ವಿಷಾದ

ವಿಷಾದ

ಅಕಾರಣ ಹುಟ್ಟಿ ಬಿಡುವ ಈ ವಿಷಾದ

ಈ ಇಹದ ಸುಖಸವಲತ್ತುಗಳನ್ನೆಲ್ಲ ನಿರಾಕರಿಸಿ

ಶಬ್ದಾರ್ಥಗಳ ಮಿತಿಯ ಮೀರುವುದು

 

ಎದೆಯೊಳಗೆ ನವನೀತ ಕಡೆಯುತ್ತಲೇ

ಉತ್ತುಂಗಕ್ಕೇರಿದ ಕನಸನ್ನೊಡೆಯುವುದು

ಯಾವುದೋ ಮುರಳಿಯ ಕರೆಗೆ ಕಿವಿಗೊಡುವುದು

 

ಪೊಡಮಡುವೆ, ಹೇ ವಿಷಾದವೇ

ಸುಡುವಗ್ನಿಗೆ ಉದಕವಾಗುವ ನಿನ್ನ ನೆರವಿಗೆ

ಒಳಗಿನಿಂದ ನರಳುತ್ತಲೇ ಅರಳುವ ಹೂವಿಗೆ

 

ಹೊರಗಣ್ಣುಗಳ ದಿಟ್ಟಿಗೆ ನೀನು ಬೀಳದ ರೀತಿ

ನಿನ್ನಿರವ ಈ ಅರಿವೆಯೊಳಗೇ ನಿಲಿಸು

ಭಿನ್ನವೆನ್ನುವ ತೆರೆತೆರಗಳನಳಿಸು

 

ನಮ್ಮ ನಾವೆ ಅನ್ಯರಿಗೆ ತೆತ್ತುಕೊಳ್ಳದ ಹಾಗೆ

ಬಾಳಗಡಲಿನ ದಿಕ್ಸೂಚಿ ಕವಿತೆಯನುಳಿಸು

**********  

Rating
No votes yet