ತಲೆ ಮರೆಸಿಕೊ೦ಡಿದ್ದ "ಕಾ೦ಗ್ರೆಸ್" ರೇಡಿಯೋ

ತಲೆ ಮರೆಸಿಕೊ೦ಡಿದ್ದ "ಕಾ೦ಗ್ರೆಸ್" ರೇಡಿಯೋ

ಬರಹ

ಸ್ವಾತಂತ್ರ ಹೋರಾಟದಲ್ಲಿ ಹಲವು ಮಾದರಿಗಳಲ್ಲಿದ್ದವು. ಅನೇಕ ರೀತಿಯ ಪ್ರಯತ್ನಗಳಿದ್ದವು. ಸಾಧ್ಯವಿದ್ದ ಎಲ್ಲ ಅವಕಾಶಗಳನ್ನು ಬಳಸಿಕೊಂಡು ಸ್ವಾತಂತ್ರ್ಯ ಹೋರಾಟವನ್ನು ಉತ್ತೇಜಿಸುವುದು ಅಂದಿನ ಹೋರಾಟಗಾರರ ಉದ್ದೇಶವಾಗಿತ್ತು. ಅ೦ಥ ಸಮಯದಲ್ಲಿ ಸಮೂಹ ಮಾಧ್ಯಮ ಕ್ರಾ೦ತಿಯ ಶಿಶುವಾದ ರೇಡಿಯೋವನ್ನು ಮರೆಯಲು ಸಾಧ್ಯವೇ? ಆದರೆ ಬ್ರಿಟಿಷರ ವಸಾಹತುವಾಗಿದ್ದ ಭಾರತದಲ್ಲಿ ರೇಡಿಯೋ ಪ್ರಸಾರವು ಕೂಡಾ ಬ್ರಿಟಿಷ್ ಅಧಿಕಾರದ ಕೈಕೆಳಗೆ ಇತ್ತು. ಇ೦ಥ ಸಮಯದಲ್ಲಿ ರೂಪಿಸಿದ ಯೋಜನೆಯೇ- ಹೋರಾಟಗಾರರೇ ಪ್ರತ್ಯೇಕ ರೇಡಿಯೋ ಪ್ರಸಾರ ಆರ೦ಭಿಸುವುದು. ಆದರೆ ಅದು ಅಷ್ಟು ಸುಲಭವಾಗಿರಲಿಲ್ಲ. ಹೋರಾಟದ ಯಾವುದೇ ಕುರುಹುಗಳನ್ನು ಉಳಿಯದ೦ತೆ ಅ೦ದಿನ ಬ್ರಿಟಿಷ್ ಶಾಹಿ ಅಳಿಸಿಹಾಕುತ್ತಿತ್ತು.

'ಕ್ವಿಟ್ ಇ೦ಡಿಯಾ' ಚಳುವಳಿಯ ನಾಯಕರುಗಳಿಗೆ ರೇಡಿಯೋ ಅಥವಾ ಪತ್ರಿಕೆಗಳ ಸ೦ಪರ್ಕ ಇರಲಿಲ್ಲ. ಆಲ್ ಇ೦ಡಿಯಾ ರೇಡಿಯೋವು ಅ೦ದಿನ ಬ್ರಿಟಿಷ್ ವಸಾಹತುಶಾಹಿ ಆಡಳಿತದ ಅಜೆ೦ಡಾವನ್ನು ಕಾರ್ಯಗತಗೊಳಿಸುವ ಯ೦ತ್ರವಾಗಿತ್ತು. ವೃತ್ತ ಪತ್ರಿಕೆಗಳು ಕೂಡಾ ತೀವ್ರ ಸೆನ್ಸಾರ್ ಗೆ ಒಳಗಾಗಿದ್ದುವು. ಆ ಸ೦ದರ್ಭದಲ್ಲಿ ನೇತಾರರಿಗೆ ಸಿಕ್ಕ ಏಕೈಕ ಪರ್ಯಾಯವೆ೦ದರೆ 'ರೇಡಿಯೋ ಪ್ರಸಾರ'. ಅದು ಕೂಡಾ ತಲೆ ಮರೆಸಿಕೊ೦ಡು ಪ್ರಸಾರಕ ಬಳಸಿ ಪ್ರಸಾರ ಮಾಡುವುದಾಗಿತ್ತು. ಅ೦ದಿನ ಯುವ ಹೋರಾಟಗಾರರಾದ ಉಷಾ ಮೆಹ್ತ, ವಿಠಲ ದಾಸ್ ಕಾಕರ್, ಚ೦ದ್ರಕಾ೦ತ್ ಜಾವೇರಿ ಸೇರಿ ಕಾ೦ಗ್ರೆಸ್ ರೇಡಿಯೋವನ್ನು ೩ ಸೆಪ್ಟೆ೦ಬರ್ ೧೯೪೨ರ೦ದು ೪೨.೩೪ ಕಿರು ತರ೦ಗಾ೦ತರಗಳ ಮೇಲೆ ಆರ೦ಭಿಸಿದರು. 'ಭಾರತ ಒ೦ದೆಡೆಯಿ೦ದ' ಎ೦ಬ ಆರ೦ಭ ಘೋಷಣೆಯೊ೦ದಿಗೆ ಈ ರೇಡಿಯೋ ಕಾರ್ಯಾಚರಿಸುತ್ತಿದ್ದರೂ ಇದರ ಮೂಲ ಸ್ಥಳ ಮು೦ಬೈಯೇ ಆಗಿತ್ತು. ಈ ಪ್ರಸಾರವು ನವೆ೦ಬರ್ ೧೧ ರವರೆಗೆ ಮು೦ದುವರಿಯಿತು. (ಒಕ್ಟೋಬರ್ ೧೫ ರಿ೦ದ ೧೭ರ ವರೆಗೆ ಪ್ರಸಾರ ಶಕ್ತಿ ಹೆಚ್ಚಿಸುವ ಸಲುವಾಗಿ ಪ್ರಸಾರ ನಿಲ್ಲಿಸಲಾಗಿತ್ತು). ಪ್ರಸಾರಕವನ್ನು ಬ್ರಿಟಿಷ್ ಪೋಲಿಸರು ಗುರುತಿಸದಂತೆ ಬೇರೆ ಬೇರೆ ಜಾಗಗಳಿಗೆ ಸ್ಥಳಾ೦ತರ ಮಾಡಲಾಗುತಿತ್ತು. ಆದರೂ ಬ್ರಿಟಿಷ್ ಪೋಲೀಸರು ಇದರ ಇರುವಿಕೆಯನ್ನು ಪತ್ತೆ ಹಚ್ಚಿ ಪ್ರಸಾರ ನಿಲ್ಲಿಸಿದರು.

ಈ ಪ್ರಕರಣದ ಕುರಿತು ಪೋಲೀಸ್ ಆಯುಕ್ತರು ತಮ್ಮ ವರದಿಯಲ್ಲಿ ಈ ಕೃತ್ಯದ ಯಶಸ್ಸಿಗೆ ಗು೦ಪಿನ ನಾಯಕರಾದ ರಾಮ ಮನೋಹರ ಲೋಹಿಯಾರೇ ನೇರ ಬಾಧ್ಯಸ್ಥರು ಮತ್ತು ಇದಕ್ಕೆ ಬೇಕಾಗುವ ಹಣವನ್ನು ಸಂಗ್ರಹಿಸಿದ್ದಾರೆ ಎಂದು ದೂರು ದಾಖಲಿಸಿದರು. ಹೀಗೆ ಮುಂದೆ ಉತ್ಸಾಹಿ ರೇಡಿಯೋ ಪ್ರಸಾರಕರೇ ಖೈದಿಗಳಾದರು ಮತ್ತು ತನಿಖೆಗೆ ಗುರಿಯಾದರು. ಇದರಲ್ಲಿ ಖಾಕರ್ ಅವರನ್ನು ಮುಖ್ಯ ಆರೋಪಿ ಎ೦ದು ಗುರುತಿಸಲಾಯಿತು. ಅಶಾ೦ತಿಯನ್ನು ಹರಡುವುದು ಮತ್ತು ಹೋರಾಟದ ಪ್ರಯತ್ನವನ್ನು ಉತ್ತೇಜಿಸುವುದಕ್ಕಾಗಿ ಐದು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾದರೆ, ಇನ್ನುಳಿದವರು ಒಂದು ವರ್ಷ ಸೆರೆಮನೆ ವಾಸ ಅನುಭವಿಸಿದರು. ಹೀಗೆ ರಾಷ್ಟ್ರ್‍ಈಯವಾದಿಗಳು ಅಧಿಕೃತ ಸರಕಾರಿ ಸಂಸ್ಥೆಯಾದ ಆಲ್ ಇ೦ಡಿಯಾ ರೇಡಿಯೋಕ್ಕೆ ಪರ್ಯಾಯವಾಗಿ ನಡೆಸಿದ ಏಕಾ೦ಗಿ ಹೋರಾಟ ಕೊನೆಗೊ೦ಡಿತು.