ಅವಳ ಮುಂದಿನ ಬದುಕು??

ಅವಳ ಮುಂದಿನ ಬದುಕು??

ಯಾಕೋ ನೀರಿನಲ್ಲಿ ಆಟವಾಡಿ ಸುಸ್ತಾದಂತೆ ಅನಿಸಿತು. ಮೂಗಿನಲ್ಲಿ ನೀರು ನುಸುಳಿದ್ದರಿಂದಲೋ ಏನೋ ಆಟ ಸಾಕೆನಿಸಿತು. ಹೊರಬಂದೆ, ರಸ್ತೆಯ ಎರಡು ಪಕ್ಕದಲ್ಲಿ ಕಟ್ಟೆಗಳಿದ್ದವು. ನನ್ನ ಮಿಕ್ಕ ಗೆಳೆಯರೆಲ್ಲ ಆಟವಾಡುವ ಹುಮ್ಮಸ್ಸಿನಲ್ಲಿದ್ದರು. ಅವರಿಗೆ ಏನೂ ಹೇಳದೆ ಅವರ ಪಾಡಿಗೆ ಅವರನ್ನು ಆಟವಾಡಲು ಬಿಟ್ಟು ಒಬ್ಬನೇ ಬಂದು ಕುಳಿತೆ.

ಮುಂಬೈಯ ಹೊರಗಡೆಯ ಎಸ್ಸೆಲ್ ವರ್ಲ್ಡ ಎನ್ನೋ ಕೃತಕ ನೀರಿನ ಆಟದ ತಾಣ. ಬೇಸಿಗೆಯ ರಜೆ ಇದ್ದರಿಂದ ತಾಣ ಕಾಲೆಜ್ ಮತ್ತು ಶಾಲಾ ಮಕ್ಕಳಿಂದಲೇ ತುಂಬಿ ತುಳುಕಾಡುತ್ತಿತ್ತು. ಮಂಗಳವಾರದ ದಿನವಾದ್ದರಿಂದ ಅಷ್ಟೊಂದ ಜನನಿಬಿಡ ಎನ್ನಿಸ್ಸುತ್ತಿರಲಿಲ್ಲ. ಒಳಗೆ ರಸ್ತೆಯ ಪಕ್ಕದಲ್ಲಿದ್ದ ಕಟ್ಟೆಯ ಮೇಲೆ ಕುಳಿತ ನಾನು ಯಾವುದೋ ಕಲ್ಪನೆಯಲ್ಲಿ ವಿಹರಿಸುತ್ತಿದ್ದೆ. ಕಲ್ಪನೆಯ ವಿಷಯವೇನೆಂದು ನೆನಪಿಗೆ ಬರುತ್ತಿಲ್ಲ. ಕಟ್ಟೆಯ ಎದುರುಗಡೆ ಇಳಿಜಾರಿನ ರಸ್ತೆ ಇತ್ತು. ಅಲ್ಲಿ ದೊಡ್ಡದಾದ ನಾಲ್ಕು ಮೆಟ್ಟಿಲುಗಳಿದ್ದವು. ಅದರಮೇಲೆ ಸುಮಾರು ಇಪ್ಪತ್ತರಿಂದ ಇಪ್ಪತ್ತೆರೆಡು ಹುಡುಗರು ಜೊತೆಗೆ ನಾಲ್ಕು ಹುಡುಗಿಯರು ಕುಳಿತಿದ್ದರು. ಎಲ್ಲರೂ ತಮಾಷೆಯ ಗುಂಗಿನಲ್ಲಿ ಹರಟುತ್ತಿದ್ದರು.

ಒಮ್ಮೊಮ್ಮೆ ನನ್ನ ಕಲ್ಪನಾ ಲಹರಿಯಿಂದ ಹೊರಬಂದು ಅವರನ್ನು ನೋಡುತ್ತಿದ್ದೆ. ಅವರ ಚಲನವಲನಗಳ ಮೇಲೆ ನಿಗಾವಹಿಸಿ ನೋಡುತ್ತಿದ್ದೆ. ಆಧುನಿಕ ಶೋಕಿಯಿಂದ ತುಂಬಿರುವ ಮುಂಬೈಯ್ ವಾಸಿಗಳಾಗಿದ್ದ ಆ ಹುಡುಗ ಹುಡುಗಿಯರ ಎಲ್ಲಾ ಚಟುವಟಿಕೆಗಳು ಮುಕ್ತವಾಗಿದ್ದವು. ಯಾರ ಹಂಗಿಲ್ಲದೆ ಎಲ್ಲಾ ಕಪಿ ಚೇಷ್ಟೆಗಳಲ್ಲಿ ತಲ್ಲೀನರಾಗಿದ್ದರು. ಅಲ್ಲಲ್ಲಿ ತೂತು ಮಾಡಿದ್ದ ಜೀನ್ಸ್ ಫ್ಯಾಂಟ್, ತುಂಡು ತುಂಡಾದ ಮೈಗಂಟಿಕೊಳ್ಳುವ ಅಂಗಿ ಅವರ ಉಡುಪುಗಳು, ಕೆಲವರು ಟೋಪಿಯನ್ನೂ ಹಾಕಿಕೊಂಡಿದ್ದರು. ಇನ್ನೂ ಕೆಲವರು ಕೂದಲುಗಳನ್ನು ಬಿಟ್ಟುಕೊಂಡು ಹೊಸಶೋಕಿಯನ್ನ ಬಿತ್ತರಿಸುತ್ತಿದ್ದರು. ಹದಿನಾರರ ಗಡಿ ದಾಟಿತ್ತೋ ಇಲ್ಲವೊ ಇನ್ನು ಎಳೆವಯಸ್ಸು. ಹೆಚ್ಚಿನ ಹುಡುಗಿಯರು ಪ್ಯಾಂಟ್ ಹಾಕಿಕೊಂಡಿದ್ದರು. ತೋಳುಗಳೇ ಇಲ್ಲದ ಕುಪ್ಪಸನೋ ಅಥವ ತುಂಡು ಅಂಗಿನೋ ಯಾವುದು ಎಂದುಗೊಂದಲಮೂಡಿಸುವಂತ ಮೇಲಿನ ಉಡುಪು. ಆದಷ್ಟು ಎದೆ ಕಾಣಿಸುವಂತೆ ನೀಳವಾಗಿ ಕತ್ತರಿಸಿದ ಹುಡುಗಿಯರ ಮೇಲಿನ ಉಡುಪುಗಳು ದಾರಿಹೋಕರನ್ನು ಅವರ ಕಡೆ ತಿರುಗಿ ನೋಡುವಂತೆ ಮಾಡುತ್ತಿದ್ದವು. ಇನ್ನೊಬ್ಬ ಹುಡುಗಿ ಮುಕ್ಕಾಲು ಉದ್ದದ ಪ್ಯಾಂಟ್ ತೊಟ್ಟಿದ್ದಳು. ಆದಷ್ಟು ಸೊಂಟ ಹಾಗು ಹೊಕ್ಕಳಿನ ಭಾಗದ ಹೊಟ್ಟೆ ಕಾಣುವಂತೆ ಇತ್ತು ಆ ಹುಡುಗಿಯರ ವಸ್ತ್ರವಿನ್ಯಾಸ. ರಸ್ತೆಯ ಮಧ್ಯ ಇರುವ ಮೆಟ್ಟಿಲ ಮೇಲೆ ಕುಳಿತ ಅವರನ್ನ ದಿಟ್ಟಿಸಿ ನೋಡದೇ ಹೋದವರಿಲ್ಲ.

ಇನ್ನು ಯೌವ್ವನದ ಹೊಸ್ತಿಲಲ್ಲಿರುವ ಆ ಯುವಕರು ಹರಟುವ ವಿಷಯ ಕೇಳಿ ನನ್ನ ಮೈ ಬೆಚ್ಚಿತು. ಹಾಗೆ ನೋಡುತ್ತ, ಕೇಳುತ್ತ ಅಲ್ಲೇ ಕುಳಿತೆ. ನೀರಿನಲ್ಲಿ ಆಟವಾಡಿ ನೇರವಾಗಿ ಅಲ್ಲಿಗೆ ಬಂದು ಕುಳಿತಿದ್ದೆ. ಅಂಗಿ ಉಟ್ಟಿರಲಿಲ್ಲ. ಅರೆಬೆತ್ತಲೆಯ ಮೈಯಲ್ಲಿ ನೀರಿಳಿಯುತ್ತಿತ್ತು. ದೂರದಲ್ಲಿ ದ್ವನಿವರ್ದಕಗಳು ಕಿರಚಿಕೊಳ್ಳುತ್ತಿದ್ದವು. ಸೆಕ್ಸ್, ಅವರು ಹರಟಲು ಆರಿಸಿಕೊಂಡ ವಿಷಯ. ಅಲ್ಲಿದ್ದ ಹುಡುಗಿಯರೂ ಸಹ ಅದರಲ್ಲಿ ಭಾಗಿಯಾಗಿದ್ದರು. ನಾಲ್ಕು ಹುಡುಗಿಯರಲ್ಲಿ ಒಬ್ಬಳು ತೀರಾ ಎಳೆವಯಸ್ಸಿನವಳು ಎನ್ನುವಂತೆ ಅವಳ ಮುಖದಲ್ಲಿ ಕಾಣಿಸುತ್ತಿತ್ತು. ಎದೆಯ ಮೇಲೆ ಅವಳ ಹೆಣ್ಣುತನ ಆಗತಾನೆ ಚಿಗಿಯುತ್ತಿತ್ತು. ಆದರೆ ಅವಳ ಚಟುವಟಿಕೆ ನೋಡಿ ನನ್ನ ಮನಸ್ಸು ಬೆಚ್ಚಿತು. ಅಂಜಿತು.

ಹುಡುಗರೆಲ್ಲರೂ ಫೋಸ್ಟರ್ ಬಿಯರ್ ಟಿನ್ ಹಿಡಿದು ಹೀರುತ್ತಿದ್ದರು. ಮಧ್ಯಾಹ್ನ ೧.೩೦ ರ ಸಮಯ. ವಸಂತ ಮಾಸದ ತೀಕ್ಷ್ಣ ಬಿಸಿಲು. ಮುಂಬೈಯ ಸೆಕೆ ಮೈಯಲ್ಲಿ ಬೆವರೂರಿಸುತ್ತಿತ್ತು. ಆದರೂ ಅವರೆಲ್ಲರು ಬೀಯರ್ ಹೀರುವ ಆತುರ ಸಡಗರದಲ್ಲಿದ್ದರು. ನಿಂತಲ್ಲೇ ಕುಣಿಯುತ್ತಿದ್ದರು, ವಿಚಿತ್ರವಾಗಿ ಓಲಾಡುತ್ತ ಮೋಜಿನ ಗುಂಗಿನಲ್ಲಿದ್ದರು. ಮುಕ್ಕಾಲು ಉದ್ದದ ಫ್ಯಾಂಟ್ ಹುಟ್ಟಿದ್ದ ಹುಡುಗಿ ಹುಡುಗನ ಕೈಯಲ್ಲಿದ್ದ ಬೀಯರ್ ಟಿನ್ನನ್ನು ಕಸಿದುಕೊಂಡು ಹೀರತೊಡಗಿದಳು. ಕ್ಷಣದಲ್ಲಿ ಹೀರಿ ಖಾಲಿಮಾಡಿ ಮುಗಿಸಿದಳು. ಅದಾದ ನಂತರ ಇನ್ನೊಬ್ಬನ ಹತ್ತಿರ ಹೋದಳು. ಅವನು ಕೊಡುವುದಿಲ್ಲ ಎಂದು ಕೊಸರಿದರೂ ಬಿಡದೆ ಅವನ ಬೆನ್ನಮೇಲೆ ಅಡರಿ ಹಿಂದಿನಿಂದ ಬಿಗಿಯಾಗಿ ಹಿಡಿದುಕೊಂಡು ಅವನು ಬೀಯರ್ ಹೀರಲು ಅನುವಾಗದಂತೆ ಅಡ್ಡಿಯಾದಳು. ಅವನ ಕಿವಿಗೆ ಬಾಯಿಯಿಂದ ಕಚ್ಚಿದಳು. ಬೆನ್ನಿಗೆ ಎರಡು ಗುದ್ದಿದಳು. ಕೊನೆಗೆ ಅವನೇ ಸೋತು ಟಿನ್ ಅವಳ ಕೈಗಿಟ್ಟು ಕುಳಿತನು. ಎವೆ ಮುಚ್ಚಿ ತೆಗೆಯುವುದರೊಳಗಾಗಿ ಅವಳು ಟಿನ್‌ನಲ್ಲಿದ್ದ ಬೀಯರನ್ನೆಲ್ಲಾ ಹೀರಿಬಿಟ್ಟಳು.

ಮೆಟ್ಟಿಲ ಮೇಲೆ ಕೊನೆಯಲ್ಲಿ ಕೂತಿದ್ದ ಒಬ್ಬ ದಡಿಯ ಹುಡುಗ ಅಲ್ಲಿದ್ದವರಲ್ಲೆಲ್ಲಾ ದಪ್ಪ ಅವನೆ. ಬಿಯರ್ ಹೀರುತ್ತ ಜೊತೆಗೆ ಗತ್ತಿನಿಂದ ಗೇಣುದ್ದ ಸಿಗರೇಟ್ ಹಿಡಿದು ಸೇದುತ್ತಿದ್ದ. ಇದ್ದ ಇಪ್ಪತ್ತೆರಡು ಹುಡುಗರಲ್ಲಿ ಹತ್ತರಿಂದ ಹನ್ನೆರಡು ಹುಡುಗರ ಕೈಯಲ್ಲಿ ಸಿಗರೇಟ್ ಇದ್ದವು. ಸುತ್ತೆಲ್ಲ ಮುಸುಕುವಷ್ಟು ಧೂಮ ಹೊರಬರುತ್ತಿತ್ತು. ಅದೇ ಹುಡುಗಿ, ಕೆಂಪು ಬಣ್ಣದ ಎಳೆ ಕೆನ್ನೆಗಳು, ನೋಡಿದರೆ ಅಯ್ಯೋ ಅನ್ನಿಸುತ್ತಿತ್ತು. ನಾನು ಅವಳ ಎಲ್ಲಾ ಚಟುವಟಿಕೆಗಳನ್ನ ತೀಕ್ಷ್ಣಿಸಿ ನೋಡತೊಡಗಿದೆ. ದಾರಿ ಹೋಕರಿಗೆ ನಾನು ಅವಳನ್ನ 'ಕಾಮಾತುರದಲ್ಲಿ' ನೋಡುತ್ತಿರುವೆನೇನೋ ಅನ್ನಿಸುವಷ್ಟು ನೆಟ್ಟ ದೃಷ್ಟಿಯಲ್ಲಿ ನೋಡುತ್ತಿದ್ದೆ.

ಮತ್ತೇ ಅವಳು ಇನ್ನೊಬ್ಬ ಹುಡುಗನ ಹತ್ತಿರ ಹೋಗಿ ಬೀಯರ್ ಕೊಡಲು ಅಂಗಲಾಚಿದಳು. ಅವನು ಕೊಡದೆ ದೂರ ಸರಿದ. ಆದರು ಅವಳು ಬಿಡಲಿಲ್ಲ. ಎದುರಿಗೆ ನಿಂತು ಅಪ್ಪಯ್ಯ ದಮ್ಮಯ್ಯ ಎಂದು ಅಂಗಲಾಚಿದರು ಅವನು ಕೊಡಲಿಲ್ಲ. ಹೆಣ್ಣು ಹುಡುಗಿ ಕೊಡಬಾರದು ಅಂತನೊ ಅಥವ ವ್ಯಸನಿಯಾಗಿದ್ದ ಅವಳನ್ನು ಗೋಳೈಯಿಸಿಕೊಳ್ಳ ಬೇಕಂತನೊ ಒಟ್ಟಿನಲ್ಲಿ ಅವನು ಅವಳನ್ನ ಸತಾಯಿಸುತ್ತಿದ್ದುದರ ಉದ್ದೇಶ ನನಗೆ ಅರ್ಥವಾಗಲಿಲ್ಲ. ಹಠಮಾರಿ ಸ್ವಭಾವವೋ ಅಥವ ಅಂಟಿದ ವ್ಯಸನವೋ ಅವಳು ಬಿಡದೆ ಬೀಯರ್ ಕೊಡುವಂತೆ ಅವನನ್ನ ಕಾಡತೊಡಗಿದಳು. ಅವನನ್ನ ಹಿಡಿದು ಬಿಗಿದಪ್ಪಿದಳು, ಕೂದಲಿಡಿದು ಹಿಗ್ಗಿದಳು. ಮುಖವನ್ನು ಕಚ್ಚಿದಳು ಕೆನ್ನೆಗೆ ಮುತ್ತಿಟ್ಟಳು. ಕೊನೆಗೆ ಅವನ ಕುತ್ತಿಗೆಯ ಸುತ್ತ ಕೈ ಬಳಸಿ ಹಿಡಿದು ಅವನ ಸೊಂಟದ ಸುತ್ತ ಕಾಲಾಕಿ ಅವನಿಗೆ ಜೋತು ಬಿದ್ದಳು.

ನಾನು ಬೆಚ್ಚಿದೆ, ನೆಟ್ಟ ನೋಟ ಬೆದರಿತು, ಸಣ್ಣಗೆ ಎದೆ ಝಲ್ ಎಂದಿತು. ಚಕ್ಕಲುಮಕ್ಕಲು ಹಾಕಿ ಕುಳಿತಿದ್ದ ನಾನು ಕಾಲು ಬಿಚ್ಚಿ ಕುಳಿತೆ. ಅವಳ ಆಟ ನೋಡಿ ಮನಸ್ಸು ಮುದುಡಿತು. ಬಿಯರ್ ಟಿನ್ ಕಸಿದುಕೊಂಡು ಗಟಗಟನೆ ಕುಡಿದಳು. ನಂತರ ಅಲ್ಲಿಂದ ಓಡಿಬಂದು ದಡಿಯನ ರಾಶಿಗೆ ಸೇರಿದಳು. ಸಿಗರೇಟ್ ಕೊಡಲು ಒತ್ತಾಯಿಸಿದಳು. ಅವನು ಸಹ ಕೊಡದೆ ಸತಾಯಿಸ ತೊಡಗಿದ. ಅವನತ್ತಿರನೂ ಕೊಸರಾಟದಲ್ಲಿ ತೊಡಗಿದಳು. ಅವರಿಬ್ಬರ ಕೊಸರಾಟದಲ್ಲಿ ಸಿಗರೇಟ್ ತುಂಡಾಯಿತು. ದಡಿಯ ಮತ್ತೊಂದು ಸಿಗರೇಟ್ ಹೊರತೆಗೆದ ಮತ್ತೇ ಅವಳು ಅವನ ಹಿಂದೆ ಬಿದ್ದಳು. ತಾನೇ ಹೊತ್ತಿಸುವುದಾಗಿ ಹಠಹಿಡಿದಳು ಲೈಟರ್ ಕಿತ್ತುಕೊಂಡು ಸಿಗರೇಟ್ ಹೊತ್ತಿಸಲು ಸಿದ್ದಳಾದಳು. ಅವನು ಸಿಗರೇಟ್ ತುಟಿಯಲ್ಲಿ ಕಚ್ಚಿ ಹಿಡಿದ. ಅವಳು ಲೈಟರ್ ಹೊತ್ತಿಸಿ ಸಿಗರೇಟಿಗೆ ಅಗ್ನಿ ಸ್ಪರ್ಶ ಮಾಡಿದಳು. ಅವನು ಒಂದೆರಡು ಉಸುರು ಹೀರಿ ಎಳೆದು ಅವಳಿಗೆ ಕೊಟ್ಟ. ಸಿಗರೇಟ್ ಸಿಕ್ಕ ಅವಳು ಹಿಂದೆ ದೂರ ಸರಿದಳು. ಒಂದೇ ಉಸುರಿನಲ್ಲಿ ಅರ್ದ ಸಿಗರೇಟ್ ಮುಗಿಯುವಂತೆ ಹೀರಿದಳು. ಅವನು ಕೇಳಿದರೂ ಕೊಡದೆ ದೂರ ದೂರ ಸರಿಯುತ್ತಿದ್ದಳು. ಅವಳ ಹೊಗೆ ಹೀರುವ ಭಾವಭಂಗಿ ನನ್ನ ತಬ್ಬಿಬ್ಬಾಗುವಂತೆ ಮಾಡಿತು. ಅವನು ಅವಳಿಂದ ಸಿಗರೇಟ್ ಮರಳಿ ಕಿತ್ತುಕೊಳ್ಳಲು ಹರ ಸಾಹಸ ಮಾಡಬೇಕಾಯಿತು. ಕೊನೆಗೆ ಅವಳಿಂದ ಕಿತ್ತುಕೊಳ್ಳುವಲ್ಲಿ ಜಯಶಾಲಿಯಾದ.

ಅವಳು ಮರಳಿ ಇನ್ನೊಬ್ಬನ ಹತ್ತಿರ ಹೊರಟಳು. ಅವನೂ ಸಹ ಅವಳಿಗೆ ಸಿಗರೇಟ್ ಕೊಡಲು ಮೀನಾಮೇಷ ಎಣಿಸತೊಡಗಿದ. ಬಿಡದ ಬೇತಾಳನಂತೆ ಅವನ ಬೆನ್ನತ್ತಿದಳು. ಈ ಬಾರಿಯ ಅವಳ ಆಟ ತಾರಕಕ್ಕೇರಿತ್ತು. ಅವನ ಅಂಗಿಯ ಗುಂಡಿ ಬಿಚ್ಚಿ ಅಂಗಿ ಕಿತ್ತೆಗೆದಳು. ಕೊಡದ ಅವನ ಮೈಮೇಲೆ ಬಿದ್ದಳು, ಅಟ್ಟಿಸಿಕೊಂಡು ಹೋದಳು. ಅವನ ಸೊಂಟದ ಸುತ್ತ ಕಾಲುಗಳನ್ನ ಸುತ್ತುಹಾಕಿ ಅವನ ದೇಹಕ್ಕೆ ಜೋತುಬಿದ್ದಳು. ಅಲ್ಲೇ ಜೋಲಿ ಹೊಡೆಯುತ್ತ ಸಿಗರೇಟ್ ಕಿತ್ತುಕೊಂಡು ಹೊಗೆ ಎಳೆದುಕೊಳ್ಳತೊಡಗಿದಳು. ಹೀರಿದ ಹೊಗೆಯನ್ನ ಅವನ ಮುಖದ ಮೇಲೆ ಊದಿದಳು. ಜೋಲಿ ಹೊಡೆಯುತ್ತ ಜೋತುಬಿದ್ದ ಅವಳನ್ನ ಬಿಗಿಯಾಗಿ ಹಿಡಿದುಕೊಂಡು ಸಾವರಿಸಿಕೊಳ್ಳುತ್ತ ನನ್ನ ಎದುರಿಗಿದ್ದ ಕಟ್ಟೆಯ ಮೇಲೆ ಕೂತ. ಸಿಗರೇಟ್ ತುದಿಯಲ್ಲಿದ್ದ ಬೂದಿಯನ್ನು ಅಲ್ಲೇ ಪಕ್ಕದಲ್ಲಿ ಕೂತಿದ್ದ ತನ್ನೊಬ್ಬ ಗುಂಪಿನವನ ನೆತ್ತಿಯ ಮೇಲೆ ಕೊಡವಿ ಕೆಡುವತೊಡಗಿದಳು. ಅವಳು ಸಿಗರೇಟ್ ಸೇದುವ ಗತ್ತು ಎಂತಹುದು! ಅವಳನ್ನ ಆವರಿಸಿದ ಉನ್ಮಾದ ಎಂತಹುದು! ಎಷ್ಟು ಬೀಯರ್ ಹಿರಿದಳು! ಎಷ್ಟೂ ಸಿಗರೇಟ್ ಹೊಗೆ ಸೇದಿದಳು! ಅಬ್ಬಾ.! ನೆಟ್ಟ ನೋಟದಲ್ಲಿ, ಯಾವುದೋ ಅಗೋಚರ ಆತಂಕದಲ್ಲಿ ನೋಡುತ್ತಲೇ ಇದ್ದೆ. ಒಮ್ಮೆ ದಿಗಿಲೆನಿಸಿತು.

ಇನ್ನೂ ಬೆಳೆಯುತ್ತಿರುವ ದೇಹ, ಹೆಣ್ಣುತನ ಚಿಗುರೊಡೆಯುವ ವಯಸ್ಸು. ಏನಾಗಬಹುದು ಅವಳ ಭವಿಷ್ಯದ ಬದುಕು. ಯಾಕೆ ಈ ಉದ್ದಟತನ? ಯಾವ ಸಂಸ್ಕಾರದ ಫಲವಿದು? ಯಾವ ಅಭಿವೃದ್ದಿ ಇದು? ಹದಿನೈದು ಹದಿನಾರರ ಹೊಸ್ತಿಲಲ್ಲಿರುವ ಈ ಹೆಣ್ಣಿನ ಜೀವನ ಇದೆ ದಾರಿಯಲ್ಲಿ ಸಾಗಿದರೆ ಅವಳ ಮುಂದಿನ ಬದುಕಿನ ಚಿಂತೆ ನನ್ನ ಕಾಡತೊಡಗಿತು.

ಮೂರು ಹುಡುಗಿಯರು ಆ ಕಡೆಯಿಂದ ನಡೆದು ಬರುತ್ತಿದ್ದರು. ಅದರಲ್ಲಿ ಒಬ್ಬಳು ಈಜು ಉಡುಗೆ ಉಟ್ಟಿದ್ದಳು. ದೇಹದ ಮುಕ್ಕಾಲು ಬಾಗ ಕಾಣಿಸುವಂತಹ ಆ ಉಡುಗೆಯ ಅಳತೆ. ಅದನ್ನು ನೋಡಿದ ಗುಂಪಿನ ಒಬ್ಬ ಹುಡುಗ ನನ್ನ "ಮರ್ಮ ಬಿಸಿ ಏರತೊಡಗಿತೋ ಅವಳ ಮೈಮಾಟನೋಡಿ" ಎಂದು ಹಿಂದಿಯಲ್ಲಿ ಎಲ್ಲರಿಗು ಕೇಳಿಸುವಂತೆ ಕೂಗಿದ. ಬೀಯರ್ ಹೀರಿ ಕೊಂಚ ಮತ್ತೇರಿದ್ದ ಆ ಎಳೆ ಕಣ್ಣುಗಳ ಬಾಲೆ ಚಪ್ಪಾಳೆ ತಟ್ಟುತ್ತ ಕುಣಿದು ಕುಪ್ಪಳಿಸತೊಡಗಿದಳು. ಅವಳು ಹೆಣ್ಣು ಅನ್ನುವುದನ್ನು ಮರೆತು ಇನ್ನೇನನ್ನೋ ಅಲ್ಲಿ ಈಜುಡುಗೆಯಲ್ಲಿ ನಡೆದು ಹೋಗುತ್ತಿದ್ದವಳ ಮೇಲೆ ಹೇಳುತ್ತಿದ್ದಳು. ಅವನ ಜೊತೆ ಸೇರಿಕೊಂಡು ಅಸಹ್ಯವಾಗುವಂತ ಮಾತುಗಳಿಂದ ಕೊಂಕು ಮಾಡುತ್ತಿದ್ದಳು.

ಆಧುನಿಕ ಬದುಕಿನ ಅಟ್ಟಹಾಸದ ಬಗ್ಗೆ ಕೇಳಿದ್ದೆ, ಸಿನಿಮಾ ಪ್ರಪಂಚದಲ್ಲಿ ವೀಕ್ಷಿಸಿದ್ದೆ, ಪುಸ್ತಕಗಳಲ್ಲಿ ಓದಿದ್ದೆ. ಅದರ ನೇರ ಅನುಭವವಿರಲಿಲ್ಲ. ಆದರೆ ಇವತ್ತು ಅಂತಹ ಘಟನೆಯ ನೋಡಿದ ಮನಸ್ಸು ವಿಚಿತ್ರವಾದ ತೊಳಲಾಟದಲ್ಲಿ ಯಾವುದೋ ದೀನ ಭಾವದಲ್ಲಿ ಏನೇನೋ ಪ್ರಶ್ನೆಗಳನ್ನ ತನ್ನಷ್ಟಕ್ಕೆ ತಾನೇ ಕೇಳಿಕೊಳ್ಳುತ್ತ, ತನ್ನಷ್ಟಕ್ಕೆ ತಾನೇ ಉತ್ತರ ಹುಡುಕುತ್ತಿತ್ತು. ಆ ಎಳೆ ಹುಡುಗಿಯ ಮುಂದಿನ ಬದುಕಿನ ಬಗ್ಗೆ ನೆನೆದು ಮರುಗಿತು. ಅವಳ ತಂದೆ ತಾಯಿಯರಿಗಾದರು ಮಕ್ಕಳ ಬಗ್ಗೆ ಕೊಂಚ ಕಾಳಜಿ ಬೇಡವೇ? ಕಳವಳಿಸುತ್ತ ಮನಸ್ಸು ತನ್ನಷ್ಟಕ್ಕೆ ತಾನೇ ಕೇಳಿಕೊಳ್ಳುತ್ತಿತ್ತು, ಯಾರ ತಪ್ಪು ಇದು? ಇದರ ಪರಿಣಾಮವೇನು? ಇದೇನಾ ಆಧುನಿಕ ಜಗತ್ತು? ಇದೇನ ನಮ್ಮ ಮುಂದುವರಿದ ಬದುಕು? ಇದೇನಾ ನಮ್ಮ ಶಿಕ್ಷಣದ ಸಾಧನೆ? ಯಾವ ಸಂಸ್ಕಾರದ ಮರದಲ್ಲಿ ಅರಳಿದ ಹೂ ಗೊಂಚಲಿದು? ಇದರ ಫಲ ಹೇಗಿರಬಹುದು? ಹೀಗೆ ವಿಚಿತ್ರ ಯಾತನೆಯಲ್ಲಿ ಅವಳನ್ನ ನೆಟ್ಟ ದೃಷ್ಟಿಯಲ್ಲಿ ನೊಡುತ್ತಲೇ ಇದ್ದೆ.

ಆಟಗಳೆನ್ನೆಲ್ಲಾ ಮುಗಿಸಿಕೊಂಡು ಆಕಡೆಯಿಂದ ಗೆಳೆಯರಾದ ಅನಿಲ್ ಹಾಗು ಪ್ರಶಾಂತ್ ಬಂದು ನನ್ನ ಕಡೆ ನೋಡಿ "ಏನು ಸ್ವಾಮಿಗಳೆ ತುಳಿಸಿ ಮಾಲೆ, ರುದ್ರಾಕ್ಷಿ ಧರಿಸಿಕೊಂಡು ತಪಸ್ಸು ಮಾಡುತ್ತಿದ್ದಿರೋ ಅಥವ ಇನ್ನೇನನ್ನಾದರು" . . . ಎಂದಾಗ ನನ್ನ ನೋಟ ಅವಳ ಕಡೆಯಿಂದ ವಿಚಲಿತವಾಯಿತು. ಆ ಜಾಗ ಬಿಟ್ಟು ಎಲ್ಲರು ಹೊರಟೆವು. ಸ್ವಲ್ಪ ಮುಂದೆ ಹೋದ ನಂತರ ತಡೆಯಲಾರದೆ ಒಮ್ಮೆ ಹಿಂತಿರುಗಿ ಅವಳಕಡೆ ನೋಡಿದ ನನ್ನ ಮನಸ್ಸಿನಲ್ಲಿ ಮತ್ತೇ ಅದೇ ಪ್ರಶ್ನೆ ಮೂಡಿತು, ಅವಳ ಮುಂದಿನ ಬದುಕು?

** ಕುಕೂ...
೧೪/೦೪/೦೮
ಪುಣೆ.

Rating
No votes yet