ವಿದ್ಯಾರ್ಥಿಗಳ ಪ್ರಯಾಸದಾಯಕ ಪ್ರಯಾಣ ಸಮಸ್ಯೆ ಬಗೆಹರಿಯುವುದೇ?

ವಿದ್ಯಾರ್ಥಿಗಳ ಪ್ರಯಾಸದಾಯಕ ಪ್ರಯಾಣ ಸಮಸ್ಯೆ ಬಗೆಹರಿಯುವುದೇ?

ಬರಹ

ಕೆಲವು ವಾರಗಳ ಹಿಂದೆಯಷ್ಟೇ ಕೇರಳದ ಕಣ್ಣೂರು ಜಿಲ್ಲೆಯ ಇರಿಕ್ಕೂರ್ ಎಂಬಲ್ಲಿ ಶಾಲಾ ವಿದ್ಯಾರ್ಥಿಗಳ ಮೇಲೆ ವ್ಯಾನೊಂದು ಹಾಯ್ದು 9 ಮುಗ್ದ ಮಕ್ಕಳನ್ನು ಬಲಿ ತೆಗೆದುಕೊಂಡ ಘಟನೆ ನಡೆಯಿತು. ಇದರಲ್ಲಿ ಮಡಿದ ಮಕ್ಕಳು ಎಲ್ ಪಿ ಶಾಲೆಯಲ್ಲಿ ಕಲಿಯುತ್ತಿದ್ದು, ಮೊಗ್ಗರಳುವ ಮುನ್ನವೇ ವಿಧಿಯ ಕ್ರೂರ ಲೀಲೆಗೆ ಒಳಗಾಗಿದ್ದು ಬೇಸರದ ಸಂಗತಿ. ಈ ಘಟನೆಯು ಮನಸ್ಸಿನಿಂದ ಮಾಸುವ ಮುನ್ನವೇ ಹಾಸನದಲ್ಲಿ ಮಕ್ಕಳನ್ನು ಕರೆದೊಯ್ಯುತ್ತಿದ್ದ ವಾಹನದಲ್ಲಿ ವಿದ್ಯಾರ್ಥಿನಿಯೊಬ್ಬಳು ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ನಡೆಯಿತು. ಈ ಮೇಲಿನ ಎರಡೂ ಘಟನೆಗಳನ್ನು ನೋಡಿದರೆ ನಮ್ಮ ಮಕ್ಕಳಿಗೆ ಸುರಕ್ಷೆ ಎಲ್ಲಿದೆ? ಎಂಬ ಪ್ರಶ್ನೆ ಕಾಡದಿರದು.

ಇದಕ್ಕೆಲ್ಲಾ ಹೊಣೆಗಾರರು ಯಾರು? ಕಣ್ಣೂರಿನಲ್ಲಿ ಮಡಿದ ಆ ಮುಗ್ದ ಮಕ್ಕಳ ಸಾವಿಗೆ ಹೊಣೆ ಯಾರು? ಎಂದು ಸುದ್ದಿ ಮಾಧ್ಯಮಗಳಲ್ಲಿ ಚರ್ಚಿಸಿಯೂ ಆಯಿತು. ಸಾವನ್ನಪ್ಪಿದ ವಿದ್ಯಾರ್ಥಿಗಳ ಕುಟುಂಬಕ್ಕೆ ಸರಕಾರ ಪರಿಹಾರ ಧನ ಘೋಷಿಸಿ, ವ್ಯಾನ್ ಚಾಲಕನನ್ನು ಬಂಧಿಸಿಯೂ ಆಯಿತು. ಏತನ್ಮಧ್ಯೆ, ಆ ವ್ಯಾನ್ ಚಾಲಕ ಫೋರ್ ವೀಲರ್ ಲೈಸನ್ಸ್ ಹೊಂದಿಲ್ಲ ಹಾಗೂ ಪಾನಮತ್ತನಾಗಿದ್ದ ಎಂಬ ವಿಷಯವೂ ಎಂಬುದೂ ಬೆಳಕಿಗೆ ಬಂತು. ಮನೆಗೆ ಹಿಂತಿರುಗುತ್ತಿದ್ದ ಮಕ್ಕಳ ಜೀವ ತೆಗೆದು ಕೊಂಡ ಈ ಘಟನೆ ನೋಡಿದರೆ ವಾಹನ ಚಾಲಕರ ನಿರ್ಲಕ್ಷ್ಯ ಯಾವ ರೀತಿ ಇದೆ ಎನ್ನುವುದು ತಿಳಿದು ಬರುತ್ತದೆ. ಪಾದಾಚಾರಿಗಳ, ವಾಹನ ಸುರಕ್ಷಿತತೆಯ ಬಗ್ಗೆ ಸರಕಾರ ಕ್ರಮ ಕೈಗೊಳ್ಳುತ್ತಿದ್ದರೂ, ಇಂತಹ ಘಟನೆಗಳು ಸಂಭವಿಸುತ್ತಿರುವುದು ಖೇದಕರ.

ಸದ್ಯ ಒಂದು ವಿಷಯ ಹೇಳಬೇಕೆಂದರೆ ನಮ್ಮೂರಾದ ಕಾಸರಗೋಡಿನಲ್ಲಿ ನಾನು ಹೈಸ್ಕೂಲ್್ಗೆ ಹೋಗುತ್ತಿರುವ ಕಾಲವದು. ವಿದ್ಯಾರ್ಥಿಗಳಿಗೆ ಬಸ್ಸಲ್ಲಿ ರಿಯಾಯಿತಿ ದರ ಇದೆ ಎನ್ನುವ ಮಾತ್ರಕ್ಕೆ ವಿದ್ಯಾರ್ಥಿ ದೆಸೆಯಲ್ಲಿ ನಾವು ಅನುಭವಿಸಿದ ಕಷ್ಟ ಅಷ್ಟಿಷ್ಟಲ್ಲ. ಕೆಲವು ಬಸ್ ಕಂಡೆಕ್ಟರ್್ಗಳಂತೂ ನಮ್ಮನ್ನು ಹತ್ತಿಸುವಂತಿಲ್ಲ. ವಿದ್ಯಾರ್ಥಿಗಳು ಈಗ ಹತ್ತಬೇಡಿ ಎಂದು ಬೊಬ್ಬೆ ಹಾಕುವ ಕ್ಲೀನರ್..ಬಾಗಿಲ ಬಳಿ ನಿಂತು ಕೊಂಡು ಬಸ್ ಹತ್ತಲು ಪ್ರಯತ್ನಿಸುವಾಗ ಬೈಯುವ ಕಂಡೆಕ್ಟರ್, ಹತ್ತಿಸಿದರೂ ಬಸ್್ನೊಳಗೆ ನಿಮಗೇನು ಬೇರೆ ಬಸ್ ಸಿಗಲಿಲ್ಲವೇ , ಎಲ್ಲಾ ನಷ್ಟ ಅಂತ ಬಡಬಡಿಸಿ ನಮ್ಮ ಬ್ಯಾಗನ್ನು ನೋಡಿ ಬೈಯುವ ಕಂಡೆಕ್ಟರ್್ಗಳು, ವಿದ್ಯಾರ್ಥಿಗಳ ಹಿಂಡು ನೋಡಿದ ಕೂಡಲೇ ವೇಗವಾಗಿ ಓಡಿಸಿ ಒಂದಷ್ಟು ದೂರದಲ್ಲಿ ಬಸ್ ನಿಲ್ಲಿಸುವ ಚಾಲಕರು.. ಹೀಗೆ ...ಹಲವಾರು ಬಾರಿ ಇಂತಹ ಸಂದರ್ಭಗಳು ಬಂದಿದ್ದು, 4 ಗಂಟೆಗೆ ಕ್ಲಾಸು ಮುಗಿದಿದ್ದರೂ, 6 ಗಂಟೆಯ ವರೆಗೆ ಬಸ್ ನಿಲ್ದಾಣದಲ್ಲಿ ನಿಂತು ಕಾಯಬೇಕಾದ ಅವಸ್ಥೆ ಬಂದಿದೆ. ಯಾಕೆಂದರೆ 6 ಗಂಟೆಯ ನಂತರ ವಿದ್ಯಾರ್ಥಿಗಳಿಗೆ ಟಿಕೆಟ್ ರಿಯಾಯಿತಿ ಇಲ್ಲ. ಏನಿದ್ದರೂ ಫುಲ್ ಟಿಕೆಟ್ ಕೊಟ್ಟು ಯಾತ್ರೆ ಮಾಡಬೇಕಾದ ಪರಿಸ್ಥಿತಿ.

ಇದು ನಮ್ಮ ಜಿಲ್ಲೆಯಲ್ಲಿ ಅನುಭವಕ್ಕೆ ಬಂದ ವಿಷಯವಾಗಿದ್ದು, ಇನ್ನಿತರ ಜಿಲ್ಲೆಗಳಾದ ಕಣ್ಣೂರ್ , ಕೋಝಿಕ್ಕೋಡ್ ಜಿಲ್ಲೆಗಳಲ್ಲಿನ ವಿದ್ಯಾರ್ಥಿಗಳ ಬವಣೆ ಹೇಳ ತೀರದು. ಇಲ್ಲಿರುವ ವ್ಯವಸ್ಥೆಯೆಂದರೆ ವಿದ್ಯಾರ್ಥಿಗಳು ಬಸ್್ಗೆ ಮೊದಲೇ ಹತ್ತುವಂತಿಲ್ಲ. ಏನಿದ್ದರೂ ಇವರೆಲ್ಲರೂ ಸಾಲಾಗಿ ಬಾಗಿಲು ಬಳಿ ನಿಂತು ಕೊಳ್ಳಬೇಕು. ಪ್ರಯಾಣಿಕರೆಲ್ಲರೂ ಹತ್ತಿದ ಮೇಲೆ ಕಂಡೆಕ್ಟರ್ ಹೇಳಿದರೆ ಮಾತ್ರ ಕೊನೆಗೆ ಹತ್ತಬೇಕು. ಇದು ಮಾತ್ರವಲ್ಲದೆ ಕಂಡೆಕ್ಟರ್ ಹೇಳುವಷ್ಟು ಮಂದಿ ವಿದ್ಯಾರ್ಥಿಗಳು ಮಾತ್ರ ಆ ಬಸ್ ಏರಬಹುದು. ಉಳಿದವರು ನಂತರದ ಬಸ್ ಗಾಗಿ ಕಾಯಬೇಕು. ಇಲ್ಲಿಯೂ ವಿದ್ಯಾರ್ಥಿಗಳ ಮೇಲೆ ಬೈಗುಳ ಸುರಿಮಾಲೆ ಇದ್ದೇ ಇರುತ್ತದೆ. ಹತ್ತುವ ಮೊದಲೇ ಎಸ್ಟಿ ಪಿಳ್ಳೇರ್ ಕೇರಂಡ (ಎಸ್ಟಿ ಅಂದರೆ ಸ್ಟೂಡೆಂಟ್, ಅಂದರೆ ವಿದ್ಯಾರ್ಥಿಗಳು ಹತ್ತಬೇಡಿ) ಎಂದು ಕಂಡೆಕ್ಟರ್ ಹೇಳುತ್ತಿದ್ದರೆ, 'ಅವರೆ ಕೇಟ್ಟಂಡ' (ಅವರನ್ನು ಹತ್ತಿಸಬೇಡ)ಎಂದು ಚಾಲಕನೂ ದನಿಗೂಡಿಸುತ್ತಾನೆ.

ಈ ಪರಿಸ್ಥಿತಿಯಾದರೆ ವಿದ್ಯಾರ್ಥಿಗಳು ಏನು ಮಾಡಬೇಕು? ಎಲ್ಲಾ ವಿದ್ಯಾಸಂಸ್ಥೆಗಳಿಗೂ ಶಾಲಾ ವಾಹನದ ವ್ಯವಸ್ಥೆಯಿರುವುದಿಲ್ಲವಲ್ಲಾ. ಮಕ್ಕಳ ಇಂತಹ ಕಷ್ಟವನ್ನೆಲ್ಲಾ ನೋಡಿ ಕೆಲವು ಹೆತ್ತವರಂತೂ ತಮ್ಮ ಮಕ್ಕಳನ್ನು ಆಟೋ ರಿಕ್ಷಾ, ವ್ಯಾನ್, ಜೀಪ್್ಗಳಲ್ಲಿ ಶಾಲೆಗೆ ಕಳುಹಿಸುತ್ತಾರೆ. ಆದರೆ ಇಂತಹ ವ್ಯವಸ್ಥೆಗಳನ್ನು ತಮ್ಮ ಮಕ್ಕಳಿಗೆ ಒದಗಿಸಲು ಸಾಧ್ಯವಾಗದ ಕುಟುಂಬಗಳು ಎಷ್ಟಿಲ್ಲ?

ಇನ್ನೊಂದು ವಿಷ್ಯ, ನೀವು ವಿದ್ಯಾರ್ಥಿಯಾಗಿದ್ದು, ನಿಮ್ಮ ಕುಟುಂಬದವರು ಯಾರಾದರೂ ರಾಜಕಾರಣಿಯಾಗಿದ್ದರೆ ನಿಮಗೆ ಬೈಗಳು ಸಿಗುವುದಿಲ್ಲ! ಅದೂ ಅಲ್ಲ ನೀವು ಕಾಲೇಜು ವಿದ್ಯಾರ್ಥಿಯಾಗಿದ್ದರೆ ನೀವು ಈ ವಿಷಯವನ್ನು ಕಾಲೇಜನಲ್ಲಿರುವ ರಾಜಕೀಯ ಸಂಘಟನೆಗಳಿಗೆ ತಿಳಿಸಿ. ಪ್ರಸ್ತುತ ಸಮಸ್ಯೆ ಪರಿಹಾರವಾಗುತ್ತದೆ. ಯಾಕೆಂದರೆ ಕೇರಳದ ಕಾಲೇಜು ರಾಜಕೀಯದ ಬಗ್ಗೆ ಎಲ್ಲರಿಗೂ ಗೊತ್ತು..ವಿದ್ಯಾರ್ಥಿಗಳನ್ನು ಬಸ್ ಹತ್ತಿಸದೇ ಹೋದರೆ ಬಸ್ ಗಾಜು ಪುಡಿ ಪುಡಿ. ಕೆಲವೊಮ್ಮೆ ಬಸ್ ಸಿಬ್ಬಂದಿಗೆ ಧರ್ಮದೇಟು ಇದೆಲ್ಲಾ ಕಾಲೇಜು ಪರಿಸರದಲ್ಲಿ ಸಹಜ ಘಟನೆ ಎಂದೇ ಹೇಳಬಹುದು. ಅದಲ್ಲರಿಲಿ, ಆದ್ರೆ ವಿದ್ಯಾರ್ಥಿಗಳಿಂದ ತುಂಬಿ ತುಳುಕುತ್ತಿರುವ ಬಸ್, ಅದರಿಂದಾಗುವ ಅನಾಹುತಗಳನ್ನು ಹೇಗೆ ತಪ್ಪಿಸಬಹುದೆಂದು ಸುದ್ದಿ ವಾಹಿನಿಯೊಂದರಲ್ಲಿ ನಡೆಯುತ್ತಿದ್ದ ಚರ್ಚೆಯನ್ನು ನೋಡಿದ್ದೆ. ಇಲ್ಲಿ ಕೇಳಿಬಂದ ಅಂಶವೆಂದರೆ

1. ಬಸ್್ಗಳ ಕೊರತೆಯಿಂದಾಗಿ ಪ್ರಯಾಣಿಕರ ಸಂಖ್ಯೆ ಅಧಿಕ
2.ಹಣಕ್ಕಾಗಿ ಬಸ್್ನಲ್ಲಿ ಜನರನ್ನು ಮನ ಬಂದಂತೆ ತುಂಬುವ ಬಸ್ ಸಿಬ್ಬಂದಿ
3.ವಿದ್ಯಾರ್ಥಿಗಳನ್ನು ಹತ್ತಿಸದಿದ್ದರೆ ಬಸ್್ಗೆ ಸಂಭವಿಸಬಹುದಾದ ಹಾನಿಯ ಬಗ್ಗೆ ಹೆದರಿಕೆ

ಹೀಗೆ ಹಲವಾರು ಅಂಶಗಳನ್ನು ಜನ ಸಾಮಾನ್ಯರು ಚರ್ಚೆಯಲ್ಲಿ ಎತ್ತಿಹಿಡಿದರು. ಅಂತೂ ಇಂತೂ ಎಷ್ಟೇ ಚರ್ಚೆಗಳು ನಡೆದರೂ ಅನಾಹುತಗಳ ಸಂಖ್ಯೆಗಳು ಏರಿಕೆಯಾಗುತ್ತಿರುವುದಲ್ಲದೆ ಕಡಿಮೆಯಾಗಿಲ್ಲ. ಬಸ್್ನ ಫುಟ್್ಬೋರ್ಡ್್ನಲ್ಲಿ ನಿಂತುಕೊಂಡು ಯಾತ್ರೆ ಮಾಡಬಾರದು ಎಂದು ಕಾನೂನು ಇದ್ದರೂ, ಬೆಳಗ್ಗೆ ಮತ್ತು ಸಂಜೆಹೊತ್ತಲ್ಲಿ ಕಿಕ್ಕಿರಿದ ಜನ ಫುಟ್ ಬೋರ್ಡ್ ಯಾಕೆ? ಬಸ್್ನ ಹಿಂದಿರುವ ಏಣಿಯಲ್ಲಿಯೂ ಕೂಡಾ ನೇತಾಡುತ್ತಾರೆ.

ಏತನ್ಮಧ್ಯೆ, ಜಾನುವಾರುಗಳನ್ನು ತುಂಬಿದಂತೆ ಜನರನ್ನು ಹೇರಿಕೊಂಡು ಹೋಗುವ ವಾಹನಗಳು ಕನಿಷ್ಠ ಪಕ್ಷ ಪ್ರಯಾಣಿಕರ ಬಗ್ಗೆಯೂ ಯೋಚಿಸಬಾರದೆ? ಹಣ ಸಂಪಾದನೆಯ ನಿಟ್ಟಿನಲ್ಲಿ ಜೀವಕ್ಕೇ ಬೆಲೆ ಕಲ್ಪಿಸದಿರುವುದು ಯಾವ ನ್ಯಾಯ? ಮಕ್ಕಳ ಪ್ರಯಾಸದಾಯಕವಾದ ಪ್ರಯಾಣದ ಬಗ್ಗೆ ಯಾರಿಗೂ ಹೊಣೆಯಿಲ್ಲವೇ? ಹಾಸನದಲ್ಲಿ ಗೂಡ್ಸ್ ಲಾರಿಯಲ್ಲಿ ತುಂಬಿದ ಮಕ್ಕಳೆಡೆಯಲ್ಲಿ ವಿದ್ಯಾರ್ಥಿನಿ ಸಾವನ್ನಪ್ಪಿದ ಘಟನೆಗೆ ಹೊಣೆ ಯಾರು? ಅಸಹಾಯಕರಾದ ಹೆತ್ತವರು ಒಂದೆಡೆ, ಅದು ನಮ್ಮ ಜವಾಬ್ದಾರಿಯಲ್ಲ ಎಂದು ಹೇಳುವ ಶಾಲಾ ಆಡಳಿತ ವರ್ಗ, ಅದೋ ಇಂತಹ ವ್ಯವಸ್ಥೆಯ ಬಗ್ಗೆ ತಕ್ಕ ಕ್ರಮ ತೆಗೆದಕೊಳ್ಳದೆ ಕಣ್ಣು ಮುಚ್ಚಿ ಕುಳಿತಿರುವ ಸಂಚಾರ ನಿಯಂತ್ರಕ ಪೊಲೀಸರೇ? ಇಲ್ಲಿ ಯಾರನ್ನು ದೂರಲಿ?

ರಸ್ತೆಯಲ್ಲಿ ಓಡಾಡುವ ವಾಹನಗಳ ವೇಗಕ್ಕಂತೂ ಮಿತಿಯೇ ಇಲ್ಲವೆಂಬಂತಾಗಿದೆ. ಕೆಲವೊಮ್ಮೆ ಕೆಲವೊಂದು ವಾಹನ ಚಾಲಕರು ಎಲ್ಲರ ಮುಂದೆ 'ಶೈನ್್' ಮಾಡಲಿಕ್ಕಾಗಿ ಯಾವ ರೀತಿ ಓಡಿಸುತ್ತಾರೆ ಎಂದರೆ ಅದನ್ನು ಕಂಡು ನಾವಂತೂ ಅಚ್ಚರಿ ಪಡಬೇಕು. ಇಂತಹ ಸಾಹಸ ಪ್ರದರ್ಶನಗಳೇ ಹೆಚ್ಚಾಗಿ ಮುಗ್ದ ಜೀವಗಳನ್ನು ಬಲಿತೆಗೆದುಕೊಳ್ಳುತ್ತವೆ. ರಸ್ತೆ ಸಂಚಾರ ಸುರಕ್ಷೆಯ ಬಗ್ಗೆ ಎಷ್ಟೇ ನಿಯಮಗಳು ಜ್ಯಾರಿಗೆ ಬಂದರು ಅದನ್ನು ಪಾಲಿಸದಿದ್ದರೆ ನಿಯಮಗಳಿದ್ದೇನು ಫಲ?

ಇದು ಮಾತ್ರವಲ್ಲದೆ ಖಾಸಗಿ ವಾಹನಗಳು ಮಕ್ಕಳನ್ನು ಕೊಂಡೊಯ್ಯುತ್ತಿರುವಾಗ ಒಂದಿಂಚೂ ಜಾಗ ಬಿಡದೆ ತುಂಬಿಸುತ್ತಿರುವ ದೃಶ್ಯ ನಾವು ಕಾಣುತ್ತಲೇ ಇದ್ದೇವೆ. ಬಸ್್ನಲ್ಲಿನ ಪ್ರಯಾಸದಾಯಕವಾದ ಪ್ರಯಾಣವನ್ನು ನಿಯಂತ್ರಿಸಲು ಶಾಲೆಗಳ ಆರಂಭ ಸಮಯವನ್ನೂ ಪರಿಷ್ಕರಿಸಿದ್ದಾಯಿತು. ಆದರೆ ಫುಟ್್ಬೋರ್ಡ್್ನಲ್ಲಿ ಸ್ಕೂಲ್ ಬ್ಯಾಗ್ ಹಾಕಿ ತೂಗಾಡುತ್ತಾ ಬರುವ ಶಾಲಾ ವಿದ್ಯಾರ್ಥಿಗಳ ಬವಣೆಗೆ ಪರಿಹಾರವಿಲ್ಲವೇ? ಇದರೊಂದಿಗೆ ವಿದ್ಯಾರ್ಥಿಗಳ ಯಾತ್ರಾ ಸಮಸ್ಯೆಯನ್ನು ಪರಿಹರಿಸಲು ದಾರಿ ಕಂಡುಕೊಳ್ಳಬೇಕಾಗಿದೆ.