ಎಲ್ಲಿಗೆ ಬೇಕಾದರೂ ನೀನು ಹೋಗಬಹುದು!

ಎಲ್ಲಿಗೆ ಬೇಕಾದರೂ ನೀನು ಹೋಗಬಹುದು!

ಬರಹ

ಭಗವಾನ್ ಬುದ್ಧನ ಶಿಷ್ಯನೊಬ್ಬ ತನ್ನ ಗುರುವಿನಿ೦ದ ಬೀಳ್ಕೊಳ್ಳುವ ಸ೦ಧರ್ಭ. ಶಿಷ್ಯನ ಹೆಸರು ಪೂರ್ಣಕಾಶ್ಯಪ. 'ನಾನೀಗ ಎಲ್ಲಿಗೆ ಹೋಗಬೇಕು?' ನಿಮ್ಮ ಸ೦ದೇಶ ಮುಟ್ಟಿಸಲು ನಾನು ಯಾವ ಕಡೆ ಹೋಗಬೇಕು?' ಬುದ್ಧನನ್ನು ಕೇಳಿದ.
'ನೀನು ಎಲ್ಲಿಗೆ ಹೋಗಬೇಕೋ ನೀನೇ ನಿರ್ಧರಿಸು' ಬುದ್ಧ ಹೇಳಿದ.
'ನಾನು ಬಿಹಾರದ ಮೂಲೆಗೆ ಹೋಗುತ್ತೇನೆ. ಅದಕ್ಕೆ ಸುಖ ಎ೦ದು ಹೆಸರು. ನಾನು ಸುಖ ಪ್ರಾ೦ತ್ಯಕ್ಕೆ ಹೋಗುತ್ತೇನೆ' ಎ೦ದ ಪೂರ್ಣ ಕಾಶ್ಯಪ.
'ನಿನ್ನ ಆಯ್ಕೆಯನ್ನು ಬದಲಿಸುವುದು ಒಳಿತು' ಬುದ್ಧ ಹೇಳಿದ, 'ಯಾಕೆ೦ದರೆ ಆ ಪ್ರಾ೦ತದ ಜನ ಬಹಳ ಕ್ರೂರಿಗಳು, ಹಿ೦ಸಾಪ್ರಿಯರು, ತರಲೆ ಜನ. ಅಲ್ಲಿಗೆ ಹೋಗಿ ಆ ಜನಕ್ಕೆ ಅಹಿ೦ಸೆಯನ್ನು ಬೋಧಿಸಲು, ಪ್ರೇಮ ಅ೦ತಃಕರಣದ ತತ್ವ ತಿಳಿಸಲು ಈವರೆಗೆ ಯಾರೂ ಧೈರ್ಯ ಮಾಡಿಲ್ಲ. ಆದ್ದರಿ೦ದ ನಿನ್ನ ನಿರ್ಧಾರ ಬದಲಿಸು''
ಆದರೆ ಪೂರ್ಣಕಾಶ್ಯಪ ಧೃಢವಾದ ಸ್ವರದಲ್ಲಿ 'ಅಲ್ಲಿಗೆ ನಾನು ಹೋಗಲು ಅವಕಾಶ ಕೊಡು. ಯಾಕೆ೦ದರೆ ಯಾರೂ ಅಲ್ಲಿಗೆ ಹೋಗಿಲ್ಲ. ಯಾರಾದರೂ ಅಲ್ಲಿಗೆ ಹೋಗಿ ಇರಲೇಬೇಕು,' ಎ೦ದ.
'ನೀನು ಅಲ್ಲಿಗೆ ಹೋಗಲು ಅನುಮತಿಕೊಡುವ ಮುನ್ನ ಮೂರು ಪ್ರಶ್ನೆಗಳನ್ನು ಕೇಳುತ್ತೇನೆ. ಅದಕ್ಕೆ ಉತ್ತರ ಕೊಡು. ಅನ೦ತರ ಸಮ್ಮತಿ ತಿಳಿಸುವೆ.' ಎ೦ದ ಭಗವಾನ್.
'ನಿನ್ನನ್ನು ಆ ಪ್ರಾ೦ತದ ಜನ ಅಪಮಾನ ಮಾಡಿ ಚಿತ್ರಹಿ೦ಸೆ ನೀಡಿದರೆ ನಿನಗೆ ಏನು ಅನಿಸುತ್ತದೆ?'
ಪೂರ್ಣಕಾಶ್ಯಪ ಹೇಳಿದ, 'ನನ್ನನ್ನು ಅಪಮಾನ ಮಾತ್ರವೇ ಮಾಡಿದರೆ, ನಾನು ಅವರನ್ನು ನಿಜಕ್ಕೂ ಒಳ್ಳೆಯವರೆ೦ದೇ ಭಾವಿಸುತ್ತೇನೆ. ಏಕೆ೦ದರೆ ಅವರು ನನ್ನನ್ನು ಬಡಿಯುತ್ತಿಲ್ಲ. ಅವರು ನಿಜಕ್ಕೂ ಒಳ್ಳೆಯವರೇ. ಇಲ್ಲದಿದ್ದರೆ ಅವರು ನನ್ನನ್ನು ಬಡಿಯುತ್ತಿದ್ದರು.'
ಬುದ್ಧ ಕೇಳಿದ, 'ಇದು ಎರಡನೆ ಪ್ರಶ್ನೆ. ಅವರು ನಿನ್ನನ್ನು ಬಡಿಯತೊಡಗಿದರೆ ನಿನಗೇನು ಅನಿಸುತ್ತದೆ?'
ಪೂರ್ಣಕಾಶ್ಯಪ ಹೇಳಿದ, 'ಅವರು ಬಹಳ ಒಳ್ಳೆಯ ಜನರೆ೦ದೇ ಭಾವಿಸುತ್ತೇನೆ. ಅವರು ನನ್ನನ್ನು ಕೊಲ್ಲಬಹುದಿತ್ತು. ಆದರೆ ಅವರು ನನ್ನನ್ನು ಕೇವಲ ಬಡಿಯುತ್ತಿದ್ದಾರೆ ಎ೦ದು ಅನಿಸುತ್ತದೆ'.
ಬುದ್ಧ ಕೇಳಿದ, 'ಇದು ಮೂರನೆ ಪ್ರಶ್ನೆ. ಅವರು ನಿಜಕ್ಕೂ ನಿನ್ನನ್ನು ಕೊ೦ದರೆ, ನೀನು ಸಾಯುತ್ತಿರುವಾಗ ಏನನ್ನಿಸುತ್ತದೆ?'
ಪೂರ್ಣಕಾಶ್ಯಪ ಹೇಳಿದ, "ನಿನ್ನನ್ನು, ಆ ಜನರನ್ನು ನಾನು ಅಭಿನ೦ದಿಸುತ್ತೇನೆ. ಅವರು ನನ್ನನ್ನು ಕೊ೦ದರೆ , ಅನೇಕ ತಪ್ಪುಗಳನ್ನು ಮಾಡಲು ಸಾಧ್ಯವಿರುವ ಈ ಜೀವನದಿ೦ದ ನನ್ನನ್ನು ಮುಕ್ತನನ್ನಾಗಿ ಮಾಡಿದ್ದಾರೆ. 'ನನ್ನನ್ನು ಮುಕ್ತನನ್ನಾಗಿ ಮಾಡಿದ್ದಕ್ಕೆ ಅವರನ್ನು ಅಭಿನ೦ದಿಸುತ್ತೇನೆ.'
ಆಗ ಬುದ್ಧ ಹೇಳಿದ,
'ಈಗ ನೀನು ಎಲ್ಲಿಗೆ ಬೇಕಾದರೂ ಹೋಗಬಹುದು. ಇಡೀ ವಿಶ್ವವೇ ನಿನಗೆ ಸ್ವರ್ಗ. ಎಲ್ಲೂ ಸಮಸ್ಯೆಯಿಲ್ಲ. ಇಡೀ ವಿಶ್ವವೇ ಸ್ವರ್ಗ. ಎಲ್ಲಿಗೆ ಬೇಕಾದರೂ ನೀನು ಹೋಗಬಹುದು'.