ನಿಮ್ಮ ಚಿತ್ರದಲ್ಲಿ "Rules of Thirds"ನ ಪ್ರಯೋಗ

ನಿಮ್ಮ ಚಿತ್ರದಲ್ಲಿ "Rules of Thirds"ನ ಪ್ರಯೋಗ

ಬರಹ

ಚಿಕ್ಕಂದಿನಲ್ಲಿ ಸಾಮಾನ್ಯವಾಗಿ ಚಿತ್ರ ಬಿಡಿಸದವರ ಸಂಖ್ಯೆ ತೀರಾ ಕಡಿಮೆ. ಬಾಲಮಂಗಳದಲ್ಲಿ ಬರುತ್ತಿದ್ದ ಪಾತ್ರಗಳು ನನ್ನ ನೆಚ್ಚಿನ ವಿಷಯವಾಗಿದ್ದರೂ, ನನ್ನ ಕಲ್ಪನೆಯ ಪ್ರೇರಿತ ಚಿತ್ರ ಸಾಮಾನ್ಯವಾಗಿ ಮನೆಯದ್ದಾಗಿತ್ತು. ಖಾಲಿ ಹಾಳೆಯ ಮಧ್ಯದಲ್ಲಿ ಚೌಕಾಕಾರದ ಒಂದು ಆಕೃತಿ, ಮಧ್ಯದಲ್ಲಿ ತೆರೆದ ಬಾಗಿಲು, ಅದರ ಅಕ್ಕ ಪಕ್ಕದಲ್ಲಿ ಕಿಟಕಿ, ಅದರ ಸರಳು, ಹೆಂಚಿನದ್ದೊಂದು ಸೂರು, ಎರಡು ಮೆಟ್ಟಿಲು ನನ್ನ ಮನೆ ಇಲ್ಲಿಗೆ ಸಂಪೂರ್ಣ. ಆದರೆ ಇದೇ ಚಿತ್ರವನ್ನು ಎಷ್ಟು ಬಾರಿ ಬಿಡಿಸುವುದು, ಮನೆಯ ಪಕ್ಕದಲ್ಲಿ ನದಿಯೊಂದು ಇದ್ದರೆ ಎಷ್ಟು ಚೆನ್ನ. ಆದರೆ ಮಧ್ಯದಲ್ಲಿ ಮನೆ ಬಿಡಿಸಿದರೆ ನದಿಗೆ ಜಾಗ ಎಲ್ಲಿ? ಮನೆಯನ್ನು ಕೊಂಚ ಬಲಕ್ಕೆ ಸರಿಸಿದರೆ ಪಕ್ಕದಲ್ಲೊಂದು ನದಿ ಬಿಡಿಸಬಹುದು. ಬರೀ ನದಿ ಇದ್ದರೆ ಸಾಕೇ,ಹಿನ್ನೆಲೆಯಲ್ಲಿ ಗುಡ್ಡ ಬೆಟ್ಟ ಇದ್ದರೆ? ಮತ್ತೆ ಜಾಗದ ಅಭಾವ, ಮನೆಯನ್ನು ಸ್ವಲ್ಪ ಕೆಳಕ್ಕೆ ತಂದು, ಹಿನ್ನೆಲೆಯಲ್ಲಿ ಗುಡ್ಡ ಬರೆದು, ಪಕ್ಕದಲ್ಲಿ ಅಂಕುಡೊಂಕಾಗಿ ಹರಿಯುವ ನದಿಯ ಚಿತ್ರ ಬರೆದರೆ? ಇವನ್ನೆಲ್ಲಾ ಸೇರಿಸಿ ಚಿತ್ರ ಬರೆದಾಗ ಮಧ್ಯದಲ್ಲಿ ಒಂಟಿಯಾಗಿ ಕೂತ ಹಳೇಯ ಚಿತ್ರಕ್ಕಿಂತ, ಇದು ಚೆನ್ನಾಗಿ ಕಾಣಿಸಿತು.

ಕಾರಣ, ನನಗೆ ತಿಳಿಯದಂತೆಯೇ ನಾನಿಲ್ಲಿ ಚಿತ್ರ ಸಂಯೋಜನೆಯ ಒಂದು ನಿಯಮವನ್ನು ಪಾಲಿಸಿದ್ದಕ್ಕೆ ಮತ್ತು ಮೂಲ ವಿಷಯಕ್ಕೆ ಪೂರಕವಾದ ಇನ್ನಿತರ ವಿಷಯವನ್ನು ಬಳಸಿದ್ದರಿಂದ. ಈ ನಿಯಮದಂತೆ ಚಿತ್ರವನ್ನು ೨ ಅಡ್ಡ ಗೆರೆ, ೨ ಉದ್ದ ಗೆರೆ ಎಳೆದು ಸರಿಯಾದ ೯ ಭಾಗ ಮಾಡಿದರೆ, ಸಿಗುವ ಗೆರೆಗಳೊಂದಿಗೆ ಅಥವಾ ಅದು ಕೂಡುವ ಸ್ಥಳದಲ್ಲಿ ನಮ್ಮ ವಿಷಯವನ್ನು ಇರಿಸಬೇಕು. ಚಿತ್ರ ಪರಿಣತರ ಸಂಶೋಧನೆಯಿಂದ ಕಂಡು ಬಂದ ವಿಷಯವೇನೆಂದರೆ ಚಿತ್ರವನ್ನು ನೋಡುವವರ ದೃಷ್ಟಿ ಸ್ವಾಭಾವಿಕವಾಗಿ ಈ ೪ ಬಿಂದುವಿನ ಮೇಲೆ ಬೀಳುವುದು. ಆದ್ದರಿಂದ ನಮ್ಮ ಮೂಲ ವಿಷಯವನ್ನು ಫ್ರೇಮಿನ ಮಧ್ಯದಲ್ಲಿಡದೆ ಈ ನಾಲ್ಕು ಬಿಂದುವಿನಲ್ಲಿ ಒಂದು ಕಡೆ ಇರಿಸಬೇಕು, ಆಗ ವೀಕ್ಷಕರ ಮೇಲೆ ನಮ್ಮ ಚಿತ್ರ ಹೆಚ್ಚಿನ ಪರಿಣಾಮ ಬೀರುತ್ತದೆ.

ಈಗ ಹಿಂದೆ ಬರೆದ ಚಿತ್ರವನ್ನು ಇದೇ ನಿಯಮದಂತೆ ೯ ಪಾಲು ಮಾಡಿದರೆ, ಮನೆಯು ಕೆಳ ಅಡ್ಡ ರೇಖೆ ಮತ್ತು ಬಲ ಉದ್ದ ರೇಖೆ ಸಂಧಿಸುವಲ್ಲಿದ್ದು, ನದಿ ಮೇಲಿನ ಅಡ್ಡ ರೇಖೆ ಮತ್ತು ಬಲ ಉದ್ದ ರೇಖೆ ಕೂಡುವಲ್ಲಿ ಆರಂಭವಾಗಿ ಕೆಳಗಿನ ಅಡ್ಡ ರೇಖೆ ಮತ್ತು ಎಡ ಉದ್ದ ರೇಖೆ ಕೂಡುವಲ್ಲಿ ಹಾದು ಹೋಗುತ್ತದೆ. ಗುಡ್ಡದ ಶ್ರೇಣಿ ಮೇಲಿನ ಅಡ್ಡ ರೇಖೆಯೊಂದಿಗೆ ಸಾಗುತ್ತದೆ. ಈ ಕೆಳಗಿನ ಚಿತ್ರದಂತೆ

ನಾನು ಹೆಚ್ಚಾಗಿ ಒಂಟಿಯಾಗಿ ಪ್ರಯಾಣ ಮಾಡುವುದು ಜಾಸ್ತಿ. ಪಯಣಿಸುವಾಗಲೆಲ್ಲಾ ಈ ಬಾರಿಯಾದರೂ ಒಂದು ಚೆಲುವೆ ಬಳಿ ಕೂರಬಾರದೇ ಎಂದು ಕೊಂಡೇ ಹೋಗುತ್ತೇನೆ. ಕಳೆದ ತಿಂಗಳ ಪ್ರಯಾಣದಲ್ಲಿ ನನ್ನ ಅಭಿಲಾಷೆ ನಿಜವಾಯಿತು. ಆಕೆ, ಅದರಲ್ಲೂ ಆಕೆಯ ಕಂಗಳು ಎಷ್ಟು ಸುಂದರವಾಗಿತ್ತೆಂದರೆ ಚೀಲದಲ್ಲಿ ಹುದುಗಿದ್ದ ನನ್ನ ಕ್ಯಾಮರಾ ಹೊರಗೆ ತೆಗೆದು ಆಕೆಯ ಚಿತ್ರವನ್ನು ಇದೇ ನಿಯಮವನ್ನು ಗಮನದಲ್ಲಿರಿಸಿಕೊಂಡು ತೆಗೆದಾಗ ಮೂಡಿದ್ದು ಈ ಚಿತ್ರ.ಇಲ್ಲಿ ಆಕೆಯ ಎಡ ಕಣ್ಣು ಫ್ರೇಮಿನ ಬಲ ಮೇಲ್ತುದಿಯ ಬಿಂದುವಿನಲ್ಲಿ, ಬಲಗಣ್ಣು ಎಡ ಉದ್ದ ರೇಖೆಯಲ್ಲಿ ಹಾಗೂ ಬಾಯಿ ಬಲಗಡೆಯ ಕೆಳ ಬಿಂದುವಿನಲ್ಲಿದೆ.

ಪ್ರಾಣಿಯೋ, ಹಕ್ಕಿಯೋ, ಕೀಟವೋ, ನದಿಯೋ,ಗುಡ್ಡ ಬೆಟ್ಟವೋ, ಸಾಮಾನ್ಯವಾಗಿ ಪ್ರತಿಯೊಂದು ವಸ್ತುವಿಗೂ ತನ್ನದೇ ಆದ ಮುಖ ಎಂಬುದೊಂದಿರುತ್ತದೆ. ಸಾಮಾನ್ಯವಾಗಿ ಅದರ ಮುಖವನ್ನು ಅವಲಂಭಿಸಿ ಈ ನಾಲ್ಕು ಬಿಂದುವಿನಲ್ಲಿ ಅದಕ್ಕೆ ಸೂಕ್ತವಾದ ಸ್ಥಳದಲ್ಲಿ ವಿಷಯವನ್ನು ಇರಿಸಬಹುದು. ಮುಖ ಯಾವ ದಿಕ್ಕಿನಲ್ಲಿ ಇರುತ್ತದೆಯೋ ಆ ದಿಕ್ಕಿನಲ್ಲಿ ಹೆಚ್ಚಿನ ಸ್ಥಳಾವಕಾಶ ಕಲ್ಪಿಸಬೇಕು. ಈ ಕೆಳಗಿನ ಚಿತ್ರದಲ್ಲಿ ಕೀಟದ ಮುಖ ಎಡಗಡೆಗೆ ನೋಡುತ್ತಿದ್ದು, ಕೊಂಚ ಕೆಳಗೆ ಬಾಗಿದ್ದರಿಂದ ಇದನ್ನು ಚಿತ್ರದಲ್ಲಿ ಬಲಗಡೆಯ ಮೇಲ್ತುದಿಯಲ್ಲಿ ಇರಿಸಿದ್ದೇನೆ. ಅಂತೆಯೇ ಹಾರಲು ಹೊರಟ ಹಕ್ಕಿಯ ಮುಖ ಮೇಲಕ್ಕಿರುವುದರಿಂದ ಅದರ ಮುಖದ ದಿಕ್ಕನ್ನು ಅನುಸರಿಸಿ ಅದನ್ನು ಕೆಳಗಡೆಯ ಎಡ ಅಥವಾ ಬಲ ಬಿಂದುವಿನಲ್ಲಿ ಇರಿಸಬಹುದು.

ಅಂತೆಯೇ ಲ್ಯಾಂಡ್ ಸ್ಕೇಪುಗಳಲ್ಲಿ ಆಕಾಶ ಮತ್ತು ಭೂಮಿಯ ಎಲ್ಲೆಯನ್ನು ನಿರ್ಧರಿಸಬಹುದು. ನಿಮ್ಮ ವಿಷಯ ಸುಂದರವಾದ ಮರುಭೂಮಿಯೋ, ಕಾಡೋ, ನದಿಯೋ, ಸಮುದ್ರವೋ ಆಗಿದ್ದಲ್ಲಿ ಅದನ್ನು ಫ್ರೇಮಿನ ೨/೩ ರಷ್ಟರಲ್ಲಿ ಚಿತ್ರಿಸಿ ಉಳಿದ ೧/೩ ರಷ್ಟನ್ನು ಆಕಾಶಕ್ಕೆ ಮೀಸಲಾಗಿಡಬಹುದು. ಈ ಚಿತ್ರದಲ್ಲಿ ಮರದ ರೆಂಬೆ ಮತ್ತೆ ನಡುವಿನಿಂದ ತೂರಿ
ಬರುತ್ತಿರುವ ಸೂರ್ಯ ನನ್ನ ವಿಷಯವಾದ್ದರಿಂದ ಅದಕ್ಕೆ ಪ್ರಾಮುಖ್ಯತೆ ಕೊಟ್ಟು ಸಮುದ್ರವನ್ನು ಬರೀ ೧/೩ರಷ್ಟು ಇರುವಂತೆ ಸಂಯೋಜಿಸಿದ್ದೇನೆ.ಇಲ್ಲಿಯೂ ಕೂಡ ಸೂರ್ಯನನ್ನು ನಿಯಮಕ್ಕೆ ಅನುಗುಣವಾಗಿ ಕೂರಿಸಿರುವುದನ್ನು ಗಮನಿಸಬಹುದು.

ಸಾಮಾನ್ಯವಾಗಿ ಮೇಲೆ ಹೇಳಿದಂತೆ ಸಂಯೋಜಿಸಿದರೆ ನಿಮ್ಮ ಚಿತ್ರ ಚೆನ್ನಾಗಿ ಕಾಣಿಸುವುದಾದರೂ ಇದನ್ನು ಪಾಲಿಸಿದರೆ ಮಾತ್ರ ನಿಮ್ಮ ಚಿತ್ರ ಚೆನ್ನಾಗಿದೆ ಇಲ್ಲವಾದಲ್ಲಿ ಇಲ್ಲ
ಎಂದೇನೂ ಇಲ್ಲ. ವಿಷಯಕ್ಕೆ ತಕ್ಕಂತೆ ಈ ನಿಯಮವನ್ನು ಮುರಿದು ನಿಮ್ಮ ಪ್ರತಿಭೆಯನ್ನು ತೋರಬಹುದು.

ಸೂಚನೆ: ಆಟೋಫೋಕಸ್ ಉಪಯೋಗಿಸುವವರಾದಲ್ಲಿ, ಕ್ಯಾಮರಾ ಸಾಮಾನ್ಯವಾಗಿ ಮಧ್ಯದ ಸ್ಥಳವನ್ನು ಫೋಕಸ್ ಮಾಡುವುದರಿಂದ ಈ ನಾಲ್ಕು ಬಿಂದುವಿನಲ್ಲೊಂದರಲ್ಲಿ
ಕೂರಿಸ ಹೊರಟ ನಿಮ್ಮ ವಿಷಯ ಅಸ್ಪಷ್ಟವಾಗಿ ಮೂಡಬಹುದು. ಇಂತಹ ಸಂದರ್ಭದಲ್ಲಿ ನಿಮ್ಮ ವಿಷಯವನ್ನು ಮಧ್ಯದಲ್ಲಿರಿಸಿ ಕ್ಯಾಮರಾದ ಬಟನ್ನನ್ನು ಅರ್ಧ ಅಮುಕಿ,ಹಾಗೆಯೇ ಹಿಡಿದು ಕೊಂಡು ಮರು ಸಂಯೋಜಿಸಿ ಚಿತ್ರ ತೆಗೆಯಬಹುದು.