ಪದವೊಂದೇ ....

ಪದವೊಂದೇ ....

ಬರಹ

ಹಲವಾರು ಬಾರಿ ಪದವೊಂದೇ ಆದರೂ ಅವುಗಳ ಅರ್ಥ ಬೇರೆ ಇರುತ್ತದೆ. ಅಂತಹ ಕೆಲವು ಪದಗಳನ್ನು ತೆಗೆದುಕೊಂಡು ಕವನ ರೂಪದಲ್ಲಿ ಭವ ಬಂಧನದ ಬಗೆಗಿನ ಒಂದು ಸನ್ನಿವೇಶವನ್ನು ಹೆಣೆದಿದ್ದೇನೆ. ಕವನದಲ್ಲಿ ಅಕ್ಕ-ತಂಗಿಯರ ಬಾಂಧವ್ಯವಿದೆ. ತಂದೆಯ ಸ್ಥಾನದಲ್ಲಿ ನಿಲ್ಲುವ ಭಾವನ ಚಿತ್ರಣವಿದೆ. ಹೊಸ ಬಂಧನಕ್ಕೆ ಸಿಲುಕುತ್ತಿದ್ದಂತೆ ಜೊತೆ ಹಳೆಯ ಬಾಂಧವ್ಯವು ಮಸುಕಾಗುವ ಕ್ರೂರ ಸತ್ಯವೂ ಅಡಕವಾಗಿದೆ. ಅದಲ್ಲದೆ, ನಾವು ಒಬ್ಬರಿಗೆ ಋಣಿಯಾಗಿದ್ದೇವೆ ಎಂದು ನಮ್ಮ ಮುಂದಿನವರೂ ಅದರಂತೆ ಋಣಿಯಾಗಿರಬೇಕೇ ಎಂಬ ಪ್ರಶ್ನೆಯೂ ಇದೆ.... ನಿಮಗೆ ಉತ್ತರ ಗೊತ್ತೆ ?

ಹೊರಗೆಡಹಲು ಎನ್ನ ಮನದಾಳದ ಅಳಲು
ಮೂಲೆ ಹಿಡಿದು ನಾ ಗಟ್ಟಿಯಾಗಿ ಅಳಲು

ತಲೆ ನೇವರಿಸಿದಳು ತಾಯಂತಹ ಅತ್ತೆ
ಏನಂತಹ ದುಗುಡ ನೀನೇಕೆ ಅತ್ತೆ

ಸೂರ್ಯ ತಾ ಮುಳುಗಿಹನು ಇದು ಸಂಧ್ಯಾಕಾಲ
ಇಂಥದೇ ಸಂಜೆ ಅಪ್ಪನ ಜೀವಕದು ಸಂಧ್ಯಾಕಾಲ

ಹೇಳಲಾಗಲಿಲ್ಲ ಹೃದಯದಿ ಅಡಗಿದ್ದ ಭಾವ
ಇದ್ದುದಿಬ್ಬರೇ ಸಂತೈಸಲು ಆ ನನ್ನ ಅಕ್ಕ ಭಾವ

ಅಕ್ಕಗೆ ನುಡಿದಿದ್ದನವ ಇವಳನ್ನು ನೀ ಸಾಕು
ಬಂಧುಗಳಿಲ್ಲದ ಈ ಊರು ಅವಳಿಗಿನ್ನು ಸಾಕು

ಹೆತ್ತಮ್ಮನಿಲ್ಲ, ಸಲುಹಿದ ಅಪ್ಪನಿಲ್ಲ, ಏನಾಗುವುದೋ ಎನ್ನ ಬಾಳು
ಕಂಕಣ ಬಲ ಒದಗಿಸಿ ಹರಸಿಹಳು ಅಕ್ಕ ನೀ ನೂರ್ಕಾಲ ಬಾಳು

ತಂಪನೆಯ ಗಾಳಿಯೊಂದಿಗೆ ಸೂರ್ಯ ಮುಳುಗುವಾ ಹೊತ್ತು
ಬಂದಿದ್ದಳು ಅಕ್ಕ ದೂರಾಗುವ ಸಂದೇಶವಾ ಹೊತ್ತು

ಮುಪ್ಪಾದವರ ಸೇವೆಗೆ ಭಾವನ ಕೂಗಿ ಕರೆದಿತ್ತು ಕರ್ತವ್ಯದ ಕರೆ
ಏಂದೋ ಒಮ್ಮೆ ನೋಡುವ ಅಕ್ಕಳಿಗಿನ್ನು ಕೇವಲ ದೂರವಾಣಿ ಕರೆ

ಎನ್ನವರೆಲ್ಲ ದೂರಾಗುತ್ತಿಹರತ್ತೆ ನಾನೇನ ಮಾಡಿರುವೆ ಪಾಪ
ಹೊಟ್ಟೆ ಹಸಿವಿನಿಂದ ಅಳಲು ಹತ್ತಿತ್ತು ಮಲಗಿದ್ದ ನನ್ನ ಪಾಪ

ನವ ಬಂಧನವು ಸೆಳೆದಾಗ ಹಳೆ ಬಂಧನಗಳು ಹರಿವುದೇ?
ಹಳೆ ಬಂಧನದ ಮೌಲ್ಯ ನವ ಪೀಳಿಗೆಯಲ್ಲೂ ಹರಿವುದೇ?