ಪ್ರಕೃತಿ ದೇವತೆ ದೇವಕುಂದ

ಪ್ರಕೃತಿ ದೇವತೆ ದೇವಕುಂದ

ಬರಹ

೧೬ ಅಕ್ಟೋಬರ್ ೨೦೦೮.


ಮೇಗಣಿಯಿಂದ ದೂರದಲ್ಲಿ ತಲೆಯೆತ್ತಿ ನಿಂತಿರುವ ಬೆಟ್ಟವೊಂದು ಗೋಚರಿಸುತ್ತದೆ. ಇದೇ ದೇವಕುಂದ. ಈ ಶ್ರೇಣಿಯ ಬೆಟ್ಟಗಳಲ್ಲಿ ಎತ್ತರದಲ್ಲಿ ಕೊಡಚಾದ್ರಿಯ ನಂತರದ ಸ್ಥಾನ ಇದಕ್ಕೆ. ಮುಂಜಾನೆ ಬಿಸಿಲೇರುವ ಮೊದಲೇ ದೇವಕುಂದದ ತುದಿಯಲ್ಲಿರಬೇಕು ಎಂಬ ಪ್ಲ್ಯಾನ್ ಹಾಕಿ ಮುನ್ನಾ ದಿನವೇ ಮೇಗಣಿ ತಲುಪಿ ಪ್ರಶಸ್ತ ಸ್ಥಳವನ್ನು ಆಯ್ಕೆ ಮಾಡಿ ಡೇರೆ ಹಾಕಿದೆವು. ನಾವು ಡೇರೆ ಹಾಕಿದ ಸ್ಥಳವಂತೂ ಅದ್ಭುತವಾಗಿತ್ತು. ಒಂದೆಡೆ ಕೊಡಚಾದ್ರಿಯ ರಮಣೀಯ ನೋಟ. ವಿರುದ್ಧ ದಿಕ್ಕಿನಲ್ಲಿ ಕೈ ಬೀಸಿ ಕರೆಯುತ್ತಿದ್ದ ದೇವಕುಂದ. ಇನ್ನೊಂದೆಡೆ ಬಹಳ ಉದ್ದದವರೆಗೂ ಚಾಚಿ ನಿಂತಿರುವ ಹುಲ್ಲುಮಡಿ ಬೆಟ್ಟ ಮತ್ತು ಮಗದೊಂದೆಡೆ ಕುನ್ನಿಕಟ್ಟೆ ಬೆಟ್ಟ. ಪ್ರಕೃತಿಯ ಅಪೂರ್ವ ನೋಟ.

ಅಂದು ಆ ಚಾರಣಕ್ಕೆ ನಾವು ನಾಲ್ವರೇ ಹೊರಟಿದ್ದೆವು. ಅಡಿಗ ಸಾರ್ ನಮ್ಮ ಲೀಡರ್. ಹುಣ್ಣಿಮೆ ಚಂದ್ರನ ಬೆಳಕಿನಲ್ಲಿ ರಾಗಣ್ಣ ಮತ್ತು ಮಾಧವರ ಸಹಾಯದಿಂದ ಅಡಿಗರು ಟೆಂಟನ್ನು ಹಾಕಿದರು. ನಂತರ ಕೂಡಲೇ ಅಡಿಗರು ಅಡಿಗೆ ಮಾಡಲು ಆರಂಭಿಸಿದರು. ನಾವು ಅವರಿಗೆ ಸಣ್ಣ ಪುಟ್ಟ ಸಹಾಯವನ್ನಷ್ಟೇ ಮಾಡುತ್ತಿದ್ದೆವು. ಸ್ವಲ್ಪ ಹೊತ್ತಿನಲ್ಲೇ ಊಟ ರೆಡಿ. ಅಡಿಗರ ಕೈ ರುಚಿಯೇ ಸೂಪರ್. ಆ ಹುಣ್ಣಿಮೆ ರಾತ್ರಿಯಲ್ಲಿ, ಡೇರೆ ಹೊರಗೆ ತಣ್ಣಗೆ ಗಾಳಿಯಲ್ಲಿ ಕುಳಿತು, ಬೆಳದಿಂಗಳ ರಾತ್ರಿಯಲ್ಲಿ ಮಿನುಗುತ್ತಿದ್ದ ಕೊಡಾಚಾದ್ರಿ ಮತ್ತು ದೇವಕುಂದಗಳ ಮನತಣಿಯುವ ನೋಟವನ್ನು ಆನಂದಿಸುತ್ತಾ, ಬಾಳೆ ಎಲೆ ಊಟ ಮಾಡುವಾಗ ಅನುಭವಿಸಿದ ಪರಮಾನಂದ ಇನ್ನೆಲ್ಲಾದರೂ ಸಿಗಬಹುದೇ.

 

 

ಎಂಟು ಮಂದಿ ಮಲಗಬಹುದಾದ ಡೇರೆಯೊಳಗೆ ನಾವು ನಾಲ್ವರೇ ಆರಾಮವಾಗಿ ಬಿದ್ದುಕೊಂಡೆವು. ನನಗಂತೂ ಎಲ್ಲೇ ಮಲಗಿದರೂ, ಎಷ್ಟೇ ಗಲಾಟೆಯಿದ್ದರೂ ನಿದ್ದೆ ಬೀಳುತ್ತದೆ. ಹೀಗಿರುವಾಗ ರಭಸವಾದ ಗಾಳಿ ಬೀಸಿ ರಾತ್ರಿ ಸುಮಾರು ೧೨ ಗಂಟೆಗೆ ಡೇರೆಯ ಹುಕ್-ಗಳು ಹಾರಿಹೋಗಿದ್ದವು. ಉಳಿದ ಮೂವ್ವರು ಅದನ್ನು ಸರಿಪಡಿಸಿ ಮಲಗಿದ್ದರು. ನನಗದು ಗೊತ್ತೇ ಆಗಲಿಲ್ಲ. ಆ ಪರಿಯ ಸುಖ ನಿದ್ರೆಯಲ್ಲಿದ್ದೆ ನಾನು. ಆದರೆ ಬೆಳಗ್ಗಿನ ಜಾವ ೩ ಗಂಟೆಗೆ ತಲೆಗೆ ಏನೋ ತಾಗುತ್ತಿರುವಂತೆ ಭಾಸವಾದಾಗ ಎಚ್ಚರವಾಯಿತು. ಗಾಳಿಯ ರಭಸಕ್ಕೆ ಡೇರೆಯ ಅಧಾರಕ್ಕಿರುವ ಸಣ್ಣ ರಾಡುಗಳು ಸಂಪೂರ್ಣವಾಗಿ ಬಗ್ಗಿ ತಲೆಗೆ ತಾಗುತ್ತಿದ್ದವು. ಆದರೂ ಹಾಗೇ ಮಲಗಿಕೊಂಡೆ. ಅಡಿಗ ಸಾರ್ ಮತ್ತು ಮಾಧವ ಮತ್ತೆ ಹೊರನಡೆದು ಎಲ್ಲವನ್ನು ಸರಿಪಡಿಸಿ ಬಂದರು. ಮೇರುತಿ ಪರ್ವತದಲ್ಲೂ ಇದೇ ರೀತಿ ಗಾಳಿ ಬೀಸುತ್ತಿತ್ತು. ಆದರೆ ಮೇರುತಿ ಪರ್ವತದಲ್ಲಿ ನಾವು ಇದೇ ಡೇರೆಯೊಳಗೆ ೧೦ ಜನರು ಮಲಗಿದ್ದರೆ ಇಲ್ಲಿ ನಾಲ್ಕೇ ಮಂದಿ! ಪ್ರಕೃತಿಯ ಮಡಿಲಲ್ಲಿ ಈ ಹುಣ್ಣಿಮೆ ರಾತ್ರಿಯನ್ನು ಮನಸಾರೆ ಆನಂದಿಸಿದೆವು.

ಮುಂಜಾನೆ ೮ಕ್ಕೇ ದೇವಕುಂದದ ದಾರಿ ತುಳಿದೆವು. ಮೇಗಣಿ ಹಳ್ಳಿಯ ಕೊನೆಗಿರುವ ಹಳ್ಳವೊಂದನ್ನು ದಾಟಿ ಸ್ವಲ್ಪ ದೂರ ನಡೆದರೆ ಕಾಡು ಆರಂಭ. ಸುಮಾರು ಅರ್ಧ ಗಂಟೆ ಕಾಡಿನಲ್ಲಿ ಚಾರಣ. ನಂತರದ ಚಾರಣವೆಲ್ಲಾ ಖುಲ್ಲಾ ಜಾಗದಲ್ಲಿ. ಎಲ್ಲೆಡೆ ಪ್ರಕೃತಿಯ ಅಭೂತಪೂರ್ವ ವಿನ್ಯಾಸಗಳು. ಕೊಡಾಚಾದ್ರಿಯಂತೂ ತಾನೇ ಕಿಂಗು ಎಂದು ಭಾರೀ ಪೋಸು ನೀಡುತ್ತಲೇ ಇತ್ತು. ಮೊಣಕಾಲಿನಷ್ಟು ಎತ್ತರಕ್ಕೆ ಬೆಳೆದು ನಿಂತಿದ್ದ ಹುಲ್ಲಿನ ನಡುವೆ ದಾರಿ ಮಾಡಿಕೊಂಡು ಗಾಳಿಗುಡ್ಡ ಸಮೀಪಿಸಿದೆವು. ಗಾಳಿಗುಡ್ಡದ ತುದಿ ತಲುಪಬೇಕಾದರೆ ಒಂದೈದು ನಿಮಿಷದ ಕಠಿಣ ಏರುಹಾದಿ. ಹುಲ್ಲನ್ನೇ ಆಧಾರವಾಗಿಟ್ಟುಕೊಂಡು ಮೇಲೇರಬೇಕು. ಗಾಳಿಗುಡ್ಡದ ಮೇಲೆ ರಭಸವಾಗಿ ಗಾಳಿ ಬೀಸುವುದರಿಂದ ಹಾಗೆ ಹೆಸರು. ಮುಂದೆ ಹದ್ದುಬರೆಯ ಪೂರ್ಣ ನೋಟ ಮತ್ತು ಅದರಾಚೆಗೆ ದೇವಕುಂದದ ತ್ರಿಕೋಣ ತುದಿ ಮಾತ್ರ ಗೋಚರಿಸುತ್ತಿತ್ತು. ಎಡಕ್ಕೆ ಉದ್ದಕ್ಕೂ ಚಾಚಿ ನಿಂತಿರುವ ಹುಲ್ಲುಮಡಿ. ಹಿಂದೆ ದೂರದಲ್ಲಿ ಕೊಡಚಾದ್ರಿ ಮತ್ತು ಸಮೀಪದಲ್ಲಿ ಕುನ್ನಿಕಟ್ಟೆ.

 

ಗಾಳಿಗುಡ್ಡದಿಂದ ಹದ್ದುಬರೆಗೆ ಹೋಗುವ ದಾರಿ ಈಚಲು ಮರಗಳಿಂದ ಕೂಡಿದೆ. ಇವುಗಳ ನಡುವೆ ದಾರಿಮಾಡಿಕೊಂಡು ಸಾಗುವುದೇ ಸುಂದರ ಅನುಭವ. ಇಲ್ಲಿ ಚಾರಣಕ್ಕೆಂದು ಬಂದವರಲ್ಲಿ ನಾವೇ ಪ್ರಥಮ ಎಂದು ಒಂಥರಾ ರೋಮಾಂಚನ. ಈಚಲು ಮರಗಳ ಈ ತೋಪು ಏರು ಹಾದಿಯಿಂದ ಕೂಡಿದೆ. ಅಲ್ಲಲ್ಲಿ ನಿಂತು ಅದ್ಭುತವಾದ ನೋಟವನ್ನು ಆನಂದಿಸುತ್ತಾ ಹದ್ದುಬರೆ ತಲುಪಿದೆವು. ಹದ್ದುಬರೆಯಿಂದ ಗಾಳಿಗುಡ್ಡದ ತುದಿಯಲ್ಲಿ ನಾವು ವಿಶ್ರಮಿಸಿದ ಬಂಡೆಯು ಸ್ಪಷ್ಟವಾಗಿ ಕಾಣುತ್ತಿತ್ತು. ಹದ್ದುಬರೆಯ ತುದಿಯಲ್ಲಿ ನಿಂತರೆ ಕಣಿವೆ. ಅಲ್ಲೇ ಸಮೀಪದಲ್ಲಿ ನೀರಿನ ಸೆಲೆಯೊಂದಿತ್ತು!!! ಬಂಡೆಗಳ ನಡುವಿನಲ್ಲಿ ಅಲ್ಪ ಪ್ರಮಾಣದಲ್ಲಿ ನೀರು ಜಿನುಗಿ ಕಣಿವೆಯ ಆಳಕ್ಕೆ ಹರಿಯುತ್ತಿತ್ತು.

 

ಹದ್ದುಬರೆಯ ಎಡಕ್ಕೆ ರಾಮರಕ್ಕಿ ಎಂಬ ಬೆಟ್ಟ. ಇದು ಸ್ವಲ್ಪ ಕೆಳಮಟ್ಟದಲ್ಲಿದ್ದು ಹುಲ್ಲುಮಡಿಯ ಅಗಾಧ ಗಾತ್ರದ ಮುಂದೆ ಕುಬ್ಜವಾಗಿ ಕಾಣುತ್ತದೆ. ಹದ್ದುಬರೆ ಮತ್ತು ದೇವಕುಂದವನ್ನು ಬೇರ್ಪಡಿಸುವ ಮಳೆಕಾಡಿನ ಅಂಚಿನಲ್ಲೇ ಸಾಗಿದೆವು. ಹೀಗೆ ಸುಮಾರು ೨೦ ನಿಮಿಷದ ಚಾರಣ ಕಾಡಿನ ಬದಿಯಿಂದಲೇ ಸಾಗಿತ್ತದೆ. ಹದ್ದುಬರೆಯಲ್ಲೇ ಕಾಡನ್ನು ಹೊಕ್ಕಿ ಮತ್ತೊಂದು ಬದಿಯಿಂದ ಹೊರಬಂದು ನೇರವಾಗಿ ದೇವಕುಂದವನ್ನೇರಬಹುದು. ಆದರೆ ಪ್ರಕೃತಿಯ ನೋಟವನ್ನು ಆನಂದಿಸಬೇಕಾದರೆ ಮಳೆಕಾಡಿನ ಅಂಚಿನಲ್ಲೇ ಸಾಗಿ, ಮಳೆಕಾಡಿನ ಅಗಲ ಕಿರಿದಾಗಿರುವಲ್ಲಿ ಒಳ ಹೊಕ್ಕಬೇಕು. ನಾವೂ ಹಾಗೇ ಮಾಡಿದೆವು. ಎಡಕ್ಕೆ ಹುಲ್ಲುಮಡಿ ಹಾಗೂ ರಾಮರಕ್ಕಿ, ಬಲಕ್ಕೆ ಎತ್ತರದಲ್ಲಿ ದೇವಕುಂದ ಮತ್ತು ಹಿಂದೆ ಕೊಡಚಾದ್ರಿ ಹಾಗೂ ಕುನ್ನಿಕಟ್ಟೆ. ಈ ನೋಟವನ್ನು ಆನಂದಿಸುತ್ತಾ ಮುಂದೆ ಸಾಗಿ ಮಳೆಕಾಡಿನ ಅಗಲ ಕಿರಿದಾಗಿರುವಲ್ಲಿ ಕಾಡಿನೊಳಗೆ ಹೊಕ್ಕರೆ ಅಲ್ಲೊಂದು ಆಘಾತಕಾರಿ ದೃಶ್ಯ.

ನಾಲ್ಕು ಸಣ್ಣ ಮರಗಳನ್ನು ಕಡಿದು ಅವನ್ನು ಚೌಕಾಕಾರದ ನಾಲ್ಕು ತುದಿಯಲ್ಲಿ ಆಧಾರವಾಗಿ ನೆಲದಲ್ಲಿ ಊರಲಾಗಿತ್ತು. ಮೇಲಿನಿಂದ ಉದ್ದಕ್ಕೂ ಅಗಲಕ್ಕೂ ಚಪ್ಪರದಂತೆ ಮತ್ತಷ್ಟು ರೆಂಬೆ ಕೊಂಬೆಗಳನ್ನು ಹಾಕಲಾಗಿತ್ತು. ಕೆಳಗಡೆ ಬೆಂಕಿಯನ್ನು ಮಾಡಿದ ಕುರುಹುಗಳು. ಸ್ವಲ್ಪ ಕೂಲಂಕೂಷವಾಗಿ ಅಲ್ಲಿದ್ದ ಬೂದಿಯನ್ನು ಪರಿಶೀಲಿಸಿದಾಗ ಕಾಡುಕೋಣದ ಕೊಂಬುಗಳು ಸಿಕ್ಕವು. ಕಾಡುಪ್ರಾಣಿಯನ್ನು ಕೊಂದು, ಚರ್ಮವನ್ನು ಸುಲಿದು ಇಲ್ಲೇ ಹದವಾಗಿಸುವ ವ್ಯವಸ್ಥೆ. ಚರ್ಮವನ್ನೂ ಮಾಂಸವನ್ನೂ ಬೇರ್ಪಡಿಸುವ ಸುವ್ಯವಸ್ಥೆ! ಇದನ್ನು ನಾವು ನಿರೀಕ್ಷಿಸಿರಲಿಲ್ಲ.

ಐದೇ ನಿಮಿಷದಲ್ಲಿ ಮಳೆಕಾಡಿನಿಂದ ಹೊರಬಂದೆವು. ಮುಂದೆನೇ ದೇವಕುಂದ. ನಿಧಾನವಾಗಿ ಮೇಲೇರತೊಡಗಿದೆವು. ದೇವಕುಂದದ ಕೊನೆಯ ೨೦ ನಿಮಿಷದ ಚಾರಣ ಏರುಹಾದಿ. ಮೇಲೇರುತ್ತಾ ಹೋದಂತೆ ಹುಲ್ಲುಮಡಿ, ರಾಮರಕ್ಕಿ, ಹದ್ದುಬರೆ, ಕುನ್ನಿಕಟ್ಟೆ, ಗಾಳಿಗುಡ್ಡ ಎಲ್ಲವೂ ಸಣ್ಣದಾಗತೊಡಗಿದವು. ಸುಮಾರು ೩ ತಾಸಿನ ಚಾರಣದ ಬಳಿಕ ೧೧ ಗಂಟೆಗೆ ದೇವಕುಂದದ ತುದಿ ತಲುಪಿದೆವು. ಈಗ ದೇವಕುಂದದ ಇನ್ನೊಂದು ಬದಿಯ ಅದ್ಭುತ ನೋಟವನ್ನು ಆನಂದಿಸುವ ಭಾಗ್ಯ. ದೂರದಲ್ಲಿತ್ತು ಅಂಬಾರಗುಡ್ಡ. ಸಮೀಪದಲ್ಲಿತ್ತು ಕುನ್ನಿಕಟ್ಟೆ. ಇವೆರಡರ ನಡುವೆ ’ಕಡವೆ ಮೆಟ್ಟಿದ ಕಲ್ಲು’ ಎಂಬ ಹೆಸರಿನ ಬೆಟ್ಟ. ಅಂಬಾರಗುಡ್ಡದಾಚೆಗೆ ಬಹಳ ದೂರದಲ್ಲಿ ಲಿಂಗನಮಕ್ಕಿ ಹಿನ್ನೀರಿನ ದೃಶ್ಯ.

ದೇವಕುಂದದಿಂದ ಮೇಗಣಿ ಸಣ್ಣದಾಗಿ ಕಾಣುತ್ತಿತ್ತು. ಅಲ್ಲೊಂದು ಅರ್ಧ ಗಂಟೆ ಸಂತಸಮಯ ಸಮಯವನ್ನು ಕಳೆದೆವು. ಕೆಳಗಿಳಿಯುವಾಗ ಬೇರೆ ದಾರಿಯಲ್ಲಿ ಬಂದೆವು. ಬೆಟ್ಟವನ್ನು ನೇರವಾಗಿ ಇಳಿಯತೊಡಗಿದರಿಂದ ಸ್ವಲ್ಪ ಬೇಗನೇ ಬಂದೆವು. ದೇವಕುಂದದಿಂದ ಸ್ವಲ್ಪ ಕೆಳಗಿರುವ ಮಳೆಕಾಡಿನಲ್ಲಿ ಯಾವಾಗಲೂ ನೀರು ಹರಿಯುತ್ತಿರುತ್ತದೆ. ಇಲ್ಲಿ ಊಟ. ಅಡಿಗರು ಒಂದಷ್ಟು ಚಪಾತಿ, ಸೂಪರ್ ಚಟ್ಣಿ, ತುಪ್ಪ ಮತ್ತು ಬೆಲ್ಲ ಇವಿಷ್ಟನ್ನು ಮನೆಯಿಂದಲೇ ತಂದಿದ್ದರು. ಚಾರಣದಲ್ಲಿ ಅಡಿಗರಿದ್ದಾಗ ಹೊಟ್ಟೆಗೆ ಯಾವುದೇ ತೊಂದರೆಯಿರುವುದಿಲ್ಲ ಮತ್ತು ಹಸಿವಿನಿಂದ ಯಾರೂ ಬಳಲುವುದಿಲ್ಲ. ಚಪಾತಿಯ ಮೇಲೆ ಬೆಲ್ಲ ಮತ್ತು ತುಪ್ಪ ಸುರಿದು ’ರೋಲ್’ ಮಾಡಿ ತಿನ್ನತೊಡಗಿದಾಗ ಆಯಾಸವೆಲ್ಲಾ ಮಾಯವಾದ ಅನುಭವ. ನಂತರ ಚಪಾತಿ ಮತ್ತು ಚಟ್ಣಿಯ ಕಾಂಬಿನೇಷನ್. ಚಾರಣದ ಮುನ್ನಾ ದಿನ, ’ಫುಡ್ ಎಲ್ಲಾ ನಾನು ನೋಡಿಕೊಳ್ಳುತ್ತೇನೆ. ನೀವೇನೂ ತರುವುದು ಬೇಡ’ ಎಂದು ಫೋನಾಯಿಸುವ ಅಡಿಗರೇ, ನಿಮಗೆ ಸಾಷ್ಟಾಂಗ ನಮಸ್ಕಾರ.

ನಮಗರಿವಿಲ್ಲದಂತೆ ನಾವು ಹದ್ದುಬರೆಯನ್ನು ದಾಟಿ ಬಂದುಬಿಟ್ಟಿದ್ದೆವು. ನೇರವಾಗಿ ಕೆಳಗಿಳಿದಿದ್ದರಿಂದ ದೇವಕುಂದದ ಬಳಿಕ ಹದ್ದುಬರೆಯ ಕೆಳಗೆ ಅದರ ಪಾರ್ಶ್ವದಲ್ಲೇ ಇಳಿದುಬಿಟ್ಟಿದ್ದೆವು! ಗಾಳಿಗುಡ್ಡದ ಮೇಲೆ ಸ್ವಲ್ಪ ವಿಶ್ರಮಿಸಿ ನಂತರ ಸೀದಾ ಮೇಗಣಿಯ ಹಾದಿ ತುಳಿದೆವು. ನಾನು ತುಂಬಾ ಎಂಜಾಯ್ ಮಾಡಿದ ಟ್ರೆಕ್ ಇದು.