ಇಂದು ಓದಿದ ವಚನ: ಯಾವ ಮಾದರಿಯೂ ಇಲ್ಲ: ಸಿದ್ಧರಾಮ

ಇಂದು ಓದಿದ ವಚನ: ಯಾವ ಮಾದರಿಯೂ ಇಲ್ಲ: ಸಿದ್ಧರಾಮ

ಗುರುವಿಂಗೆ ಗುರುವಿಲ್ಲ

ಲಿಂಗಕ್ಕೆ ಲಿಂಗವಿಲ್ಲ

ಜಂಗಮಕ್ಕೆ ಜಂಗಮವಿಲ್ಲ

ನನಗೆ ನಾನಿಲ್ಲ

ಕಣ್ದೆರೆದು ನೋಡುವಡೆ ಆರಿಗೆ ಆರೂ ಇಲ್ಲ

ಕಪಿಲಸಿದ್ಧಮಲ್ಲಿಕಾರ್ಜುನಾ

ಸಿದ್ಧರಾಮನ ವಚನ ಇದು.

ಮಾದರಿಗಳನ್ನು ಅನುಸರಿಸುವವರು ಹೇಳಹೆಸರಿಲ್ಲದಾಗುತ್ತಾರೆ

ಏಸು ಕ್ರಿಸ್ತ ಕ್ರಿಶ್ಚಿಯನ್ ಅಲ್ಲ,ಬುದ್ಧ ಬೌದ್ಧನಲ್ಲ,  ಮಾರ್ಕ್ಸ್ಮಾರ್ಕ್ಸ್ ವಾದಿಯಲ್ಲ. ಕ್ರಿಸ್ತನನ್ನು ಅನುಸರಿಸಿದವರು ಕ್ರಿಶ್ಚಿಯನ್ನರು, ಬುದ್ಡನನ್ನು ಅನುಸರಿಸಿದವರು ಬೌದ್ಧರು, ಮಾರ್ಕ್ಸ್‌ನನ್ನು
ಅನುಸರಿಸಿದವರು ಮಾರ್ಕ್ಸ್‌‌ವಾದಿಗಳಾದರು.ನಾವು ಯಾರನ್ನು ಮಹಾಪುರುಷರು ಎಂದು
ಗುರುತಿಸಿಕೊಂಡಿದ್ದೇವೆಯೋ ಅವರೆಲ್ಲರ ಮೇಲೂ ಇತರರ ಪ್ರಭಾವಗಳಿದ್ದರೂ ಅವರು ಯಾವ
ಮಾದರಿಯನ್ನೂ ಅನುಕರಿಸದೆ, ಯಾರಂತೆಯೋ ಆಗಲು ಬಯಸದೆ ಬೆಳೆದವರು.

ಹಾಗೆಯೇ ಗುರು ಎಂಬ ಗುರುವಿಗೆ ಗುರುವೂ ಇಲ್ಲ.ಲಿಂಗ ಅನ್ನುವ ಲಿಂಗಕ್ಕೆ ಲಿಂಗವೂ ಇಲ್ಲ, ಜಂಗಮಕ್ಕೆಬೇರೆ ಇನ್ನೊಬ್ಬ ಜಂಗಮವಿಲ್ಲ. ಗುರು, ಲಿಂಗಮತ್ತು
ಜಂಗಮ ಎಂಬವು ಮನುಷ್ಯ ವ್ಯಕ್ತಿಯಾಗಲೀ ವಸ್ತುವಾಗಲೀ ಅಲ್ಲ. ಅವು ಪರಿಕಲ್ಪನೆಗಳು.
ಹಾಗೆಯೇ ನಾನು ಎಂಬುದು ಕೂಡ ಕಲ್ಪನೆಯೇ. ನಾನು ಎಂಬ ಕಲ್ಪನೆಗೆ ಬದ್ಧವಾಗಿರುವಷ್ಟು
ಕಾಲವೂ ನನಗೆ ಒಂದು ಮಾದರಿ ಬೇಕು ಎಂದು ಹುಡುಕುತ್ತಲೇ ಇರುತ್ತೇನೆ. ನಿಜವಾಗಿ
ಕಣ್ತೆರೆದು ನೋಡಿದರೆ ನಾನು ಎಂಬ ಕಲ್ಪನೆಗೆ ಆಧಾರವೇ ಇಲ್ಲ ಎಂಬುದು ಹೊಳೆದೀತು. ಅಷ್ಟೇ
ಯಾಕೆ, ಯಾರಿಗೆ ಯಾರೂ ಇಲ್ಲ ಅನ್ನುವುದೂ ಅರಿವಿಗೆ ಬಂದೀತು. ಮಾದರಿಗಳ ನಿರಾಕಣೆಯ ಜೊತೆಗೇ ‘ನನಗೆ ನಾನಿಲ್ಲ' ಅನ್ನುವ ಮಾತು ‘ನಾನೇ, ಎಲ್ಲವೂ ನನ್ನಿಷ್ಟದಂತೆಯೇ' ಅನ್ನುವ ಭ್ರಮೆಯ ಅಹಂಕಾರವನ್ನೂ ನಿರಾಕರಿಸುವುದನ್ನು ಗಮನಿಸಿ. ಯಾರ ಹಾಗೆಯೋ ಆಗುವುದೂ ಅಲ್ಲ, ‘ನಾನೇ' ಆಗುವುದೂ ಅಲ್ಲ, ಅಂದಮೇಲೆ ದಾರಿ ಯಾವುದು ಎಂಬ ಹುಡುಕಾಟಕ್ಕೆ ತೊಡಗಿಸುವಂತೆ ಇದೆ ಸಿದ್ಧರಾಮನ ಈ ವಚನ.

Rating
No votes yet

Comments