ನಿಲ್ಲಿ, ನಾವು ನಿಮ್ಮಂತಲ್ಲ....

ನಿಲ್ಲಿ, ನಾವು ನಿಮ್ಮಂತಲ್ಲ....

ಬರಹ

ಸುಮಾರು ಎರಡು ವರ್ಷಗಳ ಹಿಂದಿರಬೇಕು. ನಮ್ಮ ವಿಶ್ವವಿದ್ಯಾನಿಲಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವೊಂದು ನಡೆಯುತ್ತಿತು. ಯುವಜನರೇ ಇರುವ ಕಾರ್ಯಕ್ರಮ ಹೇಗಿರುತ್ತದೆ ಎಂದು ಹೇಳುವ ಅಗತ್ಯವಿಲ್ಲ. ಇಡೀ ಸಭಾಂಗಣವೇ ಬೊಬ್ಬೆ, ಸಿನಿಮಾ ಸಂಗೀತದಬ್ಬರ, ಉತ್ಸಾಹ, ಮೋಜುನಿಂದ ಕೂಡಿತ್ತು. ವೇದಿಕೆಯಲ್ಲಿ ನಾಲ್ಕು ಜನ ಕುಣಿದರೆ ಪ್ರೇಕ್ಷಕರ ಹಿಂಭಾಗದಲ್ಲಿ ನೂರಾರು ಮಂದಿಯ ಡ್ಯಾನ್ಸ್. ಇಂಥ ಸಮಯದಲ್ಲಿ ಹಾಡೊಂದನ್ನು ಕೇಳಲು ತಾಳ್ಮೆ ಇರುತ್ತದೆಯೇ? ಆದರೂ ನಿರೂಪಕರು ಹೆಸರು ಘೋಷಿಸಿದ ತಕ್ಷಣ ಮಟಾ ಮೌನ. ಸೂಜಿ ಬಿದ್ದರೂ ಕೇಳುವ ನಿಶಬ್ದ. ಅಷ್ಟೂ ಹೊತ್ತು ಕುಣಿದವರಿಗೆ ತಮ್ಮ ದಣಿವಿನ ಅರಿವಾಗುವಂತೆ.

ಹಾಡಲು ಬಂದ ವಿದ್ಯಾರ್ಥಿನಿ 'ಪ್ರೀತಿ ಅಂತ ಪ್ರಾಣ ತಿನ್ನೋ ಪ್ರೇಮಿ ನೀನು ಯಾರೋ' ಅಂತ ಹಾಡುತ್ತಿದ್ದರೆ ಇಡೀ ವಿದ್ಯಾರ್ಥಿ ವೃಂದ ಎದ್ದು ನಿಂತು ಆಕೆಯ ಹಾಡಿಗೆ ಚಪ್ಪಾಳೆಯ ಸಾಥ್ ನೀಡಿತು. ಏನೋ ಕಾರಣಕ್ಕೆ ಆಕೆಗೆ ನಡೆಯಲು ನಿಲ್ಲಲು ಆಗುತ್ತಿರಲ್ಲಿಲ್ಲ. ಅಲ್ಲದೇ ಅಕೆ ಹುಟ್ಟಿನಿಂದ ಸೂರ್ಯನ ಬೆಳಕನ್ನೇ ಕಾಣದವಳು. ಆರಂಭದಲ್ಲಿ ತಡವರಿಸಿ ಹಾಡನ್ನು ಆರಂಭಿಸಿದರು. ನಿಲ್ಲಲು ಕಷ್ಟವಾಗುತ್ತಿತ್ತು. ಪ್ರೇಕ್ಷಕರ ಪ್ರೋತ್ಸಾಹದಿಂದ ಹಾಡನ್ನು ಚೆನ್ನಾಗಿಯೇ ಹಾಡಿ ಮುಗಿಸಿದರು. ಮುಂದಿನ ಎಲ್ಲ ಕಾರ್ಯಕ್ರಮಗಳಲ್ಲೂ ಆಕೆಯು ಹಾಡುವಷ್ಟು ಹುಮ್ಮಸ್ಸು ಮತ್ತು ಆತ್ಮಸ್ಥೈರ್ಯ ಆಕೆಯಲ್ಲಿ ಮೂಡಿತ್ತು.

ನಾನು ಈ ಪ್ರಸಂಗ ಯಾಕೆ ಹೇಳಿದೆನೆ೦ದರೆ ಯುವಕರು ಎಂದ ತಕ್ಷಣವೇ ಆಡಾವುಡಿ ಪ್ರವೃತಿಯ, ಅಸಡ್ಡೆಯ, ಅವಿವೇಕಿಗಳು ಎಂಬಂತೆ ಚಿತ್ರಿಸಲಾಗುತ್ತದೆ. ಆದರೆ ವಾಸ್ತವದಲ್ಲಿ ಮಾನವೀಯತೆ, ಪ್ರೀತಿ, ಹೇಳಿದ್ದನೆಲ್ಲ ನಂಬುವ ನಿಷ್ಕಲ್ಮಶ ಮನಸ್ಸುಗಳು ಇದ್ದರೆ ಅದು ಯುವಮನಸ್ಸುಗಳದ್ದು ಮಾತ್ರ. ಸ್ವಾರ್ಥ, ನಯವಂಚನೆ, ಎಲ್ಲವು ತನಗೆ ಬೇಕು ಎಂಬ ಭಾವನೆಗಳು ಈ ವಯಸ್ಸಿನಲ್ಲಿ ಬಂದಿರುವುದಿಲ್ಲ. ಹೀಗಿರುವಾಗ ಇವರು ಮುಗ್ಧರೇ ಹೊರತು ಮೂರ್ಖರಲ್ಲ. ಯಾವುದೇ ಅಶಾಂತಿಯ ವಾತಾವರಣವಾದರೂ ಅದು ಯುವಕರ ತಲೆಗೆ. ಅನಿಷ್ಟಕ್ಕೆಲ್ಲಾ ಶನೀಶ್ವರನೇ ಕಾರಣ ಎಂಬಂತೆ.

ನಿಜವಾಗಿ ಯುವ ಶಕ್ತಿಯನ್ನು ಚಾನಲೈಸ್ ಮಾಡುವ ಶಕ್ತಿ ನಮ್ಮ ಹಿರಿಯರಲ್ಲಿ ಇಲ್ಲ. ತಮ್ಮ ತಪ್ಪನ್ನು ಅವರು ಎಂದೂ ಅರಿತವರೂ ಅಲ್ಲ. ಯಾವುದೇ ಸಂದರ್ಭ ಬಂದರೂ ಯವಕರೂ ಹಾಳಾಗುತ್ತಿದ್ದಾರೆ, ನಮ್ಮ ಸಂಸ್ಕೃತಿ ಹಾಳಾಗುತ್ತಿದೆ ಎಂದು ಬೊಬ್ಬೆ ಹಾಕಿಯಾರೇ ವಿನಾ ಆ ವಿಷಯದಲ್ಲಿ ತಮ್ಮ ಪಾಲೇನು ಎಂದು ಯೋಚಿಸುವುದಿಲ್ಲ. ಉದಾಹರಣೆಗೆ ನಮ್ಮ ಸಂಸತ್ತಿನಲ್ಲೂ ನಡೆಯದಷ್ಟು ಗಂಭೀರವಾದ ಚರ್ಚೆಗಳು ನಮ್ಮ ತರಗತಿಗಳಲ್ಲಿ ನಡೆಯುತ್ತವೆ. ಹೀಗೆ ಹಿರಿಯರು ತಾವು ಮಾಡಬೇಕಾದ, ನೇತೃತ್ವವಹಿಸ ಬೇಕಾದ ಹಲವು ಹತ್ತು ವಿಷಯಗಳನ್ನು ಯುವಜನರ ಮೇಲೆ ಹೊರಿಸಿ ತಮ್ಮ ಜವಾಬ್ದಾರಿಯೇನು ಇಲ್ಲ ಎಂಬಂತೆ ಇದ್ದುಬಿಡುತ್ತಾರೆ. ಮೊನ್ನೆ ಮುಂಬೈಯಲ್ಲಿ ಧಾಳಿ ನಡೆದಾಗ ತೀವ್ರವಾಗಿ ಪ್ರತಿಕ್ರಿಯಿಸಿದ್ದು ಯುವಜನತೆ. ಪಾಪ ಉಳಿದವರಿಗೆ ಅದು ಸರಕಾರದ ಕೆಲಸ.

ನಮ್ಮ ಯವಜನರಿಗೆ ಅರ್ಥವಾಗುವ ಭಾಷೆ ಪ್ರೀತಿಯೊಂದೇ. ಅತಿಭಾವುಕತೆ ಇವರ ಪ್ರಬಲತೆ ಮತ್ತು ದೌರ್ಭಾಗ್ಯ. ಅದೇ ನೀತಿ ಉಪಯೋಗಿಸಿ ಒಳ್ಳೆಯ ವ್ಯಕ್ತಿಗಳನ್ನು ಕುಕೃತ್ಯಗಳಿಗೆ ಬಳಸಿಕೊಳ್ಳಲಾಗುತ್ತದೆ. ಆದರೆ ಒಳ್ಳೆಯ ಉದ್ದೇಶಗಳಿಗೆ ಬಳಸಿಕೊಳ್ಳಲು ಅಗುತ್ತಿಲ್ಲ. ಎಂತಹ ವಿರೋಧಾಭಾಸ.

ಅದು ಎನೇ ಇರಲಿ ಪ್ರೀತಿಯ ಮಾತನರಿಯುವ ಜನರಿಗೆ ಅದರಿ೦ದಲೇ ಪಾಠ ಶುರುವಾಗಬೇಕಿದೆ. ಶಿಸ್ತುಬದ್ಧ ಭಾರತೀಯನನ್ನಾಗಿಸಬೇಕಾದ ಜವಾಬ್ದಾರಿ ಹಿರಿ ತಲೆಗಳ ಮೇಲಿದೆ. ಆದರೂ ಸ್ನೇಹಿತರೆ ನಮಗೆ ಒಳ್ಳೆ ಗುರುಗಳು ಸಿಗದಿರಬಹುದು ನಾವಂತೂ ಒಳ್ಳೆಯ ಗುರುಗಳಾಗುವ ಅವಕಾಶವಂತೂ ಇದೆಯಲ್ಲಾ?