ಕುರಾನ್ ಬಗ್ಗೆ ಅಂತರ್ಜಾಲ ತಾಣ

ಕುರಾನ್ ಬಗ್ಗೆ ಅಂತರ್ಜಾಲ ತಾಣ

ಬರಹ

ಕುರಾನ್ ಬಗ್ಗೆ ಅಂತರ್ಜಾಲ ತಾಣquran
Quranet.net ಇದು ಒಂದು ಅಂತರ್ಜಾಲ ತಾಣ. ಇಸ್ರೇಲಿ ಪ್ರೊಫೆಸರ್ ಮತ್ತವರ ಶಿಷ್ಯರು ಸೇರಿ ಶುರು ಮಾಡಿದ ತಾಣವಿದು. ಜಗತ್ತಿನ ಸಮಸ್ಯೆಗಳಿಗೆ ಕುರಾನ್ ಸೂಚಿಸಿರುವ ಪರಿಹಾರಗಳನ್ನು ಜನಪ್ರಿಯಗೊಳಿಸುವುದು ತಾಣವನ್ನು ಸ್ಥಾಪಿಸಿದ ಹಿಂದಿನ ಪ್ರಮುಖ ಉದ್ದೇಶ.ಈ ತಾಣವನ್ನು ಹ್ಯಾಕರುಗಳ ದಾಳಿಯಿಂದ ರಕ್ಷಿಸುವ ಪಣವನ್ನು ಇಸ್ರೇಲಿ ಸರಕಾರವೇ ತೊಟ್ಟಿರುವುದು ಒಂದು ವಿಶೇಷ. ಕುರಾನೆಟ್ ತಾಣದ ಹೆಚ್ಚಿನ ಭಾಗ ಇಂಗ್ಲಿಷಿನಲ್ಲಿದೆ. ಹೀಬ್ರೂ ಮತ್ತು ಅರೇಬಿಕ್ ಭಾಷೆಗಳಲ್ಲೂ ಇದೆ.ಅರ್‍ಏಬಿಕ್, ಹಿಬ್ರೂ,ಸ್ಪಾನಿಷ್ ಮತ್ತು ಪರ್ಷಿಯನ್ ಭಾಷೆಗಳಲ್ಲೂ ತಾಣವನ್ನು ನೀಡುವ ಯೋಚನೆ ಪ್ರೊಫೆಸರಿಗಿದೆ. ಅದಕ್ಕಾಗಿ ಹಣವನ್ನು ಕೂಡಿಸಲವರು ಪ್ರಯತ್ನಿಸುತ್ತಿದ್ದಾರೆ.ಅನಕ್ಷರಸ್ಥರಿಗೂ ಉಪಯುಕ್ತವಾಗುವಂತೆ ಓದಿ ಹೇಳುವ ವ್ಯವಸ್ಥೆಯನ್ನು ಮಾಡುವುದು ಇನ್ನೊಂದು ಯೋಜನೆ.
ಕುರಾನಿನಲ್ಲಿ ಬರುವ ಕತೆಗಳ ಸಹಾಯದಿಂದ ವಿವಿಧ ಸಮಸ್ಯೆಗಳಿಗೆ ಪರಿಹಾರ ನೀಡುವ ತಂತ್ರ ಇಲ್ಲಿ ಬಳಕೆಯಾಗಿದೆ.ಈ ಕತೆಗಳನ್ನು ಹುಡುಕುವ ಕಾರ್ಯವನ್ನು ವಿದ್ಯಾರ್ಥಿಗಳಿಗೇ ನೀಡಲಾಗಿತ್ತು.
-------------------------------------------
ಕಣ್ಣಿನಲ್ಲಿ ಕ್ಯಾಮರಾ
ತನ್ನ ದೃಷ್ಟಿಯಿಲ್ಲದ ಕಣ್ಣಿನಲ್ಲಿ ಕ್ಯಮರಾವನ್ನಿಟ್ಟು,ಅದರ ಮೂಲಕ ತಾನು ನೋಡಿದ್ದನ್ನೆಲ್ಲಾ ಚಿತ್ರಿಸಿ, ಅದನ್ನು ನೇರ ಪ್ರಸಾರ ಮಾಡಬೇಕೆಂಬುದು ಸ್ಪೆನ್ಸ್ ಎಂಬ ಚಿತ್ರ ನಿರ್ಮಾಪಕನ ಯೋಜನೆ. ಆತನ ಒಂದು ಕಣ್ಣಿನಲ್ಲಿ ದೃಷ್ಟಿಯಿಲ್ಲ. ಈಗ ಅದರಲ್ಲಿ ನಕಲಿ ಕಣ್ಣು ಇದೆ. ಆದನ್ನು ತೆಗೆದು, ಆ ಜಾಗದಲ್ಲಿ ಮಿನಿ ವಿಡಿಯೋ ಕ್ಯಾಮರಾವನ್ನು ಅಳವಡಿಸುವುದು ಸ್ಪೆನ್ಸ್‌ನ ಯೋಜನೆ.ಹದಿಮೂರು ವರ್ಷದವನಾಗಿದ್ದಾಗ ಆತ, ತನ್ನ ಅಜ್ಜನ ಬಂದೂಕು ಹಿಡಿದು ಆಟವಾಡುತ್ತಿದ್ದಾಗ, ಅಕಸ್ಮಾತ್ ಸಿಡಿದ ಗುಂಡಿನಿಂದ ಬಂದೂಕು ಹಿಂದಕ್ಕೆ ಅಪ್ಪಳಿಸಿದಾಗ,ಕಣ್ಣಿಗೆ ಬಡಿದು, ಆತ ಕಣ್ಣು ಕಳೆದುಕೊಂಡಿದ್ದ.ಸ್ಪೆನ್ಸ್‌ನ ಕಣ್ಣಿನ ಕುಹರದಲ್ಲಿ ಕೂರುವ ಕ್ಯಾಮರವನ್ನು ಕಂಡುಕೊಳ್ಳುವುದು ಸುಲಭವಾಗಿಲ್ಲ.ಈಗಿನ ಡಿಜಿಟಲ್ ಯುಗದಲ್ಲಿ ಅಂತಹ ಸಣ್ಣ ಕುಹರದಲ್ಲಿ ಇರಿಸಬಹುದಾದ ಕ್ಯಾಮರಾ ಲಭ್ಯವಿಲ್ಲ.ಈ ಯೋಜನೆಗೆ ಸರಿ ಹೊಂದಬಲ್ಲ ಕ್ಯಾಮರಾಕ್ಕಾಗಿ,ಸ್ಪೆನ್ಸ್ ಬಹಳ ಪ್ರಯತ್ನ ಪಡುತ್ತಿದ್ದಾನೆ. ಕ್ಯಾಮರಾ ಚಿತ್ರಿಸಿದ್ದನ್ನು ಹೊರಗಡೆಯಿರುವ ಸಾಧನಕ್ಕೆ ರವಾನಿಸಿ,ಅಲ್ಲಿಂದ ಅದನ್ನು ಬೇಕಾದಂತೆ ಬಳಸುವ ಯೋಜನೆಯಿದೆ.ಕ್ಯಾಮರಾವನ್ನು ಪ್ರತಿಕ್ಷಣ ಚಾಲೂ ಇಡದೆ,ಖಾಸಗಿ ಕ್ಷಣಗಳ ಏಕಾಂತವನ್ನು ರಹಸ್ಯವಾಗಿಡಲೂ ಸ್ಪೆನ್ಸ್ ಬಯಸಿದ್ದಾನೆ. ಆದರೆ ಪ್ರತಿದಿನವೂ ಒಂದೇ ರೀತಿಯ ನಡವಳಿಕೆ ಪ್ರದರ್ಶಿಸುವ ಇರಾದೆಯೂ ಆತನಿಗಿಲ್ಲ. ಕೆಲವು ಸಲ ಅನಿರೀಕ್ಷಿತವಾಗಿ ತನ್ನ ಕಣ್ಣು ನೋಡುತ್ತಿರುವುದನ್ನು ಇತರರಿಗೂ ತಿಳಿಸುವುದು ಈತನ ಯೋಚನೆ.eyeborg
-----------------------------------------------------
ಶಸ್ತ್ರಚಿಕಿತ್ಸೆಯಲ್ಲಿ ಎಸ್ ಎಂ ಎಸ್ ಮೂಲಕ ಸಹಾಯ
ವೈದ್ಯನೋರ್ವ ತನ್ನ ರೋಗಿಯ ಚಿಕಿತ್ಸೆಗೆ ತಜ್ಞ ವೈದ್ಯನ ಸಹಾಯವನ್ನು ಸೆಲ್ ಫೋನಿನ ಎಸ್ ಎಂ ಎಸ್ ಮೂಲಕ ಪಡೆದು,ಯಶಸ್ವಿ ಶಸ್ತ್ರಚಿಕಿತ್ಸೆಯನ್ನೂ ಮಾಡಿದರು. ಗ್ಯಾಂಗ್ರಿನ್ ಆಗಿದ್ದ ಮುಂಗೈಯ ಮೂಳೆಯನ್ನು ತೆಗೆದು ಹಾಕಲು ಬ್ರಿಟಿಶ್ ವೈದ್ಯ ಡೇವಿಡ್ ನಾಟ್ ಅವರು ತಮ್ಮ ಸಹೋದ್ಯೋಗಿ ಥಾಮಸ್ ಅವರ ಸಹಾಯ ಬಯಸಿ,ಕಿರು ಸಂದೇಶ ಕಳುಹಿಸಿದರು. ಥಾಮಸ್ ಒಡನೆಯೇ ಹಲವು ಕಿರು ಸಂದೇಶಗಳನ್ನು ಕಳುಹಿಸಿ,ಮಾರ್ಗದರ್ಶನ ಮಾಡಿದರು.ಶಸ್ತ್ರಚಿಕಿತ್ಸೆಯಲ್ಲಿ ಕೈಗೊಳ್ಳಬೇಕಾದ ಹತ್ತು ಮುನ್ನೆಚ್ಚರಿಕೆ ಮತ್ತು ಚಿಕಿತ್ಸಾ ಕ್ರಮಗಳ ಬಗ್ಗೆ ಥಾಮಸ್ ಸರಣಿ ಕಿರು ಸಂದೇಶಗಳನ್ನು ಕಳುಹಿಸಿದರು. ಅದನ್ನು ಅನುಸರಿಸಿ ಶಸ್ತ್ರಚಿಕಿತ್ಸೆ ನೆರವೇರಿಸಿದಾಗ, ಅದು ಯಶಸ್ವಿಯಾಯಿತು.
---------------------------------------------------------------
ನೋಕಿಯಾದ ಮೊಬೈಲ್ ಕಂಪ್ಯೂಟರ್
ನೋಕಿಯಾ ಕಂಪೆನಿಯ N97 ಮೊಬೈಲ್ ಫೋನಾದರೂ, ಮಿನಿ ಕಂಪ್ಯೂಟರ್‌ನಂತೆ ಕೆಲಸ ಮಾಡುತ್ತದೆ. ಸ್ಪರ್ಶ ಸಂವೇದಿ ತೆರೆ,qwerty ಕೀಲಿಮಣೆಯನ್ನಿದು ಹೊಂದಿದೆ. ಉತ್ತಮ ಗುಣಮಟ್ಟದ ಚಿತ್ರ ತೆಗೆಯಬಲ್ಲ ಕ್ಯಾಮರಾವೂ ಇದರಲ್ಲಿದೆ. ಜಿಪಿಎಸ್ ಸೌಲಭ್ಯ ಇರುವ ಕಾರಣ ಇದು ನಾವಿರುವ ತಾಣವನ್ನು ಗುರುತಿಸ ಬಲ್ಲುದು. ಅಂತರ್ಜಾಲದ ಸಾಮಾನ್ಯ ಪುಟಗಳನ್ನೂ ವೀಕ್ಷಿಸಲು ಅನುವು ಮಾಡುವಂತಹ ಮೂರೂವರೆ ಅಂಗುಲದ ಟಿಎಫ್‌ಟಿ ತೆರೆಯೂ ಇದರಲ್ಲಿದೆ. ಕರೆಗಳನ್ನು ಸ್ವೀಕರಿಸುವಾಗ, ತೆರೆಯ ಸ್ಪರ್ಶ ಸಂವೇದಿ ಗುಣವನ್ನು ನಿಷ್ಕ್ರಿಯಗೊಳಿಸುವ ಅನುಕೂಲತೆಯಿದೆ.ತೆರೆಯನ್ನು ವಿವಿಧ ಕೋನಗಳಿಗೆ ತಿರುಗಿಸಲು ಸುಲಭ ವ್ಯವಸ್ಥೆಯಿದರಲ್ಲಿ ಲಭ್ಯವಿದೆ. ಹೀಗಾಗಿ ಹೊರಗಡೆ ಬಿಸಿಲಿನಲ್ಲಿ ಬಳಸುವಾಗಲೂ, ಬೆಳಕಿನ ಪ್ರತಿಫಲನದಿಂದ ತೆರೆಯನ್ನು ನೋಡಲು ಆಗುವ ಕಿರಿಕಿರಿಯನ್ನು ಕಡಿಮೆ ಮಾಡಲು ಸಾಧ್ಯವಿದೆ.ಮಿಂಚಂಚೆಯನ್ನು ಬಳಸಲೂ ಇದು ಅನುಕೂಲಕರವಾಗಿದೆ.
----------------------------------------------------------------------------
ತೆರೆಮರೆಗೆ ಸರಿಯುತ್ತಿರುವ ಕಂಪ್ಯೂಟರ್ ಮೌಸ್
ಕಂಪ್ಯೂಟರಿಗೆ ಜೀವ ತುಂಬುವಲ್ಲಿ ಪ್ರಧಾನ ಪಾತ್ರ ವಹಿಸುವ ಕಂಪ್ಯೂಟರ್ ಮೌಸ್‌ಗೆ ಈಗ ನಲುವತ್ತರ ಹರೆಯ.ಲಾಜಿಟೆಕ್ ಎನ್ನುವ ಸ್ವಿಸ್ ಕಂಪೆನಿಯ ಮೌಸ್ ಬಹು ಜನಪ್ರಿಯ. ಅದೀಗಲೇ ಒಂದು ಬಿಲಿಯ ಮೌಸ್‌ಗಳನ್ನು ತಯಾರಿಸಿ ಹೊಸ ವಿಕ್ರಮ ಸಾಧಿಸಿದೆ.ಆದರೆ ವಿಪರ್ಯಾಸವೆಂದರೆ ಸ್ಪರ್ಶ ಸಂವೇದಿ ತೆರೆಗಳು ಡೆಸ್ಕ್ ಟಾಪ್ ಕಂಪ್ಯೂಟರಿನಲ್ಲಿ ಕಾಣಿಸಿಕೊಳ್ಳುವುದರೊಂದಿಗೆ,ಮೌಸ್‌ ಈಗ ತೆರೆಮರೆಗೆ ಸರಿಯುತ್ತಿದೆ. ಲ್ಯಾಪ್‌ಟಾಪ್ ಮತ್ತು ನೋಟ್‌ಬುಕ್ ಕಂಪ್ಯೂಟರುಗಳಲ್ಲಂತೂ ಅದು ಬಹಳ ಹಿಂದೆಯೇ ಸ್ಪರ್ಶಸಂವೇದಿ ಪ್ಯಾದುಗಳಿಗೆ ತನ್ನ ಸ್ಥಾನ ಬಿಟ್ಟುಕೊಟ್ಟಿದೆ.ಕಳೆದ ನಲುವತ್ತು ವರ್ಷಗಳಲ್ಲಿ ಮೌಸ್ ಬಹಳ ಬದಲಾಗಿದೆ. ಹೊಸ ಮೌಸುಗಳು ಬೆಳಕಿನ ಕಿರಣಗಲ ಸಹಾಯದಿಂದ ಕೆಲಸ ಮಾಡುತ್ತಿದ್ದರೆ,ಮೊದಲಿನ ಮೌಸ್‌ಗಳಲ್ಲಿ ಗೋಲಿಯೊಂದು ಸಾಧನದ ಜೀವಾಳವಾಗಿತ್ತು.ಡೊಗ್ಲಸ್ ಸಿ ಎಂಜೆಲ್ಬರ್ಟ್  ನೇತೃತ್ವದ ಸ್ಟಾನ್‌ಫರ್ಡ್ ವಿಶ್ವವಿದ್ಯಾಲಯದ ಸಂಶೋಧಕರ ತಂಡ,ಮೌಸನ್ನು ಸಂಶೋಧಿಸಿತು.
----------------------------------------------------------------------------
ಸ್ಪರ್ಶ,ಮಾತಿನ ಮೂಲಕ ಸಣ್ಣ ಸಾಧನಗಳಿಗೆ ಶಕ್ತಿ
ಪೀಜೋ ವಿದ್ಯುತ್ ಪರಿಣಾಮದ ಮೂಲಕ ಸ್ಪರ್ಶ ಮತ್ತು ಮಾತು ಉಂಟು ಮಾಡುವ ಕಂಪನವನ್ನು ದುಡಿಸಿಕೊಂಡು ಶಕ್ತಿ ಉತ್ಪಾದಿಸಲು ಸಾಧ್ಯ. ಈ ತಂತ್ರವನ್ನು ಬಳಸಿಕೊಂಡು ಸಣ್ಣ ಸಾಧನಗಳು ಕೆಲಸ ಮಾದಲು ಅಗತ್ಯವಾದ ಶಕ್ತಿಯನ್ನು ಉತ್ಪಾದಿಸಲು ಸಾಧ್ಯ. ಹಾಗಾಗಿ ಅಂತಹ ತಂತ್ರಜ್ಞಾನ ಇರುವ ಸಾಧನಗಳು ಬ್ಯಾಟರಿಯನ್ನು ಚಾರ್ಜ್ ಮಾಡದೆ, ಕೆಲಸ ಮಾಡಲು ಶಕ್ತವಾಗುತ್ತವೆ.

ಉದಯವಾಣಿ 

ಅಶೋಕ್ ಪ್ರಪಂಚ

*ಅಶೋಕ್‌ಕುಮಾರ್ ಎ