ಎಂದು ಹೇಳಲಾಗುತ್ತಿದೆ. ಅದು ಕೂಡ ಒಂದು ಚಿಕ್ಕ ಗುಂಪಾಗಿದ್ದು, ನಾಡಿಗೆ ಬರಲು ಕಾತುರವಾಗಿದ್ದರೂ; ಸರ್ಕಾರದ ಮೇಲೆ, ಪೋಲೀಸರ ಮೇಲೆ ಭರವಸೆ ಇರದೆ ಕಾಡಿನೊಳಗೇ ತನ್ನ ಇರವನ್ನು ಸ್ಥಾಪಿಸಿಕೊಳ್ಳಲು ಹೆಣಗುತ್ತಿದೆ ಎಂದೂ ಹೇಳಲಾಗುತ್ತಿದೆ. ಮನೋಹರ ಎಂಬ 'ನಕ್ಸಲ'; ನಾಡಿಗೆ ಬಂದು ಪತ್ರಕರ್ತನಾಗಿ ಬಹಿರಂಗ ಬದುಕು ನಡೆಸುತ್ತಿದ್ದರೂ, ಪೋಲೀಸರ 'ಒತ್ತಡ' ತಾಳಲಾಗದೆ ಕಾಡಿಗೆ ಹಿಂತಿರುಗಿ ಇತ್ತೀಚಿನ ಪೋಲೀಸ್ ಕಾರ್ಯಾಚರಣೆಯಲ್ಲಿ ಹತನಾಗಿರುವುದು ಇದಕ್ಕೆ ಸಾಕ್ಷಿ ಎಂದು ಸ್ಥಳೀಯ ಪತ್ರಕರ್ತರು ಹೇಳುತ್ತಿದ್ದಾರೆ. ಇದು ನಿಜವಾಗಿದ್ದಲ್ಲಿ ಸದ್ಯದ ಸರ್ಕಾರದ ನೀತಿ ರಾಜಕೀಯ ಪ್ರೇರಿತವಾಗಿದೆಯೇ ಹೊರತು ಸಮಸ್ಯೆಯನ್ನು ಅದರ ಮೂಲದಲ್ಲಿ ಅರ್ಥಮಾಡಿಕೊಂಡು ಪರಿಹರಿಸಲು ನಿರಾಕರಿಸುತ್ತಿದೆ ಎಂದೇ ಹೇಳಬೇಕಾಗುತ್ತದೆ.

ಕರ್ನಾಟಕದ ನಕ್ಸಲ್ ಚಳುವಳಿ ಇತರ ರಾಜ್ಯಗಳ ನಕ್ಸಲ್ ಚಳುವಳಿಗಳಂತೆ ಹಿಂಸೆಯೊಂದೇ ಬದಲಾವಣೆಯ ಮಾರ್ಗ ಎಂದು ನಂಬಿಕೊಂಡದ್ದಲ್ಲ. ಹಾಗಾಗಿಯೇ ಅದು ಈವರೆಗೆ ತಾನಾಗಿ ಹಿಂಸಾಚಾರಕ್ಕೆ ಎಂದೂ ಇಳಿದಿಲ್ಲ. ತಾನು ಹಿಂಸೆಗೊಳಗಾದಾಗ ಮಾತ್ರ ಪ್ರತಿಹಿಂಸೆ ನಡೆಸಿದೆ ಎಂಬುದನ್ನು ಸರ್ಕಾರ ಗಮನಿಸಬೇಕು. ಹಾಗೇ ಇದು ಉಗ್ರರಿಂದ ಕೂಡಿದ ಗುಂಪಲ್ಲ. ಬದಲಿಗೆ, ವ್ಯವಸ್ಥೆಯ ಹಿಂಸೆಗೆ ನಲುಗಿ ಭಾವಾವೇಶದಲ್ಲಿ ಈ ಚಳುವಳಿಗೆ ಸೇರಿಕೊಂಡ ವಿದ್ಯಾವಂತ ಮತ್ತು ಸೂಕ್ಷ್ಮ ಮನಸ್ಸಿನ ಯುವಜನರ ಗುಂಪು ಇದು. ಹಾಗಾಗಿ ಕರ್ನಾಟಕದ ನಕ್ಸಲ್ ಸಮಸ್ಯೆಯನ್ನು ಬೇರೆ ರಾಜ್ಯಗಳ ನಕ್ಸಲ್ ಸಮಸ್ಯೆಗಿಂತ ಭಿನ್ನವಾಗಿ ನೋಡಿ ಅದನ್ನು ನಿರ್ವಹಿಸಬೇಕಿದೆ. ಹಾಗೆ ನೋಡಿದರೆ ನಕ್ಸಲ್ ಸಮಸ್ಯೆ ಎಂಬುದೇ ಇಂದಿನ ವ್ಯವಸ್ಥೆ ಸೃಷ್ಟಿಸಿರುವ ಸಮಸ್ಯೆ. ಈ ವ್ಯವಸ್ಥೆಯ ಕರಾಳತೆಯನ್ನು ಗಮನಿಸಿದ ಯಾರಿಗಾದರೂ ಒಂದು ಕ್ಷಣ, ಇದಕ್ಕೆ ಸಾಂವಿಧಾನಿಕ ಪರಿಹಾರ ಸಾಧ್ಯವೇ ಇಲ್ಲ ಎಂಬ ಆಲೋಚನೆ ಮನದ ಮುಂದೆ ಸುಳಿಯದೇ ಹೋದಲ್ಲಿ; ಆ ವ್ಯಕ್ತಿ ಅಸೂಕ್ಷ್ಮನೋ ಅಪ್ರಾಮಾಣಿಕನೋ ಆಗಿರುತ್ತಾನೆ ಎಂದೇ ಹೇಳಬೇಕು. ಪರಿಸ್ಥಿತಿಯನ್ನು ಈ ಮಟ್ಟಕ್ಕೆ ತಂದಿರುವ ನಾವು ಅದರ ಹೊಣೆಯನ್ನೂ ಹೊರಬೇಕಾಗುತ್ತದೆ.

ಹಾಗಾಗಿ ಈಗ ಕಾಡಿನಲ್ಲಿರುವ ನಕ್ಸಲರೆಂದರೆ ಸಮಾಜ ವಿರೋಧಿಗಳೆಂದೋ, ಅಪರಾಧಿಗಳೆಂದೋ ಪರಿಗಣಿಸದೆ, ಅವರ ವಿರುದ್ಧದ ಸಶಸ್ತ್ರ ಕಾರ್ಯಾಚರಣೆಯ ಅಂತ್ಯವನ್ನು ಘೋಷಿಸಿ; ಅವರು ನಾಡಿಗೆ ಬಂದು ನೆಲೆಗೊಂಡು ಸಾಂವಿಧಾನಿಕ ಹೋರಾಟಗಳ ಮೂಲಕವೇ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವಂತಹ ವಿಶ್ವಾಸದ ಪರಿಸ್ಥಿತಿಯನ್ನು ನಿರ್ಮಿಸಲು ಸರ್ಕಾರ ಮುಂದಾಗಬೇಕು. ಇದಕ್ಕಾಗಿ ಎಚ್.ಎಸ್. ದೊರೆಸ್ವಾಮಿ, ಎಚ್.ಗಣಪತಿಯಪ್ಪ, ಯು.ಆರ್.ಅನಂತಮೂರ್ತಿ, ಎಚ್.ಜಿ. ಗೋವಿಂದೇಗೌಡ, ಕಡಿದಾಳು ಶಾಮಣ್ಣ, ದೇವನೂರು ಮಹಾದೇವರಂತಹ ವಿಶ್ವಾಸಾರ್ಹ ಗಣ್ಯರ ಮಧ್ಯಸ್ಥಿಕೆಗೆ ಯತ್ನಿಸಬೇಕು. ಮೊದಲಿಗೆ ನಮ್ಮ ಮುಖ್ಯ ಮಂತ್ರಿಗಳು ಕರ್ನಾಟಕದ ಎಲ್ಲ ಮಕ್ಕಳೂ ತಮ್ಮ ಮಕ್ಕಳೇ ಎಂದು ಭಾವಿಸಿ; ಅವರಲ್ಲಿ ಕೆಲವರು ಹಾದಿ ತಪ್ಪಿದ್ದರೆ, ಅದಕ್ಕೆ ಕಾರಣ ಹುಡುಕಿ ಅವರನ್ನು ಸರಿ ದಾರಿಗೆ ತರುವ ತಂದೆಯಂತೆ ವರ್ತಿಸಬೇಕು. ಇದಕ್ಕೆ ಸಿದ್ಧತೆಯೆಂಬಂತೆ ಚಿರಂಜೀವಿ ಸಿಂಗ್ ಸಮಿತಿಯ ಶಿಫಾರಸ್‌ಗಳನ್ನು ಆದ್ಯತೆಯ ಮೇಲೆ ಪ್ರಾಮಾಣಿಕವಾಗಿ ಜಾರಿಗೆ ತರಲು ಮುಂದಾಗಬೇಕು ಮತ್ತು ಚಿಕ್ಕಮಗಳೂರು ಸುತ್ತ ಮುತ್ತ ಮರಗಳ್ಳರ ಹಾಗೂ ಮರಳುಗಳ್ಳರ ಹಣಕಾಸಿನ ಮೇಲೆ ಕಟ್ಟಲ್ಪಟ್ಟಿರುವ ದುಷ್ಟ ಮತ್ತು ಭ್ರಷ್ಟ ರಾಜಕಾರಣಕ್ಕೆ ಅಂತ್ಯ ಹಾಡುವ ದಿಟ್ಟ ನಿರ್ಧಾರ ಕೈಗೊಳ್ಳಬೇಕು. ಹಾಗೇ ಅಸಮಾನತೆ, ಅಕ್ರಮ, ಅನ್ಯಾಯ, ಶೋಷಣೆಗಳ ವಿರುದ್ಧ ದನಿ ಎತ್ತುವವರೆಲ್ಲರನ್ನೂ 'ನಕ್ಸಲರು' ಎಂದು ಹೆಸರಿಸಿ ಕಿರುಕುಳ ಕೊಡುವ 'ಪೋಲೀಸ್ ಭಯೋತ್ಪಾದನೆ'ಯನ್ನು ನಿಲ್ಲಿಸಬೇಕು. ಇಲ್ಲದೇ ಹೋದಲ್ಲಿ ಈ ನಕ್ಸಲ್ ಚಳುವಳಿ, ಸರ್ಕಾರ ಎಷ್ಟೇ ವೀರಾವೇಶ ಪ್ರಕಟಿಸಿದರೂ, ನಿರಂತರವಾಗಿ ಬೆಳೆಯುವುದು ಖಂಡಿತ. ಏಕೆಂದರೆ, ಬೆಳೆಯಲು ಅದಕ್ಕೆ ಕಾರಣಗಳನ್ನು ನಾವೇ ಒದಗಿಸಿಕೊಟ್ಟಂತಾಗುತ್ತದೆ