ಇಂದು ಓದಿದ ವಚನ: ಸಿದ್ಧರಾಮ: ಅರ್ಥ ಎಲ್ಲಿದೆ?

ಇಂದು ಓದಿದ ವಚನ: ಸಿದ್ಧರಾಮ: ಅರ್ಥ ಎಲ್ಲಿದೆ?

 

ರೇಖೆ ರೇಖೆ ಕೂಡಿದಲ್ಲಿ ಅಕ್ಷರವಾದವು
ಅಕ್ಷರಾಕ್ಷರ ಕೂಡಿದಲ್ಲಿ ಶಬ್ದವಾಯಿತ್ತು
ಶಬ್ದ ಶಬ್ದ ಕೂಡಿದಲ್ಲಿ ಗ್ರಂಥಾನ್ವಯವಾಯಿತ್ತು
ಅಕ್ಷರದಲ್ಲಿಲ್ಲ
ಶಬ್ದದಲ್ಲಿಲ್ಲ
ಗ್ರಂಥಾನ್ವಯದಲ್ಲಿಲ್ಲ
ಏನೆಂಬುದಿಲ್ಲ
ಮೊದಲೆ ಇಲ್ಲ
ಇಲ್ಲವೆಂಬುವ ಅಹುದೆಂಬುವ ಉಭಯ ಶಬ್ದಕ್ಕೆಲೋಪವಿಲ್ಲ ನೋಡಾ
ಕಪಿಲಸಿದ್ಧ ಮಲ್ಲಿಕಾರ್ಜುನ ಮಹಾಮಹಿಮನು

 

ಸಿದ್ಧರಾಮನ ಈ ವಚನ ಅರ್ಥದ ಮೀಮಾಂಸೆಯ ಆರಂಭಬಿಂದುವಿನಂತಿದೆ.

ಗೆರೆಗಳು ಒಂದುಗೂಡಿ ಅಕ್ಷರಗಳಾದವು. ಅಕ್ಷರಗಳು ಒಂದುಗೂಡಿ  ಪದಗಳಾದವು. ಪದಗಳು ಒಟ್ಟುಗೂಡಿ ಗ್ರಂಥವಾಯಿತು. ಅರ್ಥ ಅನ್ನುವುದು ಗೆರೆಗಳಲ್ಲಿ, ಅಕ್ಷರಗಳಲ್ಲಿ, ಪದಗಳಲ್ಲಿ, ಗ್ರಂಥದಲ್ಲಿ, ಒಟ್ಟು ಗ್ರಂಥದಅರ್ಥದಲ್ಲಿ ಇಲ್ಲವೇ ಇಲ್ಲ. ಆದರೂ ಇಲ್ಲ-ಹೌದು  ಅನ್ನುವ ದ್ವಂದ್ವಕ್ಕೆ  ಕೊನೆಯೇ ಇಲ್ಲ. ಕಪಿಲಸಿದ್ಧಮಲ್ಲಿಕಾರ್ಜುನ ನಮ್ಮ ಕಲ್ಪಿತ ಅರ್ಥಗಳನ್ನೆಲ್ಲ ಮೀರಿದ ಮಹಾ ಮಹಿಮ.

`ಈ ಮಾತಿಗೆ ಅರ್ಥವೇನು?' ಎಂಬ ಪ್ರಶ್ನೆಗೆ ಇನ್ನೊಂದೋ ಎರಡೋ ಬೇರೆ ಮಾತುಗಳನ್ನಲ್ಲದೆ ಇನ್ನೇನು  ಹೇಳಲು ಸಾಧ್ಯ! ಆದರೆ ಒಂದು ಮಾತಿನ ಅರ್ಥವನ್ನು ಬೇರೊಂದು ಮಾತಿನಲ್ಲಿ ಹುಡುಕುವುದೇ ವ್ಯರ್ಥ, ಅಲ್ಲವೇ? ಎರಡು ಮಾತಿನ ಅರ್ಥ ಒಂದೇ ಆಗಿದ್ದರೆ ಆ ಎರಡು ಮಾತುಗಳು ಸೃಷ್ಟಿಯಾಗುತ್ತಿದ್ದವೇಕೆ? ಅರ್ಥವೆನ್ನುವುದು ಹಾಗೆ ಭಾಷೆಯಲ್ಲಿಲ್ಲ, ಅದನ್ನು ಮೀರಿದ್ದು ಅನ್ನುವುದು, ಅರ್ಥವನ್ನು ವಿವರಿಸಲು ಸಾಧ್ಯವಿಲ್ಲ ಅನ್ನುವುದು ಕೆಲವು ವಚನಕಾರರ ನಿಲುವು.

ಅರ್ಥವೆನ್ನುವುದು ಭಾಷೆಯೊಳಗಷ್ಟೇ ಇರುತ್ತದೆ, ಭಾಷೆಯಾಚೆಗೆ ಅರ್ಥವಿಲ್ಲ ಅನ್ನುವುದು  ತತ್ವಶಾಸ್ತ್ರದ ಇನ್ನೊಂದು ನಿಲುವು. ಹಾಗೆ ಚರ್ಚೆಗೆ ತೊಡಗಿದರೆ ಇನ್ನಷ್ಟು ರೇಖೆಗಳು, ಇನ್ನಷ್ಟು ಪದಗಳು, ಇನ್ನಷ್ಟು ಗ್ರಂಥಗಳು, ಮತ್ತಷ್ಟು ಗ್ರಂಥಾನ್ವಯಗಳು ಹುಟ್ಟಿಕೊಳ್ಳುತ್ತವೆ ಅಷ್ಟೆ. ದೇವರೆಂಬ ಅನುಭವ  ಭಾಷೆಯ ತುತ್ತಲ್ಲ ಎನ್ನುವುದು ಸಿದ್ಧರಾಮನ ನಿಲುವು.

Rating
No votes yet

Comments