ಉದಯವಾಣಿಯಲ್ಲಿ ಬಂದಿರುವ ಕ್ರಿಸ್ಮಸ್ ಬಗ್ಗೆ ಓದಿರುವ ಕೆಲವು ಕವನಗಳು- ೩ ಗುರುವೆ! -- ಕವಿ:- ಅಂಬಿಕಾತನಯದತ್ತ

ಉದಯವಾಣಿಯಲ್ಲಿ ಬಂದಿರುವ ಕ್ರಿಸ್ಮಸ್ ಬಗ್ಗೆ ಓದಿರುವ ಕೆಲವು ಕವನಗಳು- ೩ ಗುರುವೆ! -- ಕವಿ:- ಅಂಬಿಕಾತನಯದತ್ತ

ಬರಹ

ಹೆಗಲ ಮೇಲಿರಲಿ ನಿನ್ನ ಕೈ ಗುರುವೆ!
ನಿನ್ನ ಶೂಲಕ್ಕೆ, ನನ್ನ ಕೈ
ನಿನ್ನ ಜೊತೆಗಿಹುದು ನನ್ನ ಮೈ
ನೀನೆ ನನ್ನನ್ನು ಎತ್ತಿ ಒಯ್
ಭಾರವೆಂದರೂ ಹಗುರೆ ಸೈ
ಜೀವ ಕುಣಿಯುವುದು ಥಕ್ ಥೈ
ಹಣವ ಮುರಿಸಿದರೆ ಆಣೆ ಪೈ
ಮರದ ಬಾಳನ್ನು ಅಮರಗೈ
ಧರ್ಮ ಜಯ್. ಧರ್ಮ ಜಯ್,
ಧರ್ಮ ಜಯ್.
ಹೆಗಲ್ನೆರಡನ್ನು ರೆಕ್ಕೆಗೈ,
ಮುಂದೆ ವೈ, ಮೇಲೆ ವೈ
ಹಾಸು ಹೊಕ್ಕನ್ನು ಹೀಗೆ ನೆಯ್
ಬತ್ತಿ ಹೋದೀತು ನೆಯ್ಯ ಹೊಯಿ.

---------------------------------
೪. ಡಿಸೆಂಬರಲ್ಲವೆ ಈಗ? ----ಕವಿ:- ಕೆ.ಎಸ್.ನರಸಿಂಹಸ್ವಾಮಿ

ಡಿಸೆಂಬರಲ್ಲವೆ ಈಗ?
ಇರುಳುಚಿಲ್ಲಿದ ಹಾಲು ಬೆಳ್ದಿಂಗಳಲ್ಲಿ,
ನಕ್ಷತ್ರಗಳ ಕೆಳಗೆ ಸಾಗುವಾಗ ಕಣ್ಣಿಗೆ ಬೀಳುವುದಿಲ್ಲವೆ
ಬೆಳೆದ ಮರಗಳ ತುದಿಯ ಬೆಳ್ಳಿಯಲೆಗಳ ಮೇಲೆ
ಗೋಪುರದಲ್ಲಿ ಶಿಲುಬೆ?

ಕ್ರಿಸ್ಮಸ್ ರಾತ್ರಿಗಂತು ಇನ್ನಷ್ಟು ಚಳಿ ಬೇಕು
ಹಾದಿ ಬೀದಿಗಳಲ್ಲಿ ಕ್ರಿಸ್ಮಸ್ ಗಿಡಗಳದ್ದು
ಮುತ್ತುರತ್ನಗಳಂಥ ಬೆಳಕು ತೂಗಿ
ಕಿಟಕಿಗಾಜಿನ ಹಿಂದೆ ಕಿರಿನಗೆಯರಳಬೇಕು;
ನೃತ್ಯಗೀತದ ನಲಿವು ಉಕ್ಕಿ ಹರಿಯಬೇಕು;
ಮೃದು ನುಡಿಗಳಲ್ಲಿ ಸ್ವಾಗತಿಸಬೇಕು.

ಪ್ರಾರ್ಥನೆಯ ಕೊರಳು ಬಾನಿಗೆ ಏರಬೇಕು:
ಎತ್ತರದ ಘಂಟೆಗಳು ಎಡೆಬಿಡದೆ ಮೊಳಗಬೇಕು:
ಶಾಂತಿ ನೆಲಸಬೇಕು.
ಬಯಲ ಹಸಿರಿನ ತುಂಬ ಹೂವಾಡಬೇಕು
ಪ್ರೀತಿಯೇ ದೇವರೆಂದವನ ನೆನೆಯಬೇಕು:
ಕಣ್ಣಹನಿಗಳ ನಡುವೆ ಕೈಮುಗಿಯಬೇಕು.

ಎಲ್ಲರಿಗೂ ಕ್ರಿಸ್ಮಸ್ ಹಬ್ಬದ ಹಾರ್ದಿಕ ಶುಭಾಶಯಗಳು.