ಸತ್ಯವು ಇನ್ನೆಲ್ಲಿ?

ಸತ್ಯವು ಇನ್ನೆಲ್ಲಿ?

ಕಾಲನ ಬಂಡಿಯನೇರಿ
ಜ್ಞಾನದ ಜ್ಯೋತಿಯ ಬೆಳಗಿಸಿ
ಪ್ರೀತಿಯ ಬಳಗವ ಕಟ್ಟಿ
ಸತ್ಯದೂರಿನೆಡೆಗೆ ಪಯಣ

ಹೊಸದೀ ದಾರಿ
ಹೊಸದೀ ತಿರುವು
ಸತ್ಯದ ಸುಳಿವಿಲ್ಲ

ದ್ವೇಷವ ಬಿತ್ತುತ
ಅನ್ಯಾಯವ ಬೆಳದಿಹರಿಲ್ಲಿ

ಕಲ್ಲ ನಾಗರಕೆ ಹಾಲೆರೆಯುತ
ನಿಜ ನಾಗರವ ಕಲ್ಲಲಿ ಜಜ್ಜಿಹರಿಲ್ಲಿ

ಸ್ವಾರ್ಥದ ಸಂತೆಯಲಿ
ಧರ್ಮವ ಮಾರಿಹರು

ಅನ್ಯಾಯದ ಅರ್ಭಟಕೆ
ನ್ಯಾಯವು ನಡುಗಿಹುದು

ಹೊಸದೀ ದಾರಿ
ಹೊಸದೀ ತಿರುವು
ಸತ್ಯದ ಸುಳಿವಿಲ್ಲ

ಮೋಸವು ಮೊಡಕಟ್ಟಿ
ಬೆಂಕಿಯ ಮಳೆಗರೆದಿಹುದು

ಹಸುವಿನ ಮೇವನ್ನೂ
ತಿಂದು ತೇಗಿಹರಿಲ್ಲಿ
ಗೋ ಮುಖ ವ್ಯಾಘ್ರರು

ಜಾತಿಯ ಜಾತ್ರೆಯಲಿ
ನೆತ್ತರಿನ ಓಕುಳಿಯು

ಪಾಪದ ಸೆರೆಯಲ್ಲಿ
ಪುಣ್ಯವು ಸೊರಗಿಹುದು

ಹೊಸದೀ ದಾರಿ
ಹೊಸದೀ ತಿರುವು
ಸತ್ಯದ ಸುಳಿವಿಲ್ಲ

ಹಿಂಸೆಯ ಗರ್ಭದೊಳು
ಸಾವದು ಜನಿಸಿಹುದು

ಮೂರೂ ಬಿಟ್ಟವರಿಲ್ಲಿ
ದೇಶವ ಆಳುತ್ತಿರಲು
ಮುಳ್ಳು ಮುಡಿಗೇರಿಹುದು
ನಾಯಿ ನರಿಗಳಾಗಿಹವು

ಕೊಟ್ಟ ಮಾತು ಉಳಿಸಲೆಂದು
ಬಂದಿರಲು ಪುಣ್ಯಕೋಟಿ
ಹೆಬ್ಬುಲಿ ಅದು ಎರಗಿಹುದು
ಬಿಸಿ ರಕ್ತವ ಹೀರಿಹುದು

ನ್ಯಾಯದ ಬೆನ್ನಲ್ಲಿ
ಅನ್ಯಾಯದ ಚೂರಿ

ತತ್ವದ ಬಾಯಲ್ಲಿ
ಹಿಡಿ ಅಕ್ಕಿಯ ಕಾಳು

ಸುಳ್ಳಿನ ಚಟ್ಟದಿ
ಸತ್ಯದ ಮೆರವಣಿಗೆ

ಅಜ್ಞ್ಯಾನದ ಗಾಳಿಗೆ ಸಿಕ್ಕಿ
ಜ್ಞ್ಯಾನದ ಜ್ಯೋತಿಯು ನಂದಿಹುದು

ದ್ವೇಷದ ಪೀತೂರಿಗೆ
ಪ್ರೀತಿಯ ಬಳಗ ಒಡೆದಿಹುದು

ಹೊಸದೀ ದಾರಿ
ಹೊಸದೀ ತಿರುವು
ಸತ್ಯವು ಇನ್ನೆಲ್ಲಿ?

Rating
No votes yet