ಸ್ಕಂದ ಗಿರಿಯಲ್ಲಿ ಹುಣ್ಣಿಮೆ ರಾತ್ರಿಯ ಚಾರಣ

ಸ್ಕಂದ ಗಿರಿಯಲ್ಲಿ ಹುಣ್ಣಿಮೆ ರಾತ್ರಿಯ ಚಾರಣ

ಬರಹ

ಮೊನ್ನೆ ನಮ್ಮೂರು ಹಾಸನಕ್ಕೆ ಹೋಗಿದ್ದೆ, ಅಬ್ಬಾ ಚಳಿ ಚಳಿ, ತಂಪು ತಂಪು ಕೂಲ್ ಕೂಲ್ , ಅದಕ್ಕೆ ಅಲ್ವಾ ಇದನ್ನು 'ಬಡವರ ಊಟಿ' ಅನ್ನೋದು.
ಹಾಂ! ಕೆಲದಿನ ಹಿಂದೆ ಬೆಂಗಳೂರಿನ ವಾತವರಣ ಹಠಾತ್ ಬದಲಾಗಿತ್ತಲ್ಲಾ, ಯಾಕೆ ಅಂದ್ರೆ 'ನಿಶಾ' ಎಫ್ಫೆಕ್ಟು, ಆದ್ರು 'ನಿಶಾ' ಏರಿಸಿದ 'ನಷೆ' ಸಕ್ಕತ್ತ್ :)

ಈ ವಾತವರಣ ನೋಡ್ತಾ ನನಗೆ ನೆನಪಾಗಿದ್ದು 'ಸ್ಕಂದ ಗಿರಿ'. ಅಲ್ಲಿಗೆ ನಾನು ಹೋಗಿ ಬಂದು ಇವತ್ತಿಗೆ ಹತ್ತಿರ ಹತ್ತಿರ ಒಂದು ತಿಂಗಳಾಗಿದೆ, ಅದರ ಬಗ್ಗೆ ಬರೆಯಬೇಕು ಅಂತ ಅನ್ಕೊಂಡು ಅನ್ಕೊಂಡು ಸುಮ್ಮನಿದ್ದೆ , ಆದರೆ ಇವತ್ತು ಬರೆಯೋ ಮನಸಾಗಿದೆ.

ಅಲ್ಲಿಗೆ ಹೋಗೋ ಪ್ಲಾನ್ ಮಾಡಿದ್ದು ೧ ವರ್ಷದ ಹಿಂದೆ , ಹೋಗಿದ್ದು ಮಾತ್ರ ಹೋದ ತಿಂಗಳು ನಮ್ಮ ಪ್ಲಾನಿಂಗ್ ಹಾಗೆ ಇರುತ್ತೆ :) . ಅಂದು ಗೆಳತಿ ಅಕ್ಕಮ್ಮ ಕಳಿಸಿದ ಮಿಂಚೆ ನೋಡಿ ತಕ್ಷಣ ಇಲ್ಲಿಗೆ ಹೋಗಲೇ ಬೇಕು ಅಂತ ನಿರ್ಧರಿಸಿ ಬಿಟ್ಟೆ, ವಿಷಯವನ್ನು ನನ್ನ ರೂಮ್ಮೆಟ್ ಶ್ರೀಕಾಂತನಿಗೆ ಹೇಳಿದೆ, ಅವನು ಒಪ್ಪಿದ , ನಂತರ ಉಳಿದ ಗೆಳೆಯರಿಗೆಲ್ಲ ಕೇಳಿದ್ದಾಯ್ತು, ಬರಲು ಒಪ್ಪಿದವರು ೮ ಜನ ಆದರೆ ಕಡೆಗೆ ಹೊರತು ನಿಂತಿದ್ದು ೪ ಜನ . ನಾನು ,ಶ್ರೀಕಾಂತ ,ರಿತೇಶ ಹಾಗು ಧರ್ಮೇಶ.

ಸರಿ ಹೊರಟಿದ್ದಾಯ್ತು , ಈ ಸ್ಕಂದ ಗಿರಿ ಎಲ್ಲಿದೆ , ಏನು ಕತೆ,ಇಂಟರ್ನೆಟ್ನಲ್ಲಿ ಜಾಲಾಡಿ ಸ್ವಲ್ಪ ಮಾಹಿತಿ ಪಡೆದೆ, ಒಬ್ಬ ಗೈಡ್ನ ನಂಬರ್ ಸಿಕ್ತು. ಅವನಿಗೆ ಫೋನಾಯಿಸಿ ವಿಳಾಸ ತಿಳ್ಕೊಂಡು ಹೊರಡಲು ನಿಶ್ಚಯಿಸಿದೆವು. ಮೊದಲು ಗೈಡ್ನ ಜೊತೆ ಹೋಗೋಣ ಅಂದ ಗೆಳೆಯರೆಲ್ಲ , 'ಲೇ ಅವ್ನ ಜೊತೆ ಹೋದ್ರೆ ಪ್ರೈವಸಿ ಇರಲ್ಲ ಕಣೋ' ಇಂತ ಎಷ್ಟು ಬೆಟ್ಟ ಹತ್ತಿಲ್ಲ , ನಾವೇ ಹತ್ತೋಣ ಬಿಡೋ' ಅಂದ್ರು. ನಾನು ಓಕೆ ಅಂತ ತಲೆ ಆಡಿಸಿದೆ. ನಂತರ ಶುರು ನಮ್ಮ ಪಯಣ. ಬೆಂಗಳೂರು ಬಿಟ್ಟಿದ್ದು ೧೦ ಗಂಟೆಗೆ. ಹೆಬ್ಬಾಳದ ಮೂಲಕ ಚಿಕ್ಕಬಳ್ಳಾಪುರದ ಕಡೆಗೆ ೨ ಬೈಕ್ನಲ್ಲಿ ಹೊರಟೆವು. ಮಾರ್ಗ ಮದ್ಯೆ ಚಾ ಕುಡಿಯಲು ಒಂದು ಹೋಟೆಲ್ ಬಳಿ ನಿಂತು ಸಮಯ ನೋಡಿದರೆ ೧೨.೩೦ ದಾಟಿತ್ತು. ಚಹಾ ಸೇವಿಸಿ ಹೊರಟು ಮುಂದೆ ದಾರಿಯಲ್ಲಿ ಸಿಕ್ಕವರ ಬಳಿ ಇನ್ನೊಮ್ಮೆ ವಿಳಾಸ ಕೇಳಿಕೊಂಡೆವು.
ಚಿಕ್ಕಬಳ್ಳಾಪುರ ತಲುಪಿದ ಕೂಡಲೇ 'ಒಕ್ಕಲಿಗರ ಭವನ' ಸಿಗುತ್ತೆ , ಅಲ್ಲಿ ಎಡಕ್ಕೆ ತಿರುಗಿ ಒಂದೇ ರಸ್ತೆಯಲ್ಲಿ ಹೊರಟರೆ ಈ ಸ್ಕಂದ ಗಿರಿ ತಲುಪಬಹುದು, ಅಂತ ಹೇಳಿದವರ ಮಾತು ಕೇಳಿ ಅದೇ ದಾರಿಯಲ್ಲಿ ಹೊರಟೆವು. ಅದು ಹಳ್ಳಿಯ ದಾರಿ, ಸುತ್ತಲು ಕತ್ತಲು ನಾವು ೪ ಜನರನ್ನು ಬಿಟ್ಟರೆ ಇನ್ಯಾರೆಂದರೆ ಯಾರು ಇರಲಿಲ್ಲ , ನಾನು ಕ್ಯಾಮೆರಾ ಹಿಡಿದು ಆ ಕಗ್ಗತ್ತಲಲ್ಲಿ ಫೋಟೋ ಕ್ಲಿಕ್ಕಿಸುತಿದ್ದೆ ಯಾವುದಾದರೂ 'ಮೋಹಿನಿ' ಕ್ಯಾಮೆರಾ ಕಣ್ಣಿಗೆ ಸಿಗಬಹುದು ಅನ್ನೋ ಆಸೆಯಿಂದ (!) :), ಆದರೆ ಸಿಗಲೇ ಇಲ್ಲ. ಹಾಗೆ ಸಾಗುತ್ತ ಸಾಗುತ್ತ ಮುದ್ದೇನಹಳ್ಳಿ ತಲುಪಿದ್ದೆವು, ಅಲ್ಲಿ 'ಮಾಹಿತಿ ಫಲಕ'ವೊಂದಿತ್ತು " ಸರ್.ಎಂ ವಿಶ್ವೇಶ್ವರಯ್ಯನವರ ಸಮಾಧಿ ಸ್ಥಳಕ್ಕೆ ದಾರಿ" ಅಂತ, ಅಂದ ಹಾಗೆ ಇದೆ ಮುದ್ದೇನಹಳ್ಳಿಯಲ್ಲೇ ಭಾರತ ರತ್ನ ಸರ್.ಎಂ ವಿಶ್ವೇಶ್ವರಯ್ಯನವರು ಹುಟ್ಟಿದ್ದು. 'ಬೆಳಿಗ್ಗೆ ಹಿಂತಿರುಗುವಾಗ ಸಮಾಧಿ ಸ್ಥಳ ನೋಡನಾ ಕಣ್ಲಾ' ಅಂತ ಗೆಳೆಯ ಹೇಳಿದ, ಆಯ್ತು ಗುರುವೇ ಅಂದೆ.
ಸರಿ ಅಲ್ಲಿಂದ ಮುಂದೆ ಹಾಗೆ ದಾರಿಯಲ್ಲಿ ಅಜ್ಜ ನಡೆದು ಹೋಗುತಿದ್ದರು, ಅವರ ಬಳಿ 'ಓಂಕಾರ ಆಶ್ರಮ' ಎಲ್ಲಿದೆ ಅಂತ ಕೇಳಿದೆವು (ಅಲ್ಲೇ ತಪ್ಪು ಮಾಡಿದ್ದು, ಬೆಟ್ಟ ಇರುವ ಜಾಗ ಬಿಟ್ಟು, ಬೆಟ್ಟದ ಬಳಿ ಇರುವ ಆಶ್ರಮದ ಬಗ್ಗೆ ಕೇಳಿದ್ದು!), ಅವರು ಹೇಳಿದ ದಾರಿಯಲ್ಲೇ ಮುಂದೆ ಸಾಗುತಿದ್ದ ಹಾಗೆ ಒಂದು ಪುರಾತನ ಕಾಲದ ದೇವಸ್ಥಾನವನ್ನು ಹೊರಗಿನಿಂದಲೇ ನೋಡಿ ಕೊಂಡು ಮುಂದೆ ಸಾಗುವಷ್ಟರಲ್ಲಿ , ರಸ್ತೆಯ ಎಡಕ್ಕೆ ಒಂದು ಬೋರ್ಡ್ ಇತ್ತು "ನಂದಿ ಬೆಟ್ಟಕ್ಕೆ ಮೆಟ್ಟಿಲು ದಾರಿ", ಅದನ್ನು ನೋಡುತ್ತಲೇ ಸ್ವಲ್ಪ ದೂರದಲ್ಲಿ ರಸ್ತೆಯ ಬಲಕ್ಕೆ "ಓಂಕಾರ ಆಶ್ರಮಕ್ಕೆ" ದಾರಿ ಅಂತ ಒಂದು ಬೋರ್ಡ್ ನೋಡಿದೆವು, ನಮಗೆ ಬೇಕಾಗಿರುವುದು ಇದೆ ಅಲ್ವಾ ಅಂದ ಗೆಳೆಯ , ಹೌದು ಕಣೋ ಅಂದೆ.

"ಇದೇನು ಗುರುವೇ ಮನುಷ್ಯರ ಹೆಜ್ಜೆಯ ಗುರುತೇ ಇಲ್ಲ ಈ ದಾರಿಯಲ್ಲಿ, ಬಹಳ ಜನ ಬರ್ತಾರೆ ಅಂತಿದ್ದೆ, ಎಲ್ಲೋ ಒಂದು ವೆಹಿಕಲ್ ಹೋಗಿರೋ ಲಕ್ಷಣಾನೂ ಇಲ್ಲ " ಅಂದ, "ಹೂ ಗುರು, ಬಾ ಒಂದು ಕೈ ನೋಡೇ ಬಿಡೋಣ" ಅಂತ ಆ ಕಾಡು ರಸ್ತೆಯಲ್ಲೇ ಬೈಕಿನಲ್ಲಿ ಹೊರಟೆವು, ಆಗಷ್ಟೆ ಮಳೆ ಬಂದಿದ್ದರಿಂದ,ರಸ್ತೆ ತೇವವಾಗಿ ಜಾರುತ್ತಿತ್ತು, ಆ ದಾರಿಯಲ್ಲಿ ಸ್ವಲ್ಪ ಮುಂದೆ ಸಾಗಿ ಸುತ್ತ-ಮುತ್ತ ನೋಡುತ್ತೇವೆ, ಒಂದು ನರ ಪಿಳ್ಳೆ ಬೇಡ, ಒಂದು ಚಿಕ್ಕ ಬೆಳಕಿನ ಕಿಂಡಿಯೂ ಕಾಣಲಿಲ್ಲ,

ಲೇ ಯಾಕೋ ಈ ದಾರಿ ಅಲ್ಲ ಅನ್ನಿಸುತ್ತೆ, ಬನ್ನಿ ಊರಲ್ಲಿ ಯಾರಾದ್ರೂ ಇದ್ರೆ ಕೇಳೋಣ ಅಂತಾ ಹೊರಟೆವು, 'ಚೊಂಬು' ಹಿಡಿದು ಹೊರಟವನೋಬ್ಬನ ಹತ್ತಿರ ಬೈಕ್ ನಿಲ್ಲಿಸುತಿದ್ದ ಹಾಗೆ ಗಾಬರಿ ಬಿದ್ದ ಪುಣ್ಯಾತ್ಮ, ನಾವು ಕೇಳಿದ್ದಕ್ಕೆಲ್ಲ ಗೊತ್ತಿಲ್ಲ ಅನ್ನೋದಾ!,ಸರಿ ಮತ್ತೆ ಅದೇ ಜಾಗಕ್ಕೆ ವಾಪಸ್ ಬಂದು , "ಲೇ ಈ ಸರಿ ನೋಡೇ ಬಿಡೋಣ ಬನ್ರಲೇ, ಅದೆನೈಯ್ತೆ ಇಲ್ಲಿ" ಅಂತಾ ಹೊರಟೆವು, ಆ ದಾರಿಯ ತುದಿಗೆ ಬಂದರೆ, ರಸ್ತೆಯ ಡೆಡ್ ಎಂಡ್ ಅದು!. ಎದುರಿಗೊಂದು ಚಿಕ್ಕ ಬೆಟ್ಟ , ಸುತ್ತ ಕಾಡು , ಯಾವುದೋ ಪುರಾತನ ಕಾಲದ ಪಲೆಯುಳಿಕೆಯಂತಹ ಒಂದು ಕೊಳ ಕಾಣಿಸಿತು, ಕೈಯಲ್ಲಿ ಟಾರ್ಚ್ ಹಿಡಿದು ಅತ್ತ ಇತ್ತ ನೋಡಿ, "ಮಗ, ಜಾಗ ನೋಡಿದ್ರೆ ಎಲ್ಲೋ ಮಿಸ್ ಹೊಡಿತ ಇದೆ ಅನ್ನಿಸುತ್ತೆ, ನಡಿರಪ್ಪ ಜಾಗ ಖಾಲಿ ಮಾಡೋಣ" ಅಂತ ಹೊರಟೆವು , ಆದರೆ ಆ ಗಾಬರಿಯಲ್ಲೂ ಒಂದೆರಡು ಫೋಟೋ ಕ್ಲಿಕ್ಕಿಸಿಕೊಂಡೆವು.
ನಂತರ ಅಲ್ಲಿಂದ ಮುಖ್ಯ ರಸ್ತೆಗೆ ಬಂದು "ನಂದಿ ಬೆಟ್ಟಕ್ಕೆ ಮೆಟ್ಟಿಲು ದಾರಿ" ಅಂತಾ ಇತ್ತಲ್ಲ ಆ ರಸ್ತೆಯಲ್ಲಿ ಹೊರಟೆವು, ಅದೋ ಕಲ್ಲು ಚಪ್ಪಡಿಯ ದಾರಿ, ಸ್ವಲ್ಪ ದೂರ ಹೋದರೆ ದಾರಿಯೇ ಇಲ್ಲ! ದಾರಿಯ ಕೊನೆಯಲ್ಲಿ ನೋಡಿದರೆ ಒಂದು ದೊಡ್ಡ ಭೂತ ಬಂಗಲೆ ಕಾಣುತಿತ್ತು, ಇದರ ಸಹವಾಸವೇ ಬೇಡ ಅಂತಾ ನಾವು ಊರ ಕಡೆಗೆ ಹೊರಟೆವು, ಅಷ್ಟರಲ್ಲಿ ಸಾಕಷ್ಟು ತಿರುಗಿ ಸುಸ್ತಾಗಿತ್ತು. ದೂರದಲ್ಲಿ ಒಂದು ಬಸ್ ನಿಂತಿತ್ತು, ಬಸ್ಸಿನ ಕ್ಲೀನರ್ ಬಳಿ ಹೋಗಿ 'ಕಲವರ ಹಳ್ಳಿ ಬೆಟ್ಟ' ಎಲ್ಲಿದೆ ಗೊತ್ತಾ? ಅಂದ್ರೆ, ಇಲ್ಲಿ ಆ ತರ ಯಾವ್ದು ಬೆಟ್ಟಾನೆ ಇಲ್ಲಾರೀ ಅನ್ನೋದಾ, ಉಳಿದವೆರೆಲ್ಲ ನನ್ನೇ ತಿನ್ನುವ ಹಾಗೆ ನೋಡಿದರು (ಯಾಕೆಂದ್ರೆ ಅಲ್ಲಿಯವರೆಗೆ ಅಡ್ರೆಸ್ ನಂಗೊತ್ತು ಬನ್ರೋ ಅಂತಾ ಕರ್ಕೊಂಡು ಹೋಗಿದ್ದು ನಾನೇ :) ).

ನಾನು 'ಲೇ ಅವ್ನಿಗೆ ಗೊತ್ತ್ರ್ಲಿಕಿಲ್ಲ ಬಿಡೋ, ಆ ಗೈಡ್ಗೆ ಕಾಲ್ ಮಾಡಿ ಕೇಳೋಣ' ಅಂದೆ,ಎಲ್ಲರೂ ಒಪ್ಪಿದರು. ಸರಿ ಅವ್ರಿಗೆ ಕಾಲ್ ಮಾಡಿ ಸರ್ ಹೀಗೆ ಇಲ್ಲಿ ಎಲ್ಲೋ ದಾರಿ ತಪ್ಪಿಸಿಕೊಂಡಿದ್ದೇವೆ ಅಂದ್ರೆ , ಆ ಪುಣ್ಯಾತ್ಮ ಸರ್ 'ತೀರ್ನಳ್ಳಿ ' ತಕೆ ಬಂದ್ಬುಡಿ ಅಲ್ಲಿಂದ ನಾ ಕರ್ಕೊಂಡು ಒಯ್ತೀನಿ ಅಂದಾ, ಅದೆಲ್ರಿ ಇದೆ ಅಂದ್ರೆ ಅವನದೇ ಶೈಲಿಲಿ ದಾರಿ ಹೇಳ್ದ , ಅವ್ನು ಅದೇನು ಹೇಳಿದನೋ , ನಾವು ಏನು ಕೇಳಿಸಿಕೊಂಡೆವೋ, ಮತ್ತೆ ಸುತ್ತಾಡಿ ಸುತ್ತಾಡಿ ನಾವೇ ಹೇಗೋ 'ಸ್ಕಂದ ಗಿರಿ'ಯ ಬಳಿ ತಲುಪಿದಾಗ ಸಮಯ ಮಧ್ಯರಾತ್ರಿಯ ೧.೪೫ ಆಗಿತ್ತು. ಸರಿ ಅಲ್ಲಿ ಈ ನಮ್ಮ ಗೈಡ್ 'ವೀರಪ್ಪ' ಕಾಯ್ತಾ ನಿಂತಿದ್ರು. ಹಾಗೆ ಅಲ್ಲಿ ಇನ್ನೊಂದು ಹುಡುಗರ ಗುಂಪು ಇತ್ತು.

"ಸಾಮಿ,ಸರಿಯಾದ ಟೇಮ್ಗೆ ಬಂದ್ರಿ, ನಡೀರಿ ಬೆಟ್ಟ ಹತ್ತನಾ, ಯಾವ್ ದಾರೀಲಿ ಹೋಗನ? ನೋಡಿ, ಇಲ್ಲಿ ಕಾಣ್ತದಲ್ಲ ಈ ದಾರಿ ಹತ್ರ, ಆದ್ರೆ ವೊಸಿ ಕಷ್ಟ ಐತೆ" ಅಂದ್ರು, ನಾನು ಮತ್ತೆ ಬರ್ತಿವೋ ಇಲ್ವೋ ಗೊತ್ತಿಲ್ಲ , ಮರೆಯೋಕೆ ಆಗ್ಲೇ ಬಾರದು ಅಂದ್ರೆ ಕಷ್ಟ ಇರೋ ದಾರಿನೇ ಇರ್ಲಿ ಅಂದೆ. ಸರಿ ಬೆಟ್ಟ ಹತ್ತಲು ಶುರುವಿಟ್ಟು ಕೊಂಡಾಗ ಸಮಯ ೨.೦೦ ಗಂಟೆ.

ಹೊಲದ ನಡುವೆ ಹೊರಟು ಬೆಟ್ಟದ ಬಳಿ ಸಾಗಿದೆವು, ಅಲ್ಲಿಂದ ಶುರುವಾಯಿತು ನಮ್ಮ 'ಹುಣ್ಣಿಮೆ ರಾತ್ರಿಯ' ಚಾರಣ. ಸ್ವಲ್ಪ ದೂರ ಹೋಗುತ್ತಲೇ ಕ್ಯಾಮೆರಾ ಕ್ಲಿಕ್ಕಿಸಲು ಶುರು ಮಾಡಿದೆವು, ನಡುವೆ ವೀರಪ್ಪ ಬಂದು 'ಸಾಮಿ ಇನ್ನು ಮುಂದೆ ವೋಗನ ಆಮೇಲೆ ಫೋಟೋ ತೆಕ್ಕಲಿ' ಅಂದ್ರು, ಆಯ್ತು ಅಂತಾ ನಡೆಯುತ್ತಾ ಹೋದಂತೆ ಬೆಟ್ಟ ಇನ್ನು ಬೆಳೆಯುತ್ತಲೇ ಇದೆಯಾ! ಅಂತ ಅನುಮಾನ ಬರಲಾರಂಬಿಸಿತು. ಕಡಿದಾದ ದಾರಿ, ಜಾರುವ ಕಲ್ಲುಗಳು, ಅದೆಲ್ಲ ಸಾಲದೆಂಬಂತೆ ಆ ಕಲ್ಲುಗಳ ಮೇಲೆ ನೀರು ಹರಿಯುತಿತ್ತು, ಸ್ವಲ್ಪ ಪಾಚಿ ಕಟ್ಟಿತ್ತು. ಹಾಂ! ಇನ್ನೊಂದು ವಿಷಯವಿತ್ತು , ನನ್ನ ಸ್ನೇಹಿತರೆಲ್ಲ ಪ್ರಖ್ಯಾತ ಕಂಪೆನಿಗಳ ಶೂ ಧರಿಸಿದ್ದರು , ಆದರೆ ನಾನು ಹೀಗೆ ಪಕ್ಕ ದೇಸಿ ಶೂ ಧರಿಸಿದ್ದೆ, ಪಾಪ ಅವರ ಪಾಡು ಬೇಡ, ಅವರ ಶೂಗಳೂ ಜಾರುತ್ತಲೇ ಇದ್ದವು.ಅವರೆಲ್ಲ ಅಂಬೆಗಾಲಿಡುತ್ತ ಹತ್ತಲು ಶುರು ಹಚ್ಚಿಕೊಂಡರು, 'ಲೇ ರಾಕಿ ನಿನ್ನ ಶೂ ಆಗಬಹುದು ಬಿಡು' ಅಂದ್ರು, ಸ್ವಲ್ಪ ದೂರ ಸಾಗಿದ ನಂತರ ಮೈ ಬೆಚ್ಚಗೆ ಮಾಡಿಕೊಳ್ಳಲು ಕೊಂಡು ಹೋಗಿದ್ದೆವಲ್ಲ ಆ ಪಾನೀಯಗಳನ್ನು ತೆಗೆದು ಕುಡಿಯುತ್ತ ಹೊರಟೆವು.

ನಮಗೇ ಹತ್ತಲು ಆಗುತ್ತಿಲ್ಲ , ಜೊತೆಗೆ ಮಣ ಭಾರದ ಬ್ಯಾಗ್ ಹಾಗು ಜಾಕೆಟ್ ಬೇರೆ ಅಂತ ಲೋಚಗುಟ್ಟುತ್ತಲೇ ಮುಂದಡಿಯಿಟ್ಟೆವು, ಸಮಯ ೩.೩೦ - ೪.೦೦ ಇರಬಹುದು ಅಷ್ಟರಲ್ಲಿ ಮಂಜು ಎಷ್ಟು ದಟ್ಟವಾಗಿ ಕವಿದಿತ್ತು ಅಂದರೆ ನಮ್ಮಿಂದ ಕೆಲವೇ ಮೀಟರ್ ದೂರದಲ್ಲಿ ನಿಂತವರೇ ಕಾಣುತ್ತಿರಲಿಲ್ಲ. ಜೊತೆಗೆ ಬಂದ ವೀರಪ್ಪನವರ ಜೊತೆ ಮಾತನಾಡುತ್ತಾ,

"ವೀರಪ್ನೋರೆ , ಜನ ಬರ್ತಿರ್ತರಾ ಇಲ್ಲಿ , ಹೆಂಗೆ ಕಲ್ಲೆಕ್ಶನ್" ಅಂದ್ರೆ
" ಹಿಂಗೆ ಸಾಮಿ ನಿಮ್ತರ ಹುಡಗರು ಬತ್ತಾರೆ ಶನಿವಾರ ಜಾಸ್ತಿ. ಹುಡ್ಗೀರು ಬತ್ತಾರೆ ಆದ್ರೆ ಭಾಳ ಕಮ್ಮಿ, ಕೆಲವರು ಬರ್ಬೇಕ್ಲಿದ್ರೆ ಟೆಂಟ್ ಎಲ್ಲ ತರ್ತಾರೆ, ತುದಿಯಲ್ಲಿ ಟೆಂಟ್ ಆಕ್ಕೊಂಡು ಅವರವರ ಪಾಡು ಅವ್ರಿಗೆ' ಅಂದ್ರು.

"ಅದ್ಸರಿ ನೀವು ಫುಡ್ ವ್ಯವಸ್ಥೆ ಮಾಡೋಲ್ವಾ?"
"ಮಾಡ್ತಿವಿ, ನೀವ್ ಮೊದ್ಲೇ ಹೇಳಿದ್ರೆ ಮಾಡ್ತಿದ್ದೆ"
"ಇಲ್ಲಿ ಕಾಡು ಕೋಳಿ ಸಿಗುತ್ತಾ" ಅಂದಾ ಗೆಳೆಯ " ಹೂ ಸಾರ್, ಮುಂದಿನ ಸಾರಿ ಮೊದ್ಲೇ ಹೇಳಿ , ಕಾಡು ಕೋಳಿ ಬಿರಿಯಾನಿ ಮಾಡ್ತೀನಿ" . ಮದ್ಯೆ ನಾನು ಬಾಯಿ ಹಾಕಿ "ಕಾಡು ಹಂದಿ ಸಿಗುತ್ತಾ" ಅಂದೆ,ಸಿಗ್ತದೆ ಅಂದ್ರು, ನಂಗೆ 'ಗಾಳಿಪಟ' ಚಿತ್ರ ನೆನಪಾಯ್ತು , 'ಅದರ ಬಾಲ ನಂಗೆ ಬೇಕು' ಅಂದೆ, ಗೆಳೆಯ 'ಲೇ ಜಾಸ್ತಿ ಪಿಚ್ಚರ್ ನೋಡ್ಬೇಡಾ ಅಂದ್ರೆ ಕೇಳಲ್ಲ , ಈಗ ಫಿಲ್ಮ್ ಡೈಲಾಗ್ ಹೊಡಿತಿಯಾ' ಅಂದ.
ಬೆಟ್ಟ ೭೦% ಹತ್ತುವಷ್ಟರಲ್ಲಿ ಎಲ್ಲ ಸುಸ್ತೋ ಸುಸ್ತೂ ಹೊಡೆದಿದ್ವಿ. ಎಲ್ಲರ ಬಾಯಲ್ಲೂ ಒಂದೇ ಮಾತು ಇದೆಲ್ಲಾ ಬೇಕಿತ್ತಾ? ಅಂತ. ಅಂತೂ ಇಂತೂ ತೂರಾಡಿಕೊಂಡು ಬೆಟ್ಟದ ತುದಿ ತಲುಪಿದಾಗ ಸಮಯ ಬೆಳಗ್ಗಿನ ೪.೧೫ ಗಂಟೆ ಆಗಿತ್ತು.
ಅಬ್ಬಾ! ಚಳಿ ಅಂದ್ರೆ ಚಳಿ. ಹಾಕಿರೋ ದಪ್ಪನೆಯ ಜಾಕೆಟ್ಗೆ ಒಂದು ಸ್ವಲ್ಪಾನೂ ಮರ್ಯಾದೆ ಕೊಡದೆ ನುಗ್ಗಿ ಬರುತಿದ್ದ ಚಳಿಗೆ ನಾವು ಪಟ್ಟ ಪಾಡು ಆ ದೇವರಿಗೆ ಪ್ರೀತಿ :) , ನನ್ನ ಬ್ಯಾಗ್ನಲ್ಲಿ ಸ್ವಲ್ಪ ನ್ಯೂಸ್ ಪೇಪರ್ ಇತ್ತು , ಸರಿ ಅದರಿಂದ ಸ್ವಲ್ಪ ಚಳಿ ಕಾಯಿಸೋಣ ಅಂತ ಲೈಟರ್ ತೆಗೆದರೆ, ಅದೂ ಕೂಡ ಕೈ ಕೊಟ್ಟಿತು, ಬೆಂಕಿ ಪೊಟ್ಟಣ ಉಪಯೋಗಿಸಿದರೆ ಬೀಸುತಿದ್ದ ಗಾಳಿಗೆ ಅದೂ ಕೈ ಕೊಟ್ಟಿತು,
ಇದ್ದುದ್ದರಲ್ಲಿ ಮೈ ಬಿಸಿ ಮಾಡಿದ್ದು , ನನ್ನ ಬಳಿ ಉಳಿದಿದ್ದ ಪಾನೀಯ ಹಾಗೂ ಬೆಟ್ಟದ ತುದಿಯಲ್ಲಿ ಸಿಗುವ 'ಆಮ್ಲೆಟ್ ಹಾಗು ಟೀ'. ಬೆಟ್ಟದ ತುದಿಯಲ್ಲಿ ನಮ್ಮ ಗೈಡ್ 'ವೀರಪ್ಪ' ನವರ ಚಿಕ್ಕ ಗೂಡಂಗಡಿಯಿದೆ. ಹಾಗೂ ಹೀಗೂ ಮಾಡಿ ಚಳಿಗೆ ಮರಗಟ್ಟಿ ಸಮಯ ದೂಡುತಿದ್ದೆವು, ಗೆಳೆಯರು ಸಿಗರೇಟ್ ಹೊಗೆಯಾಡಿಸುತ್ತ, ತಗೊಮ್ಮ ಸ್ವಲ್ಪ ಮೈ ಬಿಸಿಯಾಗುತ್ತೆ ಅಂದ್ರು, ನಾನೂ ಬೇಡ ಗುರು ನನಗೆ ಈ ಪಾನಿಯವೇ ಸಾಕು, ನೀವು ಹೋಗೆ ಬಿಡಿ ಅಂದೆ ;)
ಸಮಯ ಮುಂಜಾವಿನ ೫.೪೫ ಆಗುತ್ತಾ ಬಂದಂತೆ, ಬಂದ ಚಾರಣಿಗರೆಲ್ಲರೂ 'ಸೂರ್ಯೋದಯ'ವನ್ನು ನೋಡಲು ಆಯಕಟ್ಟಿನ ಜಾಗ ನೋಡಿ ಅಲ್ಲಿ ಸೇರಲು ಶುರು ಮಾಡಿದರು, ನಾನು ಎತ್ತರದಲ್ಲಿದ್ದ ಒಂದು ಬಂಡೆಯ ಮೇಲೇರಿ ಗೆಳೆಯರನ್ನು ಅಲ್ಲಿಗೆ ಕರೆದೆ, ನಂತರ ಎಲ್ಲರೂ ಪೂರ್ವದ ಕಡೆ ಮುಖ ಮಾಡಿ ಕುಳಿತೆವು, ಕೊಂಡು ಹೋಗಿದ್ದ ಕೇಕ್,ಚಾಕಲೇಟ್ ಗಳನ್ನೂ ಮೆಲ್ಲುತ್ತ , ಸೂರ್ಯನ ಆಗಮನಕ್ಕೆ ಎದಿರು ನೋಡುತ್ತಾ ಕ್ಯಾಮೆರಾವನ್ನು ಸಜ್ಜಾಗಿರಿಸಿ ಕೊಂಡು ಕಾಯುತ್ತ ಕುಳಿತೆವು.ಆ ಮುಂಜಾವಿನಲ್ಲೂ ಮಲಯಾಳಿ ಸದ್ದು ಮಾಡುತಿತ್ತು ಅಲ್ಲಿ. ಹೌದು, ಅದೆಲ್ಲಿಂದ ಅಷ್ಟು ಕೇರಳಿಗರು ಬಂದಿದ್ದರೋ, ಗೆಳೆಯನಿಗೆ ಹೇಳಿದೆ 'ಗುರುವೇ ಎಲ್ಲಿ ಹೋದ್ರೂ ಅಲ್ಲೆಲ್ಲಾ ಬರ್ತಾರಲ್ಲೋ, ಸ್ವಲ್ಪ ದಿನ ಹೋದ್ರೆ ಇಲ್ಲೊಬ್ಬ ಮಲಯಾಳಿ ಬಂದು 'ಟೀ' ಅಂಗಡಿ ತೆಗಿಬಹುದು :) '

ಸಮಯ ೬.೨೦ -೬.೩೦ ಇರಬಹುದು , ಸೂರ್ಯೋದಯವಾಯ್ತು. " ವಾವ್! ಸಕತ್ ಲೇ , ಸೂಪರ್ರ್ರ್" ಹೀಗೆ ಉದ್ಗಾರಗಳು ಕೇಳುತ್ತಲೇ ಇದ್ದವು. ಸೂರ್ಯನ ನೋಡಿದ ಕೂಡಲೇ ಆಗುತಿದ್ದ ಚಳಿ ಮಾಯ! ಎಲ್ಲರೂ ಮಕ್ಕಳಂತೆ ಕೇಕೆ ಹಾಕಲು ಶುರು ಮಾಡಿದೆವು. ಕ್ಯಾಮರಾಗಳು ಕ್ಲಿಕ್ಕಿಸಲು ಆರಂಭಿಸಿದವು.
ಆಗ ನೆನಪಿಗೆ ಬಂದ ಹಾಡು "ಇಬ್ಬನಿ ತಬ್ಬಿದ ಇಳೆಯಲಿ ರವಿ ತೇಜ ಕಣ್ಣ ತೆರೆದು , ಬಾನ ಕೋಟಿ ಕಿರಣ ಇಳಿದು ಬಂತು ಭೂಮಿಗೆ' ಅದನ್ನೇ ಗುನುಗುನಿಸುತಿದ್ದೆ, ಆದರೆ ರವಿ ಮಾಮ ಬಂದಷ್ಟೇ ಅವಸರದಲ್ಲಿ ಹೋಗೆ ಬಿಡೋದಾ!!
ಏನ್ ಗುರು ರವಿ ಮಾಮ ಮಾಯ ಆದ್ರು ನಡೀರಿ, ಬೆಟ್ಟನ ಒಂದು ರೌಂಡ್ ಹಾಕೋಣ ಅಂತ ಹೊರಟೆವು, ಸ್ವಲ್ಪ ದೂರ ನೋಡುವಷ್ಟರಲ್ಲಿ ಗೆಳೆಯರಾದ ಧರ್ಮ ಹಾಗೂ ರಿತೇಶ್ ನಡಿರೋ ಹೋಗೋಣ ಅಂತ ಶುರುವಿಟ್ಟು ಕೊಂಡರು, ಸರಿ ನಡಿರಪ್ಪ ಅಂತ ೭.೩೦-೮.೦೦ ಗಂಟೆಗೆ ಇಳಿಯಲು ಶುರು ಮಾಡಿದೆವು. ಇಳಿಯುವಾಗ ನಮ್ಮನ್ನು ಮೇಲೆ ಕರೆದುಕೊಂಡು ಬಂದು ಬಿಡುವಾಗ ಗೈಡ್ 'ವೀರಪ್ಪ' ತೋರಿಸಿದ ದಾರಿಯಲ್ಲೇ ಹೋಗೋಣ ಎಂದು ತೀರ್ಮಾನಿಸಿ ದಾರಿ ಹಿಡಿದು ಹೊರಟೆವು , ಆ ದಾರಿನೋ ಮುಂಜಾನೆಯ ಮಂಜು ಮತ್ತೆ ಪಾಚಿ ಸೇರಿ ಫುಲ್ ಜಾರ್ತ ಇತ್ತು.
"ಸ್ವಲ್ಪ ಯಾಮರಿದರು ಹೋಗೋದು ಕೆಳಗಲ್ಲ, ಮೇಲೆ ಕಣ್ರೋ , ಹುಶಾರು " ಅಂತಾ ನಮಗೆ ನಾವೇ ಹೇಳ್ಕೊಂಡು ಎಚ್ಚರಿಕೆಯಿಂದ ಹೆಜ್ಜೆಯಿಟ್ಟರು ಮಧ್ಯೆ ಮಧ್ಯೆ ಜಾರುತ್ತಾ , ಅಂಬೆಗಾಲಿಡುತ್ತ ಬರುವುದು ಸಾಮಾನ್ಯವಾಗಿತ್ತು. ಸ್ವಲ್ಪ ದೂರ ಬಂದು ಒಂದು ಬಂಡೆಯ ಮೇಲೆ ಮಲಗಿದೆವು.
ನಂತರ ಎದ್ದು ಹೊರಡುವಾಗ ನಾನು ಸ್ವಲ್ಪ ಮೂಂಚೂಣಿಯಾಗಿ ಹೋಗುತಿದ್ದೆ, ಕಾರಣ ಲೈಟ್ ಆಗಿ ಕೋಪ ಬಂದಿತ್ತು :) , ಇನ್ನು ಸ್ವಲ್ಪ ಹೊತ್ತು ಬೆಟ್ಟದ ತುದಿಯಲ್ಲಿ ಇರೋಣ ಅಂದ್ರೆ ಬೇಡ ಬೇಡ ಇನ್ನೊಮ್ಮೆ ಬರೋಣ ಅಂತಾ ಕೆಳಗೆ ಇಳಿಯುವಂತೆ ಮಾಡಿದ್ರಲ್ಲ ಅಂತ. ಸರಿ ಮುಂದೆ ಹೊರಟವನಿಗೆ ಪಾಚಿ ಕಟ್ಟಿದ ಕಲ್ಲಿನ ದಾರಿ ಕಾಣಿಸಿತು , ನಾನೋ ಆ ದಾರಿ ಬೇಡ ಎಂದು ಸ್ವಲ್ಪ ಪಕ್ಕದಲ್ಲೇ ಇಳಿಮುಖವಾಗಿದ್ದ ಕಲ್ಲು ಬಂಡೆಯ ಕಡೆ ಇಳಿದೆ ನೋಡಿ, ಅದರ ಇಳಿ ಜಾರಿಗೆ ನನಗೆ ಗೊತ್ತಿಲ್ಲದಂತೆ ಓಡಲು ಶುರುವಿಟ್ಟುಕೊಂಡೆ, ಓಡ್ತಾ ಓಡ್ತಾ ,ಆ ದಾರಿಯ ತುದಿಗೆ ಬಂದಿದ್ದೆ , ಆದರೆ ನಿಲ್ಲಲು ಸಾಧ್ಯವೇ ಆಗುತ್ತಿಲ್ಲ , ಕಣ್ಣೆದುರಿಗೆ ಪ್ರಪಾತ, ಅಯ್ಯೋ ದೇವ್ರೇ ನನ್ನ ಕತೆ ಮುಗಿತಾ ಅನ್ಕೊಂಡೆ. ಅಷ್ಟರಲ್ಲಿ,ನಮಗಿಂತ ಕೆಳಗೆ ಇಳಿಯುತಿದ್ದ ಇನ್ನೊಂದು ಗುಂಪಿನಲ್ಲಿದ್ದ ಪುಣ್ಯಾತ್ಮ ಕೈ ಕೊಟ್ಟು ಹಿಡಿದು ನಿಲ್ಲಿಸಿದ. ಅಬ್ಬಾ! ಹೋದ ಜೀವ ಬಂದಂತಾಯ್ತು ನನಗೆ.

ಆ ಗುಂಪಿನವ ಒಬ್ಬ ಹೇಳಿದ "ಅಲ್ಲ ಗುರು , ಜಾಗಿಂಗ್ ಮಾಡೋಕೆ ಬೆಂಗಳೂರಲ್ಲಿ ಪಾರ್ಕಿಗೆ ಏನ್ ಬರನ, ನೀನು ಇಲ್ಲಿ ಬಂದು ಮಾಡೋದಾ? "
ನಾ ಹೇಳ್ದೆ , "ಜಾಗಿಂಗ್ ಅಲ್ಲ ರನ್ನಿಂಗ್ ರೇಸ್ ಪ್ರಾಕ್ಟಿಸ್ ಮಾಡ್ತಿದ್ದೆ, ಆದ್ರೆ ಮಧ್ಯದಲ್ಲಿ ಟ್ರ್ಯಾಕ್ ತಪ್ಪೋಯ್ತು :)"
ಅಷ್ಟರಲ್ಲಿ ಗೆಳೆಯರು ಬಂದರು, ಬಂದವರೇ ಕಿಚಾಯಿಸಲು "ಮಗನೆ, ನನ್ನ ಸಾವಿಗೆ ನಾನೇ ಕಾರಣ ಅಂತ ಒಂದು ಪತ್ರ ಬರೆದು ಕೈಗೆ ಕೊಡು , ಅಲ್ಲಲೇ ನಿಂಗೆ ಏನಾದ್ರೂ ಆದ್ರೆ ಸುಮ್ನೆ ನಾವೆಲ್ಲ ಒಳಗೆ ಹೋಗಬೇಕಾಗುತ್ತೆ" . ಆಯ್ತು ಆಯ್ತು ಬನ್ರಪ್ಪ ಅಂತಾ ಮತ್ತೆ ಹೊರಟೆವು. ಈ ಬಾರಿ ಇದ್ದ ದಾರಿಯಲ್ಲೇ ಹೋಗೋಣ , ಹೊಸ ದಾರಿ ಹುಡುಕುವ ಉಸಾಬರಿ ಬೇಡ ಅಂತ ಇದ್ದ ದಾರಿಯಲ್ಲೇ ಹೊರಟೆ. ಬೆಟ್ಟದ ೮೫-೯೦% ದಾರಿ ಮುಗಿದಿತ್ತು , ನಮ್ಮ ದಾರಿಯು ತಪ್ಪಿತ್ತು!.

ನಾವೇ ದಾರಿ ತಪ್ಪಿಸಿಕೊಂಡಿರುವಾಗ, ನಮ್ಮ ಹಿಂದಿನಿಂದ ಬಂದ ಮಲಯಾಳಿಗಳ ಗುಂಪು ನಮ್ಮ ಹಿಂದೆಯೇ ಬರೋದಾ!ಅಷ್ಟರಲ್ಲಿ ಈ "ದಾರಿ ತಪ್ಪಿದ ಮಕ್ಕಳಿಗೆ" :) , ದಾರಿ ತೋರಿಸಿದ್ದು , ದನ ಕಾಯುತಿದ್ದ ಹುಡುಗ.
ಕೆಳಗೆ ಇಳಿಯುವಷ್ಟರಲ್ಲಿ ಸಾಕು ಬೇಕಾಯ್ತು, ಮುಳ್ಳಿನ ಪೋದೆಯೋಳಗೆಲ್ಲ ನುಗ್ಗಿ , ಕೈಯೆಲ್ಲ ತರಚಿಕೊಂಡು ಕೆಳಗಿಳಿದೆವು, ನಮ್ಮ ಜೊತೆಗೆ ಬಂದ ಆ ಮಲಯಾಳಿಗಳ ಪಾಡು ಪಾಪ :) , ಕೆಳಗಿಳಿದವರೇ ನಮ್ಮ ಮುಖ ಕೂಡ ನೋಡದೆ ಹೋಗಿಬಿಟ್ಟರು :)

ಕೆಳಗಿಳಿದು ಆ ಹುಡುಗನಿಗೆ ಧನ್ಯವಾದ ಹೇಳಲು ಹೋದಾಗ , ಅವನು ಕೇಳಿದ , "ಸರ್ , ನೀವ್ ಬಂದ ದಾರೀಲಿ ಕರಡಿ ತಿರುಗುತ್ತೆ ನಿಮಗೆ ಸಿಗ್ಲಿಲ್ವಾ? " ಅಂತ, ಎಲ್ಲರೂ ಒಬ್ಬರ ಮುಖ ಒಬ್ಬರು ನೋಡಿಕೊಂಡೆವು.

ಗೆಳೆಯ ಹೇಳಿದ "ಕರಡಿ ಸಿಗಲಿಲ್ಲ, ಸಿಕ್ಕಿದ್ದರೆ ನಾವ್ಯಾರು ನಿನ್ನ ಜೊತೆ ಮಾತನಾಡಲು ಬದುಕಿರುತೆದ್ದೆವಾ? "

ಅಲ್ಲಿಗೆ ನಮ್ಮ "ಹುಣ್ಣಿಮೆ ರಾತ್ರಿಯ ಚಾರಣಕ್ಕೆ" ತೆರೆ ಬಿತ್ತು. ಆದರೆ ಅಷ್ಟೊತ್ತಿಗೆ ನಿದ್ರೆ ಎಂಬುದು ಬೇಡವೆಂದರೂ ನುಗ್ಗಿ ನುಗ್ಗಿ ಬರುತಿತ್ತು, ನಿದ್ರೆಯ ಮಂಪರು ಎಷ್ಟಿತ್ತೆಂದರೆ ಬೈಕಿನಲ್ಲಿ ಹೋಗುತ್ತಲೇ ನಿದ್ದೆ ಮಾಡಿಕೊಂಡು, ಮಧ್ಯೆ ಮಧ್ಯೆ ನಿಂತು , ಮುಖಕ್ಕೆ ನೀರು ಚಿಮುಕಿಸಿ , ಮತ್ತೆ ಎದ್ದೆವೋ ಬಿದ್ದೆವೋ ಎಂದು ಮನೆ ತಲುಪಿದಾಗ ಮಧ್ಯಾನ್ಹ ೨.೦೦ ಗಂಟೆ. ಹೋಗಿ ಮಲಗಿದವ ಎದ್ದು ಮತ್ತೆ ರಾತ್ರಿಯ ಊಟಕ್ಕೆ ಕೂತರೆ ತಟ್ಟೆ ಹಿಡಿದೆ ನಿದ್ರೆ ಮಾಡುತಿದ್ದೆ :)
ಬರೋಬ್ಬರಿ ೨ ದಿನ ನಿದ್ದೆ ಆವರಿಸಿತ್ತು. ನೀವೂ ಒಂದು ಸರಿ ಹೋಗಿ ಬನ್ನಿ, ನನ್ನೂ ಕರೀರಿ ನಾನು ಬರೋಕೆ ರೆಡಿ :)

ಸ್ಕಂದ ಗಿರಿಗೆ ಹೋಗುವ ದಾರಿ ಹೀಗಿದೆ : ಅಲ್ಲಿಗೆ ಹೋಗಲು ೨ ದಾರಿಗಳಿವೆ.
೧.ನಂದಿ ಬೆಟ್ಟದ ದಾರಿಯಲ್ಲಿ ಹೋಗಿ, ನಂದಿ ಬೆಟ್ಟದ ಕಡೆ ತಿರುಗದೆ ಸೀದಾ ಮುಂದೆ ಸಾಗಿ ಡೆಡ್ ಎಂಡ್ ನಲ್ಲಿ ಬಲಕ್ಕೆ ತಿರುಗಿ ಮುದ್ದೇನಹಳ್ಳಿ ಬಳಿ ಬಂದರೆ , ಸ್ಕಂದ ಗಿರಿಗೆ ದಾರಿ ಅಂತ ಮಾಹಿತಿ ಫಲಕ ಕಾಣುತ್ತದೆ. (ಇದು ಬಹಳ ಹತ್ತಿರದ ದಾರಿ, ಆದರೆ ಹೊಸಬರಿಗೆ ಈ ದಾರಿ ಸೂಕ್ತವಲ್ಲ ಅಂತ ನನ್ನ ಅನಿಸಿಕೆ )
೨.ಚಿಕ್ಕಬಳ್ಳಾಪುರದವರೆಗೆ ಸಾಗಿ, 'ಒಕ್ಕಲಿಗರ ಭವನ'ದ ಬಳಿ ಎಡಕ್ಕೆ ತಿರುಗಿ ಹೊರಟರೆ ಒಂದೇ ರಸ್ತೆ 'ಮುದ್ದ್ನೆಹಳ್ಳಿ'ಗೆ ತಲುಪುತ್ತದೆ, ಅಲ್ಲಿಂದ ನೀವು ಸ್ಕಂದ ಗಿರಿ ತಲುಪಬಹುದು.

ವಿಳಾಸ ಕೇಳುವಾಗ 'ಸ್ಕಂದಗಿರಿ ಅನ್ನುವುದಕಿಂತ 'ಕಲವರ ಹಳ್ಳಿ ಬೆಟ್ಟ' ಅಥವಾ 'ಓಂಕಾರ ಆಶ್ರಮ' ಕೇಳಿ ಹೊರಟರೆ ಒಳ್ಳೆಯದು, ಹಳ್ಳಿಗರಿಗೆ ಈ ಹೆಸರುಗಳೇ ಪರಿಚಿತ. 'ಓಂಕಾರ ಆಶ್ರಮ' ಬೆಟ್ಟದ ತಪ್ಪಲಲ್ಲೇ ಇದೆ.

ಗೈಡ್ ವೀರಪ್ಪನವರ ದೂರವಾಣಿ ಸಂಖ್ಯೆ : ೯೩೪೧೬೬೩೬೭೨
ಗೈಡ್ ಮುನಿರಾಜುರವರ ದೂರವಾಣಿ ಸಂಖ್ಯೆ : ೦೮೧೫೬೩೧೬೧೯೯

ನೀವೂ ಹೋಗಿ , ಮರೆಯಲಾಗದ ಅನುಭವ ಖಂಡಿತ ನಿಮ್ಮದಾಗುತ್ತದೆ. ಏನಾದರು ಮಾಹಿತಿ ಬೇಕಿದ್ದರೆ ನಾನಿದ್ದೇನೆ. ಹಾಂ! ಹೋಗುವಾಗ ಮರೆಯದೆ ಕುಡಿಯಲು ನೀರು, ಟಾರ್ಚ್, ಬೆಂಕಿ ಕಾಯಿಸಲು ಸೌದೆ, ತಿಂಡಿ ತೀರ್ಥ(?) :) ಎಲ್ಲವು ಇರಲಿ , ಮುಖ್ಯವಾಗಿ ಸೈತಾನನಂತಹ ಒಂದು ಜಾಕೆಟ್ :)

ಇಂತಿ ನಿಮ್ಮವ
ರಾಕೇಶ್ ಶೆಟ್ಟಿ :)