ಗಮಾರ- ಜಿ. ಪಿ. ರಾಜರತ್ನಂ ಅವರ ಕಥೆ .

ಗಮಾರ- ಜಿ. ಪಿ. ರಾಜರತ್ನಂ ಅವರ ಕಥೆ .

ಬರಹ

ನಮ್ಮ ಹಳ್ಳಿಯ ಬೋರನನ್ನು ನಾವು ಪಟ್ಟಣದವರು 'ಗಮಾರ' ಎನ್ನುತ್ತಿದ್ದೆವು .

ಒಂದು ಸಲ ಬೋರನನ್ನು ಕಟ್ಟಿಕೊಂಡು ತೆಂಗಿನ ತೋಪಿಗೆ ಹೋಗಬೇಕಾಯಿತು. ತೆಂಗಿನ ಕಾಯಿಗಳನ್ನು ಕೀಳಿಸಬೇಕಾಗಿತ್ತು . ಬೋರನ ಮಗ ಅದನ್ನು ಹತ್ತಿದ . ಅವನನ್ನೂ ಅವನು ಏರಬೇಕಾದ ಮರವನ್ನೂ ನೋಡಿ 'ಬೋರ ! ಜೋಪಾನವಾಗಿ ಹತ್ತುವ ಹಾಗೆ ಹೇಳು ಅವನಿಗೆ " ಎಂದೆ .

"ಅದೇನೂ ಯೋಳಬೇಕಾಗಿಲ್ಲ , ಸೋಮಿ !" ಎಂದ .
ನನಗೆ ಮುಖ ಮುರಿದ ಹಾಗಾಯಿತು . ಎಷ್ಟಾದರೂ 'ಗಮಾರ' ಎಂದುಕೊಂಡು ಸುಮ್ಮನಾದೆ .

------------------

ಮೊನ್ನೆ ಮನೆಯ ಹೆಂಚು ಸರಿಪಡಿಸಬೇಕಾಗಿತ್ತು . ಆ ಕೆಲಸಕ್ಕೂ ಬೋರ, ಬೋರನ ಮಗ ಬಂದರು .

ಹುಡುಗ ಸೂರು ಹತ್ತುವಾಗ ಬೋರ "ಎಲ್ಲಾರಾ ಬಿದ್ದುಗಿದ್ದೀಯ ಮೊಗ ! ವಸಿ ನೋಡಿಕೊಂಡು ಹತ್ತು " ಅಂದ .

ನನಗೆ ತೆಂಗಿನ ತೋಟದಲ್ಲಿ ಅವನು ಮುಖ ಮುರಿದದ್ದು ನೆನಪಾಯಿತು.
" ಬೋರ !, ಅಷ್ಟಲ್ಲದೆ ನಿನ್ನನ್ನ ಗಮಾರ ಎನ್ನುತ್ತಾರೆಯೆ ! ತೆಂಗಿನ ಗಿಡ ಹತ್ತುವಾಗ ಹುಷಾರು ಹೇಳದೆ ಹೆಂಚಿನ ಸೂರು ಹತ್ತುವಾಗ ಹೇಳುತ್ತೀಯಲ್ಲ ! ನಿನ್ನ ಬುದ್ಧಿಯೋ ! ನೀನೋ ! " ಎಂದೆ.

'ನೀವೇನಾರ ಯೋಳಿ ಸೋಮಿ , ನಾನನಕ ಗಮಾರ , ಆದರೆ ನನಗೆ ಇಷ್ಟು ಗೊತ್ತು . ತೆಂಗಿನ ಮರ ಎತ್ತರ ಐತೆ ಅಂತ ಅತ್ತೋವನು ವುಸಾರಾಗೇ ಅತ್ತಾನೆ . ಸೂರು ಬಲೆ ಕೆಳಗದೇಂತ ಬೇವುಸಾರಾಗಿ ಅತ್ತಾನೆ . ಬೇವುಸಾರಾಗಿ ಇರೋವಾಗ ತಾನೇ ಬುದ್ಧಿ, ಬುದ್ವಾದ ಯೋಳಬೇಕಾದ್ದು ? " ಎಂದ .
ನನ್ನ ತುಟಿ ಮುಚ್ಚಿತು . ಕಣ್ಣು ತೆರೆಯಿತು.

ಗಮಾರ- ಜಿ. ಪಿ. ರಾಜರತ್ನಂ ಅವರ ಕತೆ .