ಇಂದು ಓದಿದ ವಚನ: ಹೆಣ್ಣು-ದೇವರು: ಸಿದ್ಧರಾಮ

ಇಂದು ಓದಿದ ವಚನ: ಹೆಣ್ಣು-ದೇವರು: ಸಿದ್ಧರಾಮ

ತಾ ಮಾಡಿದ ಹೆಣ್ಣು ತನ್ನ ತಲೆಯನೇರಿತ್ತು
ತಾ ಮಾಡಿದ ಹೆಣ್ಣು ತನ್ನ ತೊಡೆಯನೇರಿತ್ತು
ತಾ ಮಾಡಿದ ಹೆಣ್ಣು ಬ್ರಹ್ಮನ ನಾಲಿಗೆಯನೇರಿತ್ತು
ತಾ ಮಾಡಿದ ಹೆಣ್ಣು ನಾರಾಯಣನ ಎದೆಯನೇರಿತ್ತು
ಅದು ಕಾರಣ ಹೆಣ್ಣು ಹೆಣ್ಣಲ್ಲ
ಹೆಣ್ಣು ರಾಕ್ಷಸಿಯಲ್ಲ
ಹೆಣ್ಣು ಪ್ರತ್ಯಕ್ಷ ಕಪಿಲಸಿದ್ಧಮಲ್ಲಿಕಾರ್ಜುನ
ನೋಡಾ

ಭಕ್ತಿಯಲ್ಲಿ ತೊಡಗಿದವರು, ಆಧ್ಯಾತ್ಮ ಸಾಧನೆಯಲ್ಲಿ ಮುಳುಗಿದವರು, ಹೆಣ್ಣನ್ನು ಅನುಮಾನದಿಂದ ಕಾಣುತ್ತಾ, ಹೆಣ್ಣಿನಿಂದ ತೊಂದರೆಯೇ ಹೆಚ್ಚೆಂದು ಭಾವಿಸುವುದು ತೀರಸಾಮಾನ್ಯವಾದ ದೃಷ್ಟಿಕೋನ.

ಆದರೆ ಸಿದ್ಧರಾಮಯ್ಯ ಇಲ್ಲಿ ತ್ರಿಮೂರ್ತಿಗಳ  ಪೌರಾಣಿಕ ಕಲ್ಪನೆಯನ್ನು  ಬೇರೆ ರೀತಿಯಲ್ಲಿ ವ್ಯಾಖ್ಯಾನಿಸುತ್ತಾ ಹೆಣ್ಣಿನ ಹಿರಿಮೆಯನ್ನು ಸಾರಿದ್ದಾನೆ. ತಾ ಮಾಡಿದ ಹೆಣ್ಣು ತನ್ನ ತಲೆಯೇರಿ  ಶಿವನಾದ; ತಾ ಮಾಡಿದ ಹೆಣ್ಣು ನಾಲಗೆಯನ್ನೇರಿ ಬ್ರಹ್ಮನಾದ;ತಾ ಮಾಡಿದ ಹೆಣ್ಣು ಎದೆಯಲ್ಲಿ ನೆಲೆಸಿ  ನಾರಾಯಣನಾದ. ಹೆಣ್ಣನ್ನು  ರಾಕ್ಷಸಿ ಎಂದು ಕರೆಯುವುದು ತಪ್ಪು, ಹೆಣ್ಣನ್ನು  ಹೆಣ್ಣು ಎಂದು ಹೆಸರಿಟ್ಟು ಹೀಗಳೆಯುವುದೂ ತಪ್ಪು, ಹೆಣ್ಣು ನಮ್ಮ ಕಣ್ಣಿಗೆ ಕಾಣುವ, ಪ್ರತ್ಯಕ್ಷವಾದ ಕಪಿಲಸಿದ್ಧಮಲ್ಲಿಕಾರ್ಜುನನಲ್ಲದೆ ಬೇರಲ್ಲ  ಅನ್ನುತ್ತಾನೆ.

Rating
Average: 4 (1 vote)

Comments