ಯುವ ಕವಿಗೆ ಬರೆದ ಪತ್ರಗಳು....

ಯುವ ಕವಿಗೆ ಬರೆದ ಪತ್ರಗಳು....

ಬರಹ

ಕಳೆದ ವಾರ ಡಿಸೆಂಬರ್ ೫ರಂದು ಸಂಜೆ ಮಲ್ಲೇಶ್ವರಂ ಗಾಂಧಿ ಸಾಹಿತ್ಯ ಭವನದಲ್ಲಿ "ಜಿ ಪಿ ರಾಜರತ್ನಂ ಜನ್ಮ ಶತಮಾನೋತ್ಸವ" ಸಮಾರಂಭವಿತ್ತು. ಕವಿ ಜಿ.ಎಸ್.ಶಿವರುದ್ರಪ್ಪನವರ ಅಧ್ಯಕ್ಷತೆಯಲ್ಲಿ, ಪ್ರೊ.ಅ.ರಾ.ಮಿತ್ರ ಅವರಿಂದ 'ರಾಜರತ್ನಂ-ಒಂದು ಮರು ನೆನಪು' ಉಪನ್ಯಾಸ, ಅತಿಥಿ - ಹೊ.ಶ್ರೀನಿವಾಸಯ್ಯನವರು.

ಪ್ರೊ.ಅ.ರಾ.ಮಿತ್ರ, ಜಿ.ಎಸ್.ಶಿವರುದ್ರಪ್ಪನವರು ರಾಜರತ್ನಂ ಅವರ ಸಾಧನೆಗಳನ್ನ ನೆನಪಿಸಿಕೊಟ್ಟು ಅವರ ಅನುಭವಗಳನ್ನ ಹಂಚಿಕೊಂಡರು. ಗಾಂಧಿ ಸಾಹಿತ್ಯ ಭವನದ ಪೂರ್ತಿ ಎಪ್ಪತ್ತು ಎಂಬತ್ತು ದಾಟಿದ ಹಿರಿಯರೇ ಇದ್ದರು. ಅಬ್ಬಾ....ಇಷ್ಟು ಇಳಿ ವಯಸ್ಸಿನಲ್ಲಿ ನಡೆದಾಡಲು,ಕುಳಿತುಕೊಳ್ಳಲು ಕಷ್ಟವಾದರೂ ಸಹ ಅವರವರ ಜೀವನ,ಅನುಭವಗಳ ಜೊತೆ ಬೆಸೆದುಕೊಂಡಿರುವ ರಾಜರತ್ನಂ ಅವರ ನೆನಪುಗಳನ್ನ ಇನ್ನಷ್ಟು ಹಸಿ ಮಾಡಿಕೊಳ್ಳಲು ಬಂದವರನ್ನೆಲ್ಲಾ ಕಂಡು ಬಹು ಅಚ್ಚರಿಯೆನಿಸಿತು...

ಉಪನ್ಯಾಸದ ಜೊತೆಗೆ ಪ್ರೊ.ಓ.ಎಲ್.ಎನ್.ಸ್ವಾಮಿಯವರು ಅನುವಾದಿಸಿರುವ ರೈನರ್ ಮಾರಿಯಾ ರಿಲ್ಕ್ - ಯುವ ಕವಿಗೆ ಬರೆದ ಪತ್ರಗಳು, ಸಂಧ್ಯಾ ದೇವಿಯವರ ಅಗ್ನಿ ದಿವ್ಯ, ಲಕ್ಕೂರು ಆನಂದರ ಬಟವಾಡೆಯಾಗದ ರಸೀತಿ ಪುಸ್ತಕಗಳ ಅನಾವರಣ ಕಾರ್ಯಕ್ರಮವೂ ಇತ್ತು. 

ಸಂಪದದಲ್ಲಿ ‘ಇಂದು ಓದಿದ ವಚನ ಮಾಲಿಕೆ’ಯಲ್ಲಿ ಬರೆಯುವ ಪ್ರೊ.ಓ.ಎಲ್.ಎನ್.ಸ್ವಾಮಿಯವರ ಮತ್ತು ಕಾರ್ಯಕ್ರಮಕ್ಕೆ ಬಂದ ಕೆಲವಾರು ಸಂಪದಿಗರ ಪರಿಚಯವಾದದ್ದು ಸಂತಸವಾಯ್ತು :).


 

ರೈನರ್ ಮಾರಿಯಾ ರಿಲ್ಕ್ ಯುವ ಕವಿ ಕಾಪ್ಪಸ್ ಗೆ ಬರೆದ ಪತ್ರಗಳು ಪುಸ್ತಕ ಬಹು ಇಷ್ಟವಾಯ್ತು. ಓದುತ್ತಾ ಹೋದಂತೆ ಅರಿವಿಲ್ಲದೆಯೇ ಆ ಪತ್ರಗಳು ನಿಮಗಾಗಿಯೇ ಬರೆದವೇನೋ ಅನ್ನಿಸುವುದು ಖಂಡಿತ. ಏಕಾಂತ, ಮೌನಕ್ಕೆ ರಿಲ್ಕ್ ತನ್ನ ಜೀವನದಲ್ಲಿ ಕೊಟ್ಟ ಆಯಾಮವನ್ನ ಆತನ ಪತ್ರಗಳೇ ಸೊಗಸಾಗಿ ತಿಳಿಸುತ್ತವೆ.

ಕೆಲವು ಸಾಲುಗಳು....

ಒಂದಷ್ಟು ಕಾಲ ಈ ಪುಸ್ತಕಗಳಲ್ಲೇ ಬದುಕು. ಅವುಗಳಿಂದ ಏನು ಕಲಿಯಬಹುದೋ ಅದನ್ನು ಕಲಿತುಕೋ. ಅದಕ್ಕಿಂತ ಮಿಗಿಲಾಗಿ ಪುಸ್ತಕಗಳನ್ನು ಪ್ರೀತಿಸು. ಪುಸ್ತಕಗಳಿಗೆ ನೀನು ತೋರಿದ ಪ್ರೀತಿ ಸಾವಿರ ಪಟ್ಟು ಹೆಚ್ಚಾಗಿ ನಿನ್ನ ಬಳಿಗೆ ಮರಳುತ್ತದೆ. ಬದುಕಿನಲ್ಲಿ ನೀನು ಏನು ಬೇಕಾದರೂ ಆಗು, ನಿನ್ನ ಎಲ್ಲ ಅನುಭವ, ನಿರಾಶೆ,ಸಂತೋಷಗಳ ಎಳೆಗಳ ನಡುವೆ ಈ ಓದಿನ ಪ್ರೀತಿಯ ಎಳೆಗಳು ದೃಡವಾಗಿ ಬಲು ಮುಖ್ಯವಾಗಿ ಇರುತ್ತವೆ.  

ನೀನು ಬರೆಯಲೇ ಬೇಕೆ,ಯಾಕೆ? ಎಂಬ ಕಾರಣವನ್ನು ಹುಡುಕಿಕೋ, ಬರೆಯಲೇಬೇಕೆಂಬ ಆಸೆ ಹೃದಯದ ಆಳದಲ್ಲಿ ಬೇರು ಬಿಟ್ಟಿದೆಯೋ, ಬರೆಯುವ ಅವಕಾಶ ನಿನಗೆ ದೊರೆಯದಿದ್ದರೆ ಸಾಯುತ್ತೀಯೋ-ನೋಡಿಕೋ. ಇದು ಮುಖ್ಯ. ಇರುಳಲ್ಲಿ, ನಿನ್ನ ಮನಸ್ಸು ಅತ್ಯಂತ ಶಾಂತವಾಗಿರುವಾಗ ಕೇಳಿಕೋ - ನಾನು ಬರೆಯಲೇ ಬೇಕೆ? ನಿನ್ನ ಅಂತರಂಗದ ಆಳಕ್ಕಿಳಿದು ಉತ್ತರ ಹುಡುಕು. ಸರಳವಾದ ದೃಡವಾದ 'ಹೌದು, ಬರೆಯಲೇಬೇಕು' ಎಂಬ ಉತ್ತರ ನಿನ್ನೊಳಗೆ ಮೊಳಗಿದರೆ ನಿನ್ನ ಇಡೀ ಬದುಕನ್ನು ಈ ಅಗತ್ಯಕ್ಕೆ ತಕ್ಕಂತೆ ಕಟ್ಟಿಕೋ. ಆಮೇಲೆ ಇದುವರೆಗೂ ಯಾರೂ ಹೇಳಿಯೇ ಇಲ್ಲವೇನೋ ಎಂಬಂತೆ ನೀನು ಕಂಡದ್ದು, ಅನುಭವಿಸಿದ್ದು, ಬಯಸಿದ್ದು,ಕಳೆದುಕೊಂಡದ್ದು ಎಲ್ಲವನ್ನೂ ಹೇಳಲು ಪ್ರಯತ್ನಿಸು.

ಅಗಾಧವಾಗಿರಬೇಕು ಈ ಮೌನ.ಸದ್ದುಗಳಿಗೆ ಚಲನೆಗಳಿಗೆ ಅವಕಾಶವಿರುವ ಮೌನ; ದೂರದ ಸಮುದ್ರದ ಮೊರೆತವೂ ಕೇಳುವ ಮೌನ; ಇತಿಹಾಸ ಪೂರ್ವ ಕಾಲದ ಸಾಮರಸ್ಯದ ಸ್ವರಗಳು ಕೇಳಿಸುವ ಮೌನ. ಈ ಅದ್ಭುತವಾದ ಏಕಾಂತವು ನಿನ್ನ ಮೇಲೆ ವರ್ತಿಸುವುದಕ್ಕೆ ನೀನು ಸಮಾಧಾನದಿಂದ ಅವಕಾಶ ಮಾಡಿಕೊಟ್ಟಿರುವೆ ಎಂದು ಆಶಿಸುತ್ತೇನೆ.

 


 

ಇಷ್ಟು ಸೂಕ್ಷ್ಮವಾಗಿ ತಿಳಿ ಹೇಳುವ ಪತ್ರಗಳನ್ನ ಬರೆದ ಕವಿ ರಿಲ್ಕ್ ಗೆ,
ಅವು ನನಗಷ್ಟೇ ಅಲ್ಲ ಬೆಳೆಯುತ್ತಿರುವ ಪ್ರತಿ ಯುವ ಕವಿಗೆ ಅವಶ್ಯವಾದವೆಂದು ಪ್ರಕಟಿಸಿದ ಕವಿ ಕಾಪ್ಪಸ್ ಗೆ,
ಅವುಗಳನ್ನ ಕನ್ನಡಕ್ಕೆ ಅನುವಾದಿಸಿ ಹಳೆಯ ಮತ್ತು ಹೊಸ ಕವಿಗಳ ನಡುವೆ ಸಾತತ್ಯವನ್ನ ಬೆಸೆಯುವ ದಿಶೆಯಲ್ಲಿರುವ ನಮ್ಮ ಪ್ರೊ.ಓ.ಎಲ್.ಎನ್.ಸ್ವಾಮಿಯವರಿಗೆ ಧನ್ಯವಾದಗಳು.

-ಸವಿತ

ಹೆಚ್ಚಿನ ವಿಚಾರಗಳು:http://kn.wikipedia.org/wiki/ಓ.ಎಲ್.ಎನ್.ಸ್ವಾಮಿ

ಯುವ ಕವಿಗೆ ಬರೆದ ಪತ್ರಗಳು - ಪುಸ್ತಕದ ಮುಖಪುಟ

ಸಂಪದದಲ್ಲಿ ರಿಲ್ಕ್ ಕವಿತೆಗಳು:

ಚನ್ನಾಗಿಯೇ ಗೊತ್ತಿದೆ, ಆದರೂ...

ವಾಕಿಂಗ್