ಆತ್ಮಾವಲೋಕನ

ಆತ್ಮಾವಲೋಕನ

ಬರಹ

ಉಪನ್ಯಾಸ ಮಾಡುವುದು, ಚಿಂತನೆಗಳನ್ನು ಬರೆಯುವುದು ಸುಲಭ. ಮನಸ್ಸಿನಲ್ಲಿ ಮೂಡುವ ಒಳ್ಳೆಯ ಭಾವನೆಗಳಿಗೆ ಅಕ್ಷರ ಕೊಡುವ ಕೆಲಸವನ್ನು ಮಾಡಿದರೆ ಲೇಖನಗಳು ಮೂಡಿಬಂದುಬಿಡುತ್ತವೆ. ಆದರೆ ಅದರಲ್ಲಿ ತಿಳಿಸುವ ನೀತಿಯಾಗಲೀ ಒಳ್ಳೆಯವಿಚಾರವಾಗಲೀ ನಮ್ಮ ಮನೆಯಲ್ಲಿದೆಯೇ? ಎಂದು ಆತ್ಮಾವಲೋಕನ ,ಮಾಡಿಕೊಂಡಾಗ ಹೇಗಿರುತ್ತೆ? ನನ್ನ ಮಿತ್ರನೊಬ್ಬ ಸಾಮಾಜಿಕ ಕಾರ್ಯಕರ್ತ. ಸಮಾಜದ ಕೆಲಸಕ್ಕಾಗಿ ಊರೂರು ಅಲೆಯುತ್ತಾನೆ. ಆದರೆ ಅವರ ಮನೆಯಲ್ಲಿಯೇ ನೆಮ್ಮದಿಯಿಲ್ಲ. ಅತೀ ಸಿಟ್ಟಿನ ಸ್ವಭಾವ. ತಾನು ತನ್ನನ್ನು ತಿದ್ದಿಕೊಳ್ಳದೇ ಇತರರಿಗೆ ಉಪದೇಶ ಮಾಡಿದರೆ ಎಷ್ಟು ಪೊಳ್ಳಾಗಿ ಕಣುತ್ತೆ, ಅಲ್ಲವೇ! ಅನೇಕ ವೇಳೆ ನಮಗೆ ಸರಿ ಕಂಡಿದ್ದನ್ನೆಲ್ಲಾ ತುಂಬಾ ಚಿಂತನ-ಮಂಥನ ನಡೆಸದೆ ಬರೆಯುವ ಸ್ವಭಾವ ನಮ್ಮಂತ ಅನೇಕರಿಗೆ. ಅದಕ್ಕಾಗಿಯೇ ನನ್ನ ಮಿತ್ರನೊಬ್ಬ ಹೇಳುತ್ತಾನೆ. "ನಿಮಗೆಲ್ಲಾ ಬರೆಯುವ ತಿಕ್ಕಲು"- ಹೌದಲ್ಲವೇ ನಾವು ಬರೆಯುವುದನ್ನು ನಿಲ್ಲಿಸಿ ಬಿಟ್ಟರೆ ಪ್ರಪಂಚವೇನೂ ಮುಳುಗುವುದಿಲ್ಲ, ಅಲ್ಲವೇ! ಅಲ್ಲದೆ ನಮಗೆ ಸರಿಕಂಡದ್ದು ಎಲ್ಲರಿಗೂ ಸರಿಕಾಣಬೇಕೆಂದೇನೂ ನಿಯಮವಿಲ್ಲ. ಹಾಗೆ ನೋಡಿದರೆ ಏನು ನಡೆಯುತ್ತಿದೆಯೋ ಅದು ಸರಿಯೂ ಅಲ್ಲ, ತಪ್ಪೂ ಅಲ್ಲ. ನನ್ನ ಇನ್ನೊಬ್ಬ ಮಿತ್ರ ಹೇಳುತ್ತಿರುತ್ತಾನೆ" ಚಿಂತನೆ ಬರೆಯುವವರೆಲ್ಲಾ, ಭಾಷಣ ಮಾಡುವವರೆಲ್ಲಾ ಅದರಂತೆ ಬದುಕಿ ಬಿಟ್ಟರೆ , ನಿಜವಾಗಿ ಸಮಾಜದಲ್ಲಿ ಅಷ್ಟರ ಮಟ್ಟಿಗೆ ಅನೀತಿ ಕಡಿಮೆಯಾಗುತ್ತೆ! ಅಬ್ಭಾ! ಎಂತಹಾ ಮಾತು, ಅಲ್ವಾ? ಒಮ್ಮೆ ಎದೆಮುಟ್ಟಿ ನೋಡಿಕೊಳ್ಳಲೇ ಬೇಕಾಗುತ್ತದೆ. ಒಮ್ಮೆ ಒಬ್ಬ ಪ್ರವಚನ ಕಾರರ ಪ್ರವಚನವನ್ನು ಏರ್ಪಡಿಸಿದ್ದೆ. ಆಗ್ಗಾಗ್ಗೆ ಅಂತಾ ಕೆಲಸ ಮಾಡ್ತಾ ಇರ್ತೀನಿ. ನನ್ನ ಮಿತ್ರ ವೈದ್ಯರನ್ನು ಪ್ರವಚನ ಕೇಳಲು ಕರೆದೆ. ಅವರು ನನ್ನನ್ನು ಕೇಳಿದರು "ಯಾವ ವಿಷಯದ ಬಗ್ಗೆ ಪ್ರವಚನ ಮಾಡುತ್ತಾರೆ?" ನಾನು ಹೇಳಿದೆ" ಆನಂದದ ಹಾದಿಯಲ್ಲಿ’ ವೈದ್ಯರು-" ಯಾರು ಪ್ರವಚನ ಕೇಳಲು ಬರಬೇಕು?" ನಾನು-"ಎಲ್ಲರೂ ಬರಬೇಕು" ವೈದ್ಯರು- " ನೋಡಿ ಪ್ರವಚನ ಮಾಡುವವರು ಮತ್ತು ನೀವು ಆನಂದದಿಂದ ವಂಚಿತರಾಗಿದ್ದೀರಿ, ಅದಕ್ಕಾಗಿ ಅವರು ಹೇಳಿ ತೀಟೆ ತೀರಿಸಿಕೊಳ್ಳುತ್ತಾರೆ, ನೀವು ಪ್ರವಚನ ಕೇಳುವಷ್ಟು ಹೊತ್ತಾದರೂ ಆನಂದವಾಗಿರಬಹುದೆಂದುಕೊಂಡಿದ್ದೀರಿ" ವೈದ್ಯರು ಪ್ರವಚನಕ್ಕೆ ಬರದಿದ್ದರೂ ಚಿಂತೆಯಿಲ್ಲ, ಅವರು ನನ್ನ ಮನಸ್ಸಿನಲ್ಲಿ ಚಿಂತನೆ ಯೊಂದಕ್ಕೆ ದಾರಿ ಮಾಡಿಕೊಟ್ಟಿದ್ದರು. ಹೌದು,ನಾವು ಚಿಂತನ-ಮಂಥನ ಬರವಣಿಗೆಯಲ್ಲಿ ನಡೆಸಿದರೆ ಸಾಲದು, ನಮ್ಮ ಮನೆಗಳಲ್ಲಿ ಮೊದಲು ನಮ್ಮ ಒಳ್ಳೆಯ ಚಿಂತನೆಗಳು ಅನುಷ್ಠಾನಕ್ಕೆ ಬರಬೇಕು. ಆಗ ನಮ್ಮ ಬರವಣಿಗೆ, ಉಪನ್ಯಾಸಗಳಿಗಿಂತ ನಮ್ಮ ಬದುಕು ಪರಿಣಾಮ ಬೀರಬಲ್ಲದು.