ಬನದ ಬದುಕು - ಛಾಯಚಿತ್ರ ಪ್ರದರ್ಶನ

ಬನದ ಬದುಕು - ಛಾಯಚಿತ್ರ ಪ್ರದರ್ಶನ

ಹೀಗೆ ವೇಗವಾಗಿ ಸಾಗುತಿರುವ ಬದುಕಿನಲ್ಲಿ ನಾವು ನಮ್ಮ ಸುತ್ತಲಿನ ಪ್ರಕೃತಿಯನ್ನು ಮರೆತಿದ್ದೇವೆಯೆ?, ಎನ್ನುವ ಪ್ರಶ್ನೆ ಒಮ್ಮೆಯಾದರೂ ಎಲ್ಲರಲ್ಲೂ ಮೂಡಿಯೇ ಇರುತ್ತೆ. ಆ ದೇವರು ಕೊಟ್ಟ, ತಂದೆ ತಾಯಿಗಿಂತಲೂ ಹೆಚ್ಚು ಆರೈಕೆ ಮಾಡಿ ನಮಗೆ ಉಸಿರಿತ್ತ ವನವನ್ನು ಕಡಿದು ನಾವು ನಮ್ಮದೇ ನಿರ್ಜೀವ ಕಾಂಕ್ರೀಟ್ ಕಾಡನ್ನು ಕಟ್ಟಿಕೊಳ್ಳುತಿದ್ದೇವೆ. ಕಾಡುಗಳಲ್ಲಿ ತಮ್ಮ ನೆಲೆ ಕಳೆದುಕೊಂಡು ಅಲ್ಲಿನ ಜೀವಿಗಳು ಸೂರಿಗಾಗಿ ಅಲೆಯುವಂತಾಗಿದೆ. ನಾವು ಚಂದ್ರಲೋಕಕ್ಕೆ ಹೋಗಿ ಬಂದಿದ್ದರು ನಮ್ಮ ಪಕ್ಕದಲ್ಲೆ ಇರುವ ಗಿಡ ಮರಗಳ, ವನ್ಯಜೀವಿಗಳ ಮಹತ್ವವನ್ನೇ ಅರಿಯದೆ, ಬದುಕಿನ ಕೂಡಿಬಾಳುವ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳದೆ ಅಜ್ಞಾನಿಗಳಾಗಿ ಹೋಗಿದ್ದೇವೆ. ನಮ್ಮದೇ ನೀರಿಗೆ ಹಾಲಿಗಿಂತಲೂ ಹೆಚ್ಚು ಹಣ ತೆತ್ತು ಕುಡಿಯುವ ಪರಿಸ್ಥಿತಿಯನ್ನು ತಂದುಕೊಂಡಿದ್ದೇವೆ. ದೊಡ್ಡ ಹೆಸರು ಮಾಡಿರುವ ಎಷ್ಟೋ ಮಂದಿ ಕೇವಲ ತಮ್ಮ ಶೂಕಿಗಾಗಿ ವನ್ಯ ಜೀವಿಗಳ ಜೀವ ತಗೆಯುತ್ತಿದ್ದರೆ. ನಮ್ಮದೇ ಮೈಸೂರಿನ ಮೃಗಾಲಯದಲ್ಲಿ ಎಷ್ಟೋ ಗಜರಾಜರು ಸರಿಯಾದ ಆರೈಯ್ಕೆ ಕಾಣದೆ ಬಲಿಯಾದರು. ಈಗಂತೂ ಪತ್ರಿಕೆಗಳನ್ನು ನೋಡಿದರೆ ಗಜರಾಜರ ಮಾರಣಹೋಮವೆ ನಡೆಯುತ್ತಿದೆ ಎಂದು ಭಾಸವಾಗುತ್ತದೆ. ಇಂತಹ ಪರಿಸ್ಥಿತಿಯನ್ನು ಒಮ್ಮೆ ಅವಲೋಕಿಸಿ ನೋಡಿದರೆ ನಿಜವಾದ ಮೃಗಗಳಾಗಿ ವರ್ತಿಸಿತ್ತಿರುವವರು ಯಾರು ಎಂದು ಅನುಮಾನ ಉಂಟಾಗುವುದು ಸಹಜವೆ!.

ಇದು ಹೀಗೆಯೇ ಮುಂದುವರೆದರೆ ನಮ್ಮ ಅಮೂಲ್ಯ ಅರಣ್ಯ ಸಂಪತ್ತನ್ನು ನಾವು ಕಳೆದುಕೊಳ್ಳುವ ಕಾಲ ದೂರವೇನಿಲ್ಲ. ಈಗಿನ ಪೀಳಿಗೆಯವರಿಗೆ 'ಬನದ ಬದುಕಿನ' ಮಹತ್ವ ಸಾರುವ ಅಗತ್ಯ ತುಂಬಾನೆ ಇದೆ. ಇಂಥಹ ಒಂದು ಪ್ರಯತ್ನ, ಬೆಂಗಳೂರಿನ ಚಿತ್ರಕಲಾ ಪರಿಷತ್ ಕಲಾ ಗ್ಯಾಲರಿಯಲ್ಲಿ ವನ್ಯಜೀವಿ ಛಾಯಚಿತ್ರ ಪ್ರದರ್ಶನದ ಮೂಲಕ ಮಾಡುತ್ತಿದ್ದಾರೆ.

ಈ ಪ್ರದರ್ಶನದಲ್ಲಿ 'ಲೋಕೇಶ್ ಮೊಸಳೆ' ಹಾಗು 'ಗೌರೀಶ್ ಕಪನಿ' ಅವರ, ವನ್ಯ ಬದುಕಿನ ಮಹತ್ವ ಸಾರುವ ಛಾಯಚಿತ್ರಗಳು ಪ್ರದರ್ಶಿತವಾಗುತ್ತಿವೆ. ಡಿಸೆಂಬರ್ ೧೨-೧೭ರವರೆಗು ಪ್ರದರ್ಶನ ನಡೆಯಲಿದೆ. ಆಸಕ್ತರು ಲೋಕೇಶ್ ರವರನ್ನು ಈ ಕೆಳಗಿನ ವಿಳಾಸದಲ್ಲಿ ಸಂಪರ್ಕಿಸಬಹುದು.
www.lokeshmosale.com
ph: 09448434448
E-mail: lokeshmosale@gmail.com

Rating
No votes yet

Comments